samachara
www.samachara.com
ಪೊಲೀಸರ 'ಅಶಿಸ್ತಿ'ಗೆ ಕಾರಣ ಏನು? 'ಎಸ್ಮಾ' ಝಳಪಿಸಲು ಹೊರಟವರ ಅರಿವಿಗೆ ಬರಬೇಕಾದ ಸರಳ ಸತ್ಯಗಳು!
ಸುದ್ದಿ ಸಾಗರ

ಪೊಲೀಸರ 'ಅಶಿಸ್ತಿ'ಗೆ ಕಾರಣ ಏನು? 'ಎಸ್ಮಾ' ಝಳಪಿಸಲು ಹೊರಟವರ ಅರಿವಿಗೆ ಬರಬೇಕಾದ ಸರಳ ಸತ್ಯಗಳು!

ಜೂ. 4ರ

ಪೊಲೀಸರ ಪ್ರತಿಭಟನೆ ಹತ್ತಿಕ್ಕಲು 'ಎಸ್ಮಾ' ಅಸ್ತ್ರ ಝಳಪಿಸಿರುವ ಬೆನ್ನಲ್ಲೇ ಇಲಾಖೆಯ ಒಳಗುದಿಗೆ ಕಾರಣ ಸರಕಾರನಾ? ಇಲ್ಲಾ ಹಿರಿಯ ಅಧಿಕಾರಿಗಳ ಹೊಣೆಗೇಡಿತನನಾ? ಎಂಬ ಪ್ರಶ್ನೆ ಚರ್ಚೆಯ ಕೇಂದ್ರಕ್ಕೆ ಬಂದಿದೆ.

ಇದಕ್ಕೆ ಕಾರಣ, ಕರ್ನಾಟಕ ರಾಜ್ಯ ಪೊಲೀಸ್ ಮಹಾಸಂಘ ಮಂಗಳವಾರ ಡಿಜಿಪಿಗೆ ಸಲ್ಲಿಸಿದ ಬೇಡಿಕೆಗಳ ಪಟ್ಟಿ. ಸಂಘ ಇಟ್ಟಿರುವ 31 ಬೇಡಿಕೆಗಳ ಪೈಕಿ ಐದಾರು ಬೇಡಿಕೆಗಳನ್ನು ಹೊರತು ಪಡಿಸಿದರೆ, ಉಳಿದ ಎಲ್ಲವೂ ಇಲಾಖೆ ಒಳಗಿನ ಸಮಸ್ಯೆಗಳೇ. ಪ್ರಮುಖವಾಗಿ ರಜೆಯ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿಗಳು ಭ್ರಮನಿರಸನಗೊಂಡಿರುವುದು ಬೇಡಿಕೆಗಳನ್ನು ಗಮನಿಸಿದರೆ ಅರ್ಥವಾಗುವ ಸಂಗತಿ. ಈ ಸಮಸ್ಯೆಯ ಮೂಲ ಇರುವುದು ಇಲಾಖೆ ಒಳಗಡೆಯೇ ಹೊರತು, ಸರಕಾರದಲ್ಲಿ ಅಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

ರಜೆಗಳೆಷ್ಟಿವೆ?:

ರಾಜ್ಯದಲ್ಲಿ ಪೊಲೀಸರಿಗೆ ವರ್ಷಕ್ಕೆ ಒಟ್ಟು 52ವರೆ ದಿನಗಳ ರಜೆಯ ಅವಕಾಶ ಇದೆ. ಇದರಲ್ಲಿ 15 ಕ್ಯಾಜುವಲ್ ಲೀವ್, 30 ಅರ್ನ್ಡ್ ಲೀವ್ ಹಾಗೂ 15 ಹಾಫ್ ಡೇ ಲೀವ್ ವ್ಯವಸ್ಥೆ ಇದೆ. ಇದನ್ನು ಪಡೆಯಬೇಕಾದರೆ, ಹಿರಿಯ ಅಧಿಕಾರಿಗಳ ಅನುಮತಿ ಅತ್ಯಗತ್ಯ. "ನಾವು ರಜೆ ಪಡೆಯುವುದು ಅಂದರೆ ದೊಡ್ಡ ಸಾಹಸ ಮಾಡಿದಂತಾಗುತ್ತದೆ. ವರ್ಷದಲ್ಲಿ ಒಂದು ದಿನವೂ ರಜೆ ಹಾಕದೆ ಕೆಲಸ ಮಾಡಿದ ಅನೇಕರು ನಮ್ಮ ಜತೆ ಇದ್ದಾರೆ. ಇದಕ್ಕೆ ಕಾರಣ ಅವರು ರಜೆ ಹಾಕಲಿಲ್ಲ ಅಂತಲ್ಲ. ರಜೆಯನ್ನು ಹಿರಿಯ ಅಧಿಕಾರಿಗಳು ಮಂಜೂರು ಮಾಡಲಿಲ್ಲ ಎಂಬುದು. ಯಾರು ಎಷ್ಟು ರಜೆ ಹಾಕಿದ್ದಾರೆ, ಯಾರಿಗೆ ಎಷ್ಟು ರಜೆ ನೀಡಲಾಗಿದೆ ಎಂದು ಸರಕಾರ ವರದಿ ತರಿಸಿಕೊಂಡು ನೋಡಲಿ,'' ಎನ್ನುತ್ತಾರೆ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಪೇದೆಯೊಬ್ಬರು.

ಇನ್ನು, ಮಹಿಳಾ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯದ ಬೇಡಿಕೆಗಳು ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ವಿಚಾರಗಳು. "ಇವುಗಳನ್ನು ಠಾಣಾಧಿಕಾರಿಗಳೇ ಬಗೆಹರಿಸಬೇಕಾದ ಸಂಗತಿಗಳು,'' ಎನ್ನುತ್ತಾರೆ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು. "ಮಹಿಳಾ ಪೇದೆಗಳು ಪ್ರತ್ಯೇಕ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ ಎಂದರೆ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇದಕ್ಕೂ ಸರಕಾರವೇ ಮಧ್ಯಪ್ರವೇಶ ಮಾಡಬೇಕು ಎಂದು ಬಯಸುವ ಮಟ್ಟಕ್ಕೆ ಸಮಸ್ಯೆಯನ್ನು ಬೆಳೆಯಲು ಬಿಟ್ಟಿರುವುದು ಇಲಾಖೆಯ ಅಧಿಕಾರಿಗಳ ಹೊಣೆಗೇಡಿತನವಲ್ಲದೆ ಮತ್ತೇನೂ ಅಲ್ಲ,'' ಎನ್ನುತ್ತಾರೆ ಅವರು.

ಪೊಲೀಸ್ ಸಂಘ ಮುಂದಿಟ್ಟ ಹಲವು ಬೇಡಿಕೆಗಳಲ್ಲಿ ಇಲಾಖೆ ಮಟ್ಟದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯ ಇದೆ. ಸಂಬಳ ಹೆಚ್ಚಳ, ವಸತಿ ವ್ಯವಸ್ಥೆ, ಹುದ್ದೆ ಭರ್ತಿಯಂತಹ ಕೆಲವು ಬೇಡಿಕೆಗಳು ಮಾತ್ರ ಸರಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಅಧಿಕಾರಿಗಳೇ ಹೊಣೆ:

ರಾಜ್ಯವ್ಯಾಪಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಪ್ರತಿಭಟನೆ ಕರೆಗೆ ಸ್ಪಂದಿಸಿದ್ದನ್ನು ಗಮನಿಸಿದರೆ ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ. ಇದಕ್ಕೆ ಹಲವು ವರ್ಷಗಳಿಂದ ಇಲಾಖೆ ಒಳಗೆ ಆಡಳಿತಾತ್ಮಕ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಕೊರತೆ ಕಾರಣ.

"ಮೊದಲು ಠಾಣಾ ಮಟ್ಟದಲ್ಲಿ, ನಂತರ ಜಿಲ್ಲಾ ಮಟ್ಟದಲ್ಲಿ ಕೊನೆಗೆ ರಾಜ್ಯಮಟ್ಟದಲ್ಲಿ ಪೊಲೀಸ್ ಇಲಾಖೆ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವುದು ಸಿಬ್ಬಂದಿಗಳು ಪ್ರತಿಭಟನೆಗೆ ಇಳಿಯಲು ಕಾರಣ ಎಂದು ಗೃಹ ಇಲಾಖೆ ಭದ್ರತಾ ಸಲಹೆಗಾರ ಕೆಂಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು,'' ಎಂದು ಮನವಿ ಸಲ್ಲಿಸಲು ಹೋದ ಕರ್ನಾಟಕ ರಾಜ್ಯ ಪೊಲೀಸ್ ಸಂಘದ ಪದಾಧಿಕಾರಿಯೊಬ್ಬರು 'ಸಮಾಚಾರ'ಕ್ಕೆ ತಿಳಿಸಿದರು. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೂ ಕೆಂಪಯ್ಯ ತಂದಿದ್ದಾರೆ ಎನ್ನಲಾಗುತ್ತಿದೆ. 'ಸಮಾಚಾರ' ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಸಾಧ್ಯವಾಗಲಿಲ್ಲ.

