ಸಾಂದರ್ಭಿಕ ಚಿತ್ರ.
ಸುದ್ದಿ ಸಾಗರ

ಆರ್ಡರ್... ಆರ್ಡರ್... ನಾನೀಗ ಜಡ್ಜ್ ‘ಮೈ ಲಾರ್ಡ್’!

ವಕೀಲರಿಗೊಂದು ಪ್ರೇರಣೆಯ ಕತೆ.

Summary

ಹಿಂದೊಮ್ಮೆ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಜಯಂತಿ ನಟರಾಜನ್, ಭಾರತದಲ್ಲಿ ಬಾಕಿ ಇರುವ ಕೇಸುಗಳ ಇತ್ಯರ್ಥವಾಗಲು 400 ವರ್ಷಗಳು ಬೇಕು ಎಂದಿದ್ದರು. ಮೊನ್ನೆ ಮೊನ್ನೆ ಸುಪ್ರಿಂ ಕೋರ್ಟ್ ಸಿಜೆಐ ಭಾವುಕರಾಗಿ ನ್ಯಾಯಾಂಗ ವ್ಯವಸ್ಥೆಯ ಒತ್ತಡಗಳನ್ನು ದೇಶದ ಮುಂದೆ ಇಟ್ಟಿದ್ದರು.

ಕರ್ನಾಟಕದಲ್ಲಿ ಇತ್ತೀಚೆಗೆ, ನ್ಯಾಯಾಧೀಶರ ನೇಮಕಾತಿ ನಡೆದಿದೆ. 10 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ 142 ಜನರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಒಬ್ಬರು ‘ನಾನು ಹೇಗೆ ಜಡ್ಜ್ ಆದೆ?’ ಎಂಬುದನ್ನು ‘ಸಮಾಚಾರ’ ಓದುಗರಿಗಾಗಿ ನಿರೂಪಿಸಿದ್ದಾರೆ.

ಔಪಚಾರಿಕ ಕಾರಣಗಳಿಗಾಗಿ ಅವರ ಹೆಸರನ್ನು ಇಲ್ಲಿ ಪ್ರಕಟಿಸಿಲ್ಲ. ಆದರೆ, ಇದು ಕನಸುಗಳನ್ನು ಕಟ್ಟಿಕೊಂಡಿರುವ ಪ್ರತಿ ವಕೀಲರಿಗೂ ಪ್ರೇರಣೆಯ ಕತೆ...

ಹಬ್ಬ ಇರಲಿ- ಹರಿದಿನ ಇರಲಿ, ಅಮ್ಮ ನನಗೆ ಪ್ರತಿ ಸಲ ಆಶೀರ್ವಾದ ಮಾಡೋವಾಗೆಲ್ಲಾ ಹೇಳುತ್ತಿದ್ದದ್ದು ಒಂದೇ, "ನೀನು ಚೆನ್ನಾಗಿ ಓದಿ, ಒಬ್ಬಳು ಉನ್ನತ ಅಧಿಕಾರಿಯಾಗಿ ಸರಕಾರಿ ಕಾರಲ್ಲಿ ನನ್ನ ಮುಂದೆ ಬಂದು ಇಳಿಬೇಕು," ಅಂತ. ಅವರ ಕಣ್ಣಲ್ಲಿ ನಾನು ಜಿಲ್ಲಾಧಿಕಾರಿಯಾಗಿರುತ್ತಿದ್ದೆ. ಸಿನಿಮಾದಲ್ಲಿ ತೋರಿಸಿದ ಹಾಗೆ, ನಾನು ಕಾರಿಂದ ಇಳಿದ ತಕ್ಷಣ ಪೊಲೀಸರು ಸೆಲ್ಯೂಟ್ ಮಾಡೋದನ್ನು ಅಮ್ಮ ಕಲ್ಪನೆ ಮಾಡಿಕೊಳ್ಳುತ್ತಿದ್ದರು; ಕನಸು ಕಾಣುತ್ತಿದ್ದರು. ಆದರೆ, ನಾನು ಯಾವತ್ತೂ ಅದನ್ನು ಸೀರಿಯಸ್ ಆಗಿ ತಗೊಂಡೆ ಇರಲಿಲ್ಲ.

ಎಸ್ಎಸ್ಎಲ್ಸಿ ಆದ ಮೇಲೆ, ಏನು ಓದ್ತೀಯಾ? ಅಂತ ಕೇಳಿದ್ದರು. ಎಲ್ಲಾ ಅಪ್ಪ ಅಮ್ಮಂದಿರ ತರಹ ನನಗೆ ಸೈನ್ಸ್ ಕೊಡಿಸಿ, ಡಾಕ್ಟರ್, ಎಂಜಿನಿಯರ್ ಮಾಡಿಸಬೇಕು ಎಂಬ ಆಸೆ ನಮ್ಮನೆಯಲ್ಲಿ ಇತ್ತು. ಆದರೆ, ನಾನು ಸೈನ್ಸ್ ಬೇಡ ಅಂತ ಆರ್ಟ್ಸ್ ತಗೊಂಡಿದ್ದೆ. ಅದಕ್ಕೆ ಎರಡು ಕಾರಣ ಇತ್ತು. ಒಂದು, ಅಕ್ಕ ನನಗಿಂತ ಮುಂಚೆ ಸೈನ್ಸ್ ತಗೊಂಡು ಪಡುತ್ತಿದ್ದ ಕಷ್ಟ ನೋಡಿದ್ದೆ. ಎರಡನೇಯದು, ಅಪ್ಪ ಅಮ್ಮಂಗೆ ನನ್ನಿಂದ ಆರ್ಥಿಕ ಹೊರೆ ಆಗಬಾರದು ಅಂತ. ಆದರೆ, ನಾನು ಆರ್ಟ್ಸ್ ತಗೊಂಡಿದ್ದಕ್ಕೆ ಮನೆಯಲ್ಲಿ ಕೊಟ್ಟ ಕಾರಣ ಮಾತ್ರ ಬೇರೆಯೇ ಇತ್ತು. ಅಮ್ಮಂಗೆ ಲಾಯರ್ ಆಗ್ಬೇಕು ಅಂತ ಕನಸಿತ್ತು. ಆದರೆ ತಾತಂಗೆ ಅವರಿಗೆ ಶಿಕ್ಷಣ ಕೊಡಿಸೋಕೆ ಆಗಿರಲಿಲ್ಲ. ಅದಕ್ಕೆ ಅಮ್ಮಂಗೆ ಹೇಳಿದ್ದೆ, "ನೀನು ಕಂಡಿದ್ದ ಕನಸನ್ನು ನಾನು ನನಸು ಮಾಡ್ತೀನಿ; ಲಾಯರ್ ಆಗ್ತೀನಿ, ಹಾಗಾಗಿ ಆರ್ಟ್ಸ್ ತಗೋತೀನಿ,'' ಅಂತ. ಪಿಯುಸಿ ಚೆನ್ನಾಗಿ ಓದಿದೆ. ಒಳ್ಳೆ ಸ್ಕೋರ್ ಮಾಡಿದೆ. ಆದರೆ, ಕ್ರೀಡೆಯಲ್ಲಿ ನಾನಿರಲಿಲ್ಲ ಎಂಬ ಕಾರಣಕ್ಕೆ 'ವರ್ಷದ ವಿದ್ಯಾರ್ಥಿನಿ' ಪಟ್ಟ ತಪ್ಪಿ ಹೋಯಿತು

