ಮೋದಿ ಸರಕಾರಕ್ಕೆ ಎರಡು ವರ್ಷ: ಶುರುವಾಗುತ್ತಾ ರಾಜಕೀಯ ಪರ್ಯಾಯದ ಹೊಸ ಪರ್ವ?
ಸುದ್ದಿ ಸಾಗರ

ಮೋದಿ ಸರಕಾರಕ್ಕೆ ಎರಡು ವರ್ಷ: ಶುರುವಾಗುತ್ತಾ ರಾಜಕೀಯ ಪರ್ಯಾಯದ ಹೊಸ ಪರ್ವ?

ಕೇಂದ್ರ ಸರಕಾರದ 2 ವರ್ಷಗಳ ಆಡಳಿತಾವಧಿ ಪೂರ್ಣಗೊಳ್ಳುವ ಹೊತ್ತಿಗೆ ಮುಂದಿನ ಲೋಕಸಭೆಯ ಪರ್ಯಾಯಗಳ ವಿಶ್ಲೇಷಣೆ ಆರಂಭವಾಗಿರುವುದು ಬಿಜೆಪಿ ಮಟ್ಟಿಗಂತೂ ಶುಭ ಸೂಚಕ ಅಲ್ಲ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2 ವರ್ಷದ ಆಡಳಿತವನ್ನು ಪೂರ್ಣಗೊಳಿಸಿರುವ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪರ್ಯಾಯವೊಂದು ರಚನೆಗೊಳ್ಳುವ ಕುರಿತು ವಿಶ್ಲೇಷಣೆಗಳು ಶುರುವಾಗಿವೆ.ಬಿಜೆಪಿ ಹಾಗೂ ಪ್ರಧಾನಿ ಮೋದಿ ಆಡಳಿತಕ್ಕೆ ಪರ್ಯಾಯವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಉತ್ತರ ಪ್ರದೇಶದಿಂದ ಮಾಯಾವತಿ ಅಥವಾ ಮುಲಾಯಂ ಸಿಂಗ್ ಯಾದವ್ ಮತ್ತು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ರಾಷ್ಟ ರಾಜಕಾರಣ ಹೊಸ ತಿರುವು ಪಡೆದುಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.ಇಂತಹ ವಿಶ್ಲೇಷಣೆಗಳು ಹಿಂದೆಯೇ ಆರಂಭವಾಗಿದ್ದರೂ, ಕಳೆದ ವಾರ ಹೊರಬಿದ್ದ ನಾಲ್ಕು ರಾಜ್ಯಗಳ ವಿಧಾನಸಭಾ ಫಲಿತಾಂಶದ ಹಿನ್ನೆಲೆಯಲ್ಲಿ ಇನ್ನಷ್ಟು ಪುಷ್ಟಿ ಪಡೆದುಕೊಂಡಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗದ ಮಾದರಿಯಲ್ಲಿ, ಹೊಸ ಕಾಲಘಟ್ಟದ ನಾಯಕರನ್ನು ಒಳಗೊಂಡ ಪರ್ಯಾಯವೊಂದು ರಾಷ್ಟ್ರೀಯ ಮಟ್ಟದಲ್ಲಿ ರಚನೆಗೊಳ್ಳುವ ಸೂಚನೆಗಳು ಸಿಕ್ಕಿವೆ.ಈಗಾಗಲೇ ಬಿಹಾರದಲ್ಲಿ ಮದ್ಯಪಾನ ನಿಷೇಧದ ಮೂಲಕ ರಾಷ್ಟ್ರೀಯ ಚರ್ಚೆಗೆ ಬಂದವರು ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್. ಕಳೆದ ತಿಂಗಳು ಎರಡು ದಶಕಗಳ ನಂತರ ಮೊದಲ ಬಾರಿಗೆ ಅವರು ತಮ್ಮ ಪಕ್ಷ ಜೆಡಿಯು ಆಯಕಟ್ಟಿನ ಸ್ಥಾನಕ್ಕೆ ಏರಿದ್ದಾರೆ. ಜತೆಗೆ, ರಾಷ್ಟ್ರೀಯ ಲೋಕಶಕ್ತಿ ಜತೆ ಜೆಡಿಯು ವಿಲೀನಗೊಳಿಸುವ ಮೂಲಕ 'ಜನ ವಿಕಾಸ್ ಪಕ್ಷ' ಎಂಬ ಹೊಸ ಪಕ್ಷದ ಹುಟ್ಟಿಗೆ ಕಾರಣರಾಗಿದ್ದಾರೆ. ನಿತೀಶ್ ಕುಮಾರ್ ಈ ನಡೆಗಳು, ಮುಂಬರುವ ಲೋಕಸಭೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಧ್ಯಪ್ರವೇಶಿಸುವ ಅವರ ಬಯಕೆಗಳನ್ನು ಸ್ಪಷ್ಟಗೊಳಿಸುತ್ತಿವೆ. 'ಜನ ವಿಕಾಸ್ ಪಕ್ಷ'ಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಸೇರ್ಪಡೆಗೊಳ್ಳುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹೊಂದುವುದು ನಿತೀಶ್ ಮುಂದಿರುವ ಗುರಿ.

