'ಎಸ್ಮಾ' ಎಂಬ ಚಾಪೆ ಕೆಳಗೆ ಮೌನ ಪ್ರತಿಭಟನೆಯ ರಂಗೋಲಿ: ಹೊಸ ತಿರುವು ಪಡೆದುಕೊಳ್ಳುತ್ತಾ ಪೊಲೀಸರ ಚಳವಳಿ?
ಸುದ್ದಿ ಸಾಗರ

'ಎಸ್ಮಾ' ಎಂಬ ಚಾಪೆ ಕೆಳಗೆ ಮೌನ ಪ್ರತಿಭಟನೆಯ ರಂಗೋಲಿ: ಹೊಸ ತಿರುವು ಪಡೆದುಕೊಳ್ಳುತ್ತಾ ಪೊಲೀಸರ ಚಳವಳಿ?

'ಎಸ್ಮಾ'

ಜಾರಿ ಹಿನ್ನೆಲೆಯಲ್ಲಿ ಜೂನ್ 4ರಂದು ಪೊಲೀಸರು ನಡೆಸಲು ತೀರ್ಮಾನಿಸಿದ್ದ 'ರಜೆ ಚಳವಳಿ' ಹೊಸ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ.

31 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿರುವ ಕರ್ನಾಟಕ ರಾಜ್ಯ ಪೊಲೀಸ್ ಸಂಘ ಹಾಗೂ ಮಹಾ ಸಂಘಗಳ ಅಡಿಯಲ್ಲಿ ರಾಜ್ಯವ್ಯಾಪಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಕೋರಿ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಒಳಾಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಮೂಲಕ ಪೊಲೀಸರನ್ನೂ 'ಅತ್ಯಾವಶ್ಯಕ ಸೇವೆ'ಗಳ ಅಡಿಯಲ್ಲಿ ತರುವ  ಮೂಲಕ ಎಸ್ಮಾ ಕಾಯ್ದೆಯನ್ನು ಸರಕಾರ ಮಂಗಳವಾರ ಜಾರಿಗೆ ತಂದಿದೆ. ಹೀಗಾಗಿ, ಕೊಟ್ಟಷ್ಟೆ ಉತ್ಸಾಹದಿಂದ ರಜೆ ಅರ್ಜಿಗಳನ್ನು ವಾಪಾಸು ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಗಳು ಕೆಲವು ಕಡೆಗಳಲ್ಲಿ ಮುಚ್ಚಳಿಕೆಯನ್ನೂ ಬರೆದು ಕೊಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಇದು ಎದ್ದಿರುವ ಪ್ರತಿಭಟನೆಗೆ ತಾತ್ಕಾಲಿಕ ತಡೆ ಹಾಕಬಹುದೇ ವಿನಃ, ಶಾಶ್ವತ ಪರಿಹಾರ ಅಲ್ಲ ಎಂದು ಇಲಾಖೆಯೊಳಗೆ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಂದು ವೇಳೆ, ಜೂನ್ 4ರಂದು ನಡೆಯುವ ಪ್ರತಿಭಟನೆ ಮೇಲೆ ಸರಕಾರದ ಭ್ರಹ್ಮಾಸ್ತ್ರ ಪ್ರಯೋಗವಾದರೆ ಮುಂದೆ ಪೊಲೀಸರ ಪ್ರತಿಭಟನೆ ಯಾವ ತಿರುವುಗಳನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಸಂಘ ಆಲೋಚನೆ ಮಾಡುತ್ತಿದೆ.

ಸಾಧ್ಯತೆಗಳು ಏನಿವೆ?:

ಪ್ರತಿಭಟನೆಗೆ ಮುನ್ನವೇ ಜೂನ್ 4ರಂದು ರಜೆ ಪಡೆದ ಸಿಬ್ಬಂದಿಗಳು ಹಾಗೂ ಕೆಳ ಹಂತದ ಅಧಿಕಾರಿಗಳು ಕೆಲಸಕ್ಕೆ ಕೆಲಸಕ್ಕೆ ಹಾಜರಾದರೆ, ಕರ್ತವ್ಯ ನಿರ್ವಹಿಸದೆ ಸುಮ್ಮನೆ ಕಾಲ ಕಳೆಯಬಹುದು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. "ಬೆಂಗಳೂರಿನಲ್ಲಿ ಯಥಾಪ್ರಕಾರ ಬೀದಿಗೆ ಇಳಿಯುವ ಟ್ರಾಫಿಕ್ ಸಿಬ್ಬಂದಿ ಯಾವುದೇ ಕರ್ತವ್ಯ ನಿರ್ವಹಿಸದೇ ಹೋದರೆ ಟ್ರಾಫಿಕ್ ಜಾಮ್ ಉಂಟಾಗಬಹುದು. ಉಬರ್ ಮತ್ತು ಓಲಾದವರು ಮೂರು ಗಂಟೆ ಪ್ರತಿಭಟನೆ ನಡೆಸಿದ್ದಕ್ಕೆ ರಸ್ತೆಗಳು ಜಾಮ್ ಆಗಿದ್ದವು. ಅದನ್ನು ಸರಿಪಡಿಸಲು ಪೊಲೀಸರ ಹರಸಾಹಸ ಪಟ್ಟರು. ಹೀಗಿರುವಾಗ, ಪೊಲೀಸರು ಕರ್ತವ್ಯ ನಿರ್ವಹಿಸದೆ ಮೌನ ಪ್ರತಿಭಟನೆ ನಡೆಸಿದರೆ ಬೆಂಗಳೂರು ಜೂನ್ 4ರಂದು ಏನಾಗಬಹುದು ಊಹಿಸಿಕೊಳ್ಳಿ,'' ಎಂದು ಸಂಚಾರಿ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ, ಒಂದು ವೇಳೆ ಪೊಲೀಸ್ ಸಿಬ್ಬಂದಿಗಳ ಮೇಲೆ ಕಾನೂನಿನ ಬಲ ಪ್ರಯೋಗಿಸಿದರೆ, ಅವರ ಪರವಾಗಿ ಕುಟುಂಬದವರನ್ನು ಪ್ರತಿಭಟನೆಗೆ ಇಳಿಸುವ ಕುರಿತು ಪೊಲೀಸ್ ಸಂಘ ಹಾಗೂ ಮಹಾಸಂಘಗಳು ಆಲೋಚನೆ ಮಾಡುತ್ತಿವೆ. "ನಮಗೆ ಪ್ರತಿಭಟನೆ ನಡೆಸು ಹಕ್ಕಿಲ್ಲ. ಆದರೆ ನಮ್ಮ ಕುಟುಂಬದವರು ಬೀದಿಗೆ ಇಳಿಯಬಾರದು ಎಂದು ಕಾನೂನು ತರುತ್ತಾರಾ ನೋಡಬೇಕು,'' ಎಂದು ಡಿಎಆರ್ ಪೊಲೀಸರೊಬ್ಬರು ಸವಾಲು ಹಾಕುತ್ತಾರೆ. ಈ ಕುರಿತು ಸಂಘದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬೀಳದಿದ್ದರೂ, ಆಲೋಚನೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ವಿಶ್ವಾಸದ ಪ್ರಶ್ನೆ:

ಒಂದು ವೇಳೆ, ಪ್ರತಿಭಟನೆ ನಡೆಸಲು ಮುಂದಾದ ಪೊಲೀಸರ ಮೇಲೆ ಕಾನೂನು ಅಸ್ತ್ರ ಝಳಿಪಿಸಿದರೆ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಈಗಿರುವ ವಿಶ್ವಾಸವೂ ಕಳೆದು ಹೋಗುವ ಸಾಧ್ಯತೆಗಳನ್ನು ಕೆಲವರು ಮುಂದಿಡುತ್ತಿದ್ದಾರೆ. "ಐಪಿಎಸ್ ವರ್ಗ ಏನಾದರೂ ಪೊಲೀಸ್ ಸಿಬ್ಬಂದಿಗಳ ಮೇಲೆ ಬಲ ಪ್ರಯೋಗ ನಡೆಸಿದರೆ ಅವರ ಮೇಲಿರುವ ವಿಶ್ವಾಸ ಕಳೆದು ಹೋಗುತ್ತದೆ. ಪ್ರತಿಭಟನೆ ವಾಪಾಸ್ ಪಡೆಯುವುದನ್ನು ಬಲ ಪ್ರಯೋಗದಿಂದ ತಡೆಯುವುದರಿಂದ ಅನಾನುಕೂಲತೆಯೇ ಹೆಚ್ಚು. ಅದರ ಬದಲು ಆತ್ಮಗಳನ್ನು ಗೆಲ್ಲುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡಬೇಕು,'' ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