ನಂತರ ಐದು ವರ್ಷಗಳ ಕಾನೂನು ಪದವಿಗೆ ಸೇರಿಕೊಂಡೆ. ಮೊದಲ ಒಂದೆರಡು ವರ್ಷ ಹೇಗೆ ಕಳೀತು ಅಂತಲೇ ಗೊತ್ತಾಗಲಿಲ್ಲ. ಹೊಸ ಫ್ರೆಂಡ್ಸ್, ಹೊಸ ಕಾಲೇಜು, ಹೊಸ ಪಾಠ... ಅರಾಮಾಗಿ ನಡೆದುಕೊಂಡು ಹೋಯ್ತು. ಆಮೇಲೆ ಕಾನೂನು ಏನು ಅಂತ ಅರ್ಥವಾಗೋಕೆ ನಿಧಾನಕ್ಕೆ ಶುರುವಾಯಿತು. ಜತೆಗೆ ಕಾಲೇಜು ಲೈಫನ್ನು ಎಂಜಾಯ್ ಮಾಡೋಕೆ ಶುರು ಮಾಡಿದ್ವಿ. ಕೊನೆಯ ವರ್ಷದಲ್ಲಿ ಕಾನೂನು ಶಿಬಿರ ಮಾಡೋಕೆ ಹೇಳಿದ್ದರು. ಅದಕ್ಕಾಗಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಅದಕ್ಕೂ ಮುಂಚೆ ಅಲ್ಲಿನ ಜನರ ಸಮಸ್ಯೆ ಏನು ಅಂತ ತಿಳ್ಕೋಬೇಕಾಗಿತ್ತು. ಹೀಗಾಗಿ 10 ದಿನ ಮುಂಚೆಯೇ ಸಮೀಕ್ಷೆ ಶುರು ಮಾಡಿದಿವಿ. ಅವಾಗಲೇ ಗೊತ್ತಾಗಿದ್ದು, ಜೀವನ ಏನು ಅಂತ? ಹೆಣ್ಣು ಮಕ್ಕಳ ಕಷ್ಟಗಳನ್ನು ಹೇಳಿಕೊಂಡರು. ಅಕ್ರಮವಾಗಿ ಮನೆ ಕಟ್ಟಿದೀವಿ, ಸಕ್ರಮ ಹೇಗೆ? ಕೆಲವರು ಕೇಳಿಕೊಂಡು ಬಂದರು. ಜಮೀನಿಗೆ ಪೋಡಿ ದುರಸ್ತಿ ಮಾಡಿಸಬೇಕು; ತಾಲೂಕು ಆಫೀಸ್ ಸುತ್ತಿ ಸಾಕಾಯ್ತು ಅಂದರು. ಜನನ ಹಾಗೂ ಮರಣ ಪ್ರಮಾಣ ಪತ್ರ ಎಂದರೇನು? ಎಂದು ಕೇಳುವವರೂ ಇದ್ದರು. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಇವನ್ನೆಲ್ಲಾ ಗುಡ್ಡೆ ಹಾಕಿಕೊಂಡು ಸೂಕ್ತ ಪರಿಹಾರ ಕೊಡಿಸುವ ಕೆಲಸವನ್ನು ಶಿಬಿರದಲ್ಲಿ ಮಾಡಿದೆವು. ಆಮೇಲೆ ಅಣಕು ನ್ಯಾಯಾಲಯ ನಿರ್ವಹಣೆ. ಹೀಗೆ, ಒಂದೊಂದೆ ಕಲಿಕೆಯ ಹಂತವನ್ನು ದಾಟಿಕೊಂಡು ಕಾನೂನು ಪದವಿ ಮುಗಿಸಿ ಹೊರಬಂದೆ.

ಚೆನ್ನಾಗಿ ಓದಿದ್ದರೂ, ಹೇಳಿಕೊಳ್ಳುವಂತಹ ಮಾರ್ಕ್ಸ್ ಏನೂ ಬಂದಿರಲಿಲ್ಲ. ಸ್ವಲ್ಪ ಬೇಜಾರೂ ಆಗಿತ್ತು. ಮುಂದೆ ಎಲ್ಎಲ್ಎಂ ಸೇರಿಕೊಂಡೆ. ಅಲ್ಲಿಯೂ ಕೂಡ ಅಷ್ಟೆ. ಪರೀಕ್ಷೆಯಲ್ಲಿ ಉತ್ತರವನ್ನು ಕಡಿಮೆ ಬರೆದೆ ಎಂಬ ಕಾರಣಕ್ಕೆ ಅಂಕಗಳು ಕಡಿಮೆಯಾದವು. ಕೊನೆಯಲ್ಲಿ, ಪರವಾಗಿಲ್ಲ ಎಂಬ ಅಂಕಪಟ್ಟಿಯೊಂದಿಗೆ ಮನೆಗೆ ಬಂದೆ. ಆಮೇಲೆ, ನಮ್ಮೂರಿನ ನ್ಯಾಯಾಲಯದಲ್ಲಿ ವಕೀಲೆ ಎಂದು ನೋಂದಣಿ ಮಾಡಿಸಿದೆ. ನನ್ನ ಮನಸ್ಥಿತಿಗೆ ಸರಿ ಹೊಂದುವ ಸೀನಿಯರ್ ಒಬ್ಬರನ್ನು ಹುಡುಕಿಕೊಂಡೆ. ಮನೆಗೆ ಬಂದು ಅಮ್ಮಂಗೆ, "ನೋಡಮ್ಮ, ಅಂತೂ ನಿನ್ನ ಕನಸನ್ನು ನಾನು ನೆರವೇರಿಸಿ ಬಿಟ್ಟೆ,'' ಎಂದು ಹೇಳಿದ್ದೆ. ಸ್ವಲ್ಪ ದಿನಗಳಲ್ಲಿಯೇ ವಕೀಲಿಕೆಯ ಕಷ್ಟ ಏನು ಅಂತ ಅರ್ಥವಾಯಿತು. ದಿನಾ ಕಕ್ಷಿದಾರರಿಂದ ಹಣವನ್ನು ನಿರೀಕ್ಷಿಸುವುದು, ಕೆಲವು ದಿನ ಒಂದು ರೂಪಾಯಿ ಇಲ್ಲದೆ ಮನೆಗೆ ಬರುವುದು. ಯಾಕೋ, ಅಮ್ಮಂಗೂ ಮಗಳ ಬದುಕು ಹೀಗಾಯಿತಲ್ಲ ಎಂದು ಬೇಸರವಾಗಿತ್ತು.

ಬದುಕು ಬದಲಾಯಿತು:

ಒಂದಿನ ಬೆಳಗ್ಗೆ ನ್ಯಾಯಾಲಯದ ಒಳಗೆ ಹೋಗುತ್ತಿದ್ದೆ. ನಮ್ಮ ಜಿಲ್ಲಾ ಸತ್ರ ನ್ಯಾಯಾಧೀಶರ ಕಾರು ಬಂದು ಎದುರಿಗೆ ನಿಂತಿತು. ನ್ಯಾಯಾಧೀಶರು ಅದರಿಂದ ಇಳಿದರು. ಪೇದೆಯೊಬ್ಬ ಸೆಲ್ಯೂಟ್ ಹೊಡೆದು, ಅವರು ಒಳ ಬರುವುದಕ್ಕೆ ದಾರಿ ಮಾಡಿಕೊಟ್ಟ. ನ್ಯಾಯಾಧೀಶರು ಮಹಿಳೆ. ಕರಿಕೋಟಿನಲ್ಲಿದ್ದ ನನ್ನ ಕಡೆಗೊಮ್ಮೆ ನೋಡಿ, ಮಂದಹಾಸ ಬೀರಿ ಮುಂದೆ ಹೋದರು. ನನ್ನೊಳಗೆ ಅವ್ಯಕ್ತವಾಗಿ ಬಚ್ಚಿಟ್ಟುಕೊಂಡಿದ್ದ ಕನಸೊಂದಕ್ಕೆ ನೀರು ಎರೆದಂತೆ ಆಯಿತು. ಅಮ್ಮನ ಕನಸಿನಂತೆ ನಾನು ಜಿಲ್ಲಾಧಿಕಾರಿಯಾಗದಿದ್ದರೆ ಏನಾಯಿತು? ಜಿಲ್ಲಾ ಸತ್ರ ನ್ಯಾಯಾಧೀಶೆಯಾದರೂ ಸಾಕಲ್ಲ? ಎಂದು ಮನಸ್ಸು ಹೊಸ ಲಹರಿಗೆ ತೆರೆದುಕೊಂಡಿತು. ಅಲ್ಲಿಂದ ಮುಂದೆ, ನನ್ನ ಶ್ರಮ, ನನ್ನ ಓದು.

ಮೊದಲ ಬಾರಿಗೆ ಜಡ್ಜ್ ಪರೀಕ್ಷೆ ತೆಗೆದುಕೊಂಡೆ. ಪ್ರಿಲಿಮ್ಸ್ ಪಾಸು ಮಾಡಿದರೂ, ಮೇನ್ಸ್ ಕೈಕೊಟ್ಟಿತು. ಎಲ್ಲರೂ ನಕ್ಕರು, ತಮಾಷೆ ಮಾಡಿದರು. ಕೆಲವು ದಿನಗಳಲ್ಲಿ ಎಲ್ಲಾ ಸುಮ್ಮನಾದರು. ಆದರೆ ನಾನು ಸುಮ್ಮನಾಗಲಿಲ್ಲ. ನನ್ನೊಳಗಿನ ಶ್ರಮವನ್ನು ಬಿಡಲಿಲ್ಲ. ಈ ಬಾರಿ ನಾನು ಯಾರಿಗೂ ಏನನ್ನೂ ಹೇಳಲು ಹೋಗಲಿಲ್ಲ. ನ್ಯಾಯಾಲಯದ ಕಡೆ ತಲೆಯೂ ಹಾಕಲಿಲ್ಲ. ನಾನಾಯಿತು, ನನ್ನ ಓದಾಯಿತು ಎಂದು ಇದ್ದು ಬಿಟ್ಟೆ. ಕೊನೆಗೆ, ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡೂ ಪಾಸು ಮಾಡಿಕೊಂಡೆ. ಬೆಂಗಳೂರಿನಲ್ಲಿ ಹೈಕೋರ್ಟ್ ಹಿರಿಯ ನ್ಯಾಯಾಧೀಶರ ಎದುರಿಗೆ ಹೆದರಿಕೊಂಡೆ ಮೌಖಿಕ ಪರೀಕ್ಷೆಯಲ್ಲಿ ಪಾಲ್ಗೊಂಡೆ. ನಾನು ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಏನೂ ಇರಲಿಲ್ಲ. ಕೊನೆಗೆ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ನೋಡಿದಾಗ ಅಳು ಬಿಟ್ಟು ಬೇರೇನೂ ಬರಲಿಲ್ಲ.ಅಮ್ಮನ ಕಣ್ಣಲ್ಲೂ ನೀರಿತ್ತು. ಅಪ್ಪನ ಮುಖದಲ್ಲಿ ಹೆಮ್ಮೆ ಇತ್ತು. ಕೊನೆಗೂ ಮಗಳು ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಳು ಎಂಬ ಖುಷಿ ಅವರಿಗೆ.

ನನಗೆ ಗೊತ್ತು, ಈ ಸಮಯದಲ್ಲಿ ನನ್ನ ಕೈ ಹಿಡಿದಿದ್ದು ನನ್ನ ಶ್ರಮವಲ್ಲದೆ ಬೇರೇನೂ ಅಲ್ಲ. ನಾನು ಇನ್ನು ಕರ್ನಾಟಕದಲ್ಲಿ ನ್ಯಾಯಾಧೀಶೆ. ಜನರಿಗೆ, ನ್ಯಾಯಾಂಗ ವ್ಯವಸ್ಥೆಗೆ ನನ್ನಿಂದ ಪ್ರಾಮಾಣಿಕ ಸೇವೆ ಸಲ್ಲಿಸುವುದಕ್ಕೆ ಸಿಕ್ಕಿರುವ ಬಹುದೊಡ್ಡ ಅವಕಾಶ ಇದು ಎಂದು ನಂಬಿದ್ದೇನೆ.