'ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್': ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ
ಸುದ್ದಿ ಸಾಗರ

'ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್': ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ

ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮದಲ್ಲಿ ನಡೆದ 'ಡೀಲ್' ಒಂದರ ಸುತ್ತ ಭ್ರಷ್ಟಾಚಾರದ ಗಂಭೀರ ಆರೋಪವೀಗ ಕೇಳಿ ಬಂದಿದೆ.

2005ರ ಸುಮಾರಿಗೆ ದೇಶವನ್ನು ಇಂಧನ ಸ್ವಾವಲಂಭಿ ಮಾಡುವ ಯೋಜನೆಯೊಂದನ್ನು ಘೋಷಿಸುವ ಮೂಲಕ ಭಾರಿ ಸುದ್ದಿ ಮಾಡಿದ್ದ ಯೋಜನೆ ಅದು. ಇವತ್ತು ಆ ಯೋಜನೆಯ ಅಂತರಾಳದಲ್ಲಿ ನಡೆದ ವ್ಯವಹಾರಗಳು ಬಹಿರಂಗವಾಗಿವೆ. ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮ (GSPC) ಯಾವುದೇ ತಾಂತ್ರಿಕ ಅನುಭವವಿಲ್ಲದ ಕಂಪನಿಗಳಿಗೆ ಶೇರು ನೀಡುವ ಮೂಲಕ, ಸುಮಾರು 19,700 ಸಾವಿರ ಕೋಟಿ ಹಗರಣ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಏನಿದು ಪ್ರಕರಣ?:

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನರೇಂದ್ರ ಮೋದಿ, "ರಾಜ್ಯ ಪೆಟ್ರೋಲಿಯಂ ನಿಗಮವು ಕೃಷ್ಣಾ- ಗೋಧಾವರಿ ನದಿ ತಟದಲ್ಲಿ ಪೆಟ್ರೋಲಿಯಂ ನಿಕ್ಷೇಪವನ್ನು ಅನ್ವೇಷಣೆ ಮಾಡಲಾಗಿದೆ. ಇದನ್ನು ಹೊರತೆಗೆಯುವ ಮೂಲಕ ದೇಶವನ್ನು ಇಂಧನ ಸ್ವಾವಲಂಭಿ ಮಾಡುವುದಾಗಿ," ಘೊಷಿಸಿದ್ದರು. ಅದಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನದ ಬೆಲೆ ಗಗನಕ್ಕೆ ಏರಿದ್ದರಿಂದ, ಮೋದಿ ಘೋಷಣೆ ಸಹಜವಾಗಿಯೇ ದೇಶದ ಸಾಮಾನ್ಯ ಜನರಲ್ಲಿ ಹೊಸ ಆಶಯವನ್ನು ಹುಟ್ಟು ಹಾಕಿತ್ತು. ನಮ್ಮದೇ ನಿಕ್ಷೇಪಗಳ ಮೂಲಕ ಕಚ್ಚಾ ಇಂಧನ ಸಿಕ್ಕರೆ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆ ಕುಸಿಯುವ ಮೂಲಕ ನಿತ್ಯದ ಬದುಕು ಇನ್ನಷ್ಟು ಅಗ್ಗವಾಗಲಿದೆ ಎಂಬ ಕನಸು ಹುಟ್ಟಿಕೊಂಡಿತ್ತು.

ಆದರೆ, ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಗುಜರಾತ್ ರಾಜ್ಯ ಪೆಟ್ರೋಲಿಂ ನಿಗಮವು ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಂದ 19, 700 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ದಿವಾಳಿ ಹಂತಕ್ಕೆ ಬಂದು ನಿಂತಿದೆ. ಜತೆಗೆ, ಯಾವುದೇ ತಾಂತ್ರಿಕ ನಿಪುಣತೆ ಇಲ್ಲದ, ಹಿನ್ನೆಲೆಯೇ ಇರದ ಎರಡು ಕಂಪನಿಗಳಿಗೆ ಶೇರು ನೀಡುವ ಮೂಲಕ ತೆರೆಮರೆಯಲ್ಲೇ ಹಗರಣವೊಂದನ್ನು ನಡೆಸಿದೆ ಎಂಬ ವಿಚಾರ ಚರ್ಚೆಗೆ ಬಂದಿದೆ.

ಅಲ್ಲಿ ನಡೆದಿದ್ದೇನು?:

2002ರಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮವು ಕೃಷ್ಣಾ- ಗೋಧಾವರಿ ನದಿ ತಟದಲ್ಲಿ ತೈಲ ನಿಕ್ಷೇಪವನ್ನು ಕಂಡು ಹಿಡಿದಿರುವುದಾಗಿ ಘೋಷಿಸಿತು. ಅದಾಗಲೇ ಇಲ್ಲಿ ತೈಲ ನಿಕ್ಷೇಪವನ್ನು ತೆಗೆಯುತ್ತಿದ್ದ ರಿಲಯನ್ಸ್ ಕಂಪನಿಗಿಂತಲೂ ದೊಡ್ಡ ಮಟ್ಟದಲ್ಲಿ ಕಚ್ಚಾ ತೈಲವನ್ನು ತೆಗೆಯುವುದಾಗಿ ಅದು ಹೇಳಿತ್ತು. 2007ರಿಂದ ಕಾರ್ಯಾಚರಣೆ ಶುರು ಮಾಡುವುದಾಗಿ ನಿಗಮ ಹೇಳಿತ್ತು. ಆದರೆ, ಇವತ್ತಿಗೂ ಅಲ್ಲಿ ಗುಜರಾತ್ ರಾಜ್ಯದ ಪೆಟ್ರೋಲಿಯಂ ನಿಗಮದ ಕಡೆಯಿಂದ ಯಾವುದೇ ಕೆಲಸ ಆರಂಭವಾಗಿಲ್ಲ. ಆದರೆ, ದಾಖಲೆಗಳಲ್ಲಿ ನಿಗಮವು ಭಾರಿ ಮೊತ್ತದ ಹಣದ ವಹಿವಾಟು ನಡೆಸಿದೆ ಎಂಬುದನ್ನು ಲೆಕ್ಕ ಪರಿಶೋಧಕರ ವರದಿ ಪತ್ತೆ ಹಚ್ಚಿದೆ.

ವರದಿಯಲ್ಲೇನಿದೆ?

ಸಿಎಜಿ ವರದಿಯ ಪ್ರಕಾರ, GSPC ಕೆ-ಜಿ ಬೇಸಿನ್ ಭಾಗದಲ್ಲಿ ಪೆಟ್ರೋಲಿಯಂ ನಿಕ್ಷೇಪವನ್ನು ತೆಗೆಯಲು ಜಿಯೋ ಗ್ಲೋಬಲ್ ರಿಸರ್ವ್ಸ್ ಹಾಗೂ ಜ್ಯುಬಿಲೆಂಟ್ ಎಂಬ ಎರಡು ಕಂಪನಿಗಳ ಜತೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿತು. ಈ ಎರಡೂ ಕಂಪನಿಗಳಿಗೆ ಸದರಿ ವಿಚಾರದಲ್ಲಿ ಯಾವುದೇ ತಾಂತ್ರಿಕ ಪರಿಣಿತಿಯಾಗಲೀ, ಹಿನ್ನೆಲೆಯಾಗಲೀ ಇರಲಿಲ್ಲ. ಎರಡೂ ಕಂಪನಿಗಳಿಗೆ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ, ತಲಾ ಶೇ. 10 ಶೇರುಗಳನ್ನು ನೀಡಲಾಯಿತು. ಇದಕ್ಕೆ ಕೇವಲ ಆರು ದಿನಗಳ ಮುಂಚೆಯಷ್ಟೆ ಜಿಯೋ ಗ್ಲೋಬಲ್ ಕಂಪನಿ ನೋಂದಣಿಯಾಗಿತ್ತು. ಒಡಂಬಡಿಕೆ ಮಾಡಿಕೊಳ್ಳುವ ಸಮಯದಲ್ಲಿಯೂ ಕಾನೂನುಗಳನ್ನು ಗಾಳಿಗೆ ತೂರಲಾಯಿತು.

ನಂತರ, ಒಡಂಬಡಿಕೆಯ ಮೂಲಕ ಪಡೆದ ಶೇ. 10ರಷ್ಟು ಶೇರುಗಳಲ್ಲಿ ಅರ್ಧದಷ್ಟನ್ನು ಕೆಲವೇ ದಿನಗಳಲ್ಲಿ ಮಾರಿಷಸ್ ಕಂಪನಿಯೊಂದಕ್ಕೆ ಜಿಯೋ ಗ್ಲೋಬಲ್ ಹಸ್ತಾಂತರಿಸಿತು.

ಮೋದಿ ಪಾತ್ರ ಏನು?

'ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್': ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ

ಒಡಂಬಡಿಕೆ ನಡೆದ ಬೆನ್ನಲ್ಲೇ ಜೂನ್ 26, 2005ರಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಕೃಷ್ಣಾ- ಗೋಧಾವರಿ ನದಿ ತಟದಲ್ಲಿ 2. 20 ಲಕ್ಷ ಕೋಟಿ ಮೌಲ್ಯದ ತೈಲ ನಿಕ್ಷೇಪವನ್ನು ಕಂಡು ಹಿಡಿದಿರುವುದಾಗಿ ಘೋಷಿಸಿದರು. ದೇಶವನ್ನು ಇಂಧನ ಸ್ವಾವಲಂಭಿ ಮಾಡಲು ಗುಜರಾತ್ ರಾಜ್ಯ ಮಹತ್ವದ ಯೋಜನೆ ಕೈಗೆತ್ತಿಕೊಂಡಿರುವುದಾಗಿ ಹೇಳಿದರು. ಜತೆಗೆ, ಜಿಯೋ ಗ್ಲೋಬಲ್ ಹಾಗೂ ಜ್ಯುಬುಲೆಂಟ್ ಕಂಪನಿ ಜತೆ ಸರಕಾರ ಒಡಂಬಡಿಕೆ ಮಾಡಿಕೊಂಡಿರುವುದನ್ನು ಸ್ವತಃ ಬಹಿರಂಗ ಪಡಿಸಿದರು.

ವಿಚಾರ, ಮಾಧ್ಯಮಗಳ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದ ಹಾಗೆ, ಸದರಿ ಕಂಪನಿಗಳ ಶೇರುಗಳು ಬೆಲೆ ಏರಿಕೆಯಾಗತೊಡಗಿತು. 2012ರಲ್ಲಿ $ 0.001ರಷ್ಟಿದ್ದ ಜಿಯೋ ಗ್ಲೋಬಲ್ ಶೇರುಗಳು $13ಕ್ಕೆ ಏರಿಯಾಯಿತು.

ಸೀನ್ ಬದಲಾಯಿತು:

ಆದರೆ, 2009ರ ಹೊತ್ತಿಗೆ ಯೋಜನೆಯ ಚಿತ್ರಣವೇ ಬದಲಾಯಿತು. GSPC ತನ್ನ ಕನಸಿನ ಯೋಜನೆಗೆ ಹೊರಗಿನಿಂದ ತಾಂತ್ರಿಕ ನೆರವು ಪಡೆಯಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿತು. ಇದೇ ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ಜಿಯೋ ಗ್ಲೋಬಲ್ ಕಂಪನಿ ಪಾತ್ರದ ಕುರಿತು ಎಲ್ಲಿಯೂ ಹೊರಗೆ ಬರಲಿಲ್ಲ. ಮೋದಿ ಕೂಡ, ಕೃಷ್ಣಾ- ಗೋಧಾವರಿ ನದಿ ತಟದಲ್ಲಿ ತಮಗೆ ಸಿಕ್ಕಿರುವ ನಿಕ್ಷೇಪದ ಮೌಲ್ಯವನ್ನು 2.20 ಕೋಟಿಗೆ ಇಳಿಸಿದರು. ಹಿಂದೆ ಹೇಳಿದ್ದ ಮೌಲ್ಯಕ್ಕಿಂತ ಶೇ. 90ರಷ್ಟು ಕಡಿಮೆ ಮಾಡಿದರು. ಜಿಯೋ ಗ್ಲೋಬಲ್ ಶೇರುಗಳು ಪಾತಾಳ ಕಂಡವು. ಜಿಎಸ್ಪಿಸಿ 19, 700 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಂಡಿತಾದರೂ, ಯೋಜನೆ ಶುರುವಾಗಲೇ ಇಲ್ಲ.

ಕೆಲವು ಪ್ರಶ್ನೆಗಳು ?:

ಈ ಎಲ್ಲಾ ಅಂಶಗಳನ್ನು ಲೆಕ್ಕಪರಿಶೋಧಕರ ವರದಿ ಮುಂದಿಟ್ಟರೂ, ಗುಜರಾತ್ ವಿಧಾನಸಭೆಯಲ್ಲಿ ಯಾಕೆ ಇದನ್ನು ಮಂಡಿಸಿ ಚರ್ಚೆಗೆ ತರಲಿಲ್ಲ?. ಜತೆಗೆ, ತಾಂತ್ರಿಕ ನೈಪುಣ್ಯ ಇಲ್ಲದ ಮೇಲೆ ಜಿಯೋ ಗ್ಲೋಬಲ್ ಕಂಪನಿಗೆ ಶೇ. 10ರಷ್ಟು ಶೇರು ನೀಡಿದ್ದು ಯಾಕೆ? 2005ರಿಂದ 2009ರ ನಡುವೆ ಜಿಯೋ ಗ್ಲೋಬಲ್ ಶೇರುಗಳಿಗೆ ಕೃತಕ ಬೆಲೆ ಹೆಚ್ಚಳದ ಹಿಂದೆ ಅಂದಿನ ಮುಖ್ಯಮಂತ್ರಿ ಮೋದಿ ಪಾತ್ರ ಯಾಕಿತ್ತು? ಅದರಿಂದ ಲಾಭ ಪಡೆದುಕೊಂಡವರು ಯಾರು?

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ಅವರ ಮೇಲೆ ಹೀಗೊಂದು ಗಂಭೀರ ಭ್ರಷ್ಟಾಚಾರದ ಹಗರಣ ಕೇಳಿಬಂದಿದೆ. ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕನಸು ಕಾಣುತ್ತಿದ್ದ ಜನರ ಇವರಿಂದ ಉತ್ತರ ಬಯಸುವುದು ಸಹಜವಾಗಿಯೇ ಇದೆ.