ಇನ್ನೊಂದಡೆ, ಪೂರ್ಣ ರಾಜ್ಯದ ಸ್ಥಾನಮಾನ ಇಲ್ಲದಿದ್ದರೂ, ರಾಷ್ಟ್ರ ರಾಜಕಾರಣಕ್ಕೆ ಆಯಕಟ್ಟಿನ ಜಾಗ ದಿಲ್ಲಿ. ಇಲ್ಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿದ್ದರು. ಸಾಂಕೇತಿಕ ಸ್ಪರ್ಧೆಯನ್ನು ಒಡ್ಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು. ಈಗಾಗಲೇ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲ್ಲುವ ಉಮೇದಿನಲ್ಲಿದೆ. ಕಳೆದ ವಾರ ಗೋವಾಕ್ಕೂ ಬಂದಿಳಿದ ಕೇಜ್ರಿವಾಲ್, ಮುಂದಿನ ದಿನಗಳಲ್ಲಿ ಸಣ್ಣ ರಾಜ್ಯಗಳನ್ನು ಕೇಂದ್ರಿಕರಿಸಿ ತಮ್ಮ ಭ್ರಷ್ಟಾಚಾರ ವಿರೋಧಿ ರಾಜಕೀಯವನ್ನು ಮತಗಳಾಗಿ ಪರಿವರ್ತಿಸುವ ತಯಾರಿ ನಡೆಸುತ್ತಿದ್ದಾರೆ.

ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಕನಿಷ್ಟ ಎರಡು ರಾಜ್ಯಗಳನ್ನು ತೆಕ್ಕೆಯಲ್ಲಿಟ್ಟುಕೊಂಡು ರಾಷ್ಟ್ರ ರಾಜಕಾರಣಕ್ಕೆ ಕೇಜ್ರಿವಾಲ್ ಜಿಗಿಯುವ ಯೋಚನೆಯಲ್ಲಿದ್ದಂತಿದೆ.ಇವರುಗಳ ಜತೆಗೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಶುಕ್ರವಾರ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿರುವ ಮಮತಾ ಬ್ಯಾನರ್ಜಿಗೆ ರಾಷ್ಟ್ರ ರಾಜಕಾರಣ ಹೊಸತಲ್ಲ. ಹಿಂದೆ 8 ಬಾರಿ ಲೋಕಸಭೆಯನ್ನು ಪ್ರತಿನಿಧಿಸಿರುವ ಅವರು ಕೇಂದ್ರದ ನಾನಾ ಇಲಾಖೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಮಮತಾರ ಜಿಗುಟು ರಾಜಕಾರಣ ಬಲ್ಲವರು, ಅವರು ಪಶ್ಚಿಮ ಬಂಗಾಳಕ್ಕೆ ಸೀಮಿತಗೊಳ್ಳುವ ನಾಯಕಿ ಅಲ್ಲ ಎಂದು ಹೇಳುತ್ತಾರೆ. ಹೀಗಾಗಿ, ಮುಂದಿನ ಲೋಕಸಭೆಯಲ್ಲಿ ಮಮತಾ ವಹಿಸುವ ಪಾತ್ರ ನಿರ್ಣಾಯಕವಾಗಲಿದೆ.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕೂಡ ಇದೇ ಮಾದರಿಯ ನಾಯಕಿ. ಅವರಿಗೂ ರಾಷ್ಟ್ರ ರಾಜಕಾರಣ ಮಾಡುವ ಹುಮ್ಮಸ್ಸು ಹಿಂದಿನಿಂದಲೂ ಇದೆ. ಅದರಲ್ಲೂ ತಮಿಳುನಾಡಿನ ಜನ ರಾಷ್ಟ್ರ ರಾಜಕಾರಣದಲ್ಲಿ 'ಅಮ್ಮ'ನನ್ನು ನೋಡಲು ಉತ್ಸುಕತೆ ತೋರಿಸುತ್ತಿದ್ದಾರೆ. ಹೀಗಾಗಿ, ಮುಂಬರುವ ಲೋಕಸಭೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ, ರಾಷ್ಟ್ರ ರಾಜಕಾರಣದ ಅಜೆಂಡಾ ಮುಂದಿಟ್ಟುಕೊಂಡು ಚುನಾವಣೆಗೆ ಇಳಿಯಲಿದೆ ಎಂದು ತಮಿಳುನಾಡಿನ ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 'ಅಮ್ಮ' ತಮಿಳುನಾಡು ಆಚೆಗೂ ಸದ್ದು ಮಾಡುವುದು ಖಾತ್ರಿ.

