samachara
www.samachara.com
'ಬರಗಾಲದಲ್ಲಿ ಅಧಿಕ ವರ್ಷ': ಗಗನಕ್ಕೇರಿದ ಬೇಳೆಕಾಳು ಬೆಲೆ; ಅಕ್ಕಿ, ತರಕಾರಿಗಳೂ ತುಟ್ಟಿ
ಸುದ್ದಿ ಸಾಗರ

'ಬರಗಾಲದಲ್ಲಿ ಅಧಿಕ ವರ್ಷ': ಗಗನಕ್ಕೇರಿದ ಬೇಳೆಕಾಳು ಬೆಲೆ; ಅಕ್ಕಿ, ತರಕಾರಿಗಳೂ ತುಟ್ಟಿ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ದೇಶದಾದ್ಯಂತ

ದಿನಬಳಕೆ ಸಾಮಾಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.

ಪ್ರಮುಖವಾಗಿ ಅಕ್ಕಿ, ಬೇಳೆ ಕಾಳು ದರ ಭಾರೀ ಏರಿಕೆಯಾಗಿದ್ದು, ನಿಯಂತ್ರಣಕ್ಕೆ ಸಿಗದಂತಾಗಿವೆ. ರಾಜ್ಯದಲ್ಲಿ ಬೇಳೆ ಕಾಳು ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ . ಬೆಂಗಳೂರಿನಲ್ಲಿ ತೊಗರಿ ಬೇಳೆ 200, ಉದ್ದಿನ ಬೇಳೆ 220, ಹೆಸರು ಕಾಳು ದರ 120 ರೂ ದಾಟಿದೆ. ಹೀಗಿದ್ದೂ ಸರಕಾರ ಹಿಂದೊಮ್ಮೆ ಗೋದಾಮುಗಳ ಮೇಲೆ  ದಾಳಿ ಮಾಡಿದ್ದು ಬಿಟ್ಟರೆ ಬೇರಾವ ಕ್ರಮಗಳನ್ನೂ ಕೈಗೊಂಡಿಲ್ಲ.

ಇದೀಗ ಬೆಲೆ ನಿಯಂತ್ರಣದ ನಾಟಕಕ್ಕೆ ಇಳಿದಿರುವ ಕೇಂದ್ರ ಸರಕಾರ ಬೇಳೆ ಕಾಳುಗಳ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸೇರಿದಂತೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸದಂತೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ವ್ಯಾಟ್ ಹೇರದಿದ್ದರೆ ಶೇ. 5-6 ರಷ್ಟು ದರ ಇಳಿಯುತ್ತದೆ ಎಂಬ ಚಿಲ್ಲರೆ ಪರಿಹಾರ ಮುಂದಿಡುತ್ತಿದೆ.

ಜೊತೆಗೆ ಶನಿವಾರ ನಡೆದ ರಾಜ್ಯ ಆಹಾರ ಸಚಿರೊಂದಿಗಿನ ಸಭೆಯಲ್ಲಿ, "ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು," ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರಾಜ್ಯ ಸಚಿವರುಗಳ ಮೇಲೆ ಎಂದಿನ ದಾಟಿಯಲ್ಲಿ ಹರಿಹಾಯ್ದಿದ್ದಾರೆ. ರಾಜ್ಯ ಆಹಾರ ಸಚಿವ ದಿನೇಶ್ ಗುಂಡೂರಾವ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸದ್ಯ ಬೆಲೆ ನಿಯಂತ್ರಣಕ್ಕೆ ಕೇಂದ್ರ ತನ್ನ ದಾಸ್ತಾನಿನಲ್ಲಿರುವ ತೊಗರಿ ಬೇಳೆಯನ್ನು 60 ರೂ. ಮತ್ತು ಉದ್ದಿನ ಬೇಳೆಯನ್ನು 82 ರೂ. ದರದಲ್ಲಿ ಮಾರಾಟ ಮಾಡಲು  ಮುಂದಾಗಿದೆ. ಆದರೆ ಈ ಬೇಳೆ ಕಾಳುಗಳು ಜನರ ಕೈ ಸೇರದೆ, ಕಾಳಸಂತೆಕೋರರ ಪಾಲಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.

ಉತ್ತರ ಕರ್ನಾಟಕ ಸೇರಿದಂತೆ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಜನರ ಆಹಾರದ ಪ್ರಮುಖ ವಸ್ತು ಬೇಳೆ ಕಾಳುಗಳು. ಹೀಗಾಗಿ ಬೇಳೆ ಬೆಲೆ ಏರಿಕೆ ನೇರವಾಗಿ ನಿತ್ಯ ಬದುಕನ್ನು ತಟ್ಟುತ್ತಿದೆ. ಇದರ ಜೊತೆ ಜೊತೆಗೇ ಇತರ ದಿನಸಿ ಸಾಮಾಗ್ರಿಗಳ ಬೆಲೆಯೂ ಏರಿಕೆಯಾಗುತ್ತಿದೆ. ಕಳೆದೆರಡು ವಾರದಲ್ಲಿ ಅಕ್ಕಿ ಬೆಲೆ ಶೇ. 10ರಷ್ಟು ಹೆಚ್ಚಾಗಿದೆ. ತರಕಾರಿ ಬೆಲೆಯೂ ಏರಿಕೆಯಾಗುತ್ತಿದೆ. ಇದನ್ನು ಹಾಪ್ ಕಾಮ್ಸ್ ದರಗಳೇ ಹೇಳುತ್ತಿವೆ. ಬೀನ್ಸ್ ದರ 139ಕ್ಕೆ ಬಂದು ನಿಂತಿದ್ದರೆ, ಎಲ್ಲರೂ ಕೊಳ್ಳುವ ಟೊಮೆಟೋ 55ಕ್ಕೆ ಮುಟ್ಟಿದೆ. ಇದೇ ರೀತಿ ಉಳಿದ ತರಕಾರಿ, ಸೊಪ್ಪಿನ ದರವೂ ಏರಿಕೆಯಾಗಿದೆ.

ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಕಂಗೆಟ್ಟಿದ್ದು ಬರಗಾಲದಲ್ಲಿ ಅಧಿಕ ವರ್ಷ ಎಂಬಂತಾಗಿದೆ.