'ಮೋಸ್ಟ್ ವಾಂಟೆಡ್' ದಾವೂದ್ ಕಾಲಿಗೆ ಗ್ಯಾಂಗ್ರಿನ್: ಕರಾಚಿಯಲ್ಲಿ ಶಸ್ತ್ರ ಚಿಕಿತ್ಸೆ?
ಸುದ್ದಿ ಸಾಗರ

'ಮೋಸ್ಟ್ ವಾಂಟೆಡ್' ದಾವೂದ್ ಕಾಲಿಗೆ ಗ್ಯಾಂಗ್ರಿನ್: ಕರಾಚಿಯಲ್ಲಿ ಶಸ್ತ್ರ ಚಿಕಿತ್ಸೆ?

ಭಾರತದ 'ಮೋಸ್ಟ್ ವಾಂಟೆಡ್' ಕ್ರಿಮಿನಲ್, ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಆರೋಗ್ಯದ ಸುತ್ತ ಇದೀಗ ಗುಲ್ಲೆದ್ದಿದೆ.

"ಕರಾಚಿಯಲ್ಲಿರುವ ದಾವೂದ್ ಸ್ವಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ಕಾಲಿನ ಗಾಯ, ಗ್ಯಾಂಗ್ರಿನ್ ಆಗಿ ಪರಿವರ್ತನೆಗೊಂಡಿದೆ. ಲಿಯಾಖತ್ ರಾಷ್ಟ್ರೀಯ ಆಸ್ಪತ್ರೆ ಹಾಗೂ ಮಿಲಿಟರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ,'' ಎಂದು ಸಿಎನ್ಎನ್ ನೂಸ್-18 ವರದಿ ಮಾಡಿದೆ.

ದಾವೂದ್ ರಕ್ತದ ಒತ್ತಡ ಹೆಚ್ಚಾಗಿದ್ದು ಸಕ್ಕರೆ ಕಾಯಿಲೆಯೂ ಸೇರಿಕೊಂಡಿದೆ. ಹೀಗಾಗಿ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು, ಆ ಭಾಗವನ್ನು ತೆಗೆದು ಹಾಕಬೇಕು ಎಂಬ ವೈದ್ಯರ ಹೇಳಿಕೆಯೂ ವರದಿಯಲ್ಲಿದೆ.

ಇದರ ಬೆನ್ನಲ್ಲೇ, 'ಟೈಮ್ಸ್ ಆಫ್ ಇಂಡಿಯಾ', "ದಾವೂದ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ,'' ಎಂದು ಹೇಳಿದೆ. ಮತ್ತೊಬ್ಬ ಭೂಗತ ಪಾತಕಿ ಚೋಟಾ ಶಕೀಲ್ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸುದ್ದಿಯನ್ನು ಪ್ರಕಟಿಸಿರುವ ಪತ್ರಿಕೆ, "ದಾವೂದ್ ಉದ್ಯಮಕ್ಕೆ ಹೊಡೆತ ಕೊಡುವ ದೃಷ್ಟಿಯಿಂದ ಗಾಳಿ ಸುದ್ದಿಯನ್ನು ಹಬ್ಬಿಸಲಾಗಿದೆ,'' ಎಂದು ಹೇಳಿದೆ.

ತಲೆಮರೆಸಿಕೊಂಡ ಪಾತಕಿ:

ಬಾಬ್ರಿ ಮಸೀದಿ ಧ್ವಂಸದ ನಂತರ 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ದಾವೂದ್ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಆತ ಕರಾಚಿಯಲ್ಲಿ ವಾಸ ಇರುವ ಮನೆಯ ವಿಳಾಸವನ್ನು ಭಾರತ ಅಂತರಾಷ್ಟ್ರೀಯ ವೇದಿಕೆಗಳ ಮುಂದಿಟ್ಟರೂ, ಪಾಕಿಸ್ತಾನ ದಾವೂದ್ ಇರುವಿಕೆಯನ್ನು ಅಲ್ಲಗೆಳೆಯುತ್ತಲೇ ಬಂದಿದೆ.

ಇದೀಗ, ಆತನ ಅನಾರೋಗ್ಯ ಸುದ್ದಿ ಹೊರಬಿದ್ದಿರುವುದರಿಂದ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ತೊಡಕಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಕಳೆದ ಒಂದು ದಶಕಗಳ ಅವಧಿಯಲ್ಲಿ ದಾವೂನ್ನನ್ನು ಭಾರತಕ್ಕೆ ತರೆ ತರುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆಯಾದರೂ, ಇಲ್ಲೀವರೆಗೂ ಯಾವುದೂ ಫಲ ನೀಡಿಲ್ಲ. ಆ ಕುರಿತು ನಡೆದ ಘಟನಾವಳಿಗಳ ರಿಕ್ಯಾಪ್ ಇಲ್ಲಿದೆ:

  1. 1994ರಲ್ಲಿಯೇ ದಾವೂದ್ ಭಾರತದ ನ್ಯಾಯಾಲಯದಲ್ಲಿ ಶರಣಾಗತಿ ಬಯಸಿದ್ದ ಎಂದು ಸುದ್ದಿಯಾಗಿತ್ತು. 'ಈ ಕುರಿತು ಅಂದಿನ ಸಿಬಿಐ ನಿರ್ದೇಶಕ ನೀರಜ್ ಕುಮಾರ್ ಅವರ ಜತೆ ಮಾತುಕತೆ ನಡೆಸಿದ್ದ' ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿತ್ತು. "ನಾನು ದಾವೂದ್ ಜತೆ 1994ರ ಜೂನ್ ತಿಂಗಳಿನಲ್ಲಿ ಮಾತನಾಡಿದ್ದೆ. ಆತ ಭಾರತಕ್ಕೆ ಶರಣಾಗಲು ಬಯಸಿದ್ದ. ಆದರೆ ತನ್ನ ಎದುರಾಳಿಗಳು ಮುಗಿಸಬಹುದು ಎಂಬ ಆತಂಕವನ್ನು ತೋಡಿಕೊಂಡಿದ್ದ. ಆತನ ರಕ್ಷಣೆ ಸಿಬಿಐ ಹೊಣೆ ಎಂದು ತಿಳಿಸಿದ್ದೆ,'' ಎಂದು ಕುಮಾರ್ ತಿಳಿಸಿದ್ದರು. ಈ ಸಮಯದಲ್ಲಿ ದಾವೂದ್ ಜತೆ ಮಾತುಕತೆ ಮುಂದುವರಿಸದಂತೆ ಮೇಲಾಧಿಕಾರಿಗಳು ಕುಮಾರ್ ಅವರಿಗೆ ಸೂಚಿಸಿದ್ದರು ಎಂದೂ ವರದಿ ಹೇಳಿತ್ತು.


  2. ಪಿ. ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಸಮಯದಲ್ಲಿ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಕರಾಚಿಯ ದಾವೂದ್ ಮನೆಯಲ್ಲಿಯೇ ಹತ್ಯೆಗೆ ನೀಲ ನಕ್ಷೆ ರೂಪಿಸಿತ್ತು ಎಂದು 'ಇಂಡಿಯಾ ಟಿವಿ' ವರದಿ ಮಾಡಿತ್ತು. ಇದಕ್ಕಾಗಿ ಆಯ್ದ ತಂಡವೊಂದನ್ನು ಕಳುಹಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕೇಂದ್ರ ಸರಕಾರ ಈ ತೀರ್ಮಾನದಿಂದ ಹಿಂದೆ ಸರಿದಿತ್ತು ಎಂದು ಎನ್ನಲಾಗಿದೆ.


  3. 1994ರಲ್ಲಿ ದಾವೂದ್ ಸೆರೆ ಹಿಡಿಯಲು ದಕ್ಷಿಣಾ ಆಫ್ರಿಕಾ ನೆರವು ನೀಡಲು ಮುಂದಾಗಿತ್ತು, ಆದರೆ ಇದನ್ನು ಭಾರತ ನಿರಾಕರಿಸಿತ್ತು ಎಂದು ಅಂದಿನ ಸಂಪುಟ ಕಾರ್ಯದರ್ಶಿ ವಪ್ಪಲ ಬಾಲಚಂದ್ರ ಹೇಳಿಕೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹಲವು ಹಂತಗಳಲ್ಲಿ ಈ ಕುರಿತು ಉಬಯ ದೇಶಗಳ ನಡುವೆ ಮಾತುಕತೆಯೂ ನಡೆದಿತ್ತು. ದಕ್ಷಿಣ ಆಫ್ರಿಕಾದಲ್ಲಿ ದಾವೂದ್ ಗ್ಯಾಂಗ್ ಹೊಂದಿದ್ದ ಅಗಾಧ ಪ್ರಮಾಣದ ಮಾದಕ ದ್ರವ್ಯಗಳ ಜಾಲದ ಬಗ್ಗೆ ಅಲ್ಲಿನ ಅಧಿಕಾರಿಗಳು ಭಾರತದ ಜತೆ ಮಾಹಿತಿ ಹಂಚಿಕೊಂಡಿದ್ದರು. ಇದೇ ವೇಳೆ ದಾವೂದ್ 18 ಪ್ರತ್ಯೇಕ ಪಾಸ್ಪೋರ್ಟ್ಗಳನ್ನು ಹೊಂದಿದ್ದ ಎಂಬ ವಿಚಾರವನ್ನು ಭಾರತ, ದಕ್ಷಿಣಾ ಆಫ್ರಿಕಾ ಜತೆ ಹಂಚಿಕೊಂಡಿತ್ತು. ಆದರೆ, ಇದು ಮಾತುಕತೆ ಹಂತದಲ್ಲಿಯೇ ಕೊನೆಯಾಗಿತ್ತು.


  4. 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ದಾವೂದ್ ಹತ್ಯೆ ನಡೆಯಬೇಕಿತ್ತು ಎಂದು ಇನ್ನೊಂದು ವರದಿ ಹೇಳುತ್ತದೆ. ದಾವೂದ್ ದಿನಚರಿಯನ್ನು ಗಮನಿಸಿದ ಭಾರತದ 9 ಗೂಢಚಾರಿಗಳ ತಂಡ ಆತನನ್ನು ಹತ್ಯೆ ಮಾಡಲು ತಂತ್ರ ಹೆಣೆದಿತ್ತು. ಕಾರ್ಯಚರಣೆಗೆ 'ಸೂಪರ್ ಬಾಯ್ಸ್' ಎಂದು ಹೆಸರಿಡಲಾಗಿತ್ತು. ಆದರೆ, ಕೊನೆಯ ನಿಮಿಷದಲ್ಲಿ ಬಂದ ಫೋನ್ ಕರೆಯಿಂದಾಗಿ ಅಂದು RAW ತನ್ನ ಕಾರ್ಯಚರಣೆಯಿಂದ ಹಿಂದೆ ಸರಿದಿತ್ತು ಎಂದು ವರದಿ ಹೇಳುತ್ತದೆ.