ಇದರ ಜತೆಗೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಈ ರಾಷ್ಟ್ರೀಯ ಪರ್ಯಾಯಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ಮುಂದಿಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಖಿಲೇಶ್ ಯಾದವ್ ಸರಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಇದರ ಲಾಭವನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ತಯಾರಿಗಳನ್ನು ಆರಂಭಿಸಿದೆ. ಆದರೆ, ಸ್ಥಳೀಯ ನಾಯಕಿ ಮಾಯಾವತಿ ಈಗಾಗಲೇ ಒಂದು ಸುತ್ತಿನ ಚುನಾವಣಾ ತಂತ್ರಗಾರಿಕೆಗಳನ್ನು ಹೆಣೆದು ಕುಳಿತಿದ್ದಾರೆ. ಹೀಗಾಗಿ, ಮಾಯಾವತಿ ಅವರ ಬಿಎಸ್ಪಿ ವಿಧಾನಸಭೆಯಲ್ಲಿ ಪಡೆಯುವ ಸ್ಥಾನಗಳ ಮೇಲೆ ಅವರ ರಾಷ್ಟ್ರ ರಾಜಕಾರಣ ನಿಂತಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಾತ್ರ ವಹಿಸುವ ಮತ್ತೊಂದು ಪ್ರಮುಖ ಅಂಶ ಈ ದೇಶದ ಕಾರ್ಪೊರೇಟ್ ಪ್ರಪಂಚ ಒಲವು ಯಾರ ಕಡೆಗೆ ಇರುತ್ತದೆ ಎಂಬುದು. ಸದ್ಯ ಪ್ರಧಾನಿ ಮೋದಿ ಬಗ್ಗೆ ಉದ್ಯಮಿಪತಿಗಳಿಗೆ ಆಸಕ್ತಿ ಇರುವಂತೆ ಕಂಡು ಬಂದರೂ ಆಳದಲ್ಲಿ ಕೆಲವೇ ಕಾರ್ಪೊರೇಟ್ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯ ಬಳಕೆಯಾಗುತ್ತಿದೆ ಎಂಬ ಅಸಮಾಧಾನಗಳು ಈ ವಲಯದಲ್ಲಿವೆ. ಮುಂದಿನ ಮೂರು ವರ್ಷಗಳಲ್ಲಿ ಈ ಅಸಮಾಧಾನಗಳು ತೆಗೆದುಕೊಳ್ಳುವ ಸ್ವರೂಪಗಳೂ ಮುಂದಿನ ಲೋಕಸಭೆಯ ಫಲಿತಾಂಶವನ್ನು ನಿರ್ಣಯಿಸಲಿದೆ. ಇದೆಲ್ಲಾ ಏನೇ ಇದ್ದರೂ, ಸದ್ಯದ ಮಟ್ಟಿಗೆ ಕೇಂದ್ರ ಸರಕಾರದ 2 ವರ್ಷಗಳ ಆಡಳಿತಾವಧಿ ಪೂರ್ಣಗೊಳ್ಳುವ ಹೊತ್ತಿಗೆ ಮುಂದಿನ ಲೋಕಸಭೆಯ ಪರ್ಯಾಯಗಳ ವಿಶ್ಲೇಷಣೆ ಆರಂಭವಾಗಿರುವುದು ಬಿಜೆಪಿ ಮಟ್ಟಿಗಂತೂ ಶುಭ ಸೂಚಕ ಅಲ್ಲ.