ಕಣಿವೆ ರಾಜ್ಯದಲ್ಲಿ ಕರ್ಪ್ಯೂ; ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಸ್ಥಗಿತ
ಸುದ್ದಿ ಸಾಗರ

ಕಣಿವೆ ರಾಜ್ಯದಲ್ಲಿ ಕರ್ಪ್ಯೂ; ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಸ್ಥಗಿತ

ಕಣಿವೆ ರಾಜ್ಯದಲ್ಲಿ

ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

ಶುಕ್ರವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಗೆ ಸೇರಿದ ಕೋಕೆರ್‌ ನಾಗ್‌ ಪ್ರದೇಶದಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರನ್ನು ಎನ್‍ಕೌಂಟರ್ನಲ್ಲಿ ಹೊಡೆದುರುಳಿಸಿಲಾಗಿದೆ. ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್‌ ವನಿ ಸಾವನ್ನಪ್ಪಿದ್ದು, ಇದಾದ ಬೆನ್ನಿಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ಎದ್ದಿವೆ. ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ.

"ಸುರಕ್ಷತೆಯ ಕಾರಣಕ್ಕೆ ಅಮರಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಯಾವುದೇ ಯಾತ್ರಾರ್ಥಿಗಳನ್ನು ಕಾಶ್ಮೀರ ಕಣಿವೆಯತ್ತ ಬಿಡಲಾಗುವುದಿಲ್ಲ," ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಬೆನ್ನಿಗೆ ಭಾರೀ ಪ್ರತಿಭಟನೆಗಳು ಎದ್ದಿದ್ದು, ಪ್ರತಿಭಟನಾಕಾರರು ಮುಖ್ಯ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಪ್ರತ್ಯೇಕತಾವಾದಿ ನಾಯಕರು ಪ್ರತಿಭಟನೆಗೆ ಕರೆ ನೀಡುತ್ತಿದ್ದಂತೆ ನಗರ ಪ್ರವೇಶಿಸುವ ರಸ್ತೆಗಳಿಗೆ ತಡೆ ಒಡ್ಡಲಾಗಿದೆ. ಪ್ರತ್ಯೇಕತಾವಾದಿ ನಾಯಕರನ್ನು ಗೃಹ ಬಂಧನಕ್ಕೆ ದೂಡಲಾಗಿದೆ. ಪ್ರಮುಖ ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವಾಯಿಝ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸೀನ್ ಮಲಿಕ್ ಶುಕ್ರವಾರ ರಾತ್ರಿಯಿಂದ ಗೃಹ ಬಂಧನಕ್ಕೆ ಗುರಿಯಾದವರಲ್ಲಿ ಸೇರಿದ್ದಾರೆ.

ಇನ್ನು ಕಾಶ್ಮೀರ ರಾಜ್ಯದಾದ್ಯಂತ ಇಂಟರ್ನೆಂಟ್ ಸೇವೆ ಸ್ಥಗತಗೊಳಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. “ಶ್ರೀನಗರ ಪ್ರದೇಶದ ಆರು ಪೊಲೀಸ್ ಠಾಣೆ ಪ್ರದೇಶದಲ್ಲಿ ಜನರ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮತ್ತು ಅನಂತನಾಗ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇದೇ ರೀತಿ ನಿರ್ಭಂಧ ಹೇರಲಾಗಿದೆ” ಎಂದು ಸರಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದ ಫಹಲ್ಗಾಂ ಮತ್ತು ಬಲ್ತಾಲ್ ಬೇಸ್ ಕ್ಯಾಂಪ್‍ನಿಂದ ಯಾತ್ರೆ ಆರಂಭವಾಗಲಿದ್ದು, ಸುರಕ್ಷತಾ ದೃಷ್ಟಿಯಿಂದ ಯಾತ್ರಾರ್ಥಿಗಳು ಕಾಶ್ಮೀರ ಕಣಿವೆಯತ್ತ ಪ್ರಯಾಣ ಬೆಳೆಸದಂತೆ ನಿರ್ಬಂಧ ವಿಧಿಸಲಾಗಿದೆ.

ಪಿರ್ ಪಂಜಾಲ್ ಬೆಟ್ಟದ ಮೇಲೆ ಹಾದು ಹೋಗುವ ಬಾರಾಮುಲ್ಲಾ ಮತ್ತು ಬನಿಹಾಲ್ ನಡುವಿನ ರೈಲು ಪ್ರಯಾಣವನ್ನೂ ರದ್ದು ಪಡಿಸಲಾಗಿದೆ. ಈ ಹಿಂದೆ ರೈಲನ್ನು ಗುರಿಯಾಗಿಸಿ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಅಂಗಡಿ ಮುಗ್ಗಟ್ಟುಗಳ ಬಾಗಿಲು ಮುಚ್ಚಿವೆ. ಪೆಟ್ರೋಲ್ ಪಂಪ್, ಖಾಸಗಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಮಾತ್ರ ತೆರೆದಿದ್ದು ಜನಸಂಚಾರ ವಿರಳವಾಗಿದೆ.

ಸರಕಾರಿ ವಾಹನಗಳೂ ರಸ್ತೆಗೆ ಇಳಿದಿಲ್ಲ ಆದರೆ ಅಲ್ಲಲ್ಲಿ ಆಟೋ ರಿಕ್ಷಾಗಳು ಮತ್ತು ಖಾಸಗೀ ವಾಹನಗಳ ಸಂಚಾರವಿದೆ. ಬೇಸಿಗೆ ರಜೆ ಇರುವುದರಿಂದ ಶಾಲೆ ಕಾಲೇಜುಗಳು ಎಂದಿನಂತೆ ತೆರೆದಿಲ್ಲ. ಇಂದಿಗೆ ನಿಗದಿಯಾಗಿದ್ದ ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ವೇಳೆ ಕಾಶ್ಮೀರ ಶಿಕ್ಷಣ ಇಲಾಖೆಯೂ ಪರೀಕ್ಷೆ ಮುಂದೂಡಿದೆ.