ಸುದ್ದಿ ಸಾಗರ

ಡಿ-ನೋಟಿಫಿಕೇಶನ್ ಮೇಲ್ಮನವಿ: ಯಡ್ಡಿ ಕಣ್ಣಿಗೆ ಸುಣ್ಣ; ಡಿಕೆಶಿ ಕಣ್ಣಿಗೆ ಬೆಣ್ಣೆ?

'ಒಂದು ಕಣ್ಣಿಗೆ ಸುಣ್ಣ; ತನ್ನ ಕಣ್ಣಿಗೆ ಮಾತ್ರ ಬೆಣ್ಣೆ' ಎಂಬಂತಿದೆ ಡಿ- ನೋಟಿಫಿಕೇಶನ್ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವ ರಾಜ್ಯ ಸರಕಾರದ ನಿಲುವು.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿರುದ್ಧದ ಡಿ- ನೋಟಿಫಿಕೇಶನ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸರಕಾರ, ತನ್ನದೇ ಸಂಪುಟ ಸಚಿವ ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಈ ಗಟ್ಟಿತನವನ್ನು ತೋರಿಸಿಲ್ಲ ಎಂಬ ದೂರುಗಳೀಗ ಕೇಳಿ ಬರುತ್ತಿವೆ.

ವಿವಾದಕ್ಕೆ ಕಾರಣವಾಗಿದ್ದ ಬೆನ್ನಿಗಾನಹಳ್ಳಿ ಡಿ- ನೋಟಿಫಿಕೇಶನ್ ಪ್ರಕರಣದಲ್ಲಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಕೇಳಿಬಂದಿತ್ತು. ಪ್ರಕರಣವನ್ನು ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಆದರೆ, ಪ್ರಕ್ರಿಯೆಗಳನ್ನು ಹೈ ಕೋರ್ಟ್ ರದ್ಧುಗೊಳಿಸಿತ್ತು. ಆದರೆ, ಸರಕಾರ ಈವರೆಗೂ ಡಿ. ಕೆ. ಶಿವಕುಮಾರ್ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರು ಪೂರ್ವ ತಾಲೂಕಿನ ಕೃಷ್ಣರಾಜಪುರ ಹೋಬಳಿಯ ಸರ್ವೆ ನಂ 5/2ರಲ್ಲಿದ್ದ 5 ಎಕರೆ 11 ಗುಂಟೆ ಜಾಗವನ್ನು ರೈತ ಬಿ. ಕೆ. ಶ್ರೀನಿವಾಸನ್‍ಎಂಬುವರು 1962ರಲ್ಲಿ ಖರೀದಿಸಿದ್ದರು. ಬಳಿಕ 1988ರಲ್ಲಿ ಬಿಡಿಎ ಈ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತ್ತು. 2003ರಲ್ಲಿ 4. 20 ಎಕರೆ ಜಾಗವನ್ನು 1. 61 ಕೋಟಿ ರೂಪಾಯಿಗೆ ಡಿಕೆಶಿ ಖರೀದಿ ಮಾಡಿದ್ದರು. ನಂತರ 2010ರ ಮೇ 13ರಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಿ, ಬಿಡಿಎ ಸ್ವತ್ತಿನಿಂದ ಕೈಬಿಡುವ ತೀರ್ಮಾನ ತೆಗೆದುಕೊಂಡಿದ್ದರು. ಇದರಲ್ಲಿ ಅಕ್ರಮ ನಡೆದಿದೆ ಎಂದು ಕಬ್ಟಾಳೆ ಗೌಡ ಮತ್ತು ಟಿ. ಜೆ. ಅಬ್ರಹಾಂ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 2012ರ ಮಾ.5 ಮತ್ತು 6ರಂದು ಪ್ರತ್ಯೇಕ ಖಾಸಗಿ ದೂರು ದಾಖಲಿಸಿದ್ದರು.

