samachara
www.samachara.com
ಐದೇ ನಿಮಿಷದಲ್ಲಿ ಸ್ಟೀವ್ ಜಾಬ್ಸ್ ಮನಸ್ಸು ಕದ್ದವನು ಆಪಲ್ ಕಂಪನಿಯ ಉತ್ತರಾಧಿಕಾರಿಯಾದ!
ಸುದ್ದಿ ಸಾಗರ

ಐದೇ ನಿಮಿಷದಲ್ಲಿ ಸ್ಟೀವ್ ಜಾಬ್ಸ್ ಮನಸ್ಸು ಕದ್ದವನು ಆಪಲ್ ಕಂಪನಿಯ ಉತ್ತರಾಧಿಕಾರಿಯಾದ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಟಿಮ್ ಕುಕ್..

ಇವತ್ತು ಭಾರತ ಪ್ರವಾಸದಲ್ಲಿರುವ ಜಗತ್ತಿನ ಮೇಧಾವಿ ಮತ್ತು ಪ್ರಭಾವಶಾಲಿ ಸಿಇಒ. ಆ್ಯಪಲ್ನಂಥ ದೈತ್ಯ ಕಂಪೆನಿಗೆ ಸಿಇಒ ಆಗಿ, ಸ್ಟೀವ್ ಜಾಬ್ಸ್ ಉತ್ತರಾಧಿಕಾರಿಯಾಗಿ ಕುಕ್ ನಿರ್ವಹಿಸುತ್ತಿರುವ ಹುದ್ದೆ ಅಸಾಧಾರಣವಾದುದು.

ಆಪಲ್ ಕಂಪನಿಗೆ ಬ್ರಾಂಡ್ ಇಮೇಜ್ ತಂದು ಕೊಟ್ಟ ಸ್ಟೀವ್ ಜಾಬ್ಸ್ ಕಣ್ಣಿಗೆ ಮೊದಲ ಬಾರಿಗೆ ಟಿಮ್ ಕುಕ್ ಬಿದ್ದಿದ್ದು ಹೇಗೆ? ಆ್ಯಪಲ್ ಯಶಸ್ಸಿನಲ್ಲಿ ಕುಕ್ ಪಾತ್ರವೇನು? ಆತನ ಹಿನ್ನೆಲೆಗಳ ಕುರಿತು ವರದಿ ಇಲ್ಲಿದೆ. ಇದು 'ಸಮಾಚಾರ'ದ ಭಾನುವಾರದ ಓದು...

ಟಿಮ್ ಕುಕ್ ಹಡಗು ಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬನ ಮಗ. ಅಮೆರಿಕಾದ ಗಲ್ಫ್ ಕಡಲ ತೀರದಿಂದ ಅರ್ಧ ಗಂಟೆ ಪ್ರಯಾಣ ದೂರದಲ್ಲಿರುವ ಅಲಬಾಮ ಎಂಬ ಪುಟ್ಟ ನಗರದ ರೊಬರ್ಸ್ಟ್’ಡಾಲೆ ಈತನ ಹುಟ್ಟೂರು. ‘ಅಬರ್ನ್’ನಲ್ಲಿ ಇಂಡಸ್ಟ್ರೀಯಲ್ ಇಂಜಿನಿಯರಿಂಗ್ ಮುಗಿಸಿ ಡ್ಯೂಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಕುಕ್, ಸೇರಿದ್ದು ಐಬಿಎಂ ಕಂಪೆನಿಯನ್ನು. ನಾರ್ಥ್ ಕೊರೊಲೀನಾದ ಐಬಿಎಂ ಸಂಶೋಧನಾ ಕೇಂದ್ರದಲ್ಲಿ12 ವರ್ಷಗಳ ದುಡಿಮೆ. ಲಾಜಿಕಲ್ ಇಂಜಿನಯರಿಂಗ್ನಲ್ಲಿ ಕುಕ್'ನದು ಎತ್ತಿದ ಕೈ. ಮುಂದೆ ‘ಕಾಂಪ್ಯಾಕ್’ ಕಂಪೆನಿ ಸೇರಿದಾಗ ಸ್ವೀವ್ ಜಾಬ್ಸ್’ರಿಂದ ಸಂದರ್ಶನಕ್ಕೆ ಕರೆ ಬಂತು. ಐದೇ ಐದೇ ನಿಮಿಷಗಳ ಸಂದರ್ಶನದಲ್ಲಿ ಸ್ವೀವ್ ಮನಸ್ಸನ್ನು ಗೆದ್ದ ಕುಕ್, ಆ್ಯಪಲ್ ಪಾಳೆಯ ಸೇರಿದರು. ಇದಕ್ಕೆಲ್ಲಾ ಕಾರಣವಾಗಿದ್ದು ಟಿಮ್ ಚಾಣಾಕ್ಷತೆ ಮತ್ತು ಬುದ್ಧಿಮತ್ತೆ.

ಕುಕ್ ಸಂಕಷ್ಟದ ಸಂದರ್ಭದಲ್ಲಿ ಆ್ಯಪಲ್ ಕಂಪೆನಿ ಸೇರಿದ್ದರು. ಒತ್ತಡ ಹೆಚ್ಚಾಗಿ ಆ್ಯಪಲ್ ‘ಆಪರೇಷನ್ ಹೆಡ್’ ಆಗಿದ್ದಾತ ಕೆಲಸ ಬಿಟ್ಟು ಹೋಗಿದ್ದ. ಆ ಜಾಗಕ್ಕೆ ಯಾರನ್ನಾದರೂ ಕರೆ ತರಬೇಕು ಎಂದಾಗ, ಆತ ಕೇವಲ ಆಪರೇಷನ್ ಹೆಡ್ ಮಾತ್ರವಲ್ಲ, ಸಮಯಕ್ಕೆ ಸರಿಯಾಗಿ ಉತ್ಪನ್ನಗಳ್ನು ತಯಾರಿಸಬಲ್ಲ ಫ್ಯಾಕ್ಟರಿಗಳನ್ನು ನಿರ್ಮಿಸುವವ ಮತ್ತು ಪೂರೈಕೆದಾರರ ದೊಡ್ಡ ಜಾಲ ನಿರ್ಮಿಸುವವ ಆಗಿರಬೇಕು ಎಂಬುದು ಸ್ಟೀವ್ ಬಾಜ್ಸ್ ನಿರೀಕ್ಷೆಯಾಗಿತ್ತು. ಹೀಗೆ ಸಂಕಷ್ಟದ ಸಮಯದಲ್ಲಿ ಕಂಪೆನಿಗೆ ಬಂದಾಗ ಕುಕ್ ವಯಸ್ಸು 37. "ನಮಗೆ ಏನು ಬೇಕಾಗಿತ್ತೋ ಅದೇ ರೂಪದಲ್ಲಿ ಕುಕ್ ಸಿಕ್ಕಿದ್ದ. ನನಗೆ ಇನ್ನೂ ನೆನಪಿದೆ, ನಾನು ಮತ್ತು ಆತ ಹಲವು ವಿಷಯಗಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡುತ್ತಿದ್ದೆವು . ನಾನು ಜಪಾನ್’ನಲ್ಲಿ ಸಮಯಕ್ಕೆ ಸರಿಯಾಗಿ ಉತ್ಪಾದನೆ ಮಾಡುವ ಫ್ಯಾಕ್ಟರಿಗಳನ್ನು ನೋಡಿದ್ದೆ. ‘ಮ್ಯಾಕ್’ ಮತ್ತು ‘ನೆಕ್ಸ್ಟ್’ಗೆ ಅಂತಹದ್ದನ್ನೇ ಸಿದ್ದಪಡಿಸಿದ್ದೆ. ನಾನು ಕುಕ್ ಮೇಲೆ ನಂಬಿಕೆ ಇಟ್ಟಿದ್ದೆ. ಆತನಿಗೂ ನನ್ನದೇ ದೃಷ್ಟಿಕೋನಗಳಿತ್ತು, ಹೀಗಾಗಿ ನಾವು ಆಳವಾಗಿ ಚರ್ಚೆ ನಡೆಸುತ್ತಿದ್ದೆವು. ಆತ ಬಂದ ನಂತರ ನಾನು ಎಷ್ಟೋ ವಿಷಯಗಳಲ್ಲಿ ತಲೆ ಹಾಕುವುದನ್ನೇ ಬಿಟ್ಟೆ. ಅದನ್ನೆಲ್ಲಾ ಆತನೇ ನಿಭಾಯಿಸುತ್ತಿದ್ದ,'' ಎಂದು ಸ್ವತಃ ಸ್ಟೀವ್ ಜಾಬ್ಸ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.

ಆ್ಯಪಲ್ನಲ್ಲಿ ಕುಕ್ ಕೆಲಸ ಇಷ್ಟೇ; ಅದು ಸ್ಟೀವ್ ಐಡಿಯಾಗಳನ್ನು ಜಾರಿಗೆ ತರುವುದು. ಶ್ರದ್ಧೆ ಮತ್ತು ಪರಿಶ್ರಮದಿಂದ ಈ ಕೆಲಸ ಮಾಡಬೇಕಾಗಿತ್ತು. ಮದುವೆಯೇ ಆಗದೇ ತನ್ನೆಲ್ಲಾ ಸಮಯವನ್ನೂ ಕುಕ್ ಕೆಲಸಕ್ಕಾಗಿ ಮೀಸಲಿಟ್ಟರು (ಇತ್ತೀಚೆಗೆ ನಾನೊಬ್ಬ ಗೇ ಎಂದು ಕುಕ್ ಘೋಷಿಸಿಕೊಂಡರು). ಬೆಳಿಗ್ಗೆ ಮುಂಚೆ ನಾಲ್ಕುವರೆಗೆ ಎದ್ದು ಇ- ಮೇಲ್ ಕಳುಹಿಸುತ್ತಿದ್ದರು. ನಂತರ ಒಂದು ಗಂಟೆ ಜಿಮ್. ಆರು ಗಂಟೆಗೆ ಮತ್ತೆ ಡೆಸ್ಕ್ನಲ್ಲಿ ಹಾಜರು. ಪ್ರತಿ ಭಾನುವಾರ ಸಂಜೆ ಆ ವಾರ ಮಾಡಬೇಕಾದ ಕೆಲಸಗಳ ಬಗ್ಗೆ ಕಾನ್ಫೆರೆನ್ಸ್ ಮೀಟಿಂಗ್ ನಡೆಸುತ್ತಿದ್ದರು. ಎಷ್ಟೋ ಬಾರಿ ಸ್ಟೀವ್ ಕೆಂಡಾ ಮಂಡಲರಾದಾಗ ತುಂಬಾ ಶಾಂತವಾಗಿ ಸಮಚಿತ್ತದಿಂದ ಸಂದರ್ಭಗಳನ್ನು ಕುಕ್ ನಿಭಾಯಿಸುತ್ತಿದ್ದರು.

ಕುಕ್ ಹೇಗಿದ್ದರು ಎನ್ನುವುದಕ್ಕೆ ಹಲವಾರು ನಿದರ್ಶನಗಳು ಸ್ಟೀವ್ ಜಾಬ್ಸ್ ಆತ್ಮಕತೆಯಲ್ಲಿ ಸಿಗುತ್ತವೆ. ಅದು ಕುಕ್ ಆಡಳಿತ ವಹಿಸಿಕೊಂಡಿದ್ದ ಆರಂಭಿಕ ದಿನಗಳು. ಮೀಟಿಂಗ್ ಒಂದರಲ್ಲಿ ಚೀನಾದ ಪೂರೈಕೆದಾರ ಕಂಪೆನಿಯೊಂದು ಸಮಯಕ್ಕೆ ಸರಿಯಾಗಿ ಬಿಡಿಭಾಗಗಳನ್ನು ಪೂರೈಸಿರಲಿಲ್ಲ. ಆಗ ಮೀಟಿಂಗ್’ನಲ್ಲೇ ಚೀನಾದಲ್ಲಿ ಇದನ್ನೆಲ್ಲಾ ನಿರ್ದೇಶನ ಮಾಡಲು ಯಾರಾದರೂ ಇರಬೇಕಾಗಿತ್ತು. ಎಂದ ಕುಕ್ ಮೂವತ್ತು ನಿಮಿಷ ಬಿಟ್ಟು ಅಲ್ಲೇ ಟೇಬಲ್ ಮುಂದೆ ಕುಳಿತಿದ್ದ ಆಪರೇಷನಲ್ ಎಕ್ಸಿಕ್ಯೂಟಿವ್ಗೆ ನೀವು ಇನ್ನೂ ಯಾಕೆ ಇಲ್ಲದ್ದೀರಿ? ಅಂತ ಪ್ರಶ್ನೆ ಎಸೆದರು. ಮುಂದಿನ 30 ನಿಮಿಷಗಳಲ್ಲಿ ಆಪರೇಷನಲ್ ಎಕ್ಸಿಕ್ಯೂಟಿವ್ ಸ್ಯಾನ್ ಫ್ರಾನ್ಸಿಸ್ಕೋ ಏರ್ ಪೋರ್ಟ್ ತಲುಪಿದ್ದ. ಅಲ್ಲಿಂದ ನೇರ ಚೀನಾ ವಿಮಾನ ಹತ್ತಿದ್ದ. ಆತ ಕುಕ್ ಕೈಕೆಳಗಿನ ಟಾಪ್ ಅಧಿಕಾರಿಯಾಗಿದ್ದ. ಕುಕ್ ನಿರ್ದೇಶನಗಳು ಹಾಗೇಯೇ ಇರುತ್ತಿದ್ದವು. ನಿಖರವಾಗಿ ಮತ್ತು ವೇಗವಾಗಿ.

