ಮೇಲ್ಮನೆಗೆ ನಾಮನಿರ್ದೇಶನ ಕಸರತ್ತು: ಸಾಹಿತಿಗಳನ್ನು ಹೊರಗಿಟ್ಟು ರಾಜಕಾರಣಿಗಳಿಗೆ ಅವಕಾಶ?
ಸುದ್ದಿ ಸಾಗರ

ಮೇಲ್ಮನೆಗೆ ನಾಮನಿರ್ದೇಶನ ಕಸರತ್ತು: ಸಾಹಿತಿಗಳನ್ನು ಹೊರಗಿಟ್ಟು ರಾಜಕಾರಣಿಗಳಿಗೆ ಅವಕಾಶ?

ಮೂವರ

ಹೆಸರುಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಇಕ್ಕಿಟ್ಟಿಗೆ ಸಿಲುಕಿದ್ದು, ಕೊನೆಯ ಕ್ಷಣಗಳಲ್ಲಿ ಸಾಹಿತಿಗಳನ್ನು ಪಟ್ಟಿಯಿಂದ ಹೊರಗಿಡುವ ಸಾಧ್ಯತೆ ಇದೆ.

ಹೀಗೊಂದು ಮಾಹಿತಿ ಇದೀಗ ಲಭ್ಯವಾಗಿದ್ದು, ಕೊನೆಯ ಕ್ಷಣದಲ್ಲಿ ಮೂರು ನಾಮನಿರ್ದೇಶನ ಸ್ಥಾನಗಳ ಪೈಕಿ ಸಾಹಿತಿಗಳ ಹೆಸರು ಇಲ್ಲದೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಸರಕಾರ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಲಿದೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಿತ್ತು. ಆದರೆ, ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಸಾಹಿತಿ ಹೆಸರನ್ನು ಕೈಬಿಡುವ ಸೂಚನೆಗಳಿವೆ.

ಏನಿದು ಬೆಳವಣಿಗೆ?:

ಸದ್ಯ ವಿಧಾನ ಪರಿಷತ್ ಸ್ಥಾನಗಳಿಗೆ ಸರಕಾರ ಮೂರು ಹೆಸರುಗಳನ್ನು ನಾಮನಿರ್ದೇಶನ ಮಾಡುವ ಅವಕಾಶ ಇದೆ. ಇದರಲ್ಲಿ ಒಬ್ಬರನ್ನು ಸಾಹಿತ್ಯ ಕ್ಷೇತ್ರದಿಂದ ಮೇಲ್ಮನೆಗೆ ಕಳುಹಿಸಲು ಸಿದ್ಧತೆ ನಡೆದಿತ್ತು. ರೇಸಿನಲ್ಲಿ ಜಿ. ಮರಳ ಸಿದ್ದಪ್ಪ, ಎಸ್. ಜಿ. ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ ಇದ್ದರು. ಇದರಲ್ಲಿ ಮರಳ ಸಿದ್ದಪ್ಪ ಹಾಗೂ ಎಸ್. ಜಿ. ಸಿದ್ದರಾಮಯ್ಯ ಹೆಸರು ಪಟ್ಟಿ ಅಂತಿಮಗೊಳ್ಳುವ ಮುಂಚೆಯೇ ತಿರಸ್ಕಾರಗೊಂಡಿದ್ದವು. ಬರಗೂರು ರಾಮಚಂದ್ರಪ್ಪ ಹೆಸರು ಇನ್ನೂ ಉಳಿದುಕೊಂಡಿತ್ತು. ಆದರೆ, ಕಾಂಗ್ರೆಸ್ ಪಕ್ಷದ ನಾಯಕ ಕೆ. ಪಿ. ನಂಜುಂಡಿ ಅವರ ಮಧ್ಯ ಪ್ರವೇಶದಿಂದಾಗಿ ಇದ್ದ ಒಬ್ಬ ಸಾಹಿತಿಯ ಹೆಸರೂ ನಾಮ ನಿರ್ದೇಶನ ಪಟ್ಟಿಯಿಂದ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಕಾರಣ ಏನು?:

ಸದ್ಯ ಮೂರು ನಾಮನಿರ್ದೇಶನ ಸ್ಥಾನಗಳಿಗಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೆಶ್ವರ್ ಹಾಗೂ ಡಿ. ಕೆ. ಶಿವಕುಮಾರ್ ತಮ್ಮವರ ಹೆಸರನ್ನು ಮುಂದಿಟ್ಟಿದ್ದಾರೆ. ಪರಮೇಶ್ವರ್ ಜಿ. ಸಿ. ಚಂದ್ರಶೇಖರ್ ಅವರಿಗೆ ಅವಕಾಶ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದು, ಡಿ. ಕೆ. ಶಿವಕುಮಾರ್ ಕಡೆಯಿಂದ ಸಿ. ಎಂ. ಲಿಂಗಪ್ಪ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಜತೆಗೆ, ಪಿ. ಆರ್. ರಮೇಶ್ ಅವರ ಆಕಾಂಕ್ಷೆಗಳ ಕುರಿತು ಸಿಎಂ ಸಿದ್ದರಾಮಯ್ಯ ಸಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಕೊಂಡಜ್ಜಿ ಮೋಹನ್ ಕೂಡ ತಮ್ಮ ನಿರಂತರ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಇವರ ಜತೆಗೆ, ಕೆ. ಪಿ. ನಂಜುಂಡಿ ಕೂಡ ರೇಸಿನಲ್ಲಿದ್ದಾರೆ. "ಒಂದು ವೇಳೆ, ನನ್ನನ್ನೂ ಸೇರಿದಂತೆ ಇನ್ನೂ ಇಬ್ಬರು ರಾಜಕಾರಣಿಗಳ ಹೆಸರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿದರೆ, ಯಾವುದೇ ಸಮಸ್ಯೆಗಳಿಲ್ಲದಂತೆ ರಾಜ್ಯಪಾಲರಿಂದ ಅಂಕಿತ ಹಾಕಿಸಿಕೊಂಡು ಬರುವುದಾಗಿ ನಂಜುಂಡಿ ಪಕ್ಷದ ಉನ್ನತ ನಾಯಕರನ್ನು ಒಪ್ಪಿಸಿದ್ದಾರೆ,'' ಎಂದು ಮೂಲಗಳು ಹೇಳಿವೆ.

ಹೀಗಾಗಿ, ಕೊನೆಯ ಕ್ಷಣದಲ್ಲಿ ಸಾಹಿತಿಗಳ ಹೆಸರನ್ನು ಕೈ ಬಿಟ್ಟು, ಮೂರು ಸ್ಥಾನಗಳಿಗೆ ರಾಜಕಾರಣದ ಹಿನ್ನೆಲೆ ಇರುವವರನ್ನೇ ನಾಮ ನಿರ್ದೇಶನ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ನಂಜುಂಡಿ ಸಾಧ್ಯತೆಗಳು:

ಮೇಲ್ಮನೆಗೆ ನಾಮನಿರ್ದೇಶನ ಕಸರತ್ತು: ಸಾಹಿತಿಗಳನ್ನು ಹೊರಗಿಟ್ಟು ರಾಜಕಾರಣಿಗಳಿಗೆ ಅವಕಾಶ?

ಚಿನ್ನದ ಉದ್ಯಮಿ ಕೆ. ಪಿ. ನಂಜುಂಡಿ ಒಂದು ಕಾಲದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ಜತೆಯಲ್ಲಿದ್ದವರು. ಇವತ್ತು ಪರಮೇಶ್ವರ್ ಮೂಲಕ ದಿಗ್ವಿಜಯ್ ಸಿಂಗ್ ಅವರ ಜತೆ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಇದರ ಪ್ರಭಾವ ಬಳಸಿಯೇ ಅಂತಿಮವಾಗಿ ಮೇಲ್ಮನೆಗೆ ನಾಮನಿರ್ದೇಶನ ಸ್ಥಾನಗಳ ಪೈಕಿ ಒಂದನ್ನು ನಂಜುಂಡಿ ತಮಗಾಗಿ ಉಳಿಸಿಕೊಂಡಿದ್ದಾರೆ. ಇದಕ್ಕೆ ಆರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸಮ್ಮತಿ ಸೂಚಿಸಿದ್ದರೂ, ದಿಗ್ವಿಜಯ್ ಸಿಂಗ್ ಹಾಗೂ ಇತರೆ ನಾಯಕರ ಒತ್ತಾಯದ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದರ ಜತೆಗೆ, ನಂಜುಂಡಿ ತಮ್ಮ ಪ್ರಭಾವ ಬಳಸಿ ರಾಜ್ಯಪಾಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾಮನಿರ್ದೇಶನ ಸ್ಥಾನಗಳಿಗೆ ಅಂಕಿತ ಹಾಕಿಸುವ ಭರವಸೆ ನೀಡಿರುವುದರಿಂದ ನಾಮ ನಿರ್ದೇಶನ ಸ್ಥಾನಗಳ ಪಟ್ಟಿಯಲ್ಲಿ ಬದಲಾವಣೆಗಳಾಗಬಹುದು ಎನ್ನುತ್ತಿವೆ ಸರಕಾರದ ಮೂಲಗಳು.

ಸದ್ಯ ತೂಗುಯ್ಯಾಲೆಯಲ್ಲಿ ತೂಗುತ್ತಿರುವ ಮೇಲ್ಮನೆ ನಾಮನಿರ್ದೇಶನದ ಪಟ್ಟಿ ಅಂತಿಮಗೊಂಡ ನಂತರವೇ ಈ ಬೆಳವಣಿಗೆಗಳ ಹಿನ್ನೆಲೆ ಇನ್ನಷ್ಟು ಸ್ಪಷ್ಟಗೊಳ್ಳಲಿದೆ.