ಸುದ್ದಿ ಸಾಗರ

KPSC ಎದುರಿಗೆ ಪ್ರತಿಭಟನೆ: FDA ಅಭ್ಯರ್ಥಿಗಳ ಮನವಿಗೆ ಸರಕಾರ ನೀಡುತ್ತಾ ಮನ್ನಣೆ?

ವಿಧಾನಸೌಧ

ಪಕ್ಕದಲ್ಲಿರುವ 'ಉದ್ಯೋಗ ಸೌಧ'ದ ಮುಂಭಾಗ ಸೋಮವಾರ ಮಧ್ಯಾಹ್ನ ಎಫ್ಡಿಎ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

'ಕೆಪಿಎಸ್ಸಿ ಚಲೋ' ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಲ್ಲಿ ಪ್ರತಿಭಟನೆಯ ರೂಪುರೇಷಗಳನ್ನು ಸಿದ್ಧಪಡಿಸಿದ್ದ ಅಭ್ಯರ್ಥಿಗಳು, ಕೆಪಿಎಸ್ಸಿ ಮುಂಭಾಗ ಪ್ರತಿಭಟನೆ ನಡೆಸಿ, ತಮ್ಮ ಆಗ್ರಹಗಳನ್ನು ಮುಂದಿಟ್ಟರು.

ಸುಮಾರು 50ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಎಫ್ಡಿಎ ಮರು ಪರೀಕ್ಷೆ ನಡೆಸಬೇಕು, ಸದ್ಯ ಸಂದರ್ಶನಕ್ಕೆ ಆಯ್ಕೆ ಮಾಡಿರುವ ಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ಕೆಪಿಎಸ್ಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹಿನ್ನೆಲೆ: 

ಶುಕ್ರವಾರ ಎಫ್ಡಿಎ ಅರ್ಹತಾ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸುತ್ತಲೇ, ಅಸಮಾಧಾನ ಹೊಗೆಯಾಡಲಾರಂಭಿಸಿತ್ತು. 2015ರಲ್ಲಿ ನಡೆಸಿದ ಎಸ್ಡಿಎ ಹಾಗೂ ಎಫ್ಡಿಎ ಪರೀಕ್ಷೆಗಳ ಫಲಿತಾಂಶವನ್ನು ಆಯೋಗವು ಸುಮಾರು 8 ತಿಂಗಳ ನಂತರ ಪ್ರಕಟಿಸಿತ್ತು. ಆದರೆ, ಅದಕ್ಕೂ ಮುನ್ನವೇ, ಅರ್ಹತೆ ಸುತ್ತಿನಲ್ಲಿಯೇ ಲಂಚದ ಬೇಡಿಕೆಯನ್ನು ಆಯೋಗದ ಕೆಲವು ಸದಸ್ಯರು ಮುಂದಿಟ್ಟಿದ್ದಾರೆ ಎಂದು ದೂರುಗಳು ಕೇಳಿಬಂದಿದ್ದವು.

ಇದೇ ವೇಳೆ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಕಡೆಯಿಂದ ಎಸ್ಡಿಎ ಹಾಗೂ ಎಫ್ಡಿಎ ಪ್ರಶ್ನೆ ಪತ್ರಿಕೆಗಳನ್ನೂ ಇದೇ ತಂಡ ಸೋರಿಕೆ ಮಾಡಿತ್ತು ಎಂಬ ಮಾಹಿತಿ ಸೋರಿಕೆಯಾಗಿತ್ತು. ಇದಕ್ಕೆ ಪೂರಕವಾಗಿ ಕೆಲವು ಎಫ್ಡಿಎ ಅಭ್ಯರ್ಥಿಗಳು ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡುತ್ತಿತ್ತು ಎಂದು ಆರೋಪಿಸಿದ್ದರು. ಹೀಗಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಹಜವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ಜತೆಗೆ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.

ಎಫ್ಡಿಎ ಮರು ಪರೀಕ್ಷೆ ನಡೆಸಬೇಕು ಹಾಗೂ ಅರ್ಹತಾ ಪಟ್ಟಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ 'ಕೆಪಿಎಸ್ಸಿ ಚಲೋ'ಗೆ ಕರೆ ನೀಡಿದರು.

ಇದಕ್ಕೆ ಸ್ಪಂದಿಸಿದ ಅಭ್ಯರ್ಥಿಗಳು ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಆಯೋಗದ ಮೂಲಕ ಸರಕಾರಕ್ಕೂ ಮನವಿ ಸಲ್ಲಿಸಿದ್ದಾರೆ.

ಇದನ್ನು ಸರಕಾರ ಹೇಗೆ ಪರಿಗಣಿಸುತ್ತದೆ ಮತ್ತು ಮುಂದೆ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.