samachara
www.samachara.com
ಮೂರನೇ ದಿನವೂ ಮುಂದೂಡಿದ ಕಲಾಪ: ಆರೋಪಕ್ಕೆ ತಿರುಗೇಟು ನೀಡಿದ ಸೋನಿಯಾ
ಸುದ್ದಿ ಸಾಗರ

ಮೂರನೇ ದಿನವೂ ಮುಂದೂಡಿದ ಕಲಾಪ: ಆರೋಪಕ್ಕೆ ತಿರುಗೇಟು ನೀಡಿದ ಸೋನಿಯಾ

"ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ದ ಎರಡು ವರ್ಷ ಸುಮ್ಮನಿದ್ದ ಸರ್ಕಾರ ಈಗ ಏಕಾಏಕಿ ಆರೋಪ ಮಾಡಿದರೆ ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ. ಸರ್ಕಾರ ಏನು ಬೇಕಾದರೂ ಮಾಡಲಿ, ಭ್ರಷ್ಟಾಚಾರ ಆರೋಪ ನನ್ನ ಮೇಲೆ ಬಂದರೆ ಹೋರಾಟಕ್ಕೆ ಸಿದ್ಧ...''

ಗಣ್ಯ ವ್ಯಕ್ತಿಗಳ ಹಾರಾಟಕ್ಕಾಗಿ ಆಗಸ್ಟಾ ಹೆಲಿಕಾಪ್ಟರ್ ಖರೀದಿ ಅವ್ಯವಹಾರದಲ್ಲಿ ತಮ್ಮ ಹೆಸರು ಕೇಳಿ ಬಂದಿರುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಅಧಿವೇಶನದಲ್ಲಿ ಗುಡುಗಿದ ರೀತಿ ಇದು.

"ನಾನು ಯಾಕೆ ಹೆದರಬೇಕು? ನನ್ನ ವಿರುದ್ಧ ಬಂದಿರುವ ಆರೋಪಗಳು ನಿರಾಧಾರ. ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದು 2 ವರ್ಷವಾಗಿದೆ. ಇನ್ನೂ ಈ ಪ್ರಕರಣದ ತನಿಖೆಯನ್ನು ಯಾಕೆ ಪೂರ್ಣಗೊಳಿಸಿಲ್ಲ? ನಾನು ಭಾಗಿಯಾಗಿದ್ದೇನೆ ಎನ್ನುವುದಕ್ಕೆ ಸಾಕ್ಷ್ಯ ಎಲ್ಲಿದೆ?'' ಎಂದವರು ಆರೋಪಕ್ಕೆ ತಿರುಗೇಟು ನೀಡಿದರು.

"ನನ್ನ ಚಾರಿತ್ರ್ಯ ಹರಣ ಮಾಡುವುದೇ ಬಿಜೆಪಿಯವರ ಉದ್ದೇಶ. ಹೀಗಾಗಿ ನನ್ನ ವಿರುದ್ಧ ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ,'' ಎಂದು ಸಮರ್ಥಿಸಿಕೊಂಡರು.

ಕೋಲಾಹಲ: 

ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಸೋನಿಯಾ ಹೆಸರು ಇದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದು, ರಾಜ್ಯ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಸ್ವಾಮಿ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದು, ಕಲಾಪ ಮೂರನೇ ದಿನವೂ ಮುಂದೂಡಲ್ಪಟ್ಟಿತು.

ಪ್ರತಿಪಕ್ಷಗಳ ಸದಸ್ಯರನ್ನು ಗುರಿಯಾಗಿಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಕೋಲಾಹಲ ಸೃಷ್ಟಿಸಿದರು. ಬೆಳಗ್ಗೆ ರಾಜಸಭೆ ಮತ್ತು ಲೋಕಸಭೆಯಲ್ಲಿ ಇದೇ ವಿಷಯ ಪ್ರತಿಧ್ವನಿಸಿ ಉಬಯ ಸದನಗಳಲ್ಲೂ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಪಟ್ಟು ಹಿಡಿದರು.

ಸದನ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು "ಇಟಲಿ ಮತ್ತು ಭಾರತ ಪ್ರಧಾನಿಗಳ ಮಧ್ಯೆ ಪತ್ರಿಕಾ ವರದಿಗಳು ಹೇಳಿರುವಂತೆ ಸಭೆ ನಡೆದಿದೆಯೇ? ಏನಾದರೂ ವ್ಯವಹಾರ ಕುದುರಿದೆಯೇ?,'' ಎಂದು ಪ್ರಶ್ನಿಸಿದರು.

ವಿತ್ತ ಸಚಿವ ಅರುಣ್ ಜೇಟ್ಲಿ ಉಭಯ ಪ್ರಧಾನ ಮಂತ್ರಿಗಳ ನಡುವಣ ಭೇಟಿಯ ವರದಿಗಳು ಸಂಪೂರ್ಣ ನಿರಾಧಾರ ಎಂದರು.

ಇದಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು 'ತಪ್ಪಿತಸ್ಥ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಕಂಪೆನಿಯ ರಕ್ಷಣೆಗೆ ಪ್ರಧಾನಿಯವರು ಮುಂದಾಗಿರುವುದೇಕೆ ಎಂದು ಪ್ರಶ್ನಿಸುತ್ತಾ ಪ್ರತಿಭಟನೆ ಆರಂಭಿಸಿದರು. ಬಿಜೆಪಿ ಸದಸ್ಯರೂ ಇದಕ್ಕೆ ಪ್ರತಿಯಾಗಿ ಘೋಷಣೆ ಕೂಗುತ್ತ ಪ್ರತಿಭಟನೆ ಸೂಚಿಸಿದರು. ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠಕ್ಕೆ ಧಾವಿಸಿ ಬಂದು ಪ್ರತಿಭಟನೆಯಲ್ಲಿ ತೊಡಗಿದರು. ಕೋಲಾಹಲದ ಮಧ್ಯೆ ಮೊದಲ ಒಂದು ತಾಸಿನಲ್ಲಿ ಸದನ ಕಲಾಪ ಎರಡು ಬಾರಿ ಮುಂದೂಡಿಕೆಯಾಯಿತು.

ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ ಮತ್ತಿತರರು ಚರ್ಚೆಗೆ ಒತ್ತಾಯಿಸಿದರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅವರ ಹುಳುಕುಗಳನ್ನು ಬಯಲು ಮಾಡಿದರೆ, ವಿರೋಧ ಪಕ್ಷಗಳನ್ನು ಸುಳ್ಳು ಆರೋಪ ಮಾಡಿ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ದಾಖಲೆಗಳಿದ್ದರೆ ಹೊರತನ್ನಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಉತ್ತರಖಂಡ್‍ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿರುವುದು, ಕಾಶ್ಮೀರದಲ್ಲಿ ಎನ್‍ಐಟಿ ಕ್ಯಾಂಪಸ್‍ನಲ್ಲಿ ಲಾಠಿ ಚಾರ್ಜ್ ಪ್ರಕರಣದ ಬಗ್ಗೆ ಚರ್ಚೆ ಮಾಡಬೇಕು. ಆದರೆ ವಿಷಯಾಂತರ ಮಾಡಲು ಸರಕಾರ ಹೊರಟಿದೆ. ನಿಮ್ಮ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕು. ಸುಮ್ಮನೆ ವೃಥಾ ಆರೋಪ ಮಾಡಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.