samachara
www.samachara.com
ಗಣರಾಜ್ಯ ವ್ಯವಸ್ಥೆಯಲ್ಲಿ ದೊಡ್ಡಣ್ಣ ಆಗೋರಿಗೆ ಬ್ರೇಕ್: ಉತ್ತರಾಖಂಡ್ ಹೈಕೋರ್ಟ್ ಐತಿಹಾಸಿಕ ತೀರ್ಪು
ಸುದ್ದಿ ಸಾಗರ

ಗಣರಾಜ್ಯ ವ್ಯವಸ್ಥೆಯಲ್ಲಿ ದೊಡ್ಡಣ್ಣ ಆಗೋರಿಗೆ ಬ್ರೇಕ್: ಉತ್ತರಾಖಂಡ್ ಹೈಕೋರ್ಟ್ ಐತಿಹಾಸಿಕ ತೀರ್ಪು

ಉತ್ತರಾಖಂಡ್‍ನಲ್ಲಿ ಜಾರಿಗೊಳಿಸಿದ್ದ ರಾಷ್ಟ್ರಪತಿ ಆಡಳಿತವನ್ನು ಇಲ್ಲಿನ ಹೈಕೋರ್ಟ್ ವಜಾ ಮಾಡಿ ಗುರುವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ನ್ಯಾಯಾಲಯದ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. "ಒಂದು ವೇಳೆ ಈಗ ಉತ್ತರಾಖಂಡ್ನಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದು, ಮತ್ತೊಬ್ಬರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರೆ ನ್ಯಾಯದ ಅವಹೇಳನ ಮಾಡಿದಂತೆ," ಎಂದು ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್ ಅವರನ್ನೊಳಗೊಂಡ ನ್ಯಾಯಪೀಠ, ಹರೀಶ್ ರಾವತ್ ಅವರ ಮನವಿಯನ್ನು ಪುರಸ್ಕರಸಿ, ಏಪ್ರಿಲ್ 29ರಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವಂತೆ ಹರೀಶ್ ರಾವತ್ ಗೆ ಸೂಚಿಸಿದೆ.

ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಹರೀಶ್ ರಾವತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, "ರಾಷ್ಟ್ರಪತಿ ಮತ್ತು ಕೇಂದ್ರ ಸರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಲ್ಲಿ ಕಾನೂನುಗಳನ್ನು ಗಾಳಿಗೆ ತೂರಿವೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೇಂದ್ರ ಸರಕಾರದ ಶಿಫಾರಸ್ಸು ಪರಿಶೀಲಿಸದೆ ಅಂಕಿತ ಹಾಕಿರುವುದು ನೋಡಿದಲ್ಲಿ ಅವರು ಕೂಡಾ ತಪ್ಪು ಎಸಗಿದ್ದಾರೆ ಎನ್ನುವುದು ಸಾಬೀತಾಗಿದೆ," ಎಂದು ಚಾಟಿ ಬೀಸಿದೆ.ಅಂತಿಮವಾಗಿ ರಾಷ್ಟ್ರಪತಿ ಆಳ್ವಿಕೆ ವಜಾಗೊಳಿಸಿದ ಕೋರ್ಟ್, ರಾಷ್ಟ್ರಪತಿ ಆಳ್ವಿಕೆ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು.

"ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದೇ ಕೇಂದ್ರ ಸರ್ಕಾರದ ಸ್ವಹಿತಾಸಕ್ತಿಗಾಗಿ. ಸಂವಿಧಾನದ 356ನೆ ವಿಧಿ ಜಾರಿಗೊಳಿಸಿರುವುದು ಆಕ್ಷೇಪಾರ್ಹ ಕ್ರಮ. ಈ ವಿಧಿಯನ್ನು ಜಾರಿಗೊಳಿಸಬೇಕಾದರೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕೇ ಹೊರತು ದುರುದ್ದೇಶದಿಂದ ಕೂಡಿರಬಾರದು.'' ಎಂದು ನೈನಿತಾಲ್ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪಿನಲ್ಲಿ ಹೇಳಿದೆ.

"ಸಂವಿಧಾನ 356ನೆ ವಿಧಿಯನ್ನು ಮನಸೋ ಇಚ್ಛೆ ಜಾರಿ ಮಾಡಲು ಅಳವಡಿಸಿಕೊಂಡಿಲ್ಲ. ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಯಾಗಬಾರದು. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ನೀವು ಒಂದು ಬಹುಮತ ಸರ್ಕಾರವನ್ನು ರಾತ್ರೋರಾತ್ರಿ ವಜಾಗೊಳಿಸಲು ಮುಂದಾಗುತ್ತೀರಿ ಎಂದರೆ, ಆಯ್ಕೆ ಮಾಡಿದ ಮತದಾರನಿಗೆ ಗೌರವ ನೀಡುವುದಿಲ್ಲ,'' ಎಂದು ಪ್ರಶ್ನಿಸಿದರು.

ತೀರ್ಪಿನ ಹಿನ್ನೆಲೆ:

70 ಸಂಖ್ಯಾಬಲವನ್ನು ಹೊಂದಿರುವ ಉತ್ತರಖಾಂಡ್ ವಿಧಾನಸಭೆಯಲ್ಲಿ, ಮಾರ್ಚ್ ತಿಂಗಳಿನಲ್ಲಿ ಹಣಕಾಸು ಮಸೂದೆ ಸಂಬಂಧ ಭಾರೀ ವಿವಾದ ಉಂಟಾಗಿತ್ತು. ವಿಧಾನಸಭೆಯಲ್ಲಿ ಹಣಕಾಸು ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಬೇಕೆಂದು ಮುಖ್ಯಮಂತ್ರಿ ಹರೀಶ್ ರಾವತ್ ಸ್ಪೀಕರ್‍ಗೆ ಮನವಿ ಮಾಡಿದ್ದರು.

ಆದರೆ ಮುಖ್ಯಮಂತ್ರಿ ವಿರುದ್ಧ ಬಂಡೆದಿದ್ದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಮತ್ತು ಅವರ 9 ಮಂದಿ ಬೆಂಬಲಿಗ ಶಾಸಕರು ಇದನ್ನು ವಿರೋಧಿಸಿ ಸದನದಿಂದ ಹೊರ ನಡೆದಿದ್ದರು. ಮಸೂದೆ ಅಂಗೀಕಾರವಾಗಿಲ್ಲವಾದ್ದರಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು. ಅಂತಿಮವಾಗಿ ರಾಜ್ಯಪಾಲರು ಮಾ.27ರಂದು ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಮುಖ್ಯಮಂತ್ರಿಗೆ ಸೂಚನೆ ಕೊಟ್ಟಿದ್ದರು.

ಹೀಗೆ ಹಗ್ಗ-ಜಗ್ಗಾಟ ನಡೆದಿದ್ದರಿಂದ ಸ್ಪೀಕರ್ ವಿಜಯ್ ಬಹುಗುಣ ಸೇರಿದಂತೆ 9 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಅಂತಿಮವಾಗಿ ಮಾ.27ರಂದು ಹರೀಶ್ ರಾವತ್ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಮೊದಲೇ, ಮಾ.26ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿತ್ತು. ಕೇಂದ್ರದ ಶಿಫಾರಸಿನಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉತ್ತರಾಖಂಡ್‍ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದರು.