samachara
www.samachara.com
'ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ': ಈಗ ಬೀದಿಗೆ ಇಳಿದಿದ್ದು ಖಾಕಿ ಪಡೆ!
ಸುದ್ದಿ ಸಾಗರ

'ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ': ಈಗ ಬೀದಿಗೆ ಇಳಿದಿದ್ದು ಖಾಕಿ ಪಡೆ!

samachara

samachara

ಗಾರ್ಮೆಂಟ್ಸ್

ಮಹಿಳೆಯರ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಬೀದಿಗೆ ಇಳಿದಿದ್ದಾರೆ.

ಬೆಂಗಳೂರು ಉತ್ತರ ವಲಯದಲ್ಲಿ ಪೀಣ್ಯ, ಯಶವಂತಪುರ, ಆರ್ ಎಂ ಸಿ ಯಾರ್ಡ್, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ, ಬೆಂಗಳೂರು ಆಗ್ನೇಯ ವಲಯದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಎಚ್. ಎಸ್. ಆರ್. ಲೇಔಟ್, ಮೈಕೋ ಲೇ ಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬರುವ ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 50 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ ಅಧಿಕೃತವಾಗಿಯೇ 200 ದಾಟಿದೆ.

ಗುರುವಾರ ರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಬೆಂಗಳೂರು ಉತ್ತರ, ಆಗ್ನೇಯ ಹಾಗೂ ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಗಳಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ತೆರಳಿ ಬಂಧನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ನಡೆದ ಶಾಂತಿಯುತ ಪ್ರತಿಭಟನೆ ಆರಂಭದಲ್ಲಿ ತೆಗೆದುಕೊಂಡಿದ್ದ ವಿಡಿಯೋವನ್ನು ಇದಕ್ಕೆ ಆಧಾರವಾಗಿ ತನಿಖಾಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರತಿಭಟನೆಯಲ್ಲಿ ಘೋಷಣೆ ಕೂಗುತ್ತಿದ್ದವರನ್ನು ಪೊಲೀಸರು ಗುರಿಯಾಗಿಸಿಕೊಂಡು ಬಂಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗಾರ್ಮೆಂಟ್ಸ್ ಫ್ಯಾಕ್ಟರಿಗಳಿರುವ ಪೀಣ್ಯ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ಅಕ್ಷರಶಃ ಖಾಕಿ ಸಾಮ್ರಾಜ್ಯವೇ ನಿರ್ಮಾಣವಾಗಿದ್ದು, ನೌಕರರು ಆತಂಕದಿಂದ ದಿನಗಳನ್ನು ದೂಡುವ ಸ್ಥಿತಿಗೆ ತಲುಪಿದ್ದಾರೆ. "ನಿನ್ನೆ ರಾತ್ರಿಯಿಂದ ಕರೆ ಬಂದರೂ ಸ್ವೀಕರಿಸುವುದಕ್ಕೆ ಭಯವಾಗುತ್ತಿದೆ. ಸಿಕ್ಕಸಿಕ್ಕವರನ್ನು ಬಂಧಿಸಿ ಎಳೆದೊಯ್ಯುತ್ತಿದ್ದಾರೆ. ಠಾಣೆಯಲ್ಲಿ ಅವರಿಗೆ ಸರಿಯಾಗಿ ಹೊಡೆಯುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ,'' ಎಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಯೋಗಿ ಒಬ್ಬರು 'ಸಮಾಚಾರ'ಕ್ಕೆ ತಿಳಿಸಿದ್ದಾರೆ.

  • ಮುಂದುವರಿದ ಗಾರ್ಮೆಂಟ್ಸ್ ನೌಕರರ ಬಂಧನ
  • ಘೋಷಣೆ ಕೂಗಿದವರೇ ಪೊಲೀಸರ ಟಾರ್ಗೆಟ್
  • 50ಕ್ಕೂ ಹೆಚ್ಚು ಪ್ರಕರಣಗಲ್ಲಿ 200ಕ್ಕೂ ಹೆಚ್ಚು ಅರೆಸ್ಟ್
  • ಬಂಧನಕ್ಕೊಳಗಾದವರಿಗೆ ಬೇರೆ ಕಡೆ 'ಟ್ರೀಟ್ಮೆಂಟ್'

