samachara
www.samachara.com
'ಅನಂತಮೂರ್ತಿಗೆ ಗುಂಡಿಕ್ಕಿ ಕೊಲ್ಲಬೇಕಿತ್ತು': ಕೊಳದ ಮಠ ಸ್ವಾಮಿ ವಿವಾದಿತ ಹೇಳಿಕೆ
ಸುದ್ದಿ ಸಾಗರ

'ಅನಂತಮೂರ್ತಿಗೆ ಗುಂಡಿಕ್ಕಿ ಕೊಲ್ಲಬೇಕಿತ್ತು': ಕೊಳದ ಮಠ ಸ್ವಾಮಿ ವಿವಾದಿತ ಹೇಳಿಕೆ

samachara

samachara

"ಸಾಹಿತಿ ಯು. ಆರ್. ಅನಂತಮೂರ್ತಿಗೆ ಗುಂಡಿಕ್ಕಿ ಕೊಲ್ಲಬೇಕಿತ್ತು...''

ಹೀಗೊಂದು ಹೇಳಿಕೆಯನ್ನು ಕೊಳದ ಮಠದ ಶಾಂತವೀರ ಸ್ವಾಮಿ ಭಾನುವಾರ ನೀಡುವ ಮೂಲಕ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

ಬೆಂಗಳೂರಿನ ಎನ್ಜಿಓ ಸಭಾಂಗಣದಲ್ಲಿ'ರಾಜ್ ಮೀಡಿಯಾ ಸಾಂಸ್ಕೃತಿಕ ಅಕಾಡೆಮಿ' ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ, ಮೃತ ಸಾಹಿತಿ ಅನಂತ ಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದರು.

"ಡಾ. ಯು. ಆರ್. ಅನಂತಮೂರ್ತಿ ರಾಜಕೀಯ ನಾಯಕರ ಬೆಂಬಲದಿಂದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇವರ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದಿದ್ದ ದೇಶದ್ರೋಹಿ ಅವರು. ಅಂತವರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು,'' ಎಂದು ಶಾಂತವೀರ ಸ್ವಾಮಿ ಹೇಳಿದ್ದಾರೆ.

"ವಿಧಿ-ವಿಧಾನಗಳನ್ನು ವಿರೋಧಿಸಿದ ಅನಂತಮೂರ್ತಿ ತಾವು ಸತ್ತಾಗ ಸಂಪ್ರದಾಯಬದ್ಧವಾಗಿ ಸಂಸ್ಕಾರ ಮಾಡುವಂತೆ ಬರೆದಿಟ್ಟಿದ್ದರು. ಅವರಲ್ಲಿ ದ್ವಂದ್ವಗಳಿದ್ದವು,'' ಎಂದ ಅವರು, "ಬದುಕಿದ್ದಾಗ ದೇವರ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಅದಕ್ಕೆ ನಾನು ನಿಮ್ಮ ತಂದೆ- ತಾಯಿ ಭಾವಚಿತ್ರದ ಮೇಲೆ ಮೂತ್ರ ಮಾಡಿ ಎಂದು ಸವಾಲು ಹಾಕಿದ್ದೆ. ಆದರೆ, ಅದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ,'' ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಇದಕ್ಕೆ ವೇದಿಕೆಯಲ್ಲಿದ್ದ ಮಾಜಿ ಕೇಂದ್ರ ಸಚಿವ ಎಂ. ವಿ. ರಾಜಶೇಖರನ್ ಸ್ವಾಮಿ ಹೇಳಿಕೆಗೆ ಸಾಕ್ಷಿಯಾದರು.

ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲು ಇಚ್ಚಿಸುವುದಿಲ್ಲ ಎಂಬುದಾಗಿ ಬದುಕಿದ್ದಾಗ ಸಾಹಿತಿ ಅನಂತಮೂರ್ತಿ ಹೇಳಿಕೆ ನೀಡಿದ್ದರು. ಮೋದಿ ಪ್ರಧಾನಿಯಾದ ನಂತರ ಅವರ ವಿರುದ್ಧ ಹಿಂದೂ ಪರ ಸಂಘಟನೆಗಳು ಕಿಡಿ ಕಾರಿದ್ದರು. ಸಾಮಾಜಿಕ ತಾಣಗಳಲ್ಲಿ ಅನಂತಮೂರ್ತಿ ವಿರುದ್ಧ ಪ್ರಚಾರ ನಡೆಸಲಾಗಿತ್ತು. ನೇರವಂತಿಕೆಗೆ ಹೆಸರಾದ ಸಾಹಿತಿ ಅನಂತಮೂರ್ತಿ ತಮ್ಮ ಹೇಳಿಕೆಗಳಿಂದಾಗಿಯೇ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದವರು.