ಭಾರತ- ಚೀನಾ ಸಂಬಂಧಕ್ಕೆ ಬೆಂಕಿ ಇಡಲಿರುವ ಧರ್ಮಶಾಲ ಸಮ್ಮೇಳನ!
ಸುದ್ದಿ ಸಾಗರ

ಭಾರತ- ಚೀನಾ ಸಂಬಂಧಕ್ಕೆ ಬೆಂಕಿ ಇಡಲಿರುವ ಧರ್ಮಶಾಲ ಸಮ್ಮೇಳನ!

ವಿದೇಶಾಂಗ

ನೀತಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ, ಚೀನಾಕ್ಕೆ ಬೇಕಾಗಿರುವ 'ಭಯೋತ್ಪಾದಕ'ನಿಗೆ ಭಾರತ ವೀಸಾ ನೀಡಿದೆ.

ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ 'ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ'ದಲ್ಲಿ 'ಜಾಗತಿಕ ಐಘೂರ್ ಕಾಂಗ್ರೆಸ್' ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ಪಾಲ್ಗೊಳ್ಳಲು ಅನುಮತಿ ನೀಡಿದೆ. ಈ ಮೂಲಕ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಚೀನಾ ವಿಚಾರದಲ್ಲಿ ಗಟ್ಟಿ ನಿಲುವನ್ನು ತಳೆದಿದೆ.

ಧರ್ಮಶಾಲದಲ್ಲಿ ನಡೆಯಲಿರುವ ಇದೇ ಸಮ್ಮೇಳನದಲ್ಲಿ ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ಟಿಬೇಟ್ ಧರ್ಮಗುರು ದಲೈಲ್ ಲಾಮ ಕೂಡ ಮುಖ್ಯ ಭಾಷಣ ಮಾಡಲಿದ್ದಾರೆ.

ಸಂಘ ಖುಷ್:

ಭಾರತದ ಈ ತೀರ್ಮಾನದಿಂದ ಸಂಘಪರಿವಾರಕ್ಕೆ ಸಂತೋಷವಾಗಲಿದೆ. ಆರಂಭದಿಂದಲೂ ಯುಪಿಎ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದ ನರೇಂದ್ರ ಮೋದಿ ಅವರ ನಡೆಗೆ, ಆರ್ ಎಸ್ ಎಸ್ ಅಸಮಾಧಾನ ವ್ಯಕ್ತಪಡಿಸುತ್ತ ಬಂದಿತ್ತು. ಇದೀಗ ಚೀನಾ ಸರಕಾರ 'ಭಯೋತ್ಪಾದಕ' ಎಂದು ಘೋಷಿಸಿರುವ ಐಘೂರ್ ಪ್ರತ್ಯೇಕತಾ ಹೋರಾಟಗಾರ ದೋಲ್ಕನ್ ಇಸಾಗೆ, ವೀಸಾ ನೀಡುವ ಮೂಲಕ ಚೀನಾ ವಿರುದ್ಧ ಭಾರತ ವಿದೇಶಾಂಗ ಸಚಿವಾಯ ಎದೆ ಉಬ್ಬಿಸಿ ನಿಂತಿದೆ. ಇದು ಚೀನಾ ವಿರೋಧಿ ಸಂಘಪರಿವಾರಕ್ಕೆ ಖುಷಿ ನೀಡುವ ಮೋದಿ ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ಥಿಕವಾಗಿ ಹಾಗೂ ಸೈನಿಕ ಬಲದಲ್ಲಿ ಭಾರತ ಚೀನಾಕ್ಕಿಂತ ಕೆಳಮಟ್ಟದಲ್ಲಿದೆ. ಆದರೆ ಇತ್ತೀಚೆಗೆ ಅಮೆರಿಕಾ ಜತೆಗಿನ ಉತ್ತಮ ಸಂಬಂಧ ಈ ನಡೆಗೆ ಕಾರಣ ಎಂದು ವಿದೇಶಾಂಗ ನೀತಿಯನ್ನು ಗಮನಿಸುತ್ತಿರುವವರು ಅಭಿಪ್ರಾಯ ಪಡುತ್ತಾರೆ. "ಮುಂದಿನ ದಿನಗಳಲ್ಲಿ ಏಷಿಯಾವನ್ನು ಕೇಂದ್ರವಾಗಿಟ್ಟುಕೊಂಡು ಅಮೆರಿಕಾ ಸೇನಾ ನೆಲೆಯೊಂದನ್ನು ರಚಿಸುವ ಹಾದಿಯಲ್ಲಿದೆ. ಇದರಲ್ಲಿ ಭಾರತದ ಕೊಡುಗೆ ಅಪಾರವಾಗಿರಲಿದೆ. ಹೀಗಾಗಿ ಇವತ್ತು ಚೀನಾ ವಿರುದ್ಧ ಭಾರತ ಎದೆ ಸೆಟೆದು ನಿಲ್ಲುವ ಮೂಲಕ ಸಂದೇಶವೊಂದನ್ನು ಕಳುಹಿಸಿದೆ,'' ಎಂದು ವಿದೇಶಾಂಗ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು 'ಸಮಾಚಾರ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಭವಿಷ್ಯ ಬಿಕ್ಕಟ್ಟು:

"ಮಸೂದ್ ಅಝರ್ ಪ್ರಕರಣ ಹಾಗೂ ಹಿಮಾಚಲ ಪ್ರದೇಶದ ಗಡಿ ವಿಚಾರದಲ್ಲಿ ಚೀನಾ ಪಾಕಿಸ್ತಾನದ ಪರವಾಗಿ ವಿಶ್ವಸಂಸ್ಥೆಯಲ್ಲಿ ವಕಾಲತ್ತು ವಹಿಸಿತ್ತು. ಇದಕ್ಕೀಗ ಭಾರತ ಸರಿಯಾದ ಉತ್ತರವನ್ನು ನೀಡಿದೆ,'' ಎಂದು ಸಂಪುಟ ಕಾರ್ಯದರ್ಶಿ ನರೇಶ್ ಚಂದ್ರ ಹೇಳಿದ್ದಾರೆ.

ಮುಂದಿನ ತಿಂಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚೀನಾ ಭೇಟಿ ನಿಗದಿಯಾಗಿತ್ತು. ಚೀನಾ ಆಶಯಕ್ಕೆ ವಿರುದ್ಧವಾಗಿ ಇಸಾಗೆ ವೀಸಾ ನೀಡಿರುವದರಿಂದ  ಭವಿಷ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೇಟಿ ವಿಚಾರ ಡೋಲಾಯಮಾನವಾಗಿದೆ.

ಏನಿದು ಐಘೂರ್ ಹೋರಾಟ?:

ಭಾರತ- ಚೀನಾ ಸಂಬಂಧಕ್ಕೆ ಬೆಂಕಿ ಇಡಲಿರುವ ಧರ್ಮಶಾಲ ಸಮ್ಮೇಳನ!

ಚೀನಾದ ಝಿನ್ಜಿಂಗ್ ಪ್ರಾಂಥ್ಯದಲ್ಲಿ ಬಹುಸಂಖ್ಯಾತರಾಗಿರುವ ಟರ್ಕಿಕ್ ಪಂಗಡಕ್ಕೆ ಸೇರಿದ ಮುಸ್ಲಿಂ ಸಮುದಾಯ 1990ರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿದೆ. 'ಐಘೂರ್ ಪ್ರತ್ಯೇಕತಾ ಹೋರಾಟ' ಎಂದು ಗುರುತಿಸುವ ಇದನ್ನು ಮುನ್ನಡೆಸುತ್ತಿರುವುದು ದೋಲ್ಕನ್ ಇಸಾ. ಸದ್ಯ ಚೀನಾದಿಂದ ಗಡೀಪಾರಾಗಿರುವ ಇಸಾ ಜರ್ಮನ್ ಪ್ರಜೆಯಾಗಿ ಬದುಕು ನಡೆಸುತ್ತಿದ್ದಾರೆ. ಚೀನಾ ನಡೆಸುತ್ತಿರುವ ಮಾನವ ಹಕ್ಕು ದಮನದ ವಿರುದ್ಧ ಅಂತರಾಷ್ಟ್ರೀಯ ಅಭಿಪ್ರಾಯ ರೂಪಿಸುತ್ತಿದ್ದಾರೆ. ಇವರನ್ನು 'ಭಯೋತ್ಪಾದಕ' ಎಂದು ಚೀನಾ ಘೋಷಿಸಿದೆ.