samachara
www.samachara.com
ಬರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ, ನೆರವಿಗಾಗಿ ದಿಲ್ಲಿಗೆ ನಿಯೋಗ: ಸಿಎಂ
ಸುದ್ದಿ ಸಾಗರ

ಬರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ, ನೆರವಿಗಾಗಿ ದಿಲ್ಲಿಗೆ ನಿಯೋಗ: ಸಿಎಂ

samachara

samachara

ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಕುರಿತು ಶುಕ್ರವಾರ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, "ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಿದ್ದು, ಅಲ್ಲಿನ ಪರಿಸ್ಥಿತಿ ಅರಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಭಾಗದಲ್ಲಿ ಭೀಕರ ಬರ ತಲೆದೋರಿದೆ. ಇನ್ನು ಕೆಲ ಕಡೆ ಸಾಧಾರಣ ರೀತಿಯಲ್ಲಿದೆ. ಈ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ," ಎಂದು ಹೇಳಿದರು.

"ಈಗಾಗಲೇ ರಾಜ್ಯಾದ್ಯಂತ ಪ್ರವಾಸ ನಡೆಸಿದ ಬಳಿಕ ಬರ ಪರಿಹಾರ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನಂತಹ ತುರ್ತು ಕಾರ್ಯಗಳನ್ನು ತಡವಿಲ್ಲದೇ ಕೈಗೊಳ್ಳಲು ತಿಳಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿರುವ ಬಗೆಗೆ ಇನ್ನೂ ಮಾಹಿತಿ ಬಂದಿಲ್ಲ," ಎಂದು ಹೇಳಿದರು.

"ಮಹಾರಾಷ್ಟ್ರದಲ್ಲಿ ಇರುವಷ್ಟು ಭೀಕರ ಬರ ನಮ್ಮ ರಾಜ್ಯದಲ್ಲಿ ಇಲ್ಲ. ಇದರ ಅರ್ಥ ನಮ್ಮಲ್ಲಿ ಬರವೇ ಇಲ್ಲವೆಂದಲ್ಲ. ಆ ಭಾಗಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಬರ ಕಡಿಮೆ ಇದೆ. ಕೆಲವು ಭಾಗದಲ್ಲಿ ಜನರು ತೀವ್ರವಾದ ಕ್ಷಾಮ ಎದುರಿಸುತ್ತಿದ್ದಾರೆ. ಈ ಭಾಗಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ," ಎಂದು ಹೇಳಿದರು.

ಕೇಂದ್ರದ ಹಣ ಬಿಡುಗಡೆ ಮಾಹಿತಿ ಇಲ್ಲ:

"ಬರ ಪರಿಹಾರವಾಗಿ ಕೇಂದ್ರದಿಂದ ರಾಜ್ಯಕ್ಕೆ ಹಣ ಬಿಡುಗಡೆಯಾಗಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಕಳೆದ ವರ್ಷ ಕೇಂದ್ರದಿಂದ ಬರಬೇಕಾದ ಹಣ ಬಿಡುಗಡೆಯಾಗಿರಬೇಕು. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ," ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

"ಕಳೆದ ವರ್ಷ ಸಂಪೂರ್ಣ ಬರಗಾಲ ಇದ್ದುದರಿಂದ 3,500 ಕೋಟಿ ಬರ ಪರಿಹಾರ ಕೋರಲಾಗಿತ್ತು. ಆ ಪೈಕಿ ಕೇವಲ 1,450 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಕನಿಷ್ಠ 6,733 ಕೋಟಿಯನ್ನು ನೀಡುವಂತೆ ಕೇಂದ್ರವನ್ನು ಕೋರಲಾಗುವುದು. ಈ ಬಾರಿ ಕೇಂದ್ರ ಸರ್ಕಾರ ರಾಜ್ಯದಲ್ಲಿನ ಬರದ ತೀವ್ರತೆ ಅರಿತುಕೊಂಡು ಹೆಚ್ಚು ನೆರವು ನೀಡಬೇಕು," ಎಂದು ಒತ್ತಾಯಿಸಿದರು.

ಕೇಂದ್ರಕ್ಕೆ ನಿಯೋಗ: 

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಟಿ.ಬಿ.ಜಯಚಂದ್ರ, "ರಾಜ್ಯ ಸರ್ಕಾರ ಈಗಾಗಲೇ ನೇಮಕ ಮಾಡಿರುವ ಸಚಿವ ಸಂಪುಟದ ನಾಲ್ಕು ಉಪ ಸಮಿತಿಗಳು ಏ.29ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿವೆ. ಅದಾದ ಬಳಿಕ ಬರ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ದೆಹಲಿಗೆ ರಾಜ್ಯದ ಸಂಸದರನ್ನೂ ಒಳಗೊಂಡಂತೆ ನಿಯೋಗ ಹೋಗಲಿದೆ," ಎಂದು ಹೇಳಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್, ಅಭಿವೃದ್ಧಿ ಆಯುಕ್ತ್ತೆ ಲತಾ ಕೃಷ್ಣರಾವ್ ಪಾಲ್ಗೊಂಡಿದ್ದರು.