samachara
www.samachara.com
ಸಚಿವರುಗಳ ಮೇಲೆ ಆರೋಪಗಳ ಸುರಿಮಳೆ ಅಷ್ಟೆ
ಸುದ್ದಿ ಸಾಗರ

ಸಚಿವರುಗಳ ಮೇಲೆ ಆರೋಪಗಳ ಸುರಿಮಳೆ ಅಷ್ಟೆ

ಜಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ತಲೆದಂಡದ ಮಾತೇ ಇಲ್ಲ!

Summary

ರಾಜ್ಯದ ಸಚಿವರುಗಳ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದರೂ, ನಿರೀಕ್ಷಿತ ತಲೆದಂಡಗಳು ಮಾತ್ರ ಆಗುತ್ತಿಲ್ಲ.ಕಳೆದ ಮೂರು ವರ್ಷಗಳ ಅಂತರದಲ್ಲಿ ಸಂಪುಟ ಸಚಿವರುಗಳು ಮೇಲೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದುರ್ಬಳಕೆ ಹೀಗೆ ಆರೋಪಗಳು ಮುನ್ನಲೆಗೆ ಬಂದಿವೆ.

ಬಂದಷ್ಟೆ ವೇಗವಾಗಿ ತೆರೆಮರೆಗೂ ಸರಿದು ಹೋಗಿವೆ. ವ್ಯವಸ್ಥೆ ಜಡ್ಡುಗಟ್ಟಿ ಹೋಗಿರುವ ಈ ಸಮಯದಲ್ಲಿ ಈ ಪ್ರಕರಣಗಳ ಅವಲೋಕನ ನಡೆಸಿದರೆ ಜನ ಕೂಡ ಯಥಾಸ್ಥಿತಿಯನ್ನು ನಿರೀಕ್ಷಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಎಷ್ಟೊಂದು ಪ್ರಕರಣಗಳು:

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಸಚಿವರುಗಳ ಮೇಲಿನ ಆರೋಪಗಳಿಗೆ ನಾಂದಿ ಹಾಡಿದ್ದು ಸಂತೋಷ್ ಲಾಡ್ ಪ್ರಕರಣ. ಅಕ್ರಮ ಗಣಿಗಾರಿಕೆ ಕುರಿತು ಸುಪ್ರಿಂ ಕೋರ್ಟ್ ತೀರ್ಪುನಲ್ಲಿ ಅವರ ಮಾಲೀಕತ್ವದ ಗಣಿ ಕಂಪನಿ ಅಕ್ರಮ ಎಸಗಿದೆ ಎಂದು ಉಲ್ಲೇಖಗೊಂಡಿತ್ತು. ಭಾರಿ ಸಂಚಲನ ಮೂಡಿದ್ದ ಪ್ರಕರಣದಲ್ಲಿ ಕೊನೆಗೆ ಸಚಿವ ಲಾಡ್ ತಲೆದಂಡವಾಗಿತ್ತು.

ಅದಾದ ನಂತರ ಹಲವು ಸಚಿವರುಗಳ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದರೂ, ಈವರೆಗೆ ಯಾವೊಬ್ಬ ಸಚಿವರೂ ರಾಜೀನಾಮೆ ನೀಡಿಲ್ಲ.2014 ಏಪ್ರಿಲ್ ತಿಂಗಳಿನ ಕೊನೆಯಲ್ಲಿ ಮೀನುಗಾರಿಕಾ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಅಭಯ ಚಂದ್ರ ಜೈನ್ ವಿರುದ್ಧ ಪತ್ರಕರ್ತರೊಬ್ಬರಿಗೆ ಹಲ್ಲೆ ಬೆದರಿಕೆ ಒಡ್ಡಿದ ಆರೋಪ ಕೇಳಿ ಬಂದಿತ್ತು. ಈ ಸಮಯದಲ್ಲಿ ಸಚಿವರ ವಿರುದ್ಧ ದಕ್ಷಿಣ ಕನ್ನಡದ ಪತ್ರಕರ್ತರು ಬೀದಿಗೆ ಇಳಿದಿದ್ದರು. ಅವರ ರಾಜೀನಾಮೆಗೆ ಆಗ್ರಹಗಳೂ ಕೇಳಿ ಬಂದಿದ್ದವು. ಆದರೆ, ಸ್ವಲ್ಪ ದಿನಗಳಲ್ಲಿ ಪ್ರಕರಣ ತೆರೆಮರೆಗೆ ಸರಿಯಿತು.2015ರ ನವೆಂಬರ್ ತಿಂಗಳಿನಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ವಿರುದ್ಧ ಟೆಂಡರ್ ನೀಡಲು ಲಂಚದ ಬೇಡಿಕೆ ಇಟ್ಟ ಸುದ್ದಿ ಬಹಿರಂಗವಾಗಿತ್ತು.

'ಸುವರ್ಣ' ವಾಹಿನಿ ಸಚಿವರ ಮನೆಯಲ್ಲಿ ಐದು ಲಕ್ಷ ಹಣವನ್ನು ಟೇಬಲ್ ಮೇಲೆ ಇಟ್ಟುಕೊಂಡ ರಹಸ್ಯ ಕ್ಯಾಮೆರಾದ ದೃಶ್ಯಾವಳಿಗಳನ್ನು ಪ್ರಸಾರ ಮಾಡಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಆಂಜನೇಯ ರಾಜೀನಾಮೆಗೆ ಆಗ್ರಹಿಸಿತ್ತು. ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಸಚಿವರ ತಲೆದಂಡವಾಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಸುದ್ದಿ ನಂತರ ದಿನಗಳಲ್ಲಿ ತಣ್ಣಗಾಯಿತು. ಆಂಜನೇಯ ವಿರುದ್ಧ ಬಂದ ಎರಡನೇ ಪ್ರಮುಖ ಆರೋಪ ಇದಾಗಿತ್ತು.ಇದೇ ಅವಧಿಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್ ತಂಗಡಗಿ ಮೇಲೆ ವಿದ್ಯಾರ್ಥಿಯೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು. 'ತಂಗಡಗಿ ಹಠಾವೋ; ಕೊಪ್ಪಳ ಬಚಾವೋ' ಆಂದೋಲನ ಕೂಡ ನಡೆದಿತ್ತು.

ಇದೇ ಸಚಿವರ ಮೇಲೆ ಸರಕಾರದ ಆರಂಭದ ದಿನಗಳಲ್ಲಿಯೇ ಕೋಳಿ ಹಾಗೂ ಆಡುಗಳನ್ನು ಬಲಿಕೊಟ್ಟ ಆರೋಪ ಅಂತಾರಾಷ್ಟ್ರೀಯ ಸುದ್ದಿಯಾಗಿತ್ತು. ಆದರೆ, ತಂಗಡಗಿ ಅವರ ಅಧಿಕಾರಕ್ಕೆ ಇವ್ಯಾವುವೂ ತೊಡಕಾಗಲಿಲ್ಲ.ಇನ್ನು, ಈ ವರ್ಷದ ಆರಂಭದಲ್ಲಿ ಕಾರ್ಮಿಕ ಸಚಿವ ಬಿ. ಟಿ. ಪರಮೇಶ್ವರ ನಾಯಕ್ ಮೇಲೆ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲು ಒತ್ತಡ ಹೇರಿದ ಆರೋಪ ಕೇಳಿ ಬಂದಿತ್ತು. ತಾವು ಕರೆ ಮಾಡಿದಾಗ ಪೊಲೀಸ್ ಅಧಿಕಾರಿ ಅನುಪಮ ಶಣೈ ಸೂಕ್ತ ಸ್ಪಂದನೆ ನೀಡಲಿಲ್ಲ ಎಂದು ಸಚಿವರು ಅವರ ವರ್ಗಾವಣೆಗೆ ಚಿತಾವಣೆ ನಡೆಸಿದ್ದರು. ಇದನ್ನು ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿಕೊಂಡಿದ್ದರು ಕೂಡ. ಇದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತೇ ವಿನಃ ಸಚಿವ ಸ್ಥಾನಕ್ಕೆ ಕುತ್ತು ಬರಲಿಲ್ಲ.

ಇದೀಗ, ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಮೇಲೆ 2 ಕೋಟಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಚಿವರು ಗುತ್ತಿದಾರರ ಜತೆ ನಡೆಸಿದ ಫೋನ್ ಸಂಭಾಷಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು ವರದಿ ತರಿಸಿಕೊಂಡು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಆದರೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣಾ ಬಿಸಿಯಲ್ಲಿ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪ, ಹಿಂದಿನ ಪ್ರಕರಣಗಳ ಗತಿಯನ್ನೇ ಕಾಣುವ ಲಕ್ಷಣಗಳು ಕಾಣಿಸುತ್ತಿವೆ.ಇವುಗಳ ಜತೆಗೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ದುಬಾರಿ ವಾಚ್ ಪ್ರಕರಣ, ಸ್ವಜನ ಪಕ್ಷಪಾತದ ಆರೋಪಗಳು ಕೇಳಿಬಂದಿವೆ ಎಂಬುದನ್ನು ಗಮನಿಸಬೇಕಿದೆ.

ಯಾಕೆ ಹೀಗೆ?:

ಕಳೆದ ಮೂರು ವರ್ಷಗಳ ಅಂತರದಲ್ಲಿ ನಡೆದ ಈ ಪ್ರಕರಣಗಳಲ್ಲಿ ಮಾಧ್ಯಮಗಳು ತಮ್ಮ ಪಾತ್ರಗಳನ್ನು ನಿಭಾಯಿಸಿವೆ. ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳು ಪ್ರತಿ ಆರೋಪಗಳು ಕೇಳಿ ಬಂದಾಗಲೂ ಪ್ರಮುಖ ಸುದ್ದಿಯಾಗಿ ಭಿತ್ತರಿಸಿವೆ ಇಲ್ಲವೇ ಮುದ್ರಿಸಿವೆ. ಆದರೆ, ಇದಕ್ಕೆ ರಾಜ್ಯದ ಜನ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ನೀಡಲಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

"ಸದ್ಯದ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ದೊಡ್ಡ ವಿಚಾರ ಎಂದು ಜನರಿಗೆ ಅನ್ನಿಸದೆ ಇರುವುದರಲ್ಲಿ ಅಚ್ಚರಿ ಏನಿಲ್ಲ. ಎಲ್ಲ ಕಡೆಗಳಲ್ಲೂ ಭ್ರಷ್ಟಾಚಾರ ಇದೆ ಎಂಬುದನ್ನು ಅವರು ಗಮನಿಸುತ್ತಲೇ ಇದ್ದಾರೆ. ಹೀಗಾಗಿ, ಯಾರೋ ಒಬ್ಬ ಸಚಿವರು ರಾಜೀನಾಮೆ ಕೊಟ್ಟ ತಕ್ಷಣ ವ್ಯವಸ್ಥೆ ಬದಲಾವಣೆ ಆಗುತ್ತದ ಎಂಬ ಭ್ರಮೆ ಅವರಿಗಿಲ್ಲ. ಈ ಕಾರಣಕ್ಕೆ ಮಾಧ್ಯಮಗಳು ಎಷ್ಟೇ ಸದ್ದು ಮಾಡಿದರೂ, ಅಧಿಕಾರದಲ್ಲಿರುವವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರತಿಯೊಂದು ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸ ನಡೆಯುತ್ತಿದೆ,'' ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು. ಬಹುಶಃ ವ್ಯವಸ್ಥೆ ಜಡ್ಡುಗಟ್ಟಿದೆ ಎಂದು ಹೇಳುವುದು ಇದಕ್ಕೇ ಇರಬೇಕು.