"ನಾಮಕಾವಸ್ತೆಗೆ ರಜೆ ವಾಪಾಸ್ ಪಡೆದರೂ ಸಿಬ್ಬಂದಿಗಳ ಸಮಸ್ಯೆಗಳು ಹಾಗೆಯೇ ಉಳಿದು ಹೋದರೆ ಪ್ರಯೋಜನವಾಗುವುದಿಲ್ಲ. ಈವರೆಗೂ ಸರಕಾರ ಆಗಲಿ, ಹಿರಿಯ ಅಧಿಕಾರಿಗಳಾಗಲೀ ಸಿಬ್ಬಂದಿಗಳು ಮುಂದಿಟ್ಟಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿಲ್ಲ. ಆರ್ಡರ್ಲಿ ವ್ಯವಸ್ಥೆಯನ್ನು ರದ್ದು ಮಾಡುವ ಕುರಿತು ಮಾತನಾಡುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಬೇರೆಯದೇ ಸ್ವರೂಪ ಪಡೆದುಕೊಳ್ಳಬಹುದು,'' ಎಂದವರು ವಿಶ್ಲೇಷಣೆ ಮಾಡುತ್ತಾರೆ.

ಜಾತಿ ವಿಚಾರ: 

ಸಾಮಾನ್ಯವಾಗಿ ಎಲ್ಲಾ ವಿಚಾರಗಳಿಗೂ ಜಾತಿಯ ನಂಟು ಬೆಸೆದುಕೊಳ್ಳುವಂತೆ ಪೊಲೀಸರ ಪ್ರತಿಭಟನೆಗೂ ಜಾತಿ ಅಂಟು ಮೆತ್ತಿಕೊಂಡಿದೆ. "ಕಾಂಗ್ರೆಸ್ ಸರಕಾರ ಬಂದ ನಂತರ ಬೆಂಗಳೂರಿನ ಆಯಕಟ್ಟಿನ ಸ್ಥಾನಗಳಿಗೆ ಲಿಂಗಾಯಿತೇತರ ಅಧಿಕಾರಿಗಳು ಬಂದಿರುವುದು ಒಂದು ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ ಬಿಜೆಪಿ ಕೂಡ ಪೊಲೀಸರ ಪ್ರತಿಭಟನೆಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಸಿಬ್ಬಂದಿಗಳ ಸಮಸ್ಯೆಗಳಲ್ಲಿ ಸತ್ಯಾಂಶ ಇದೆ. ಹಾಗಂತ ದೇಶದ ಎಲ್ಲಾ ಕಡೆಗಳಲ್ಲೂ ಪೊಲೀಸರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಾಳೆ ಸೈನ್ಯದಲ್ಲಿಯೂ ಇದೇ ಬೇಡಿಕೆಗಳನ್ನು ಮುಂದಿಟ್ಟರೂ ಅಚ್ಚರಿ ಪಡಬೇಕಿಲ್ಲ,'' ಎನ್ನುತ್ತಾರೆ ಸರಕಾರದ ಪ್ರಮುಖರೊಬ್ಬರು.

ಒಟ್ಟಾರೆ, ಸಣ್ಣ ಮಟ್ಟದಲ್ಲಿ ಆರಂಭವಾದ ಪೊಲೀಸರ ಪ್ರತಿಭಟನೆ ದನಿ ಈಗ ಜೋರಾಗಿಯೇ ಮೊಳಗುತ್ತಿದೆ. ಈ ಅಬ್ಬರದಲ್ಲಿ ಸಾಮಾನ್ಯ ಪೊಲೀಸ್ ಸಿಬ್ಬಂದಿಗಳ ವಾಸ್ತವಿಕ ಬೇಡಿಕೆಗಳು ಹಾಗೆಯೇ ಉಳಿದು ಹೋದರೆ, ಮುಂದಿನ ದಿನಗಳಲ್ಲಿ ರೋಗ ಉಲ್ಬಣಗೊಳ್ಳುವುದು ನಿಚ್ಚಳವಾಗಿದೆ.