samachara
www.samachara.com
ಭಾರತದ ದೊಡ್ಡ ಉದ್ಯಮಗಳಿಗೆ ತಟ್ಟಿದ ‘ಬ್ರೆಕ್ಸಿಟ್’ ಬಿಸಿ: ನೀತಿ ಪರಿಶೀಲನೆಗೆ ಮುಂದಾದ ಕೇಂದ್ರ
ಸುದ್ದಿ ಸಾಗರ

ಭಾರತದ ದೊಡ್ಡ ಉದ್ಯಮಗಳಿಗೆ ತಟ್ಟಿದ ‘ಬ್ರೆಕ್ಸಿಟ್’ ಬಿಸಿ: ನೀತಿ ಪರಿಶೀಲನೆಗೆ ಮುಂದಾದ ಕೇಂದ್ರ

ಭಾರತದ

ಮೇಲೆ ‘ಬ್ರೆಕ್ಸಿಟ್’ನ ಮೊದಲ ಪರಿಣಾಮಗಳು ಕಾಣತೊಡಗಿವೆ.

ಭಾರತ ಈಗಾಗಲೇ ಯುರೋಪ್ ಯೂನಿಯನ್ ಜೊತೆ ವಾಣಿಜ್ಯ ಒಪ್ಪಂದಕ್ಕಾಗಿ ಸಂಧಾನ ನಡೆಸಿತ್ತು. ಇದೀಗ ಬ್ರಿಟನ್ ಒಕ್ಕೂಟದಿಂದ ಹೊರ ಬಂದಿರುವುದರಿಂದ "ಆ ದೇಶದ ಜೊತೆ ನಮ್ಮ ಸಂಧಾನದ ಸ್ಟ್ರಾಟೆಜಿಯನ್ನು ಮರು ಸ್ಥಾಪಿಸಬೇಕಿದೆ,'' ಎಂದು ನಿರ್ಮಲಾ ಸೀತರಾಮನ್ ಶುಕ್ರವಾರ ಹೇಳಿದ್ದಾರೆ.

“ಯುರೋಪಿಯನ್ ಯೂನಿಯನ್ನಿಂದ ಬ್ರಿಟನ್ ಹೊರ ಬಂದ ಬಳಿಕ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ಮಾರುಕಟ್ಟೆ ಒಪ್ಪಂದಕ್ಕಿರುವ  ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ  ಸೀತರಾಮನ್ ತಿಳಿಸಿದ್ದಾರೆ.

ಬ್ರಿಟನ್ ವಾಣಿಜ್ಯ ಕಾರ್ಯದರ್ಶಿ ಸಾಜಿದ ಜಾವಿದ್ ಜೊತೆ ಮಾತುಕತೆ ನಡೆಸಿ ಹೊರಬಂದ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು.

“ಒಮ್ಮೆ ಅನೌಪಚಾರಿಕ ಚರ್ಚೆಗಳು ಮುಗಿದ ನಂತರ ವಿವರವಾಗಿ ಮಾತುಕತೆಗಳನ್ನು ನಡೆಸಲಿದ್ದೇವೆ. ಅದು ಮುಕ್ತ ಮಾರುಕಟ್ಟೆಯೋ, ಆದ್ಯತೆಯ ಮೇಲೆಯೋ ಎಂದು ಮುಖಾಮುಖಿಯಾಗಿ ಮಾತುಕತೆ ನಡೆಸಿ ನಿರ್ಧರಿಸುವ ವಿಷಯ,” ಎಂದು ಸೀತರಾಮನ್ ಹೇಳಿದ್ದಾರೆ.

“ಭಾರತ ಮತ್ತು ಬ್ರಿಟನ್ ಜೊತೆ ಈಗಾಗಲೇ ದೀರ್ಘ ಕಾಲದ ವ್ಯವಹಾರ ಸಂಬಂಧವಿದೆ. ಅದನ್ನು ಇನ್ನೂ ಮುಂದೆಯೂ ವಿಸ್ತರಿಸಬೇಕಾಗಿದೆ. ನಾನು ಆಕೆಯ ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ,” ಜಾವಿದ್ ಎಂದಿದ್ದಾರೆ.

ಇದೇ ವೇಳೆ ಟಾಟಾ ಸ್ಟೀಲ್ ಬಗ್ಗೆ ಕೇಳಿದ ಪ್ರಶ್ನೆಗೆ "ಆ ಕುರಿತು ಯಾವುದೇ ಮಾತುಕತೆಗಳು ನಡೆದಿಲ್ಲ," ಎಂದಿದ್ದಾರೆ. ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಮಾತುಕತೆ ನಡೆಸಿದ್ದೇವೆ ಎಂದು ನಿರ್ಮಾಲಾ ಸೀತರಾಮನ್ ಸ್ಪಷ್ಟಪಡಿಸಿದ್ದಾರೆ.

“ಭಾರತಕ್ಕೆ ಯುರೋಪ್ನಲ್ಲಿ ಬ್ರಿಟನ್ ಮುಖ್ಯ ಮಿತ್ರ ರಾಷ್ಟ್ರವಾಗಿದೆ. ಆ ದೇಶದ ಜೊತೆ ದೊಡ್ಡ ಮಟ್ಟದಲ್ಲಿ ವ್ಯಾಪಾರ ಸಂಬಂಧ ಹೊಂದಲಿದ್ದೇವೆ. ಹೀಗಿದ್ದೂ ಯುರೋಪ್ ಯೂನಿಯನ್ ಜೊತೆಗೆ ನಮ್ಮ ಸಂಬಂಧ ಮುಂದುವರಿಸಲಿದ್ದೇವೆ,'' ಎಂದವರು ತಿಳಿಸಿದ್ದಾರೆ. “ಇಂಗ್ಲೆಂಡ್ನಲ್ಲಿರುವ ಹೂಡಿಕೆಗಳಲ್ಲಿ ಭಾರತದ ಪಾಲು ದೊಡ್ಡದು, ಭಾರತದ ಉದ್ಯಮಿಗಳು ದೊಡ್ಡ ಮಟ್ಟದಲ್ಲಿ ಇಂಗ್ಲೆಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ,” ಎಂದರು.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಎರಡೂ ರಾಷ್ಟ್ರಗಳು ‘ಬಿಸಿನೆಸ್ ಟು ಬಿಸಿನೆಸ್’ ಒಪ್ಪಂದವನ್ನು ಉತ್ತೇಜನ ನೀಡುತ್ತಿವೆ. ಭಾರತ ಮತ್ತು ಬ್ರಿಟನ್ ನಡುವೆ 2015-16ರಲ್ಲಿ 14 ಬಿಲಯನ್ ಡಾಲರ್ ವ್ಯವಹಾರ ನಡೆದಿದ್ದರೆ, 2014-15ರಲ್ಲಿ 14.33 ಬಿಲಿಯನ್ ಡಾಲರ್ ವ್ಯವಹಾರ ನಡೆದಿದೆ.

ಏಪ್ರಿಲ್ 2000 ದಿಂದ 2016 ಮಾರ್ಚ್ ವರೆಗೆ ಭಾರತಕ್ಕೆ ಬ್ರಿಟನ್ ಮೂಲದಿಂದ ಬರೋಬ್ಬರಿ 23.10 ಬಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದೆ.

ಚಿತ್ರ ಕೃಪೆ: ದಿ ಹಿಂದೂ