ಬೆಲೆ ಏರಿಕೆ ನಾಗಾಲೋಟಕ್ಕೆ ಗ್ರಾಹಕ ಸುಸ್ತು; ದಾಖಲೆಯ ದರ ಹೆಚ್ಚಳಕ್ಕೆ ಕಾರಣವೇನು? ಪರಿಹಾರಗಳೇನು?
ಸುದ್ದಿ ಸಾಗರ

ಬೆಲೆ ಏರಿಕೆ ನಾಗಾಲೋಟಕ್ಕೆ ಗ್ರಾಹಕ ಸುಸ್ತು; ದಾಖಲೆಯ ದರ ಹೆಚ್ಚಳಕ್ಕೆ ಕಾರಣವೇನು? ಪರಿಹಾರಗಳೇನು?

ಕಳೆದ ಕೆಲವು ದಿನಗಳಿಂದ ಮಳೆ ಹನಿಗಳು ಬಾಯಾರಿದ ಇಳೆಯ ದಾಹ ನೀಗಿಸುತ್ತಿವೆ. ಆದರೆ ವ್ಯಾಪಾರಿಗಳ ಲಾಭದ ದಾಹ, ಸರಕಾರಗಳ ತೆರಿಗೆ ದಾಹ ಮಾತ್ರ ಸದ್ಯಕ್ಕೆ ತೀರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪರಿಣಾಮ ನಿತ್ಯ ಜೀವನಕ್ಕೆ ಬೇಕಾಗುವ ಪದಾರ್ಥಗಳ ಬೆಲೆ ಏರಿಕೆ.

ರಾಜ್ಯದಲ್ಲಷ್ಟೇ ಅಲ್ಲ ದೇಶಾದ್ಯಂತ ಕಳೆದೆರಡು ತಿಂಗಳಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಬೆಲೆಗಳು ಏರಿಕೆಯಾಗುತ್ತಲೇ ಇವೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೊಳ್ಳುವವರ ಜೇಬು ಖಾಲಿಯಾಗುತ್ತಿದೆ. ತರಕಾರಿ, ಕಾಯಿ ಪಲ್ಲೆ, ಮೊಟ್ಟೆ, ಮೀನು, ಮಾಂಸ ಮತ್ತು ದಿನಸಿ ವಸ್ತುಗಳ ಬೆಲೆಗಳು ನಿಯಂತ್ರಣಕ್ಕೇ ಸಿಗುತ್ತಿಲ್ಲ. ಅದರಲ್ಲೂ ಮುಸ್ಲಿಂ ಸಮುದಾಯದ ರಂಜಾನ್ ತಿಂಗಳು ಆರಂಭವಾಗಿರುವುದರಿಂದ, ಬೇಡಿಕೆ ಆಧಾರದ ಮೇಲೆ ದರಗಳು ಮತ್ತಷ್ಟು ಏರಿಕೆಯಾಗಿವೆ.

ಕಳೆದ ಒಂದರಿಂದ ಒಂದೂವರೆ ತಿಂಗಳಲ್ಲಿ ಅಕ್ಕಿ ದರ 10-15 ರೂಪಾಯಿ ಏರಿಕೆಯಾಗಿದೆ. ಬೇಳೆ ದರಗಳು 200 ಆಸುಪಾಸಿನಲ್ಲಿಯೇ ಉಳಿದುಕೊಂಡಿವೆ. ಬೇಡಿಕೆಯೇ ಇಲ್ಲದ ಸಾಮಾನ್ಯ ತರಕಾರಿಗಳ ದರಗಳೂ ವಿಪರೀತ ಹೆಚ್ಚಿದ್ದು, ಬೀಟ್ ರೋಟ್ 49, ಕ್ಯಾಬೇಜ್ 40, ಹೀರೇಕಾಯಿ 80 ರೂಪಾಯಿಗಳಿಗೆ ಮುಟ್ಟಿವೆ. ಬೆಲೆ ಏರಿಕೆಗೆ ಸಾಕ್ಷಿ ಎಂಬಂತೆ ಬೀನ್ಸ್ ದರ 200 ಇದ್ದರೆ ಟೊಮೆಟೋ 77 ರೂಪಾಯಿಗೆ ತಲುಪಿದೆ.

ಇನ್ನು ರಂಜಾನ್ ತಿಂಗಳ ನೇರ ಪರಿಣಾಮ ಮಾಂಸ ಮಾರುಕಟ್ಟೆಯಲ್ಲಿ ಕಾಣಿಸುತ್ತಿವೆ. ಕುರಿ ಮಾಂಸದ ಬೆಲೆ 500 ದಾಟಿದ್ದು, ಕೋಳಿ ಮಾಂಸದ ದರ 220ಕ್ಕೆ ಏರಿಕೆಯಾಗಿದೆ. ಮೊಟ್ಟೆ ದರವೂ 5 – 5.30 ರೂಪಾಯಿಗೆ ಬಂದು ನಿಂತಿದೆ.

ಹಿಂದಿರುವ ಕಾರಣಗಳು: 

ಬೆಲೆ ಏರಿಕೆಗೆ ಪ್ರಮುಖವಾಗಿ ಬರಗಾಲವೇ ಕಾರಣ. ಈ ವರ್ಷ ದೇಶದಾದ್ಯಂತ ಭೀಕರ ಬರಗಾಲ ಆವರಿಸಿಕೊಂಡಿತ್ತು. ಕರ್ನಾಟಕದ 49 ತಾಲೂಕುಗಳು ಬರಗಾಲಕ್ಕೆ ಗುರಿಯಾಗಿದ್ದವು. ಇದರಿಂದ ಆಹಾರ ಉತ್ಪಾದನೆ ಕುಂಠಿತಗೊಂಡು, ಬೆಲೆ ಏರಿಕೆಗೆ ಕಾರಣವಾಗಿದೆ.

ಒಂದೆಡೆ ಪರಿಸ್ಥಿತಿ ಹೀಗಿದ್ದರೆ ಇದರ ಮಧ್ಯೆಯೇ ರಂಜಾನ್ ಮಾಸವೂ ಬಂದಿರುವುದರಿಂದ ಹಬ್ಬದಿಂದಾಗಿ ಬೇಡಿಕೆಯೂ ಹೆಚ್ಚಾಗಿದೆ. ಇದು ಕೂಡಾ ಬೆಲೆ ಏರಿಕೆಗೆ ಪರೋಕ್ಷವಾಗಿ ಕೊಡುಗೆ ನೀಡುತ್ತಿದೆ.

ಕೃತಕ ಬೇಡಿಕೆ ಸೃಷ್ಠಿಯೂ ಬೆಲೆ ಏರಿಕೆ ಹಿಂದಿದೆ.  ದಲ್ಲಾಳಿಗಳು ಸೃಷ್ಠಿಸುತ್ತಿರುವ ಅವಾಂತರಗಳೇ ಇದಕ್ಕೆಲ್ಲಾ ಕಾರಣ. ಗೋದಾಮುಗಳಲ್ಲಿ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿಟ್ಟು ಕೃತಕ ಬೇಡಿಕೆ ಸೃಷ್ಠಿಸಿ ಸುಲಿಗೆಗೆ ಇಳಿಯುತ್ತಿದ್ದಾರೆ.

ಪರಿಹಾರವೇನು?

ಬೆಲೆ ಏರಿಕೆಯನ್ನು ಜನರಿಂದ ನೇರವಾಗಿ ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯ. ಬದಲಾಗಿ ಈಗ ಸರಕಾರವೇ ಮಧ್ಯ ಪ್ರವೇಶ ಮಾಡಬೇಕು. ಅದರಲ್ಲೂ ದೇಶದೆಲ್ಲೆಡೆ ಬೇಳೆ ಕಾಳುಗಳ ಬೆಲೆ ಕಳೆದೊಂದು ವರ್ಷದಿಂದ ಈ ಮಟ್ಟಿಗೆ ಏರಿಕೆಯಾಗಿದ್ದರೂ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳದೇ ಇರುವುದು ಅಚ್ಚರಿ ಹುಟ್ಟಿಸುತ್ತಿದೆ. ತಕ್ಷಣ ವಿದೇಶಗಳಿಂದ ಆಮದು ಮಾಡಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ.

ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಅಘಾತಕಾರಿ ಸುದ್ದಿಯೊಂದು ಹೊರ ಬಿದ್ದಿತ್ತು. ಬೇಳೆ ಬೆಲೆ ಏರಿಕೆಗೆ ಉದ್ಯಮಿ ಗೌತಮ್ ಅದಾನಿಯೇ ಕಾರಣ ಎಂಬುದು ಆ ಸುದ್ದಿಯ ಸಾರಾಂಶವಾಗಿತ್ತು. ಗುಜರಾತ್ ರಾಜ್ಯದಲ್ಲಿರುವ ಬೃಹತ್ ಗೋದಾಮಿನಲ್ಲಿ, ಅದಾನಿ 100 ಲಕ್ಷ ಟನ್ ತೊಗರಿ ಬೇಳೆ ಸಂಗ್ರಹಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಒಂದೊಮ್ಮೆ ಇದು ನಿಜವೇ ಆಗಿದ್ದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

ಪಡಿತರ ವ್ಯವಸ್ಥೆಯಲ್ಲೂ ಕರ್ನಾಟಕ ಸರ್ಕಾರ ಆಟವಾಡುತ್ತಿದೆ. ಬೆಲೆ ಏರಿಕೆಯ ಅವಧಿಯಲ್ಲೇ ಅಕ್ಕಿ ಕಡಿಮೆ ನೀಡಿ ಬದಲಿಗೆ ರಾಗಿ, ಗೋಧಿಯನ್ನು ವಿತರಣೆ ಮಾಡುತ್ತಿದೆ. ಇದನ್ನು ನಿಲ್ಲಿಸಿ ಅಕ್ಕಿಯನ್ನೇ ವಿತರಣೆ ಮಾಡಬೇಕು. ಮತ್ತು ಬೇಳೆ ಕಾಳುಗಳನ್ನೂ ಬಡ ಜನರಿಗೆ ರಿಯಾಯಿತಿ ದರದಲ್ಲಿ ವಿತರಿಸಬೇಕು.

ಸದ್ಯ ಮುಂಗಾರು ಮಳೆ ಆರಂಭವಾಗಿದೆ. ಇನ್ನು ರೈತರೆಲ್ಲಾ ಭೂಮಿ ಉಳುಮೆ ಮಾಡಿ, ಬೀಜ ಬಿತ್ತಿ ಬೆಳೆ ತೆಗೆಯಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಲ್ಲಿವರೆಗೆ ಏರಿಕೆಯಾದ ಯಾವ ಬೆಲೆಗಳೂ ಇಳಿಯುವ ಲಕ್ಷಣಗಳಿಲ್ಲ. ಹೀಗೆ ಮುಂದುವರಿದರೆ ದೇಶ ದಾಖಲೆಯ ದರ ಏರಿಕೆ ಹಾಗೂ ತುಟ್ಟಿಯಾದ ನಿತ್ಯ ಜೀವನವನ್ನು ಕಾಣಲಿದೆ.