samachara
www.samachara.com
ಸುದ್ದಿ ಸಾಗರ

'ಹತ್ಯೆ ಮೂಡಿಸಿದ ಕಂಪನ': ಶ್ರೀನಗರದಿಂದ ಆರ್ಮಿ ಎಂಜಿನಿಯರ್; ಚಿಕ್ಕಮಗಳೂರು ರಘು ನೀಡದ 'ನೇರ ಪ್ರಸಾರ'!

samachara

samachara

ಪ್ರಶಾಂತವಾಗಿದೆ;

ಕಣಿವೆ ರಾಜ್ಯದಲ್ಲಿ ಕೇಸರಿ ಪಕ್ಷವೊಂದು ವಿಧಾನಸಭೆ ಪ್ರವೇಶಿಸುವ ಮೂಲಕ ಇತಿಹಾಸದ ಹೆಜ್ಜೆಗಳು ಮರೆತು ಹೋಗಿವೆ; ಜನ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯನ್ನು ಬದಿಗಿಟ್ಟು ಭಾರತೀಯರಾಗಿದ್ದಾರೆ; ದೇಶಭಕ್ತಿ ಅಲ್ಲಿಯೂ ಚಿಮ್ಮುತ್ತಿದೆ; ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಜಮ್ಮು ಮತ್ತು ಕಾಶ್ಮೀರವನ್ನು ವ್ಯಾಪಿಸಿದೆ; ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಕಾಶ್ಮೀರಿ ಪಂಡಿತರ ಮನೆಗಳ ಮೇಲೆ ದಾಳಿ ನಡೆದಿಲ್ಲ;....

ಹೀಗೆ ಸಾಲು ಸಾಲು ಶುಭ ಸೂಚಕ ಸುದ್ದಿಗಳನ್ನು ಓದಿಕೊಂಡು, ನೋಡಿಕೊಂಡು ಬಂದವರಿಗೆ ಕಳೆದ 96 ಗಂಟೆಗಳ ರಾಷ್ಟ್ರೀಯ ಬೆಳವಣಿಗೆಗಳು ಬೆಚ್ಚಿ ಬೀಳಿಸಿವೆ. ಭಾರತ ಎಂಬ 'ಅಖಂಡ ರಾಷ್ಟ್ರ'ದ ಪರಿಕಲ್ಪನೆಯ ಮುಕುಟ ಎಂದೆನಿಸಿಕೊಂಡ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸದ್ಯದ ಪರಿಸ್ಥಿತಿ ಯೋಚನೆಗೀಡು ಮಾಡುವಂತೆ ಮಾಡಿದೆ.

ಕರ್ನಾಟಕದಲ್ಲಿ ಡಿವೈಎಸ್ಪಿ ದರ್ಜೆಯ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ಇನ್ನೂ ಬೇಯುತ್ತಿದೆ. ಅವರೂ ಕೂಡ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡುವ ಇತಿಹಾಸ ಹೊಂದಿರುವ ಜಿಲ್ಲೆಯಿಂದ ಬಂದವರು. ತವರು ಜಿಲ್ಲೆಯಲ್ಲಿಯೇ ಆತ್ಮಹತ್ಯೆಗೆ ಶಣಾಗಿರುವವರು.

ಇಂತಹ ಸನ್ನಿವೇಶದಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡುತ್ತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸುದ್ದಿಯನ್ನು ಭಿನ್ನ ಆಯಾಮದಲ್ಲಿ ನಿಮ್ಮೆದುರಿಗೆ ಇಡುವ ಪ್ರಯತ್ನವೊಂದನ್ನು 'ಸಮಾಚಾರ' ಇಲ್ಲಿ ಮಾಡುತ್ತಿದೆ.

