ರಾಜ್ಯ ಬಿಜೆಪಿಯಲ್ಲಿ ಕೋರ್ ಕಮಿಟಿ ಸಂಚಲನ: ಶೋಭಾಗೆ ಸಿಗುತ್ತಾ ಸ್ಥಾನಮಾನ?
ಸುದ್ದಿ ಸಾಗರ

ರಾಜ್ಯ ಬಿಜೆಪಿಯಲ್ಲಿ ಕೋರ್ ಕಮಿಟಿ ಸಂಚಲನ: ಶೋಭಾಗೆ ಸಿಗುತ್ತಾ ಸ್ಥಾನಮಾನ?

ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲಿ ಬದಲಾವಣೆಗೆ ಭೂಮಿಕೆ ಸಿದ್ಧವಾಗುತ್ತಿದೆ.

ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ತಂಡ ಕಟ್ಟಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಿರುವ ಕೋರ್ ಕಮಿಟಿಯಿಂದ ಯಾರು ಹೊರ ಹೋಗ್ತಾರೆ, ಯಾರು ಒಳಗೆ ಬರ್ತಾರೆ ಅನ್ನೋ ಚರ್ಚೆ ಪಕ್ಷದೊಳಗೆ ಶುರುವಾಗಿದೆ.

ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸ್ಥಾನದಿಂದ ಸಂತೋಷ್ ಔಟ್ ಆಗ್ತಾರೆ ಎನ್ನಲಾಗಿದೆ. ಆರ್ ಎಸ್‍ ಎಸ್ ಮತ್ತು ಪಕ್ಷದ ನಡುವೆ ಸಮನ್ವಯ ಸೇತುವೆಯಾಗಿ ಕೆಲಸ ಮಾಡುವ ಸಂಘಟನಾ ಕಾರ್ಯದರ್ಶಿ ಹುದ್ದೆ ಬಹಳ ಮಹತ್ವದ್ದು. 2006ಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ, ಶಿವಮೊಗ್ಗದಲ್ಲಿ ಸಂಘದ ಪ್ರಚಾರಕರಾಗಿದ್ದ ಸಂತೋಷ್ ಅವರನ್ನು ಯಡಿಯೂರಪ್ಪ ಅವರೇ ಕರೆ ತಂದಿದ್ದರು. ಕಳೆದ 10 ವರ್ಷಗಳಿಂದ ಇದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಹಾಗೂ ಯಡಿಯೂರಪ್ಪ ಸಂಬಂಧ ಈಗ ಹಳಸಿದೆ. ಹೀಗಾಗಿ, ಪಕ್ಷದ ಹೊಣೆಹಾರಿಕೆ ವಹಿಸಿಕೊಂಡ ಬಿಎಸ್ವೈ, ಸಂತೋಷ್ ಅವರಿಗೆ ಕೋಕ್ ಕೊಡೊದು ಗ್ಯಾರೆಂಟಿ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಂತೋಷ್ ಜಾಗಕ್ಕೆ ಬಿಎಸ್‍ವೈ ಅವರ ಆಪ್ತ, ಹುಬ್ಬಳ್ಳಿ ಮೂಲದ ರವಿಕುಮಾರ್ ನೇಮಕವಾಗುವ ಸಾಧ್ಯತೆ ಇದೆ.

ಶೋಭಕ್ಕೆ ಸ್ಥಾನಮಾನ:

ಈ ನಡುವೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಕೂಡ ಪುನಾರಚನೆಯಾಗಲಿದೆ. ಪಕ್ಷದ ರಾಜ್ಯಾಧ್ಯಕ್ಷರು ಕೋರ್ ಕಮಿಟಿಗೆ ಅಧ್ಯಕ್ಷರಾಗಿರ್ತಾರೆ. ಈಗಾಗಲೇ 11 ಮಂದಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಲಿದ್ದಾರೆ. ಮಾಜಿ ಸಿಎಂಗಳಾದ ಬಿಎಸ್‍ವೈ, ಡಿ. ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಅನಂತ್‍ಕುಮಾರ್, ಪ್ರಹ್ಲಾದ್ ಜೋಷಿ, ಮಾಜಿ ಡಿಸಿಎಂಗಳಾದ ಈಶ್ವರಪ್ಪ, ಅಶೋಕ್, ಸಂಸದ ನಳೀನ್‍ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ಸಂತೋಷ್, ಆರ್ ಎಸ್ ಎಸ್ ಪ್ರಮುಖರಾದ ವಿ.ಸತೀಶ್, ಮುಕುಂದ ಅವರು ಕೋರ್ ಕಮಿಟಿಯಲ್ಲಿ ಇದ್ದಾರೆ.

ಆದರೆ, ಬಿಎಸ್‍ವೈ ನೇತೃತ್ವದ ಹೊಸ ಕೋರ್ ಕಮಿಟಿಗೆ ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಳೀನ್‍ಕುಮಾರ್ ಕಟೀಲ್ ಅವರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಎಸ್ವೈ ಅವರ ಈ ನಿರೀಕ್ಷಿತ ನಿರ್ಧಾರಕ್ಕೆ ಹೈಕಮಾಂಡ್ ಒಪ್ಪಿಗೆ ಸಿಗುತ್ತಾ ಎಂಬ ಪ್ರಶ್ನೆಯೂ ಇದೆ. ಜತೆಗೆ, ಇದು ಪಕ್ಷದ ರಾಜ್ಯ ಘಟಕದೊಳಗೆ ಮೂಡಿಸುವ ಕಂಪನಗಳು ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಹೊಸ ಬೆಳವಣಿಗೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಒಟ್ಟಾರೆ, ಯಡಿಯೂರಪ್ಪ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಂಡ ರಚನೆಗೆ ಮುಂದಾಗಲಿದ್ದಾರೆ. ಜತೆಗೆ, ತಮ್ಮ ಕಷ್ಟ ಕಾಲದಲ್ಲಿ ಜತೆಗಿದ್ದವರಿಗೂ ಈ ಸಮಯದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಕಡೆಯೂ ಗಮನ ನೀಡುತ್ತಿದ್ದಾರೆ ಎಂಬುದನ್ನು ಸದ್ಯದ ಬೆಳವಣಿಗೆಗಳು ಹೇಳುತ್ತಿವೆ.