'ಜಾನ್ಸನ್ ಬೇಬಿ ಪೌಡರ್'ನಿಂದ ಕ್ಯಾನ್ಸರ್: ಕಂಪನಿಗೆ 7.2 ಕೋಟಿ ಡಾಲರ್ ದಂಡ!
ಸುದ್ದಿ ಸಾಗರ

'ಜಾನ್ಸನ್ ಬೇಬಿ ಪೌಡರ್'ನಿಂದ ಕ್ಯಾನ್ಸರ್: ಕಂಪನಿಗೆ 7.2 ಕೋಟಿ ಡಾಲರ್ ದಂಡ!

ಮಕ್ಕಳ ಸೌಂದರ್ಯ ವರ್ಧಕ ಉತ್ಪಾದನೆಯ ಮೂಲಕ ವಿಶ್ವದ ಮನೆಮಾತಾಗಿರುವ 'ಜಾನ್ಸನ್ ಅಂಡ್ ಜಾನ್ಸನ್' ಸಂಸ್ಥೆಗೆ ಅಮೆರಿಕಾದ ನ್ಯಾಯಾಲಯವೊಂದು 7. 20 ಕೋಟಿ ಡಾಲರ್ ದಂಡ ವಿಧಿಸಿ, ಸೋಮವಾರ ಸಂಜೆ ತೀರ್ಪು ಹೊರಡಿಸಿದೆ.

ಅಲಬಾಮ ಮೂಲದ ಮಹಿಳೆಯೊಬ್ಬರು ಸದರಿ ಸಂಸ್ಥೆಯ ಬೇಬಿ ಪೌಡರ್ ಹಾಗೂ 'ಶವರ್ ಎಂಡ್ ಶವರ್' ಶಾಂಪುಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ಗೆ ತುತ್ತಾಗಿದ್ದರು. ಈ ಕುರಿತು ಮಿಸೋರಿ ರಾಜ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

ಸೋಮವಾರ ಸಂಜೆ ವೇಳೆಗೆ, ಪ್ರಕರಣದ ಕುರಿತು ತೀರ್ಪು ನೀಡಿದ ಜ್ಯೂರಿಗಳು, ದೂರು ನೀಡಿದ ಜಾಕ್ವೆಲಿನ್ ಫಾಕ್ಸ್ ಎಂಬಾಕೆಯ ಕುಟುಂಬಕ್ಕೆ ಒಟ್ಟು 7. 20 ಕೋಟಿ ಮೌಲ್ಯದ ದಂಡವನ್ನು ತುಂಬುವಂತೆ ಸೂಚನೆ ನೀಡಿದೆ. ಮೂರು ವಾರಗಳ ಕಾಲ ಪ್ರಕರಣದ ಕುರಿತು ಜ್ಯೂರಿಗಳು ಚರ್ಚೆ ನಡೆಸಿದ್ದರು. ಇದು ಅಲ್ಲಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇತ್ತು.

''ಫಾಕ್ಸ್ ಕಳೆದ 35 ವರ್ಷಗಳಿಂದ ದೇಹದ ಶುಚಿತ್ವವನ್ನು ಕಾಪಾಡಿಕೊಳ್ಳಲು 'ಜಾನ್ಸನ್ ಅಂಡ್ ಜಾನ್ಸನ್' ಸಂಸ್ಥೆಯ ಪೌಡರ್ ಹಾಗೂ ಶಾಂಪು ಬಳಕೆ ಮಾಡುತ್ತಿದ್ದರು. ಅದರಲ್ಲಿರುವ ರಾಸಾಯನಿಕಗಳಿಂದಾಗಿ ಆಕೆಗೆ ಗರ್ಭಕೋಶದ ಕ್ಯಾನ್ಸರ್ ಬಂದಿತ್ತು,'' ಎಂದು ಕುಟುಂಬವು ನ್ಯಾಯಾಲಯದಲ್ಲಿ ಆರೋಪಿಸಿತ್ತು. 2013ರ ಅಕ್ಟೋಬರ್ ತಿಂಗಳಿನಲ್ಲಿ ಫಾಕ್ಸ್ ತಮ್ಮ 65ನೇ ವರ್ಷದಲ್ಲಿ ತೀರಿಕೊಂಡಿದ್ದರು.

"ಕಂಪನಿಯು ಸರಕಾರ ಹಾಗೂ ಗ್ರಾಹಕರಿಗೆ ಸುಳ್ಳು ಹೇಳಿ ಕಳಪೆ ಗುಣಮಟ್ಟದ ಸರಕನ್ನು ಸರಬರಾಜು ಮಾಡಿದ್ದು ಸಾಬೀತಾಗಿದೆ,'' ಎಂದು ಫಾಕ್ಸ್ ಪರ ವಕೀಲರು ತಿಳಿಸಿದ್ದಾರೆ.

ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರ ಕರೋಲ್ ಗುಡ್ರಿಚ್, "ನಮಗೆ ಗ್ರಾಹಕರ ಆರೋಗ್ಯಕ್ಕಿಂತ ಮುಖ್ಯವಾದುದ್ದು ಯಾವುದೂ ಇಲ್ಲ. ಪ್ರಕರಣದಲ್ಲಿ ಹೊರಬಿದ್ದಿರುವ ತೀರ್ಪಿನ ಕುರಿತು ಬೇಜಾರಾಗಿದೆ. ಮಹಿಳೆಯ ಸಾವಿನ ಬಗ್ಗೆ ನಮಗೆ ಕರುಣೆ ಇದೆ. ನಮ್ಮ ಉತ್ಪನ್ನಗಳಿಂದ ಆರೋಗ್ಯದ ಮೇಲೆ ಹಾನಿ ಇಲ್ಲ ಎಂಬುದನ್ನು ದಶಕಗಳಿಂದಲೂ ವೈಜ್ಞಾನಿಕವಾಗಿ ಸಾಬೀತು ಪಡಿಸುತ್ತ ಬಂದಿದ್ದೇವೆ,'' ಎಂದು ಹೇಳಿದ್ದಾರೆ.