ಶುಕ್ರವಾರ ಬೆಳಗ್ಗೆ ಪೀಣ್ಯ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಕೆಲಸಕ್ಕೆ ಬಂದ ಕೆಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆಯುವ ಸಮಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಫ್ಯಾಕ್ಟರಿ ಮ್ಯಾನೇಜರ್ಗಳ ಮಧ್ಯ ಪ್ರವೇಶದಿಂದ ಕೆಲವು ಮಹಿಳೆಯರನ್ನು ಬಜಾವ್ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂಧನ ಕಾರ್ಯಾಚರಣೆ ಭರದಿಂದ ಸಾಗಿದ್ದು, ಪ್ರಕರಣ ದಾಖಲಾದ ಠಾಣೆಗಳಲ್ಲಿಯೂ ಈ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಬಂಧನಗಳ ನಡೆಯುತ್ತಿರುವುದರಿಂದ, ಬಂಧಿತರನ್ನು ಬೇರೆಡೆಗೆ ತೆಗೆದುಕೊಂಡು ಹೋಗಿರುವ ಸಾಧ್ಯತೆಯನ್ನು ಇಲಾಖೆ ಮೂಲಗಳು ಮುಂದಿಡುತ್ತಿವೆ.

"ಇದೊಂದು ರೀತಿ ಪೊಲೀಸರು ನಡೆಸುತ್ತಿರುವ ವಿಚ್ ಹಂಟ್,'' ಎಂದು ವಕೀಲ ಬಿ. ಟಿ. ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಯಶವಂತಪುರ ಠಾಣೆಯಲ್ಲಿ ನೂರಾರು ಜನರನ್ನು ಬಂಧಿಸಿದ್ದಾರೆ. ಟೈಲರಿಂಗ್ ಮಾಡುವವರು, ಕಟ್ಟರ್ಗಳು, ಸಾಮಾನ್ಯ ಗಾರ್ಮೆಂಟ್ ಉದ್ಯೋಗಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಇವರ ಮೇಲೆ ದೊಂಬಿ ಗಲಾಟೆ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ,'' ಎಂದು ಅವರು ಮಾಹಿತಿ ನೀಡಿದ್ದಾರೆ.

"ಗಾರ್ಮೆಂಟ್ ನೌಕರರ ಮೇಲೆ ಕ್ರಮದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗೂ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕೆ ನೀಡುತ್ತಿರುವ ಹೇಳಿಕೆಗಳಿಗೂ, ತಳಮಟ್ಟದಲ್ಲಿ ಪೊಲೀಸರು ನಡೆಸುತ್ತಿರುವ ಬಂಧನ ಕಾರ್ಯಾಚರಣೆಗಳಿಗೂ ಸಂಬಂಧವೇ ಕಾಣಿಸುತ್ತಿಲ್ಲ,'' ಎಂದು ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

'ಸಮಾಚಾರ' ಸಿಕ್ಕ ಈವರೆಗಿನ ಕೇಸಿನ ವಿವರ:

ಉತ್ತರ ವಿಭಾಗ:

ಪೀಣ್ಯ ಪೊಲೀಸ್ ಠಾಣೆ: 10

ಆರ್ ಎಂ ಸಿ ಯಾರ್ಡ್ ಠಾಣೆ: 2

ಯಶವಂತಪುರ ಠಾಣೆ: 2

ರಾಜಗೋಪಾಲ ನಗರ ಠಾಣೆ: 4

ಆಗ್ನೇಯ ವಿಭಾಗ:

ಬೊಮ್ಮನಹಳ್ಳಿ: 4

ಪರಪ್ಪನ ಅಗ್ರಹಾರ: 3

ಎಚ್ ಎಸ್ ಆರ್ ಲೇಔಟ್: 1

ಹುಳಿಮಾವು: 1

ಮೈಕೋ ಲೇಔಟ್: 1

ಎಲೆಕ್ಟ್ರಾನಿಕ್ ಸಿಟಿ: 3

ಗ್ರಾಮಾಂತರ ಜಿಲ್ಲೆ:

ಹೆಬ್ಬುಗೋಡಿ ಪೊಲೀಸ್ ಠಾಣೆ: 12

ಠಾಣೆ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಈವರೆಗೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.