"ನಮ್ಮ ಕಾಲದಲ್ಲಿ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಆರ್ಡರ್ಲಿಗಳ ಪೆರೇಡ್ ನಡೆಸುತ್ತಿದ್ದೆವು. ಮುಂದಿನ ಪೆರೇಡ್ ಸಮಯದಲ್ಲಿ ಅವರು ಮುಂದಿಟ್ಟಿದ್ದ ಕುಂದು ಕೊರತೆಗಳಿಗೆ ಪರಿಹಾರ ನೀಡಿದ್ದನ್ನು ಮಾಹಿತಿ ನೀಡುತ್ತಿದ್ದೆವು. ಆ ಸಂಪ್ರದಾಯ ಈಗ ನಿಂತು ಹೋಗಿದೆ,'' ಎಂದು ಕೆಂಪಯ್ಯ ತಮ್ಮನ್ನು ಭೇಟಿ ಮಾಡಿದ ಸಂಘದವರಿಗೆ ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗಾದರೆ, ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಪ್ರತಿಭಟನೆ ಅಶಿಸ್ತು?:

ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, "ಸಾಮೂಹಿಕ ರಾಜೀನಾಮೆ ಹಾಕುವ ಮೂಲಕ ಪೊಲೀಸರು ಅಶಸ್ತಿನ ವರ್ತನೆ ಪ್ರದರ್ಶಿಸುತ್ತಿದ್ದಾರೆ,'' ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹಲವು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆಗೆ ರಜೆಯ ವಿಧಾನವನ್ನು ಆಯ್ದುಕೊಂಡಿರುವುದು ಅಶಿಸ್ತು ಹೇಗೆ ಆಗುತ್ತದೆ ಎಂದು ಇಲಾಖೆಯೊಳಗೆ ಚರ್ಚೆ ನಡೆಯುತ್ತಿದೆ. "ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇದೆ ಎಂದು ಸಿಎಂ ಹೇಳುತ್ತಿದ್ದಾರೆ. ಈ ಮುಕ್ತ ಅವಕಾಶ ಎಂದರೇನು? ನಾವು ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಬೇಕಾ?,'' ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಒಟ್ಟಾರೆ, ಸದ್ಯದ ಬೆಳವಣಿಗೆಗಳು ಹಾಗೂ ಅದನ್ನು ಸರಕಾರ ಮೇಲ್ಮಟ್ಟದಲ್ಲಿಯೇ ನಿವಾರಿಸಿಕೊಳ್ಳಲು ಹೊರಟ ರೀತಿ ನೋಡುತ್ತಿದ್ದರೆ, ಪೊಲೀಸ್ ಇಲಾಖೆಯೊಳಗೆ ಹೆಚ್ಚುತ್ತಿರುವ 'ಅಶಿಸ್ತು' ಸದ್ಯಕ್ಕೆ ಸರಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜೂ. 4ರ ಪ್ರತಿಭಟನೆಗೆ ಮೂರು ದಿನಗಳಷ್ಟೆ ಬಾಕಿ ಇರುವ ಈ ಸಮಯದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ವಿಚಾರದಲ್ಲಿ ಸರಕಾರ ತೆಗೆದುಕೊಳ್ಳುವ ಒಂದು ಕಠಿಣ ನಿರ್ಧಾರ ಬೆಳವಣಿಗೆಗಳಿಗೆ ಹೊಸ ತಿರುವನ್ನೇ ನೀಡಬಲ್ಲದು. ಆದರೆ, ಅದನ್ನು ಅಧಿಕಾರದ ಕೇಂದ್ರದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಿದೆ.