'ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ' ಅರ್ಥ ಮಾಡಿಕೊಳ್ಳಲು 6 ಸರಳ ಪ್ರಶ್ನೆಗಳು!
ಸುದ್ದಿ ಸಾಗರ

'ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ' ಅರ್ಥ ಮಾಡಿಕೊಳ್ಳಲು 6 ಸರಳ ಪ್ರಶ್ನೆಗಳು!

ವಿವಿಐಪಿಗಳ ಓಡಾಟಕ್ಕಾಗಿ ಯುಪಿಎ ಸರಕಾರ ಖರೀದಿಸಿದ್ದ ಹೆಲಿಕ್ಯಾಫ್ಟರ್ ಸುತ್ತ ಮತ್ತೊಂದು ಸುತ್ತಿನ ವಿವಾದ ಬುಗಿಲೆದ್ದಿದೆ.

ಯುಕೆ ಮೂಲದ ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಗೆ ಹೆಲಿಕ್ಯಾಫ್ಟರ್ ಒದಗಿಸಲು ಸುಮಾರು 3, 727 ಕೋಟಿ ರೂಪಾಯಿ ಟೆಂಡರ್ ನೀಡಿತ್ತು. ಈ ವಿಚಾರದಲ್ಲಿ ಕಂಪನಿಯು ಸುಮಾರು 350 ಕೋಟಿ ಲಂಚ ನೀಡಿದೆ ಎಂದು ಇಟಲಿಯ ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಾಖಲೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ಧ ವಾಗ್ಧಾಳಿಗೆ ಮುಂದಾಗಿದೆ. ವಿಚಾರವನ್ನು ಅಧಿವೇಶನದಲ್ಲಿ ಬಳಸಿಕೊಳ್ಳಲು ಆಡಳಿತ ಪಕ್ಷ ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಏನಿದು ಆಗಸ್ಟಾ ಹೆಲಿಕ್ಯಾಫ್ಟರ್ ಹಗರಣ? ಸಂಪೂರ್ಣ ವಿವರವನ್ನು ಅತ್ಯಂತ ಸರಳವಾಗಿ 'ಸಮಾಚಾರ' ಇಲ್ಲಿ ಕಟ್ಟಿ ಕೊಡಲಿದೆ:

  1. ಏನಿದು ಹಗರಣ?: 2010ರಲ್ಲಿ ಇಟಲಿ ಸೈನ್ಯದ ಜತೆ ಒಡಂಬಡಿಕೆ ಮಾಡಿಕೊಂಡಿರುವ ಫಿನ್ಮೆಸಾನಿಕ ಕಂಪನಿ ಜತೆ ಹೆಲಿಕ್ಯಾಫ್ಟರ್ಗಳನ್ನು ಒದಗಿಸುವ ಕುರಿತು ಭಾರತ ಒಪ್ಪಂದವೊಂದಕ್ಕೆ ಸಹಿ ಹಾಕಿತು. ಈ ಟೆಂಡರ್ನಲ್ಲಿ ಅಮೆರಿಕಾ ಮೂಲದ ಸಿಕೋರ್ಸ್ಕಿ ಕಂಪನಿ ಕೂಡ ಪಾಲ್ಗೊಂಡಿತ್ತು. ಒಟ್ಟು 3, 727 ಕೋಟಿ ಮೌಲ್ಯದ ಈ ಟೆಂಡರ್ ವಿವಿಐಪಿಗಳ ಓಡಾಟಕ್ಕಾಗಿ ಹೆಲಿಕ್ಯಾಫ್ಟರ್ಗಳನ್ನು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.


  2. ವಿವಾದ ಏನು?: ಇದೀಗ ಇಟಲಿಯ ಉಚ್ಚ ನ್ಯಾಯಾಲಯ ಫಿನ್ಮೆಸಾನಿಕ ಕಂಪನಿಯ ಮಾಜಿ ಅಧ್ಯಕ್ಷ ಗ್ಯಿಸೆಪ್ಪೆ ಓರ್ಸಿ ಹಾಗೂ ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಯ ಮಾಜಿ ಸಿಇಓ ಸ್ವಾಗ್ನೋಲಿನಿ ಭಾರತದ ಜತೆ ನಡೆದ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಶಿಕ್ಷೆ ವಿಧಿಸಿದೆ. ಜತೆಗೆ, ಪ್ರಕರಣದ ತನಿಖೆಗೆ ಯುಪಿಎ ಸರಕಾರ ಸೂಕ್ತ ದಾಖಲೆಗಳನ್ನು ಒದಗಿಸಲಿಲ್ಲ ಎಂದು ದೂರಿದೆ.


  3. ಟೆಂಡರ್ ಏನಾಯ್ತು?: ಪ್ರಕರಣ ಸದ್ದು ಮಾಡುತ್ತಿದ್ದಂತೆ ಫೆಬ್ರವರಿ 2013ರಲ್ಲಿಯೇ ವಿವಿಐಪಿಗಳಿಗೆ ಹೆಲಿಕ್ಯಾಫ್ಟರ್ ಒದಗಿಸುವ ಒಪ್ಪಂದವನ್ನು ತಡೆ ಹಿಡಿಯಲಾಯಿತು. ಜನವರಿ 2014ರಲ್ಲಿ ಟೆಂಡರ್ ರದ್ಧುಗೊಳಿಸಲಾಯಿತು. ಈ ಸಮಯದಲ್ಲಿ ಸದರಿ ಕಂಪನಿಗಳು ಮಧ್ಯವರ್ತಿಗಳ ಮೂಲಕ 375 ಕೋಟಿ ಲಂಚ ನೀಡಿದ್ದಾಗಿ ಆರೋಪಿಸಿದ್ದವು.


  4. ಯಾರಿಗೆ ಲಂಚ?: ಪ್ರಕರಣದಲ್ಲಿ ತನಿಖಾಧಿಕಾರಿಗಳು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಗೈಡೋ ಎಂಬಾತನನ್ನು ಬಂಧಿಸಿದ್ದರು. ಈತನಿಂದ ವಶಪಡಿಸಿಕೊಂಡು ಕೈ ಬರಹದ ದಾಖಲೆಗಳಲ್ಲಿ 'ಪೋಲ್', 'ಎಪಿ' ಹಾಗೂ 'ಎಫ್ಎಎಂ' ಎಂಬುವವರಿಗೆ ಲಂಚ ನೀಡಿದ್ದಾಗಿ ದಾಖಲಿಸಿಕೊಳ್ಳಲಾಗಿತ್ತು. ಇವೆಲ್ಲವೂ ಭಾರತದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಇನಿಶಿಯಲ್ಗಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು. ಅವತ್ತಿನ ವಾಯುಸೇನೆಯ ಮುಖ್ಯಸ್ಥರಾಗಿದ್ದ ಎಸ್. ಪಿ. ತ್ಯಾಗಿ ಮತ್ತು ಕುಟುಂಬದವರ ಮೇಲೆ ಆರೋಪ ಕೇಳಿ ಬಂದಿತ್ತು.


  5. ಸಿಎಜಿ ವರದಿ ಏನು ಹೇಳಿತ್ತು?: 2013ರ ಆಗಸ್ಟ್ ತಿಂಗಳಿನಲ್ಲಿ ಹೊರಬಂದ ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವಿಐಪಿಗಳ ಓಡಾಟಕ್ಕೆ ಖರೀದಿಸಲು ಹೊರ ಹೆಲಿಕ್ಯಾಫ್ಟರ್ ಟೆಂಡರ್ನಲ್ಲಿ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿತ್ತು. 2006ರಲ್ಲಿ ವಾಯುಸೇನೆಯ ಖರೀದಿ ನೀತಿಯಲ್ಲಿ ಬದಲಾವಣೆ ತಂದಿದ್ದು ಹಗರಣಕ್ಕೆ ಮೂಲ ಕಾರಣ ಎಂದು ಉಲ್ಲೇಖಿಸಿತ್ತು.


  6. ಸೋನಿಯಾ ಪಾತ್ರವೇನು?: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರೂ ಇದೀಗ ಹಗರಣದಲ್ಲಿ ಕೇಳಿಬಂದಿದೆ. ಇಟಲಿಯ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ 'ಗಾಂಧಿ' ಹೆಸರು ನಮೂದಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೇ ಅಧಿವೇಶನದಲ್ಲೂ ಚರ್ಚೆಗೆ ತರಲು ಪಕ್ಷ ಮುಂದಾಗಿದೆ.