  • ಬೆನ್ನಿಗಾನಹಳ್ಳಿ ಪ್ರಕರಣಕ್ಕೆ ಕಾರಣೀಭೂತರೇ ಮಾನ್ಯ ಡಿ. ಕೆ. ಶುವಕುಮಾರರು. ಈಗ ಅವರನ್ನು ಬಿಟ್ಟು ಬರೀ ಯಡಿಯೂರಪ್ಪ ಅವರನ್ನು ಮಾತ್ರವೇ ಪರಿಗಣಿಸಿ ಮೇಲ್ಮನವಿ ಸಲ್ಲಿಸುವುದು ನ್ಯಾಯಕ್ಕೆ ಎಸಗುವ ಅಪಚಾರ. ಈ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರದ ಸತ್ವ ಪರೀಕ್ಷೆ ನಡೆಯಲಿದೆ. 

  • ಎಸ್. ಆರ್ ಹಿರೇಮಠ್,ಸಮಾಜ ಪರಿವರ್ತನಾ ಸಮುದಾಯ

ಆರೋಪವೇನು?:

ಜಮೀನು ಖರೀದಿಸಿದ್ದ ಡಿ. ಕೆ. ಶಿವಕುಮಾರ್‍ ತಾವೇ ಈ ಜಮೀನು ಮಾಲೀಕರು ಎಂಬ ಸತ್ಯವನ್ನು ಮರೆ ಮಾಚಿದ್ದರು. ಜಮೀನಿನ ಮೂಲ ಮಾಲೀಕ ಶ್ರೀನಿವಾಸನ್ ಮೃತಪಟ್ಟ ನಂತರವೂ, ಅವರ ಹೆಸರಿನಲ್ಲಿ ಡಿ- ನೋಟಿಫಿಕೇಶನ್ಗೆ ಅರ್ಜಿ ಸಲ್ಲಿಸಿದ್ದರು.  ಶಾಸಕ ಸ್ಥಾನ ದುರುಪಯೋಗ ಪಡಿಸಿಕೊಂಡು ಬಿಡಿಎ ಸ್ವಾಧೀನದಲ್ಲಿದ್ದ ಈ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಜತೆಗೆ, ರಿಯಲ್ ಎಸ್ಟೇಟ್ ಕಂಪನಿ ಜತೆ ಆ ಜಾಗದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಸಚಿವರು ಹೊರಟಿದ್ದರು ಎಂದು ದೂರಲಾಗಿತ್ತು.

ಸದರಿ ಜಮೀನನ್ನು ಯಡಿಯೂರಪ್ಪ ಹಣ ಪಡೆದು ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂದು ದೂರುರಾರರು ಆರೋಪಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಹಾಗೂ ಯಡಿಯೂರಪ್ಪ ವಿರುದ್ಧ ತನಿಖೆಗೆ ಆದೇಶಿಸಿತ್ತು. ತನಿಖೆ ನಂತರ ದೋಷರೋಪ ಪಟ್ಟಿಯೂ ಸಲ್ಲಿಕೆಯಾಗಿತ್ತು.

ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಡಿ. ಕೆ. ಶಿವಕುಮಾರ್ ಮತ್ತು ಬಿಎಸ್‍ವೈ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್, ಇಬ್ಬರ ಮೇಲೂ ವಿಚಾರಣೆ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಆದೇಶ ನೀಡಿತ್ತು.

ಯಾಕೆ ಹೀಗೆ?: 

ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿದೆ. ಆದರೆ, ಅದೇ ಕ್ರಮವನ್ನು ತನ್ನದೇ ಸಂಪುಟ ಸಚಿವ ಡಿ. ಕೆ. ಶಿವಕುಮಾರ್ ವಿರದ್ಧ ಯಾಕೆ ತೆಗೆದುಕೊಳ್ಳಲಿಲ್ಲ ಎಂಬುದು ಸದ್ಯದ ಪ್ರಶ್ನೆ.

ದಾವಣಗೆರೆ ವರದಿ:

ಈ ಕುರಿತು ಶನಿವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಇಂಧನ ಸಚಿವ ಡಿ. ಕೆ. ಶಿವಕುಮಾರ್, "ನನ್ನ ವಿರುದ್ಧ ಸರಕಾರ ಮೇಲ್ಮನವಿ ಹೋಗುವುದಾದರೆ ಹೋಗಲಿ. ನಾನು ಯಾರಿಗೂ ಅಡ್ಡಿ ಪಡಿಸುವುದಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ,'' ಎಂದಿದ್ದಾರೆ.