'ಅಹಿಂದ ನಾಯಕ'ನನ್ನೂ ಬಿಡದ ಡಿ-ನೋಟಿಫಿಕೇಶನ್ ಮಾಯೆ!: ಸಿಎಂ ವಿರುದ್ಧ ಮತ್ತೊಂದು ದೂರು
ಸುದ್ದಿ ಸಾಗರ

'ಅಹಿಂದ ನಾಯಕ'ನನ್ನೂ ಬಿಡದ ಡಿ-ನೋಟಿಫಿಕೇಶನ್ ಮಾಯೆ!: ಸಿಎಂ ವಿರುದ್ಧ ಮತ್ತೊಂದು ದೂರು

ಅತ್ತ ಬರ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ, ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ 'ಭ್ರಷ್ಟಾಚಾರ ನಿಗ್ರಹ ದಳ' (ಎಸಿಬಿ)ದಲ್ಲಿ ದೂರೊಂದು ಮಂಗಳವಾರ ದಾಖಲಾಗಿದೆ.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ, ಬಿಡಿಎ ಸ್ವಾಧೀನದಲ್ಲಿದ್ದ 1. 31 ಎಕರೆ ಭೂಮಿಯನ್ನು ಡಿ- ನೋಟಿಫೈ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಮ್ ಭಟ್, ಮತ್ತಿತರ ಅಧಿಕಾರಿಗಳ ವಿರುದ್ಧ ವಕೀಲ ನಟರಾಜ್ ಶರ್ಮಾ ಎಂಬುವವರು ದೂರು ದಾಖಲಿಸಿದ್ದಾರೆ.

ಸಿದ್ದರಾಮಯ್ಯ ಅವರ ಸೂಚನೆಯಂತೆ, ಸದರಿ ಡಿ- ನೋಟಿಫಿಕೇಶನ್ ಕಳೆದ ಬಿಜೆಪಿ ಅಧಿಕಾರ ಅವಧಿಯಲ್ಲಿಯೇ ನಡೆದಿತ್ತು ಎಂದು ಬಿಂಬಿಸಲು ದಾಖಲೆಗಳನ್ನು ತಿದ್ದಲಾಗಿದೆ ಎಂದು ಗಂಭೀರ ಆರೋಪವೂ ದೂರಿನಲ್ಲಿದೆ.

ಏನಿದು ಹೊಸ ಪ್ರಕರಣ?: 

ಬೆಂಗಳೂರಿನ ಹೊರವಲಯದಲ್ಲಿರುವ ರಾಚೇನಹಳ್ಳಿ ಸರ್ವೆ ನಂ 83/1ರಲ್ಲಿನ 1. 31ಎಕರೆ ಭೂಮಿಯನ್ನು ಡಿ ನೋಟಿಫೈ ಮಾಡುವಂತೆ ಸಿ. ಕೃಷ್ಣಮೂರ್ತಿ ಎಂಬುವರು 2014ರ ಡಿಸೆಂಬರ್ 13 ರಂದು ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಬಿಡಿಎ ಆಯುಕ್ತರು 2013ರಲ್ಲಿ ಅರ್ಜಿ ಸ್ವೀಕರಿಸಿದಂತೆ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಜತೆಗೆ ಸರ್ವೆ ಮಾಡಿ ವರದಿ ಸಲ್ಲಿಸುವಂತೆ ವಿಶೇಷ ಭೂ ಸ್ವಾಧೀನಾಧಿಕಾರಿ ಬೋರಯ್ಯ ಎಂಬುವರಿಗೆ ಆದೇಶಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಆರು ಮಾರ್ಗಸೂಚಿಗಳ ವ್ಯಾಪ್ತಿಗೆ ಬರುವ ಬಗ್ಗೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಐವರು ಪಂಚರ ಸಮಕ್ಷಮದಲ್ಲಿ ಸರ್ವೆ ಮಾಡಿ ವರದಿ ನೀಡಬೇಕಿತ್ತು. ಬೋರಯ್ಯ ಯಾವುದೇ ಸರ್ವೆ ಕಾರ್ಯವನ್ನು ನಡೆಸದೇ 2012ರಲ್ಲಿಯೇ ಸರ್ವೆ ಮಾಡಿದಂತೆ ದಾಖಲೆಗಳನ್ನು ಸೃಷ್ಟಿಸಿ, ಡಿ- ನೋಟಿಫಿಕೇಷನ್‍ಗೆ ಶಿಫಾರಸು ಮಾಡಿದ್ದಾರೆ.

ಡಿ- ನೋಟಿಫೈ ಮಾಡಲು ಅರ್ಜಿಯನ್ನು ಸ್ವೀಕರಿಸಿರುವ ಬಿಡಿಎ ಅಧಿಕಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಬಿಂಬಿಸಲು ದಾಖಲೆಗಳನ್ನು ತಿರುಚಿ ಸಿಕ್ಕಿಬಿದ್ದಿದ್ದಾರೆ. ಮೂರು ಬಾರಿ ಸರ್ವೆ ಮಾಡಿ ಡಿ- ನೋಟಿಪಿಕೇಶನ್ಗೆ ಅನರ್ಹ ಎಂದು ವರದಿ ನೀಡಿದ್ದರೂ, ನಿಯಮ ಬಾಹಿರ ಸರ್ವೆ ವರದಿ ಲಗತ್ತಿಸಿ ಡಿ- ನೋಟಿಫೈ ಮಾಡಿ ಅಕ್ರಮ ಎಸಗಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ. ಎಲ್ಲಾ ದಾಖಲೆಗಳ ಸಮೇತ ಎಸಿಗೆ ದೂರು ನೀಡಿದ್ದೇನೆ. 

  • ನಟರಾಜ ಶರ್ಮಾ, ದೂರುದಾರ ವಕೀಲ.

ಈ ಪ್ರಕರಣ ಬಿಡಿಎ ಅಧ್ಯಕ್ಷ ವಿಜಯ ಭಾಸ್ಕರ್ ಅವರ ಮುಂದೆ ಬಂದಾಗ ಡಿ- ನೋಟಿಫಿಕೇಷನ್‍ಗೆ ಆಕ್ಷೇಪ ವ್ಯಕ್ತಡಿಸಿದ್ದಾರೆ. "ಡಿ- ನೋಟಿಫಿಕೇಶನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಂಪಣ್ಣ ಆಯೋಗ ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಬಿಡಿಎ ಸ್ವಾಧೀನದಿಂದ ಕೈ ಬಿಡುವುದು ಸರಿಯಲ್ಲ. ಈ ಕುರಿತು ಚರ್ಚಿಸುವುದು ಸೂಕ್ತ,'' ಎಂದು ಅವರು ಕಡತಕ್ಕೆ ಟಿಪ್ಪಣಿ ಹಾಕಿದ್ದಾರೆ.

ಇದ್ಯಾವುದನ್ನು ಲೆಕ್ಕಿಸದೇ ಬಿಡಿಎ ಆಯುಕ್ತ ಶ್ಯಾಮ್‍ಭಟ್, ರಾಚೇನಹಳ್ಳಿಯ 1.31 ಎಕರೆ ಭೂಮಿಯನ್ನು ಡಿ-ನೋಟಿಪೈ ಮಾಡಿ 'ನಿರಪೇಕ್ಷಣಾ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯ ಅನುಮೋದನೆ ದೊರೆತಿದೆ. ಇದಿಷ್ಟು ದೂರಿನ ಸಾರಾಂಶ.

ಅತಂತ್ರ ಎಸಿಬಿ:

ಪ್ರಕರಣವೇನೋ ಎಸಿಬಿಯಲ್ಲಿ ದಾಖಲಾಗಿದೆ. ಆದರೆ ತನಿಖೆ ನಡೆಸಬೇಕಿರುವ ಭ್ರಷ್ಟಾಚಾರ ನಿಗ್ರಹ ದಳ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡಿಲ್ಲ. ಈವರೆಗೆ ಒಬ್ಬರು ಡಿಐಜಿ (ಸಲೀಂ), ಒಬ್ಬರು ಎಡಿಜಿಪಿ (ಗಗನ್ ದೀಪ್), ಬೆಂಗಳೂರು ನಗರ ಎಸ್ಪಿ (ಲಾಬೂರಾಮ್) ಬಿಟ್ಟರೆ 10 ಜನ ಪಿಐಗಳು ಹಾಗೂ 15 ಸಿಬ್ಬಂದಿ ಮಾತ್ರ ಇದ್ದಾರೆ. ಖನಿಜ ಭವನದ ಚಿಕ್ಕ ಜಾಗದಲ್ಲಿ ಎಸಿಬಿ ಕಾರ್ಯನಿರ್ವಹಿಸುತ್ತದೆ. ಇತ್ತ, ತನಿಖೆಯ ಸಾಮರ್ಥ್ಯ ಹೊಂದಿರುವ ಲೋಕಾಯುಕ್ತ ಪೊಲೀಸ್ ಘಟಕದಲ್ಲಿ ಜೀವಂತಿಕೆ ನಾಶವಾಗಿದೆ.

ದಿನದಿಂದ ದಿನಕ್ಕೆ ಎಸಿಬಿಯಲ್ಲಿ ದೂರುಗಳು ದಾಖಲಾಗುತ್ತಿದ್ದರೂ, ಅದನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಮಾತ್ರ ಸರಕಾರ ನೀಡಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ.