ಸಂಸದರಿಗೆ ವೇತನ ಹೆಚ್ಚಳ ಪ್ರಸ್ತಾಪ: ಮೋದಿಗೆ ಮತ್ತೊಂದು ಸತ್ವ ಪರೀಕ್ಷೆ, ಪಾಪ!
ಸುದ್ದಿ ಸಾಗರ

ಸಂಸದರಿಗೆ ವೇತನ ಹೆಚ್ಚಳ ಪ್ರಸ್ತಾಪ: ಮೋದಿಗೆ ಮತ್ತೊಂದು ಸತ್ವ ಪರೀಕ್ಷೆ, ಪಾಪ!

ಸಂಸದರ ವೇತನ ಹೆಚ್ಚಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ಸತ್ವ ಪರೀಕ್ಷೆಗೆ ಗುರಿಯಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

ಮಂಗಳವಾರ ನಡೆದ ಬೆಳವಣಿಗೆಯೊಂದರಲ್ಲಿ, ಸಂಸದರ ಸಂಬಳ ಮತ್ತು ಭತ್ಯೆ ಹೆಚ್ಚಳ ಪ್ರಸ್ತಾಪಕ್ಕೆ ಪ್ರಧಾನಿ ಮೋದಿ ವೈಯುಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹೊರಗೆಡವಿದೆ.

ಈಗಿರುವ ಮಾಸಿಕ 50 ಸಾವಿರ ಮೂಲ ವೇತನವನ್ನು 1 ಲಕ್ಷಕ್ಕೆ ಏರಿಸುವಂತೆ ಸಂಸದರು ಒತ್ತಾಯಿಸುತ್ತಿದ್ದಾರೆ. ಜತೆಗೆ, ಭತ್ಯೆ ವಿಚಾರದಲ್ಲಿ ಹೆಚ್ಚಳ ಬಯಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ, ವಾರ್ಷಿಕ 250 ಕೋಟಿ ರೂಪಾಯಿ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ. ದೇಶದ 543 ಸಂಸದರಿಗೆ ಖುಷಿ ನೀಡುವ ಪ್ರಸ್ತಾಪವನ್ನು ಸಂಸದೀಯ ಮಂಡಳಿ ಶಿಫಾರಸು ಮಾಡಿದೆ.

ಮೋದಿ ಅಸಮ್ಮತಿ:

ಆದರೆ, ಇದಕ್ಕೆ ಪ್ರಧಾನಿ ಮಂತ್ರಿ ಕಾರ್ಯಾಲಯ ಸಮ್ಮತಿ ಸೂಚಿಸಿದರೂ, ವೈಯುಕ್ತಿಕವಾಗಿ ಪ್ರಧಾನಿ ಮೋದಿ ಸಂಸದರ ಸಂಬಳ ಹೆಚ್ಚಳದ ವಿಚಾರದಲ್ಲಿ ನಕಾರಾತ್ಮಕ ಭಾವ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಮುಂದಿರುವ ಪಂಚ ರಾಜ್ಯಗಳ ಚುನಾವಣೆ ಹಾಗೂ ಮೋದಿ ಅವರ ವೈಯುಕ್ತಿಕ ವರ್ಚಸ್ಸಿನ ಸುತ್ತ ಸೃಷ್ಟಿಸಿರುವ ವಿಶ್ವಾಸ ಕೂಡ ಕಾರಣ ಎನ್ನಲಾಗುತ್ತಿದೆ.

"ಒಂದು ವೇಳೆ, ಸಂದದೀಯ ಮಂಡಳಿಯ ಶಿಫಾರಸಿಗೆ ಒಪ್ಪಿದರೆ, 543 ಸಂಸದರನ್ನು ಮೆಚ್ಚಿಸಿದಂತಾಗುತ್ತದೆ. ಇಲ್ಲದಿದ್ದರೆ ಈ ದೇಶದ ನೂರು ಕೋಟಿ ಜನರನ್ನು ಮೆಚ್ಚಿಸಿದಂತೆ ಆಗುತ್ತದೆ,'' ಎಂಬುದು ದಿಲ್ಲಿ ಮೂಲಗಳ ವಿಶ್ಲೇಷಣೆ.

ಒಟ್ಟಾರೆ, ಸಂಸದರ ವೇತನ ಹೆಚ್ಚಳ ವಿಚಾರದಲ್ಲಿ ಮೋದಿ ಹೆಸರನ್ನು ಮಧ್ಯದಲ್ಲಿ ಎಳೆದುತರುವ ಮೂಲಕ, ಅವರನ್ನು ಮತ್ತೊಂದು ಸತ್ವ ಪರೀಕ್ಷೆಗೆ ಗುರಿಪಡಿಸುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಸರಳತೆ ಎಂಬ 'ಬ್ರಾಂಡ್ ಇಮೇಜ್'ನ್ನು ಕಾಪಾಡಿಕೊಳ್ಳುವ ಇಕ್ಕಟ್ಟಿಗೆ ಅವರನ್ನು ಸಿಲುಕಿಸಿದಂತಾಗಿದೆ.

ಹೆಚ್ಚಳದ ಸುತ್ತ:

ಸದ್ಯ, ಈ ದೇಶದ ಪ್ರತಿ ಸಂಸದರು ಪಡೆಯುತ್ತಿರುವ ಮೂಲ ವೇತನ(ಮಾಸಿಕ 50 ಸಾವಿರ ರೂಪಾಯಿ) ದೇಶದ ಕನಿಷ್ಟ ಮೂಲವೇತನ ಪಡೆಯುತ್ತಿರುವವರಿಂತ 15 ಪಟ್ಟು ಹೆಚ್ಚಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಪ್ರತಿನಿಧಿಗಳ ಮೂಲ ವೇತನವು, ದೇಶದ ಪ್ರಜೆಗಳ ಕನಿಷ್ಟ ವೇತನದ ಮೂರು ಪಟ್ಟು ಮಾತ್ರವೇ ಹೆಚ್ಚಾಗಿರುತ್ತದೆ.

ಇನ್ನು, ಈ ಬಾರಿ ಶೇ. 100ರಷ್ಟು ವೇತನ ಹೆಚ್ಚಳ ಬಯಸುತ್ತಿರುವ ಸಂಸದರಿಂದ ದೇಶದ ಬೊಕ್ಕಸಕ್ಕೆ ಹೊರೆ ಬೀಳುತ್ತಿರುವುದು ಸುಮಾರು 250 ಕೋಟಿ ರೂಪಾಯಿ. ರಾಜ್ಯದಲ್ಲಿ ಕೆಲವು ತಿಂಗಳ ಹಿಂದೆ ಸಾವಿರಾರು ಉಪನ್ಯಾಸಕರು 'ಕುಮಾರ ನಾಯಕ್ ವರದಿ'ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅವರೂ ವೇತನ ಹಚ್ಚಳ ಬಯಸಿದ್ದರು. ಒಂದು ವೇಳೆ ಸರಕಾರ ವರದಿ ಜಾರಿಗೆ ಒಪ್ಪಿಕೊಂಡಿದ್ದರೆ, ಅದರಿಂದ ಪ್ರತಿ ವರ್ಷ ಹೆಚ್ಚುವರಿ 250 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಇಲ್ಲಿ 250 ಕೋಟಿ ರೂಪಾಯಿಗಳನ್ನು ಸಾವಿರಾರು ಉಪನ್ಯಾಸರು ಹಂಚಿಕೊಳ್ಳುತ್ತಿದ್ದರು ಎಂಬುದಷ್ಟೆ ವ್ಯತ್ಯಾಸ.