ಇಡೀ ಆ್ಯಪಲ್ ಹುಟ್ಟಿದ್ದೇ ಅಗ್ಗದ ಅಟ್ಟಳಿಗೆಯ ಮೇಲೆ. ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಕಡಿಮ ಖರ್ಚಿನಲ್ಲಿ ಕಂಪೆನಿ ನಡೆಸಿಕೊಂಡು ಹೋಗುವುದು ಸಂಸ್ಥೆಯ ಮೂಲ ಧ್ಯೇಯವಾಗಿತ್ತು. ಕುಕ್ ಕಂಪೆನಿಗೆ  ಆಪರೇಷನ್ ಹೆಡ್ ಆಗಿ ಬಂದ ಮೇಲೆ ಪ್ರಮುಖ ಬಿಡಿಭಾಗಗಳ ಪೂರೈಕೆದಾರರ ಸಂಖ್ಯೆಯನ್ನು ನೂರರಿಂದ 24ಕ್ಕೆಇಳಿಸಿದರು. ಕಂಪೆನಿಯ ಗೋದಾಮುಗಳ ಸಂಖ್ಯೆಯನ್ನು 19ರಿಂದ 9ಕ್ಕೆ ಇಳಿಸಿದರು. 1998ರ ಆರಂಭದಲ್ಲಿ ಸರಕುಗಳ ಪೂರೈಕೆಯನ್ನು ಒಂದು ತಿಂಗಳ ಒಳಗಾಗಿ ನಡೆಸುವಂತೆ ನೋಡಿಕೊಂಡರು. ಕೊನೆಗೆ ಇದು ಎರಡು ದಿನಕ್ಕೆ ಇಳಿಕೆಯಾಯಿತು. ಇಡೀ ಆ್ಯಪಲ್ ಕಂಪ್ಯೂಟರ್ಗಳ ತಯಾರಿಕಾ ಅವಧಿಯನ್ನು ನಾಲ್ಕರಿಂದ ಎರಡು ತಿಂಗಳಿಗೆ ಇಳಿಸಿದರು.

ಇದು ಆ್ಯಪಲ್ ಉತ್ಪನ್ನಗಳ ಬೆಲೆ ಇಳಿಯುವಲ್ಲಿ ಮಾತ್ರವಲ್ಲ, ಮಾರುಕಟ್ಟೆಗೆ ಬರುತ್ತಿದ್ದ ಕಂಪ್ಯೂಟರ್'ಗಳು 'ಲೇಟೆಸ್ಟ್' ತಂತ್ರಜ್ಞಾನಗಳೊಂದಿಗೆ ಬರಲು ಅನುಕೂಲವಾಯ್ತು. ಹೀಗೆ ಆ್ಯಪಲ್ ಕಂಪೆನಿಗೆ ಕಾಯಕಲ್ಪ ಕೊಟ್ಟವರಲ್ಲಿ ಕುಕ್ ವಿಶೇಷ ಸಾಲಿನಲ್ಲಿ ನಿಲ್ಲುತ್ತಾರೆ. ಪರಿಣಾಮ ಇವತ್ತು ಸ್ಟೀವ್ ಜಾಬ್ಸ್ ಎಂಬ ದೊಡ್ಡ ಹೆಸರಿನ ಉತ್ತರಾಧಿಕಾರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಚಿತ್ರಗಳು: ಮಿಂಟ್, ವೈರ್ಡ್