samachara
www.samachara.com
ಸುದ್ದಿ ಸಾಗರ

'ದೇವರು ಕೊಟ್ಟರೂ, ಪೂಜಾರಿಗಳು ಕೊಡುವುದಿಲ್ಲ': ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಪೆಟ್ರೋಲ್ ಬೆಲೆ ಯಾಕೆ ಏರುತ್ತಿದೆ?

ಜಾಗತಿಕ

ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯುತ್ತಿದ್ದರೂ ನಮ್ಮಲ್ಲಿ ಯಾಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ?

ಇದು ಇವತ್ತು ಹೊರಗಿನ ವಿದ್ಯಮಾನಗಳ ಕುರಿತು ಕನಿಷ್ಟ ಜ್ಞಾನ ಇರುವ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಶ್ನೆ.

ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದಿರುವ ದೇಶಗಳೂ ಪೈಪೋಟಿಗೆ ಬಿದ್ದಂತೆ ಭೂಮಿಯಾಳದಿಂದ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಇದ್ದ 106 ಡಾಲರ್ (7093.51 ರೂಪಾಯಿಗಳು) ಇಂದು 26 ಡಾಲರ್ (1739.92 ರೂಪಾಯಿ)ಗೆ ಇಳಿಕೆ ಕಂಡಿದೆ. ಅಂದರೆ ಶೇ. 75ರಷ್ಟು ಕಚ್ಚಾ ತೈಲದ ಬೆಲೆ ಕಳೆದ 2 ವರ್ಷಗಳ ಅಂತರದಲ್ಲಿ ಕುಸಿದಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ, ಬದಲಿಗೆ ಹೆಚ್ಚಳವಾಗಿದೆ.

ಕೆಳಗಿನ ಗ್ರಾಫಿಕ್ಸ್ ಗಮನಿಸಿ...

ಕಾರಣ ಏನು?:

ಕಳೆದ 11 ವರ್ಷಗಳಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ. ಆದರೆ, ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯಾಟ್, ಎಕ್ಸೈಸ್ ಡ್ಯೂಟಿಗಳನ್ನು ಹೆಚ್ಚಿಸಿವೆ. ಸದ್ಯ ಸರಕಾರದ ಆದಾಯದಲ್ಲಿ ಅತೀ ದೊಡ್ಡ ಪಾಲನ್ನು ನೀಡುತ್ತಿರುವುದು ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಮಾರಾಟ. ಸುಮಾರು 17 ಸಾವಿರ ಕೋಟಿ ರೂಪಾಯಿಗಳನ್ನು ಸರಕಾರ ಪ್ರತಿ ವರ್ಷ ಇಂಧನ ಮಾರಾಟದ ತೆರಿಗೆಯಿಂದ ಗಳಿಸುತ್ತಿದೆ. ಹೆಚ್ಚು ಕಡಿಮೆ ಶೇ. 35ರಷ್ಟು ಆದಾಯದ ಪಾಲು ಇದೊಂದು ವಿಭಾಗದಿಂದ ಬರುತ್ತಿದೆ. ಸದ್ಯ ಇಂಧನ ಮಾರಾಟದಿಂದ ಬರುತ್ತಿರುವ ಆದಾಯಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳದ ಹಿನ್ನೆಲೆಯಲ್ಲಿ ಸರಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಲೇ ಇದೆ.

ಇದರೆ ಜತೆಗೆ ಇಂಧನ ಮಾರುಕಟ್ಟೆ ಕಂಪನಿ(ಓಎಂಸಿ)ಗಳಾದ ಇಂಡಿಯನ್ ಕಾರ್ಪೊರೇಶನ್ ಲಿ., ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ., ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿ.,ಗಳು ತಮ್ಮ ಲಾಭಾಂಶಗಳನ್ನು ಹೆಚ್ಚಿಸಿಕೊಂಡಿವೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಾಣಿಸುತ್ತಿಲ್ಲ.

ತೆರಿಗೆ ಹೆಚ್ಚಳದ ಬಗ್ಗೆ ಮಾಹಿತಿಗೆ ಈ ಗ್ರಾಫಿಕ್ಸ್ ನೋಡಿ...

ಕಳೆದ ಮೂರು ತಿಂಗಳ ಅಂತರದಲ್ಲಿ ಎಕ್ಸೈಸ್ ಡ್ಯೂಟಿಯನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಹೀಗಾಗಿ ನೀವು ಕೊಡುವ ಇವತ್ತಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇದರ ಪಾಲೇ ಶೇ. 34ರಷ್ಟಿದೆ. ಇದರ ಜತೆಗೆ ರಾಜ್ಯ ಸರಕಾರಗಳು ವಿಧಿಸುತ್ತಿರುವ ತೆರಿಗೆ ಕೂಡ ಹೆಚ್ಚಳವಾಗಿದೆ. ಹೀಗಾಗಿ, ದೇವರು ಕೊಟ್ಟರೂ ಪೂಜಾರಿಗಳು ಕೊಡಲು ತಯಾರಿಲ್ಲ ಎಂಬಂತಾಂಗಿದೆ ಇಂಧನ ಗ್ರಾಹಕರ ಪರಿಸ್ಥಿತಿ.

ಮಾಹಿತಿ: ದಿ ವೈರ್