samachara
www.samachara.com
ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ 'ಗನ್ ಲಾಬಿ' ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!
ಸುದ್ದಿ ಸಾಗರ

ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ 'ಗನ್ ಲಾಬಿ' ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!

samachara

samachara

ಅಮೆರಿಕಾದಲ್ಲಿ ಗುಂಡಿನ ದಾಳಿಗಳು ಹೊಸದಲ್ಲ. ಒಂದಿಲ್ಲೊಂದು ಶೂಟೌಟ್‍ಗಳು ದೇಶದಲ್ಲಿ ದಿನನಿತ್ಯ ಜರುಗುತ್ತಿರುತ್ತವೆ. ಕಳೆದ 5-6 ವರ್ಷಗಳ ಅಂತರದಲ್ಲಿ ಪ್ರತಿ ವರ್ಷ ಮುನ್ನೂರಕ್ಕೂ ಹೆಚ್ಚು ಜನ ಗುಂಡಿನ ದಾಳಿಗೆ ಇಲ್ಲಿ ಸಾವನ್ನಪ್ಪಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಕಳೆದೆರಡು ವರ್ಷಗಳಲ್ಲಿ ಈ ಸಂಖ್ಯೆ 500 ದಾಟಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಅದರಲ್ಲೂ ಈ ವರ್ಷ ಸರಣಿ ಗುಂಡಿನ ದಾಳಿಗಳಿಗೆ ಅಮೆರಿಕಾ ಸಾಕ್ಷಿಯಾಗಿದೆ.

ಮಾದರಿ ಎನಿಸಿಕೊಂಡ ದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳು ಅಚ್ಚರಿಗೆ ದೂಡುತ್ತವೆ. ಅಮೆರಿಕಾದಲ್ಲಿ ಕಾನೂನು, ಸುರಕ್ಷತೆ ಬಿಗಿಯಾಗಿದೆ. ಆದರೆ ಇಷ್ಟೆಲ್ಲಾ ಸುರಕ್ಷತೆಯ ಮಧ್ಯೆಯೂ ನಡೆಯುತ್ತಿರುವ ಗುಂಡಿನ ದಾಳಿಗಳು ಅಲ್ಲಿನ ನಾಗರಿಕರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದರ ಹಿಂದೆ ಇರೋದು ಅಮೆರಿಕಾದ ವಿಚಿತ್ರ ಖಯಾಲಿ; ಅದನ್ನು 'ಬಂದೂಕು ಸಂಸ್ಕೃತಿ' ಎಂಬ ಸುಸಂಸ್ಕೃತ ಪದದಿಂದ ಗುರುತಿಸಲಾಗುತ್ತಿದೆ.

ಅಮೆರಿಕನ್ನರಿಗೆ ಬಂದೂಕು ಎಂದರೆ ಎಲ್ಲಿಲದ ಮೋಹ; ವಿಚಿತ್ರ ಪ್ರೀತಿ. ಅಮೆರಿಕಾದಲ್ಲಿ ಬಂದೂಕು ಹೊಂದಲು ದೇಶದ ಸಂವಿಧಾನವೇ ಅನುವು ಮಾಡಿಕೊಟ್ಟಿದೆ. ಕಾನೂನು ಪ್ರಕಾರವೇ ಇಲ್ಲಿನ ನಾಗರಿಕರು ಪರವಾನಗಿ ಸಹಿತ ಬಂದೂಕು ಖರೀದಿಸುತ್ತಾರೆ. ಅಮೆರಿಕಾದಲ್ಲಿ 100 ಜನರ ಪೈಕಿ 89 ಜನರ ಬಳಿ ಬಂದೂಕುಗಳಿವೆ. ವಿಶ್ವದ ಕೇವಲ 5ರಷ್ಟು ಜನಸಂಖ್ಯೆ ಇರುವ ಅಮೆರಿಕಾದಲ್ಲಿ, ಶೇಕಡಾ 31ರಷ್ಟು ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತವೆ ಎಂದರೆ ಇದರ ಭೀಕರತೆಯ ಮಟ್ಟ ತಿಳಿಯುತ್ತದೆ. ದೇಶದಲ್ಲಿರುವ ಪಕ್ಕಾ ಪರವಾನಗಿ ಹೊಂದಿರುವ ಗನ್‍ಗಳ ಸಂಖ್ಯೆಯೇ 27 ಕೋಟಿ.

ಇವತ್ತು ಬಂದೂಕು ಉದ್ಯಮ ಅಮೇರಿಕಾ ಸರಕಾರವನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ವಾರ್ಷಿಕ 1 ಲಕ್ಷದ 10 ಸಾವಿರ ಕೋಟಿ ರೂಪಾಯಿ ವ್ಯವಹಾರ ನಡೆಸುವ ಗನ್ ಫ್ಯಾಕ್ಟರಿಗಳು ಯಾವ ಅಧ್ಯಕ್ಷನನ್ನೂ ಕೇರ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿನ ‘ರಾಷ್ಟ್ರೀಯ ರೈಫಲ್ ಅಸೋಸಿಯೇಶನ್’ ದೇಶದ ನಿಯಮಗಳನ್ನು ತನ್ನ ನಿಯಂತ್ರಣದಲ್ಲಿರಿಸಿದೆ. ಪ್ರತಿ ವರ್ಷ ಯಾವುದೇ ಸಂಸದ ಬಂದೂಕು ಸಂಸ್ಕೃತಿಗೆ ನಿಯಂತ್ರಣ ಹೇರಲು ಒತ್ತಾಯಿಸಿದರೆ, ಇದು ಭರ್ಜರಿ ಹಣ ನೀಡಿ ಆತನನ್ನು ಖರೀದಿಸುತ್ತದೆ. ಇಲ್ಲವೇ ಲಾಬಿ ನಡೆಸುತ್ತದೆ.

ಹೀಗೆ ತನ್ನ ವಿರುದ್ಧ ಮಾತಾಡುವ ಸಂಸದನಿಗೆ ಇದು ಬರೋಬ್ಬರಿ 20 ಕೋಟಿ ರೂಪಾಯಿ ಹಣ ನೀಡಿ ಬಾಯಿ ಮುಚ್ಚಿಸಲು ಹೊರಟಿದ್ದು ಬಯಲಾಗಿತ್ತು. ಹೀಗೆ ದೇಶದಲ್ಲಿ ತನ್ನದೇ ಲಾಬಿಯನ್ನು ಚಾಲ್ತಿಯಲ್ಲಿಟ್ಟಿದೆ. ಹೀಗಾಗಿ ಒಬಾಮ ಬಂದೂಕು ವಿರೋಧಿ ಕಾನೂನು ಜಾರಿಗೆ ತರುವ ಮನಸ್ಸು ಮಾಡಿದರೂ ಸಾಧ್ಯವಾಗಲಿಲ್ಲ.

ಗನ್ ಬಳಕೆ ನಿಯಂತ್ರಿಸಬೇಕು ಅನ್ನುವ ಮಾತುಗಳು ತುಂಬಾ ಹಿಂದೆಯೇ ಅಮೆರಿಕಾದಲ್ಲಿ ಕೇಳಿ ಬಂದಿತ್ತು. ಈ ಕುರಿತು ಕಠಿಣ ಕಾನೂನು ಜಾರಿಗೊಳಿಸಬೇಕು ಎಂಬ ಬೇಡಿಕೆ 1990ರ ದಶಕದಲ್ಲೇ ಆರಂಭವಾಯಿತು. ಆದರೆ ಇವತ್ತಿಗೂ ಅದು ಸಾಧ್ಯವಾಗ್ತಿಲ್ಲ. ಈ ಬಗ್ಗೆ ಎಷ್ಟೇ ಪ್ರಯತ್ನ ಪಟ್ಟರೂ ಅಧ್ಯಕ್ಷ ಬರಾಕ್ ಒಬಾಮ ಪ್ರತಿ ಬಾರಿ ಸೋಲುತ್ತಲೇ ಇದ್ದಾರೆ. ಸಾಮೂಹಿಕ ಶೂಟೌಟ್‍ಗಳಾದಾಗಲೂ ಅಧ್ಯಕ್ಷರು ಸಂತಾಪ ಸೂಚಿಸುವುದು ಬಿಟ್ಟರೆ ಬೇರೇನೂ ಸಾಧಿಸಲು ಸಾಧ್ಯವಾಗಿಲ್ಲ.

2012ರ ಡಕನೆಕ್ಟಿಕಟ್‍ನ ನ್ಯೂಟೌನ್ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿ ಬಂದೂಕು ಹಿಡಿದು ನುಗ್ಗಿ 26 ಮಕ್ಕಳ ಸಾವಿಗೆ ಕಾರಣನಾಗಿದ್ದ. ಇದಾದ ಬಳಿಕ ಎಚ್ಚೆತ್ತ ಒಬಾಮಾ ಬಂದೂಕು ಕಾನೂನು ಪರಿಷ್ಕರಿಸಿ ಜಾರಿಗೊಳಿಸುವುದಾಗಿ ಘೋಷಿಸಿದರು. ಆದರೆ ಲಾಬಿಯಿಂದಾಗಿ 2013ರಲ್ಲಿ ಕಾನೂನು ಪರಿಷ್ಕರಣೆ ನಿರ್ಣಯ ಬಿದ್ದು ಹೋಯಿತು.

“ನಮ್ಮ ರಾಷ್ಟ್ರದಲ್ಲಿ ನಡೆಯುತ್ತಿರುವಂತೆ ಮಾಸ್ ಶೂಟೌಟ್ ಬೇರೆಲ್ಲೂ ನಡೆಯುತ್ತಿಲ್ಲ. ಇದನ್ನು ನಿಯಂತ್ರಿಸಲು ‘ಕಾಮನ್‍ಸೆನ್ಸ್ ಗನ್ ಸೇಫ್ಟಿ ಲಾ’ವನ್ನು ಕಠಿಣ ನಿಯಮಗಳೊಂದಿಗೆ ಜಾರಿಗೊಳಿಸಬೇಕಾದ ಅಗತ್ಯ ಇದೆ” ಎಂದು ಸ್ವತಃ ಒಬಾಮ ಕಣ್ಣೀರು ಹಾಕುತ್ತಾ ಹೇಳಿದರು. ಕಣ್ಣೀರು ಉಪಯೋಗಕ್ಕೆ ಬರಲಿಲ್ಲ.

ಇಡೀ ದೇಶಕ್ಕೆ ಅನ್ವಯವಾಗುವ ಬಂದೂಕು ನಿಯಂತ್ರಣ ಕಾಯ್ದೆ ಅಮೆರಿಕಾದಲ್ಲಿಲ್ಲ. ಪ್ರತೀ ರಾಜ್ಯದಲ್ಲೂ ಒಂದೊಂದು ಕಾನೂನುಗಳಿವೆ. ಹೀಗಾಗಿ ಶೂಟೌಟ್‍ಗಳು ಮತ್ತೆ ಮತ್ತೆ ನಡೆಯುತ್ತವೆ. ಪೋಷಕರ ಬಂದೂಕೆತ್ತಿಕೊಂಡು ಶಾಲೆಗಳಲ್ಲಿ ಮಕ್ಕಳು ದಾಳಿ ನಡೆಸುವ ಘಟನೆಗಳೇ ಸಾಲು ಸಾಲು ಜರುಗುತ್ತವೆ.

ಲಾಬಿ, ರಾಜಕೀಯದ ತೆರೆ ಹಿಂದಿನ ನಾಟಕಕ್ಕೆ, ಅಮೆರಿಕಾದ ಸಾಮಾನ್ಯ ಜನರು ಇಂದು ಪ್ರಾಣ ಬಿಡುವಂತಾಗಿದೆ. ಫ್ಲೋರಿಡಾದ ದಾಳಿ ಇದಕ್ಕೆ ಹೊಸ ಸೇರ್ಪಡೆ ಅಷ್ಟೆ; ಕೊನೆ ಅಲ್ಲ.

ಚಿತ್ರಗಳು: ಹಫಿಂಗ್ಟನ್ ಪೋಸ್ಟ್