ಪಾಸ್‌ಪೋರ್ಟ್‌ ಬೆನ್ನಿಗೆ ಬಿದ್ದ ಕನ್ನಡಿಗನ ಕತೆ!
ಸುದ್ದಿ ಸಾಗರ

ಪಾಸ್‌ಪೋರ್ಟ್‌ ಬೆನ್ನಿಗೆ ಬಿದ್ದ ಕನ್ನಡಿಗನ ಕತೆ!

ಅರಬ್ ದೇಶಗಳಲ್ಲಿರುವ ಬಡ ಭಾರತೀಯರ ಸಂಕಷ್ಟಗಳು

Summarytoggle summary

ವಿದೇಶದಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡು ವಾಪಾಸಾಗಿದ್ದ ಕನ್ನಡಿಗರೊಬ್ಬರಿಗೆ ಮಾನವೀಯತೆ ಆಧಾರದ ಮೇಲೆ ಮತ್ತೆ ರಹದಾರಿ ಪ್ರಮಾಣ ಪತ್ರವನ್ನು ನೀಡಿದ ವಿಶೇಷ ಘಟನೆಯೊಂದು ವರದಿಯಾಗಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮದುಬಾಲದ ಉಸ್ಮಾನ್ ಪಟೇಲ್ ಬಿರಾದಾರ್ ಅವರ ಸಂದಿಗ್ಧ ಪ್ರಕರಣವನ್ನು ಗಮನಿಸಿದ ವಿದೇಶಾಂಗ ಇಲಾಖೆ 2 ತಿಂಗಳು ಅಳೆದು ತೂಗಿ ಕೊನೆಗೆ ಕಳೆದ ಶನಿವಾರ ಪಾಸ್ಪೋರ್ಟ್ ವಿತರಿಸಲು ಅನುಮತಿ ನೀಡಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಮೂಲಕ ಬಿರಾದಾರ್ ತಮ್ಮ ಹೊಸ ಪಾಸ್ಪೋರ್ಟ್ ಪಡೆದುಕೊಂಡು, ಮತ್ತೆ ವಿದೇಶದಲ್ಲಿ ಕೆಲಸ ಅರಸಲು ಮುಂದಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ವಿಜಯಪುರ ಜಿಲ್ಲೆಯ ಉಸ್ಮಾನ್ ಪಟೇಲ್ ಬಿರಾದಾರ್ ಮನೆಯಲ್ಲಿ ಬಡತನವಿತ್ತು. ತಂಗಿಯರ ಮದುವೆ ಮಾಡಿದ ಸಾಲವನ್ನು ಹೊತ್ತುಕೊಂಡಿದ್ದರು. ಇಲ್ಲಿನ ದುಡಿಮೆಯಿಂದ ಸಾಲ ತೀರಿಸುವುದು ಕಷ್ಟ ಎಂದು ತೀರ್ಮಾನಿಸಿದ ಅವರು, ಇನ್ನೊಂದಿಷ್ಟು ಸಾಲ ಮಾಡಿ ಮಧ್ಯವರ್ತಿ ಮೂಲಕ ಸೌದಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅವರು ಸೌದಿ ತಲುಪಿ ಕೆಲಸ ಸೇರಿಕೊಂಡ ಕೆಲವೇ ದಿನಗಳಲ್ಲಿ ಮಾಲೀಕ ಇಹಲೋಕ ತ್ಯಜಿಸಿದ. ಉಸ್ಮಾನ್ ಪಾಸ್ಪೋರ್ಟ್ ಅವರ ಬಳಿ ಶ್ಯೂರಿಟಿ ರೂಪದಲ್ಲಿ ನೀಡಲಾಗಿತ್ತು. ಆತ ಸತ್ತ ನಂತರ ಪಾಸ್ಪೋರ್ಟ್ ಎಲ್ಲಿದೆ ಎಂದು ಗೊತ್ತಿಲ್ಲ ಎಂದು ಸೌದಿ ಸಿರಿವಂತನ ಕುಟುಂಬದವರು ಕೈ ಎತ್ತಿದರು.

ಅತ್ತ ಪಾಸ್ಪೋರ್ಟ್ ಇಲ್ಲದೆ, ಇತ್ತ ಕೆಲಸವೂ ಇಲ್ಲದೆ ಬಿರಾದಾರ್ ಸೌದಿಯಲ್ಲಿ ಅಲೆಯತೊಡಗಿದರು. ಈ ಸಮಯದಲ್ಲಿ ಅಧಿಕೃತ ಪ್ರಮಾಣ ಪತ್ರವಿಲ್ಲದ ವಿದೇಶಿ ಪ್ರಜೆಯಾಗಿದ್ದ ಅವರು ಒಂದು ದಿನ ಸ್ಥಳೀಯ ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ವಿಚಾರಣೆ ನಡೆಸಿದ ಅವರು ಭಾರತೀಯ ರಾಜಭಾರಿ ಕಚೇರಿ ಮೂಲಕ ಬಿರಾದಾರ್ ಅವರನ್ನು ಮರಳಿ ಸ್ವದೇಶಕ್ಕೆ ಕಳುಹಿಸಿದರು. ಈ ಸಮಯದಲ್ಲಿ ರಾಯಭಾರಿ ಕಚೇರಿ ಅಧಿಕಾರಿಗಳು ಉಸ್ಮಾನ್ ಪಟೇಲ್ ಬಿರಾದಾರ್ ಅವರಿಗೆ ಇನ್ನೊಂದು ವರ್ಷ ಪಾಸ್ಪೋರ್ಟ್ ನೀಡಬಾರದು ಎಂದು ಮೊಹರೆ ಗುದ್ದಿ ಕಳುಹಿಸಿದ್ದರು.

ಬೆಂಕಿಯಿಂದ ಬಾಣಲೆಗೆ:

ಭಾರತಕ್ಕೆ ಮರಳಿದ ಉಸ್ಮಾನ್ ಸಂಕಷ್ಟಗಳು ಮುಂದುವರಿದವು. ಸಾಲದ ಮೇಲೆ ಸಾಲ ಅವರನ್ನು ಕಾಡತೊಡಗಿತು. ಹೀಗಾಗಿ, ಅವರು ಮತ್ತೆ ಪಾಸ್ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸಿದರು. ಆದರೆ ಸೌದಿಯ ಭಾರತೀಯ ರಾಯಭಾರಿ ಕಚೇರಿಯ ಸೀಲು ಅದಕ್ಕೆ ಅಡ್ಡಿಯಾಯಿತು. "ಈ ಸಮಯದಲ್ಲಿ ನಮ್ಮಲ್ಲಿಗೆ ಬಂದು ಕಷ್ಟಗಳನ್ನು ಹೇಳಿಕೊಂಡು ಉಸ್ಮಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಳತೊಡಗಿದರು. ಮೊದಲು ಇದೇನು ಹುಚ್ಚಾಟ ಅನ್ನಿಸಿತು. ಆದರೆ, ಅವರ ಮನೆಯ ಕಷ್ಟಗಳು ಹಾಗೂ ದುಡಿಮೆ ಅನಿವಾರ್ಯತೆ ಗಮನಿಸಿದ ಮೇಲೆ ಏನಾದರೂ ಸಹಾಯ ಮಾಡಲು ಮುಂದಾದೆವು,'' ಎನ್ನುತ್ತಾರೆ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕಾರ್ತಿಗೇಯನ್.

ಕೊನೆಗೆ, ಕಾರ್ತಿಗೇಯನ್ ಉಸ್ಮಾನ್ ಪಟೇಲ್ ಬಿರಾದಾರ್ ಅವರದ್ದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಮಾನವೀಯತೆ ಆಧಾರದ ಮೇಲೆ ಪಾಸ್ಪೋರ್ಟ್ ನೀಡುವಂತೆ ವಿದೇಶಾಂಗ ಇಲಾಖೆಗೆ ಪತ್ರ ಬರೆದರು. ಬೆಂಗಳೂರಿನ ಪಾಸ್ಪೋರ್ಟ್ ಕಚೇರಿ, ಸೌದಿಯ ಭಾರತೀಯ ಎಂಬೆಸಿ ಹಾಗೂ ವಿದೇಶಾಂಗ ಇಲಾಖೆ ನಡುವೆ 2 ತಿಂಗಳ ಕಾಲ ಪತ್ರ ವ್ಯವಹಾರ ನಡೆಯಿತು. ಕೊನೆಗೆ, ಮೊನ್ನೆ ಶನಿವಾರ ವಿದೇಶಾಂಗ ಇಲಾಖೆ ಬಿರಾದಾರ್ ಅವರಿಗೆ ಪಾಸ್ಪೋರ್ಟ್ ನೀಡಲು ಹಸಿರು ನಿಶಾನೆ ತೋರಿಸಿತು.

ದುಡಿಮೆ ಅನಿವಾರ್ಯತೆ:

ಪಾಸ್‌ಪೋರ್ಟ್‌ ಬೆನ್ನಿಗೆ ಬಿದ್ದ ಕನ್ನಡಿಗನ ಕತೆ!

"ಇಂತಹ ಹಲವು ಪ್ರಕರಣಗಳು ದಿನನಿತ್ಯ ನೋಡುತ್ತಿರುತ್ತೇವೆ. ಆದರೆ ಉಸ್ಮಾನ್ ರೀತಿಯಲ್ಲಿ ಪಾಸ್ಪೋರ್ಟ್ ಬೇಕೆ ಬೇಕು ಎಂದು ಬಂದವರು ವಿರಳ. ಅವರು ವಿದೇಶದಲ್ಲಿ ದುಡಿದು ಮನೆಯನ್ನು ಕಟ್ಟುವ ಮನಸ್ಥಿತಿಯಲ್ಲಿ ಇರುವವರು. ಅಂತವರಿಗಾಗಿ ಕಾನೂನು ಮೀರುವುದು ಒಮ್ಮೊಮ್ಮೆ ಅನಿವಾರ್ಯವಾಗುತ್ತದೆ. ಮುಂದೊಂದು ದಿನ ಬಿರಾದಾರ್ ತಮ್ಮ ದುಡಿಮೆ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ನಮಗೂ ಕೆಲಸದ ತೃಪ್ತಿ ಸಿಗುತ್ತದೆ,'' ಎನ್ನುತ್ತಾರೆ ಐಎಫ್ಎಸ್ ಅಧಿಕಾರಿ ಕಾರ್ತಿಗೇಯನ್.ಬಿರಾದಾರ್ ಪಾಸ್ಪೋರ್ಟ್ ಕತೆ ಕೇವಲ ಮಾನವೀಯ ನೆಲೆಯಲ್ಲಿ ಮಾತ್ರವಲ್ಲ, ಸೌದಿ ಸೇರಿದಂತೆ ವಿದೇಶಗಳಲ್ಲಿ ಕೆಲಸ ಮಾಡುವ ಬಡ ಭಾರತೀಯರ ಸಂಕಷ್ಟಗಳಿಗೂ ಸಂಕೇತದಂತಿದೆ.