'ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ': ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಂತ ಸಿಐಡಿ!
ಸುದ್ದಿ ಸಾಗರ

'ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ': ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಂತ ಸಿಐಡಿ!

ರಾಜ್ಯದಲ್ಲಿ

ಸಂಚಲನ ಮೂಡಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿಯನ್ನು ಬಂಧಿಸಿರುವುದಾಗಿ ಮಂಗಳವಾರ ಸಿಐಡಿ ಪ್ರಕಟಿಸಿದೆ.

ಈ ಮೂಲಕ ಒಟ್ಟು 14 ಜನರನ್ನು ಬಂಧಿಸಿದಂತಾಗಿದೆ. ಕಳೆದ ತಿಂಗಳು ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಸಿಐಡಿ ಆರಂಭದಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ಹಿಂದೆ ರಾಜ್ಯದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ದಾಟಿ, ಸಿಐಡಿ ಈ ಬಾರಿ ತನಿಖೆಯಲ್ಲಿ ಆಳಕ್ಕೆ ಇಳಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮಂಗಳವಾರ ಸಿಐಡಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು ಶಿವಕುಮಾರ ಸ್ವಾಮಿ ಬಂಧನವನ್ನೇ 'ಕಿಂಗ್ ಪಿನ್ ಅರೆಸ್ಟ್' ಎಂದು ಬಿಂಬಿಸಲು ಹೊರಟ ಪರಿ ನೋಡಿದರೆ, 'ಹಳೇ ಮದ್ಯವನ್ನು ಹಳೇ ಬಾಟಲಿಯಲ್ಲೇ' ಕೊಡುವ ಪ್ರಯತ್ನವಿದು ಎಂದು ಕಾಣಿಸುತ್ತಿದೆ.

ನಿರೀಕ್ಷೆಗಳೇನಿತ್ತು?:

ರಾಜ್ಯದಲ್ಲಿ ಈ ಬಾರಿ ಎರಡೆರೆಡು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದಂತೆ ಸರಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮೊದಲು, ಬೆಂಗಳೂರು ಉತ್ತರ ಭಾಗದಲ್ಲಿ ಬೀಡು ಬಿಟ್ಟಿರುವ ಶಿಕ್ಷಣ ಮಾಫಿಯಾ ಸಂಸ್ಥೆಗಳ ಬೆನ್ನಿಗೆ ಬಿದ್ದಿತ್ತು ಸಿಐಡಿ ತಂಡ. ಒಂದು ಹಂತದಲ್ಲಿ ರಾಜ್ಯದಲ್ಲಿ ಹಿಂದೆ ನಡೆದ ಇಂತಹದ್ದೇ ಪ್ರಕರಣಗಳ ಜಾಡಿನಲ್ಲಿಯೇ ತನಿಖಾಧಿಕಾರಿಗಳು ಸಾಗಿದ್ದರು. ಆದರೆ, ಮಧ್ಯದಲ್ಲಿ ಆರೋಪಿಗಳ ದೂರವಾಣಿಗಳನ್ನು ಟ್ರ್ಯಾಪ್ ಮಾಡಿದ ಸಮಯದಲ್ಲಿ,

ಎಂಬ ವ್ಯಕ್ತಿಯೊಬ್ಬ ಪ್ರಕರಣದ ಹಿಂದೆ ಇರುವುದು ಗೊತ್ತಾಗಿತ್ತು. ಸಿಐಡಿ ಅಧಿಕಾರಿಗಳು ಇದನ್ನು ಖಾತ್ರಿಪಡಿಸಿದ್ದರು ಕೂಡ. ಹೀಗಾಗಿ, ಈ ಬಾರಿ, ತನಿಖೆ ಹಳೇ ಜಾಡಿನಲ್ಲಿಯೇ ಶುರುವಾದರೂ, ಹೊಸ ಬೇಟೆಯ ಮೂಲಕ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಹುಟ್ಟಿತ್ತು.

ವದಂತಿಗಳ ಸಂತೆ:

ಹೀಗಿರುವಾಗಲೇ, ಕೆಲವು ದಿನಗಳ ಹಿಂದೆ ಸಿಐಡಿ ಪೊಲೀಸರು ರಾಜ್ಯದ ಸುಮಾರು 11 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು ಸುದ್ದಿಯಾಗಿತ್ತು. ಪ್ರಶ್ನೆಗಳು ಹಂಚಿಕೆಯಾದ ವಾಟ್ಸ್ ಆಪ್ ನಂಬರ್ ಮೂಲಕ ಸಿಕ್ಕ ಸುಳಿವನ್ನೇ ದಾಳಿಗೆ ಆಧಾರವಾಗಿಟ್ಟುಕೊಳ್ಳಲಾಗಿತ್ತು. "ಇದರಿಂದ ಕಾನೂನಾತ್ಮಕವಾಗಿ ಕಾಲೇಜುಗಳನ್ನು ಆರೋಪದ ಅಡಿಯಲ್ಲಿ ತರುವುದು ಕಷ್ಟವಾದರೂ, ಕನಿಷ್ಟ ಸಾಮಾಜಿಕವಾಗಿ ಅವರಿಗಿದ್ದ ಮನ್ನಣೆಯನ್ನು ಕಡಿಮೆ ಮಾಡುವ ಪ್ರಯತ್ನ ಇದಾಗಿತ್ತು,'' ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳುತ್ತಾರೆ.

"ಈ ದಾಳಿ ನಂತರ ಮಾಧ್ಯಮ ಸಂಸ್ಥೆಯೊಂದು ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿ ಜತೆ ಡೀಲಿಂಗ್ ನಡೆಸಲು ಮುಂದಾಗಿದೆ. ಆ ಬಗ್ಗೆ ಆಡಿಯೋ ರೆಕಾರ್ಡಿಂಗ್ ಒಂದು ಸಿಐಡಿ ಅಧಿಕಾರಿಗಳ ಬಳಿ ಇದೆ,'' ಎಂಬ ಗಾಳಿ ಸುದ್ದಿಯೂ ಹರಡಿತ್ತು. ಇದಕ್ಕೆ ಪೂರಕ ಎಂಬಂತೆ, ಸಿಐಡಿ ಕೂಡ 'ನಮ್ಮ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಮಾಹಿತಿ ನೀಡಿ' ಎಂದು ಪ್ರಕಟಣೆಯೊಂದನ್ನು ನೀಡಿತ್ತು.

ಇದಾದ ನಂತರ, ತನಿಖೆಯನ್ನು ಮುನ್ನಡೆಸುತ್ತಿದ್ದ ಅಧಿಕಾರಿ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ಹೊರಟು ನಿಂತ ಸುದ್ದಿ ಹೊರಬಿದ್ದಿತ್ತು.

ಇಷ್ಟೆಲ್ಲಾ ಘಟನಾವಳಿಗಳ ನಡುವೆ ತಣ್ಣಗಾದಂತೆ ಆಗಿದ್ದ ಪ್ರಕರಣ, ಇದೀಗ ಪ್ರಮುಖ ಆರೋಪಿ ಶಿವಕುಮಾರ ಸ್ವಾಮಿಯನ್ನು ಬಂಧಿಸುವ ಮೂಲಕ ಕೊನೆಯ ನಿಲ್ದಾಣ ತಲುಪಿಸಿದಂತಾಗಿದೆ.

ಹಿಂದಿನ ಬಾರಿ ರಾಜ್ಯದಲ್ಲಿ ನಡೆದ ಇದೇ ಮಾದರಿಯ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದು ಇದೇ ಶಿವಕುಮಾರ ಸ್ವಾಮಿ. ಹೀಗಾಗಿ, ಈ ಬಾರಿಯೂ ತನಿಖೆ, ಆತನಿಗೆ ಕೊನೆಗೊಂಡರೆ, ಮುಂದಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಮರುಕಳಿಸುವುದನ್ನು ನಿರೀಕ್ಷಿಸಬಹುದಾಗಿದೆ.