ಸರಕಾರದ ಕಾರು ಖರೀದಿ ಖಯಾಲಿಗೆ 30 ಕೋಟಿ ತೆರಿಗೆ ಹಣ ವೆಚ್ಚ!
ಸುದ್ದಿ ಸಾಗರ

ಸರಕಾರದ ಕಾರು ಖರೀದಿ ಖಯಾಲಿಗೆ 30 ಕೋಟಿ ತೆರಿಗೆ ಹಣ ವೆಚ್ಚ!

ರಾಜ್ಯದಲ್ಲಿ ಉಪನ್ಯಾಸಕರಿಗೆ ಸಂಬಳ ಹಚ್ಚಿಸಲು ಹಣವಿಲ್ಲ, ಬರ ಪರಿಹಾರಕ್ಕೆ ಬೊಕ್ಕಸದಲ್ಲಿ ಕಾಸಿಲ್ಲ. ಆದರೆ, ಜನಪ್ರತಿನಿಧಿಗಳ ಶೋಕಿಗಾಗಿ ಕಾರುಗಳ ಖರೀದಿಗೆ ಮಾತ್ರ ತೆರಿಗೆ ಹಣದಲ್ಲಿ ಯಾವುದೇ ವ್ಯತ್ಯಯವಿಲ್ಲ.

ಇದು ಕಳೆದ 6 ವರ್ಷಗಳ ಅಂತರದಲ್ಲಿ ರಾಜ್ಯ ಸರಕಾರ ವಾಹನಗಳ ಮೇಲೆ ಮಾಡಿರುವ ವೆಚ್ಚದ ವಿವರಗಳ ಹಿನ್ನೆಲೆಯಲ್ಲಿ ಗಮನಿಸಬೇಕಿರುವ ಅಂಶ.

2009ರಿಂದ 2015ರ ನಡುವೆ ಸರಕಾರ ಒಟ್ಟು 217 ಕಾರುಗಳನ್ನು ಖರೀದಿಸಿದೆ. ಆರ್ಥಿಕ ಇಲಾಖೆ ಅನುಮೋದನೆ ಮೇರೆಗೆ, ಆಡಳಿತ ಹಾಗೂ ಸುಧಾರಣೆ ಇಲಾಖೆ ನಡೆಸಿರುವ ಈ ವ್ಯವಹಾರದ ಮಾಹಿತಿ ಇದೀಗ ಬಹಿರಂಗವಾಗಿದೆ.

ಹೊಸತೇ ಬೇಕು: 

ಕಳೆದ 3 ವರ್ಷಗಳಲ್ಲಿ ಕುಮಾರಕೃಪಾ ಗೆಸ್ಟ್ ಹೌಸ್ ಹೆಸರಿನಲ್ಲಿ ಸರಕಾರ ಒಟ್ಟು 123 ಹೊಸ ಕಾರು ಖರೀದಿಸಿದೆ. ಎಲ್ಲವೂ ದುಬಾರಿ ಬೆಲೆಯ ಐಶಾರಾಮಿ ಕಾರುಗಳು. ಈ ಕಾರುಗಳು 1 ಲಕ್ಷ ಕಿ.ಮೀ. ಓಡಿದರೆ ಸಾಕು, ಸಚಿವರು ಬದಲಿ ಹೊಸ ಕಾರುಗಳನ್ನು ಬಯಸುತ್ತಿದ್ದಾರೆ ಎನ್ನುತ್ತವೆ ದಾಖಲೆಗಳು. ಸಣ್ಣ ಪುಟ್ಟ ದುರಸ್ಥಿಗೆ ಒಳಗಾದ ಕಾರುಗಳಿಗೆ ಕ್ಯಾರೇ ಎನ್ನುವವರಿಲ್ಲ. ಹೀಗಾಗಿ, ಪ್ರತಿ ವರ್ಷವೂ ಹೊಸ ಕಾರುಗಳ ಖರೀದಿಗೆ ಸರಕಾರ ಮೊರೆ ಹೋಗಿದೆ. 'ವಿಶೇಷ ಪ್ರಕರಣ'ದ ನಿಯಮವನ್ನು ಮುಂದಿಟ್ಟು ಕಾರುಗಳನ್ನು ಖರೀದಿಸಲಾಗುತ್ತಿದೆ.

ಯಾರ ಅವಧಿಯಲ್ಲಿ?: 

ಆರು ವರ್ಷಗಳ ಅಂತರದಲ್ಲಿ ಒಟ್ಟು 217 ಹೊಸ ಕಾರುಗಳ ಖರೀದಿ ಮಾಡಲಾಗಿದೆ. 2010-11ರಲ್ಲಿ 26, 2011-12ರಲ್ಲಿ 19, 2012-13ರಲ್ಲಿ 49 ಹೊಸ ಕಾರು ಖರೀದಿಸಲಾಗಿದೆ. 2013-14ರಲ್ಲಿ 55, 2014-15ರಲ್ಲಿ 57, 2015-16ರಲ್ಲಿ 11 ಹೊಸ ಕಾರು ಖರೀದಿಸಲಾಗಿದೆ.

ಬಿಜೆಪಿ ಸರಕಾರದ ಕೊನೆಯ 3 ವರ್ಷಗಳಲ್ಲಿ 94 ಹೊಸ ಕಾರುಗಳ ಖರೀದಿ ಮಾಡಲಾಗಿತ್ತು. ಕಾಂಗ್ರೆಸ್ ಸರಕಾರ ಬಂದ ಆರಂಭದ ಮೂರು ವರ್ಷಗಳಲ್ಲಿ 127 ಹೊಸ ಕಾರುಗಳ ಖರೀದಿ ಮಾಡಲಾಗಿದೆ. ಇಬ್ಬರ ನಡುವೆ ಕಾರು ಖರೀದಿ ವಿಚಾರದಲ್ಲಿ ಅಂತಹ ವ್ಯತ್ಯಾಸಗಳೇನು ಕಾಣಿಸುತ್ತಿಲ್ಲ.

ಯಾವ 'ಬ್ರಾಂಡ್'?: 

ಸರಕಾರ ಖರೀದಿಸಿದ 217 ಹೊಸ ಕಾರುಗಳಲ್ಲಿ ಇನ್ನೋವಾ ಕಾರುಗಳೇ 175ರಷ್ಟಿವೆ. ಆತ್ಯಂತ ದುಬಾರಿ ಮರ್ಸಿಡಿಸ್ ಬೆಂಜ್, ಕ್ಯಾಮ್ರಿಯಂತ ಕಾರುಗಳನ್ನೂ ಖರೀದಿಸಲಾಗಿದೆ. ಇನ್ನು ಐಷಾರಾಮಿ ಹೋಂಡಾ ಸಿಆರ್‍ವಿ, ಟಾಟಾ ಸಫಾರಿ, ಕರೋಲಾ, ಸ್ಕೋಡಾ ಕಾರುಗಳು ತೆರಿಗೆ ಹಣದಲ್ಲಿ ಸರಕಾರ ರಸ್ತೆಗೆ ಇಳಿಸಿದೆ. ಎರ್ಟಿಗಾ, ಆಲ್ಟೀಸ್, ಸನ್ನಿ, ಸ್ವಿಫ್ಟ್ ಡಿಸೈರ್ ಕಾರುಗಳೂ ಸಚಿವರ ಸವಾರಿಗೆ ಬಂದು ನಿಂತಿವೆ.

ಸರಕಾರ ಖರೀದಿಸಿದ ಈ ಕಾರುಗಳಿಗೆ ಖರ್ಚಾದ ಮೊತ್ತ ಬರೋಬ್ಬರಿ 30 ಕೋಟಿ ರೂ,.

ಬರ ಮತ್ತಿತರ ಬಿಕ್ಕಟ್ಟಿನ ಪರಿಸ್ಥಿತಿಗಳು ಬಂದಾಗ, ಮಿತವ್ಯಯ ಮಾತುಗಳನ್ನು ಸರಕಾರ ಆಡುತ್ತದೆ. ಆದರೆ ತನ್ನ ಐಶಾರಾಮಿತನಗಳ ವಿಚಾರದಲ್ಲಿ ಮಾತ್ರ ಇದು ಕಾಣಿಸುವುದಿಲ್ಲ ಎಂಬುದಕ್ಕೆ ಕಾರು ಖರೀದಿ ಖಯಾಲಿಗಳು ಸಾಕ್ಷಿ ಒದಗಿಸುತ್ತವೆ.