ವಿಜಯ್ ಮಲ್ಯ ವಿದೇಶಿ ಆಸ್ತಿ ಮೌಲ್ಯ 780 ಕೋಟಿ ರೂಪಾಯಿಗಳಂತೆ!
ಸುದ್ದಿ ಸಾಗರ

ವಿಜಯ್ ಮಲ್ಯ ವಿದೇಶಿ ಆಸ್ತಿ ಮೌಲ್ಯ 780 ಕೋಟಿ ರೂಪಾಯಿಗಳಂತೆ!

ಬ್ಯಾಂಕುಗಳು ತನ್ನ ಆಸ್ತಿ ವಿವರ ಕೇಳುವ ಹಾಗಿಲ್ಲ ಎಂದು ಗುರುವಾರ ಉಲ್ಟಾ ಹೊಡೆದಿದ್ದ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಇದೀಗ ಸುಪ್ರೀಂ ಕೋರ್ಟ್ಗೆ ತನ್ನ ವಿದೇಶಿ ಆಸ್ತಿ ವಿವರ ನೀಡಿದ್ದಾರೆ.

ಇದೇ ವೇಳೆ, ಬಂಧನದ ಭೀತಿ ಎದುರಿಸುತ್ತಿರುವ ಮಲ್ಯ, ಬ್ಯಾಂಕ್ ಗಳಿಗೆ ಬಾಕಿ ಉಳಿಸಿಕೊಂಡಿರುವ ಸಾಲದಲ್ಲಿ 6,868 ಕೋಟಿ ರೂಪಾಯಿಗಳನ್ನು ಪಾವತಿಸುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.ಈ ಮೊದಲು 4,400 ಕೋಟಿ ರೂಪಾಯಿ ನೀಡುವುದಾಗಿ ಮಲ್ಯ ಸುಪ್ರೀಂಕೋರ್ಟ್ ಮೂಲಕ ಬ್ಯಾಂಕ್ ಗಳಿಗೆ ಆಫರ್ ನೀಡಿದ್ದರು.

ವಿದೇಶದಿಂದ ಭಾರತಕ್ಕೆ ವಾಪಸ್ ಆಗುವ ಕುರಿತ ಕೋರ್ಟ್ ಕೇಳಿದ ಪ್ರಶ್ನೆ ಬಗ್ಗೆ ಮಲ್ಯ ಮತ್ತೆ ಮೌನ ತಾಳಿದ್ದಾರೆ. ವಿದೇಶಗಳಲ್ಲಿರುವ ತನ್ನ ಇಡೀ ಕುಟುಂಬದ ಆಸ್ತಿಮೊತ್ತ 780 ಕೋಟಿ ರೂಪಾಯಿ ಎಂದು ಮಲ್ಯ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಲ್ಲದೇ, ಬ್ಯಾಂಕ್'ಗಳಿಂದ ಪಡೆದ ಸಾಲಗಳಿಂದ ತಮ್ಮ ಕುಟುಂಬದ ಯಾವ ಆಸ್ತಿಯನ್ನೂ ಅಭಿವೃದ್ಧಿಪಡಿಸಿಲ್ಲ ಎಂದೂ ಮಲ್ಯ ಸ್ಪಷ್ಟಪಡಿಸಿದ್ದಾರೆ ಎಂದು 'ದಿ ಎಕನಾಮಿಕ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

ಇದೇ ವೇಳೆ, ಭಾರತಕ್ಕೆ ಮರಳಬೇಕೆಂಬ ಮನವಿಯನ್ನು ವಿಜಯ್ ಮಲ್ಯ ತಿರಸ್ಕರಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಇಲಾಖೆಯು ತನಗೆ ಶೋಕಾಸ್ ನೋಟೀಸನ್ನೂ ನೀಡದೇ ತನ್ನ ಪಾಸ್'ಪೋರ್ಟ್ ಅಮಾನತುಗೊಳಿಸಿದ್ದು ಏಕಪಕ್ಷೀಯ ಕ್ರಮವಾಗಿತ್ತು. ಅಲ್ಲದೇ, ಸುಳ್ಳು ಪ್ರಕರಣದಲ್ಲಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯವು ಜಾಮೀನುರಹಿತ ವಾರಂಟ್ ನೀಡಿದೆ ಎಂದು ವಿಜಯ್ ಮಲ್ಯ ಈ ವೇಳೆ ಅಸಮಾಧಾನ ತೋಡಿಕೊಂಡಿದ್ದಾರೆನ್ನಲಾಗಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟಕ್ಕೆ ಅಧಿಕ ವೈಮಾನಿಕ ಇಂಧನ ಬೆಲೆ ಕಾರಣ ವಿಜಯ್ ಮಲ್ಯ ವಾದ ಮಂಡಿಸಿದ್ದಾರೆ. ಬ್ಯಾಂಕುಗಳ ಕೋರಿಕೆ ಹಿನ್ನೆಲೆಯಲ್ಲಿ ಏ.21ರ ಗುರುವಾರದೊಳಗೆ ತಮ್ಮ ಎಲ್ಲ ಆಸ್ತಿ ವಿವರ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಮಲ್ಯಗೆ ಸೂಚಿಸಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮಲ್ಯ, ಇದು ತಾನು ನೀಡುತ್ತಿರುವ ಅತ್ಯುತ್ತಮ ಆಫರ್ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ 9 ಸಾವಿರ ಕೋಟಿ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ಹೆಂಡದ ದೊರೆ ವಿಜಯ ಮಲ್ಯ ಅವರನ್ನು ಬ್ರಿಟನ್ನಿಂದ ಗಡೀಪಾರು ಮಾಡಿಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ.), ಭಾರತದ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದೆ. ವಿಜಯ್ ಮಲ್ಯ ಅವರಿಗೆ ಒಟ್ಟು 17 ಬ್ಯಾಂಕ್ ಗಳು 9 ಸಾವಿರ ಕೋಟಿ ರೂಪಾಯಿ ಸಾಲ ನೀಡಿದ್ದವು.