ಇದು ರಂಗೋಲಿ ಕೆಳಗಿದ್ದ ಸುರಂಗ: ಡ್ರಗ್ ಮಾಫಿಯಾ ವಿರುದ್ಧ ಯುಎಸ್ ಯುದ್ಧ
ಸುದ್ದಿ ಸಾಗರ

ಇದು ರಂಗೋಲಿ ಕೆಳಗಿದ್ದ ಸುರಂಗ: ಡ್ರಗ್ ಮಾಫಿಯಾ ವಿರುದ್ಧ ಯುಎಸ್ ಯುದ್ಧ

ಅಮೆರಿಕಾ- ಮೆಕ್ಸಿಕೋ ಗಡಿಭಾಗದಲ್ಲಿ ಮತ್ತೊಂದು ಸುರಂಗ ಮಾರ್ಗವನ್ನು ಯುಎಸ್ ಅಧಿಕಾರಿಗಳು ಬುಧವಾರ ಪತ್ತೆಹಚ್ಚಿದ್ದಾರೆ.

ರೈಲ್ವೆ ಹಳಿಗಳನ್ನು ಅಳಡಿಸಿದ್ದ ಈ ಸುರಂಗವು ಮೆಕ್ಸಿಕೋದಿಂದ ಸ್ಯಾಂಡಿಯಾಗೋ ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತಿತ್ತು. 874 ಮೀಟರ್ ಉದ್ದದ ಸುರಂಗದಲ್ಲಿ ಈವರೆಗೆ ನೂರಾರು ಟನ್ ಕೊಕೇನ್ ಹಾಗೂ ಮರಿಜುವಾನವನ್ನು ಸಾಗಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸುರಂಗದ ಕೊನೆ ಮುಟ್ಟುವ ಸ್ಯಾಂಡಿಯಾಗೋ ನಗರದ ಗೋಡೋನ್ ಒಂದಕ್ಕೆ ಲಿಫ್ಟ್ ಕೂಡ ಅಳವಡಿಸಲಾಗಿತ್ತು. 2006ರಿಂದ ಈಚೆಗೆ ಪತ್ತೆಯಾದ 13ನೇ ಸುರಂಗ ಮಾರ್ಗ ಇದಾಗಿದೆ. ಸುರಂಗ ಮಾರ್ಗವು 3 ಅಡಿ ಅಗಲವಿದ್ದು, ರೈಲ್ವೆ ಹಳಿ ಹಾಗೂ ಉಸಿರಾಟಕ್ಕೆ ವ್ಯವಸ್ಥೆಯನ್ನು ಹೊಂದಿತ್ತು. "ಇದರ ಮೂಲಕ ಮೆಕ್ಸಿಕೋ ಡ್ರಗ್ ಕಾರ್ಟಲ್ಗಳು ಕೊಕೇನ್ ಸರಬರಾಜು ಮಾಡುತ್ತಿದ್ದವು,'' ಎಂದು ಕ್ಯಾಲಿಫೋರ್ನಿಯಾದ ದಕ್ಷಿಣ ಜಿಲ್ಲೆಯ ಅಟಾರ್ನಿ ಲೌರಾ ಡುಫಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

"ಇದೊಂದು ಇಲಿ ಬಿಲವಿದ್ದ ಹಾಗಿದೆ,'' ಎಂದಿರುವ ಡುಫಿ, "ಹಿಂದೆ ಕಂಡು ಹಿಡಿದ ಸುರಂಗಳಿಗಿಂತ ಇದರ ವಿನ್ಯಾಸ ಭಿನ್ನವಾಗಿದೆ,'' ಎಂದು ಹೇಳಿದ್ದಾರೆ.

ಸುರಂಗ ಮಾರ್ಗ ಯಾವಾಗ ನಿರ್ಮಾಣವಾಗಿರಬಹುದು ಎಂದು ಇನ್ನೂ ತಿಳಿದು ಬಂದಿಲ್ಲ. ಸ್ಯಾಂಡಿಯಾಗೋ ನಗರದಲ್ಲಿ ಮರದ ಉದ್ಯಮ ನಡೆಸುತ್ತಿದ್ದ ಈ ಪ್ರದೇಶದಲ್ಲಿ ಜನ ಒಡನಾಟ ಯಾವಾಗಲೂ ಇರುತ್ತಿತ್ತು.

ಮೆಕ್ಸಿಕೋ ಕಾರ್ಟಲ್ಸ್:

ಮೆಕ್ಸಿಕೋದಲ್ಲಿ ಕಾರ್ಯಚರಣೆ ನಡೆಸುತ್ತಿರುವ ಡ್ರಗ್ ಕಾರ್ಟಲ್ಗಳನ್ನು ಜಗತ್ತಿನ ನಂ. 1 ಶತ್ರುಗಳು ಎಂದು ಅಮೆರಿಕಾ ಈ ಹಿಂದೆ ಘೋಷಿಸಿತ್ತು. ಇಲ್ಲಿನ ಸಿನಲೋವಾ ಕಾರ್ಟಲ್ ನಡೆಸುತ್ತಿದ್ದ ಎಲ್ ಚಾಪೋ ಗುಝ್ಮಾನ್ನನ್ನು ಮೆಕ್ಸಿಕೋ ನೌಕಾ ಪಡೆಯು ಇದೇ ವರ್ಷ ಜನವರಿಯಲ್ಲಿ ಬಂಧಿಸಿತ್ತು. ಈತ ಮೆಕ್ಸಿಕೋ ಹಾಗೂ ಅಮೆರಿಕಾ ನಡುವೆ ಸುರಂಗ ಮಾರ್ಗ ನಿರ್ಮಿಸುವ ಮೂಲಕ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಹೊಸ ವಿಧಾನವನ್ನು ಕಂಡುಕೊಂಡಿದ್ದ.

ಮೆಕ್ಸಿಕೋ ಜಗತ್ತಿಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿರುವ ದೇಶ ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿದೆ. ಇಲ್ಲಿ ಕಾರ್ಯಚರಣೆ ನಡೆಸುತ್ತಿರುವ ಡ್ರಗ್ ಕಾರ್ಟಲ್ಗಳು ಮಾದಕ ದ್ರವ್ಯದ ಜತೆಗೆ ಇಂಧನ ಕಳ್ಳತನಕ್ಕೂ ಇಳಿದಿವೆ. ಸಾವಿರಾರು ಜನ ನಾಪತ್ತೆಯಾಗಿದ್ದು, ಸಾವು ನೋವುಗಳು ಇಲ್ಲಿ ನಿತ್ಯದ ಸಂಗತಿಯಾಗಿದೆ.

ಪ್ರಮುಖ ಅಂಶ:

ಜಗತ್ತಿನ ಮಾದಕ ದ್ರವ್ಯ ಸರಬರಾಜು ಜಾಲ ಎಲ್ಲಾ ದೇಶಗಳಲ್ಲೂ ಒಂದೇ ರೀತಿಯ ವಿಧಾನವನ್ನು ಅನುಸರಿಸುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಪಂಜಾಬ್ ಪ್ರಾಂಥ್ಯದಲ್ಲಿ ಈ ಹಿಂದೆ ಇಂತಹ ಸುರಂಗಗಳು ಪತ್ತೆಯಾಗಿದ್ದವು. ಗಡಿ ನಿಯಂತ್ರಣ ರೇಖೆಯನ್ನು ತಪ್ಪಿಸಿ ಮಾದಕ ದ್ರವ್ಯಗಳನ್ನು ಸರಬರಾಜು ಮಾಡಲು ಈ ಸುರಂಗಗಳನ್ನು ಬಳಸುತ್ತಿದ್ದ ಸಾಧ್ಯತೆಯನ್ನು ಭಾರತೀಯ ಸೇನೆ ಮುಂದಿಟ್ಟಿದ್ದನ್ನು ಸ್ಮರಿಸಬಹುದು.