ಇದಕ್ಕೆ ಕಾರಣ, ಮೂರು ದಿನಗಳ ಕಾಲ ಮೊಬೈಲ್ ನೆಟ್ವರ್ಕ್ ಸಿಗದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಇದ್ದ ಸಂಕಷ್ಟಗಳೀಗ ಪರಿಹಾರವಾಗಿವೆ. ಅಲ್ಲೀಗ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಕಾರ್ಯಾರಂಭ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯ ಮಿಲಿಟರಿ ಕ್ಯಾಂಪಸ್ನಿಂದ ಭಾರತೀಯಯ ಸೇನೆಯ ಎಂಜಿನಿಯರ್ ಒಬ್ಬರು ಮಾತಿಗೆ ಸಿಕ್ಕಿದ್ದಾರೆ. ಈ ಮೂಲಕ ಅಲ್ಲಿ ನಡೆಯುತ್ತಿರುವ ತಳಮಟ್ಟ ಬೆಳವಣಿಗೆಗಳ ಕುರಿತು ಹೊಸ ಮಾಹಿತಿ ನಮಗೆ ಲಭ್ಯವಾಗುತ್ತಿದೆ. ಅದನ್ನು ಅವರದ್ದೇ ಮಾತಿನಲ್ಲಿ ನಿಮ್ಮೆದುರಿಗೆ ಇಡುತ್ತಿದ್ದೇವೆ.

ಗೋ ಬ್ಯಾಕ್ ಇಂಡಿಯನ್ ಡಾಗ್ಸ್:

ಅದು ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುವ ಏಕೈಕ ರಾಷ್ಟ್ರೀಯ ಹೆದ್ದಾರಿ. 60ರ ದಶಕದಲ್ಲಿ ಅಲ್ಲಿ ನಿರ್ಮಿಸಿದ ಜವಹರ್ಲಾಲ್ ಸುರಂಗ ಮಾರ್ಗ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಅದರಿಂದ ನಾಲ್ಕು ಕಿ. ಮೀ ಅಂತರದಲ್ಲಿರುವುದು ಭಾರತೀಯ ಸೇನೆಯ ಈ ಕ್ಯಾಂಪಸ್. ಅಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಸಂಪರ್ಕಗಳಿರಲಿಲ್ಲ. ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೊಬೈಲ್ ನೆಟ್ವರ್ಕ್ ಬಂದ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ತಮ್ಮ ತವರಿನೊಂದಿಗೆ ಸಂಪರ್ಕ ಕಳೆದುಕೊಂಡವ ಪೈಕಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ರಘು ಜಿ. ಸಿ ಕೂಡ ಒಬ್ಬರು. ಓದಿದ್ದು ಎಂಜಿನಿಯರಿಂಗ್. ಸೇನೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದವರು. ಒಂದು ತಿಂಗಳ ಹಿಂದಷ್ಟೆ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗವಣೆಯಾಗಿದ್ದಾರೆ.

ಅವರಿಗೆ ಅಲ್ಲಿ ಇವತ್ತು ನಡೆಯುತ್ತಿರುವ ಪ್ರತಿ ಸಂಗತಿಗಳೂ ಹೊಸತಾಗಿ ಕಾಣಿಸುತ್ತಿವೆ. "ನಾವಿರುವ ಕ್ಯಾಂಪಸ್ ಮುಂಭಾಗ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲ್ಲುಗಳನ್ನು ಬೀಸುತ್ತಿದ್ದಾರೆ. ಇಂಡಿಯನ್ ಡಾಗ್ಸ್ ಗೋ ಬ್ಯಾಕ್ (ಭಾರತೀಯ ನಾಯಿಗಳೇ; ವಾಪಸ್ ಹೋಗಿ) ಎಂದು ಘೋಷಣೆ ಕೂಗುತ್ತಿದ್ದಾರೆ. ಅವರ ಪ್ರಕಾರ ನಾವು ಬೇರೆಯದೇ ದೇಶದಿಂದ ಬಂದವರು. ನಾವು ಕಾಶ್ಮೀರ ಬಿಟ್ಟು ಹೋಗಬೇಕು ಎಂದು ಬಯಸುತ್ತಿದ್ದಾರೆ,'' ಎಂದು ನಕ್ಕರು ರಘು.

ಸದ್ಯ ದೇಶದ ಮುಕುಟ ಎನ್ನಿಸಿಕೊಂಡಿರುವ ರಾಜ್ಯದ ಪರಿಸ್ಥಿತಿ ಇದು. ಅಲ್ಲೀಗ ಸ್ಥಳೀಯರು ಪ್ರತ್ಯೇಕತಾ ಹೋರಾಟಗಾರರ ಘೋಷಣೆಗಳನ್ನು ತಮ್ಮದೇ ಎಂಬಂತೆ ಮೊಳಗಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಹಿಬ್ಜುಲ್ ಮುಜಾಹಿದೀನ್ ಸಂಘಟನೆ ಕಮಾಂಡರ್,

. ಮೂರು ದಿನಗಳ ಹಿಂದೆ ಭಾರತೀಯ ಸೇನೆ ನಡೆಸಿದ ಈ ಕಾರ್ಯಾಚರಣೆ ಕಣಿವೆ ರಾಜ್ಯವನ್ನು ಇನ್ನಿಲ್ಲದಂತೆ ಕಾಡಲು ಶುರುವಾಗಿದೆ. ಎಲ್ಲವೂ ಪ್ರಶಾಂತವಾಗಿದೆ ಎಂಬಂತೆ ಬಿಂಬಿಸಿದ್ದ್ಗ ವಾತಾವರಣದಲ್ಲಿ ಸನಾಮಿಯನ್ನು ಎಬ್ಬಿಸಿದೆ.

ಹತ್ಯೆ ಹೇಗಾಯಿತು?: 

ಕಾಶ್ಮೀರದ ಜನತೆ ಇಷ್ಟರ ಮಟ್ಟಿಗೆ ಯಾಕೆ ಭಾರತದ ಆಡಳಿತ ವಿರುದ್ಧ ಸಿಡಿದೆದ್ದಾರೆ ಎಂಬುದಕ್ಕೆ ಸ್ಥಳೀಯವಾಗಿ ಸಿಗುತ್ತಿರುವ ಮಾಹಿತಿ ಬೇರೆಯದೇ ಆಯಾಮವೊಂದನ್ನು ನೀಡುತ್ತಿದೆ. "ನಾವಿರುವ ಜಾಗದಿಂದ ಅನತಿ ದೂರದಲ್ಲಿರುವ ಸ್ಥಳ ಕೋಕರ್ನಾಗ್. ಸಂಜೆ ಸಮಯದಲ್ಲಿ ಮಸೀದಿಯಿಂದ ಸಮಾಜ್ ಮುಗಿಸಿ ಬರುತ್ತಿದ್ದ ಬುರ್ಹಾನ್ ಮುಝಾಫರ್ ವನಿಯನ್ನು ಭಾರತೀಯ ಸೇನೆ ಎನ್ಕೌಂಟರ್ ಮಾಡಿತು. ಗುಪ್ತದಳದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಹೇಳುತ್ತಾರೆ. ಆಗ ಆತನ ಬಳಿ ಯಾವುದೇ ಶಸ್ತ್ರಗಳು ಇರಲಿಲ್ಲ. ಇದರಿಂದ ಸ್ಥಳೀಯರು ಸಿಟ್ಟಿಗೆದ್ದರು. ವನಿ 15 ವರ್ಷ ಇರುವಾಗ ಆತನ ಅಣ್ಣನನ್ನು ಮಿಲಿಟರಿಯವರು ಹೀಗೆ ಕೊಂದು ಹಾಕಿದ್ದರು. ಆ ನಂತರವೇ ಆತ ಹಿಜ್ಬುಲ್ ಸಂಘಟನೆ ಸೇರಿಕೊಂಡ ಎನ್ನುತ್ತಾರೆ. ಏನೇ ಆಗಲಿ, ನಾವು ಮಾತ್ರ ಮೂರು ದಿನಗಳಿಂದ ಹೊರಗೆ ಬರಲು ಆಗಲಿಲ್ಲ,'' ಎನ್ನುತ್ತಾರೆ ರಘು.

ವನಿ ಎನ್ಕೌಂಟರ್ ಹೇಗೆ ನಡೆಯಿತು ಎಂಬುದರ ಬಗ್ಗೆ ಈಗಾಗಲೇ ರಾಷ್ಟ್ರೀಯ ವಾಹಿನಿಗಳು ನಾನಾ ಆಯಾಮಗಳಲ್ಲಿ ವರದಿ ಮಾಡಿವೆ. ಅದರ ಇನ್ನೊಂದು ಆಯಾಮವನ್ನು ರಘು ನೀಡುತ್ತಿದ್ದಾರೆ.

ಮುಂದೇನು?: 

ಸದ್ಯ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಅಲ್ಲಿ ಸೇನೆ ಮತ್ತು ಸ್ಥಳೀಯರ ನಡುವೆ ಸಂಘರ್ಷ ಜಾರಿಯಲ್ಲಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಮಿಲಿಟರಿ ಗುಂಡಿಗೆ ಸುಮಾರು 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗಿದ್ದೂ ಜಿಲ್ಲಾ ಕೇಂದ್ರಗಳಿಂದ ದೂರದಲ್ಲಿರುವ ಮಿಲಿಟರಿ ಕ್ಯಾಂಪಸ್ ಸುತ್ತ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಪ್ರತಿ ನೌಕರರನ್ನೂ ರಾಜ್ಯ ಬಿಟ್ಟು ತೆರಳುವಂತೆ ಒತ್ತಾಯಿಸುತ್ತಿದ್ದಾರೆ. ಇದು ರಘು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ.

"ಮಿಲಿಟರಿ ಕಡೆಯಿಂದ ಹತ್ಯೆಯಾದವರ ಬಗ್ಗೆ ಮಾತ್ರ ನೀವು ಕೇಳುತ್ತಿದ್ದೀರಿ. ಪ್ರತ್ಯೇಕತವಾದಿಗಳಿಂದ ಹತ್ಯೆಯಾದ ಮಿಲಿಟರಿ ಯೋಧರ ಬಗ್ಗೆ ಯಾರು ಯಾಕೆ ಮಾತನಾಡುವುದಿಲ್ಲ,'' ಎಂದು ರಘು ಪ್ರಶ್ನಿಸಿಸುತ್ತಿದ್ದಾರೆ. ಅವರು ಜಮ್ಮು ಕಾಶ್ಮೀರಕ್ಕೆ ತೆರಳುವುದಕ್ಕೆ ಮುನ್ನವೇ, ಅಲ್ಲೊಂದು ಪ್ರತ್ಯೇಕತಾ ಹೋರಾಟ ಜಾರಿಯಲ್ಲಿತ್ತು ಎಂಬುದನ್ನು ಅವರ ಗಮನಕ್ಕೆ ತಂದರೆ, ಅದರ ಬಗ್ಗೆ ಅವರಲ್ಲಿ ಮುಗ್ಧತೆಯೊಂದು ವ್ಯಕ್ತವಾಗುತ್ತದೆ.

ಒಟ್ಟಾರೆ, ಕರ್ನಾಟಕದಲ್ಲಿರುವ ನಮಗೂ ಶ್ರೀನಗರ ಹೈವೇಯಲ್ಲಿರುವ ಅವರಿಗೂ ಸುಮಾರು 2, 214. 33 (ಏರ್ ಟ್ರಾವೆಲ್ ಡಿಸ್ಟನ್ಸ್) ಕಿ. ಮೀ ಅಂತರವಿದೆ. ಅಲ್ಲಿ ಅವರು ಆತಂಕದ ದಿನಗಳನ್ನು ತಳ್ಳುತ್ತಿದ್ದಾರೆ. ಕರ್ನಾಟಕ ಮೂಲಕ ಎಂಜಿನಿಯರ್ ಸುರಕ್ಷಿತವಾಗಿ ಮನೆ ತಲುಪಲಿ ಎಂದಷ್ಟೆ ಈ ಸಮಯದಲ್ಲಿ ಹಾರೈಸಬಹುದಾಗಿದೆ. ಕಾಶ್ಮೀರದ ಬಗ್ಗೆ ಅರ್ಥ ಮಾಡಿಕೊಳ್ಳುವುದು ಇನ್ನೂ ಬಾಕಿ ಇದೆ.