samachara
www.samachara.com
ಪಿಯುಸಿ ಮೌಲ್ಯಮಾಪನದಿಂದ ಡಯಟ್ ಉಪನ್ಯಾಸಕರಿಗೆ ಮುಕ್ತಿ
ಸುದ್ದಿ ಸಾಗರ

ಪಿಯುಸಿ ಮೌಲ್ಯಮಾಪನದಿಂದ ಡಯಟ್ ಉಪನ್ಯಾಸಕರಿಗೆ ಮುಕ್ತಿ

ತಕ್ಷಣದಿಂದ ಜಾರಿಗೆ ಬರುವಂತೆ ಡಯಟ್ ಉಪನ್ಯಾಸಕರನ್ನು(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳ ಉಪನ್ಯಾಸಕರು) ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು ಎಂದು ಪಿಯು ಬೋರ್ಡ್ ನಿರ್ದೇಶಕ ರಾಮೇಗೌಡ ಹೇಳಿದ್ದಾರೆ.

ಅನನುಭವಿ ಡಯಟ್ ಉಪನ್ಯಾಕರನ್ನು ಮೌಲ್ಯಮಾಪನಕ್ಕೆ ಬಳಸುತ್ತಿರುವುದಕ್ಕ ಪ್ರತಿಕ್ರಿಯಿಸಿದ ಅವರು, "ಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಅವರನ್ನು ಕೋಡಿಂಗ್ ಕೆಲಸಕ್ಕೆ ಮಾತ್ರ ನಿಯೋಜಿದ್ದು, ಅವರಿಂದ ಮೌಲ್ಯಮಾಪನ ಮಾಡಿಸುವುದಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಡಯಟ್ ಉಪನ್ಯಾಸಕರನ್ನು ಮೌಲ್ಯಮಾಪನದಿಂದ ಬಿಡುಗಡೆ ಮಾಡಲಾಗುವುದು," ಎಂದು ಅವರು ತಿಳಿಸಿದ್ದಾರೆ.

ನಿಯಮಗಳ ಪ್ರಕಾರ ಮೌಲ್ಯಮಾಪನ ಮಾಡಲು 3 ವರ್ಷದ ಅನುಭವ ಇರಬೇಕು. ಆದರೆ ಡಿಎಸ್‍ಇಆರ್ಟಿ ಅಧೀನಕ್ಕೆ ಒಳಪಡುವ ಡಯಟ್ ಉಪನ್ಯಾಕರಿಂದ ಶಿಕ್ಷಣ ಇಲಾಖೆ ಮೌಲ್ಯಮಾಪನ ನಡೆಸಲು ಮುಂದಾಗಿತ್ತು. ಡಿಎಡ್ ಮತ್ತು ಬಿಎಡ್ ವಿದ್ಯಾರ್ಥಿಗಳು ಭೋಧನೆ ಮಾಡುವ ಉಪನ್ಯಾಸಕರು. ಮೌಲ್ಯಮಾಪನದಿಂದ ನಮಗೆ ಮುಕ್ತಿ ಕೊಡಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಾಟ್ಸಪ್ ಮೂಲಕ ಮನವಿ ಸಲ್ಲಿಸಿದ್ದರು.

ಮನವಿಯಲ್ಲಿ ಏನಿದೆ?

'ತಾವು ಸೂಚಿಸಿದಂತೆ ದ್ವಿತೀಯ ಪಿಯುಸಿ ಮೌಲ್ಯಮಾಪನದ ಕೋಡಿಂಗ್ ಮತ್ತು ಡಿಕೋಡಿಂಗ್ ಪ್ರಕ್ರಿಯೆಯನ್ನು 4 ದಿನದಲ್ಲಿ ಯಶಸ್ವಿಯಾಗಿ ಮುಗಿಸಿದ್ದೇವೆ. ನನಗೆ ದ್ವಿತೀಯ ಪಿಯುಸಿ ಮೌಲ್ಯಮಾಪನ ನಡೆಸುವಂತೆ ಆದೇಶ ಬಂದಿದೆ. ಆದರೆ ನಮಗೆ ದ್ವಿತೀಯ ಪಿಯುಸಿ ಗಣಿತ ಪಠ್ಯವನ್ನು ಬೋಧಿಸಿ ಅನುಭವ ಇಲ್ಲ. ನಾನು ಎಂಎಸ್‍ಸಿ ಮಾಡಿದ ಪಿಯುಸಿ ಪಠ್ಯಕ್ಕೂ ಈಗ ಇರುವ ಪಠ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಮೌಲ್ಯಮಾಪನಕ್ಕೆ 3 ವರ್ಷಗಳ ಬೋಧನಾ ಅನುಭವ ಇರಬೇಕೆಂಬ ನಿಯಮವಿದೆ. ಆದರೆ ಆದರೆ ಅದು ನಮಗೆ ದೊರೆತಿಲ್ಲ. ಬಹುತೇಕ ವಿದ್ಯಾರ್ಥಿಗಳು ಗಣಿತ ಪತ್ರಿಕೆಯ ಫೋಟೋ ಕಾಪಿ ತೆಗೆದುಕೊಳ್ಳುವವರಿದ್ದು, ಮಾಡೆಲ್ ಉತ್ತರ ಪತ್ರಿಕೆ ಇದ್ದರೂ 70ರಿಂದ 100 ಅಂಕ ಪಡೆಯುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡುವುದು ಕ್ಲಿಷ್ಟದ ಕೆಲಸ. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ನಾವು ಮೌಲ್ಯಮಾಪನ ಮಾಡಲು ಅನರ್ಹರಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಮಹತ್ವವಾಗಿದ್ದು, ಆ ಪಠ್ಯಪುಸ್ತಕವನ್ನು ಒಂದು ದಿನವೂ ಮುಟ್ಟದ ನಾವು ಅವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ನಮಗೆ ಯಾವುದೇ ನೈತಿಕತೆ ಇರುವುದಿಲ್ಲ. ಹೀಗಾಗಿ ದಯವಿಟ್ಟು ನಮ್ಮನ್ನು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈ ಬಿಡಿ' ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ಮೌಲ್ಯಮಾಪನಕ್ಕೆ ಗೈರು:

ಕೋಡಿಂಗ್ ಡಿಕೋಡಿಂಗ್ ಮುಗಿಸಿರುವ ಬಹುತೇಕ ಡಯಟ್ ಉಪನ್ಯಾಕರು ಮೌಲ್ಯಮಾಪನಕ್ಕೆ ಗೈರಾಗಿದ್ದಾರೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜೇಯ್ ಸೇಟ್, ಮೌಲ್ಯಮಾಪನಕ್ಕೆ ಡಯಟ್ ಉಪನ್ಯಾಸಕರನ್ನು ಬಳಸಿಕೊಳ್ಳುವಂತೆ ಆದೇಶಿದ್ದರು. ಅಜೇಯ್ ಸೇಟ್ ಆದೇಶಕ್ಕೆ ಉಪನ್ಯಾಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಶಿಸ್ತು ಕ್ರಮದ ಭೀತಿಯಲ್ಲಿ ಬಹಿರಂಗ ಹೇಳಿಕೆ ಉಪನ್ಯಾಸಕರು ಹೆದರುತ್ತಿದ್ದಾರೆ.