samachara
www.samachara.com
ಹೊರಗೆ ತಳುಕು, ಒಳಗೆ ಒಂದಿಷ್ಟು ಹುಳುಕು: PMSSY ಆಸ್ಪತ್ರೆಯ 'ಸ್ಪೆಷಲ್' ಕರ್ಮಕಾಂಡ!
ಸುದ್ದಿ ಸಾಗರ

ಹೊರಗೆ ತಳುಕು, ಒಳಗೆ ಒಂದಿಷ್ಟು ಹುಳುಕು: PMSSY ಆಸ್ಪತ್ರೆಯ 'ಸ್ಪೆಷಲ್' ಕರ್ಮಕಾಂಡ!

samachara

samachara

'ಪಿಎಂಎಸ್ಎಸ್ ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ'ಯ ರೋಗಿಗಳ ಸಂಕಷ್ಟಗಳು ಇದೀಗ ಒಂದೊಂದಾಗಿ ಹೊರಗೆ ಬರಲಾರಂಭಿಸಿವೆ.

ಸಿಎಂ ಸಿದ್ದರಾಮಯ್ಯ ಪುತ್ರ ನಿರ್ದೇಶಕರಾಗಿರುವ ಸಂಸ್ಥೆಗೆ ಟೆಂಡರ್ ನೀಡುವ ಮೂಲಕ ಆಸ್ಪತ್ರೆ ಹೆಸರು ಎಲ್ಲೆಡೆ ಚಲಾವಣೆಯಲ್ಲಿದೆ. ಕಾನೂನನ್ನು ಮುಂದಿಟ್ಟುಕೊಂಡು, ರಾಜಧರ್ಮವನ್ನು ಮರೆತ ಮುಖ್ಯಮಂತ್ರಿ ನೀಡಿದ ಸಮಜಾಯಿಷಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲನೆಯಾಗಿದೆ ಎಂಬ ಆಸ್ಪತ್ರೆ ಹೇಳಿಕೆಗಳ ಹೊರತಾಗಿ ಈ ವಿಚಾರದಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸುವುದು ಕಷ್ಟ.

ಆದರೆ, ಅದೇ ವೇಳೆ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲ್ಯಭ್ಯಗಳನ್ನು ನೀಡುವ ಗುರಿಯೊಂದಿಗೆ ಸ್ಥಾಪನೆಗೊಂಡ, 100 ಕೋಟಿ ರೂಪಾಯಿ ಅನುದಾನದಲ್ಲಿ ಸ್ಥಾಪನೆಗೊಂಡ ಆಸ್ಪತ್ರೆಯ ಅಂತರಾಳದಲ್ಲಿರುವ ಕೆಲವು ಹುಳುಕುಗಳು ಈಗ ಹೊರಬರುತ್ತಿವೆ. 'ಸಮಾಚಾರ'ಕ್ಕೆ ಲಭ್ಯವಾಗಿರುವ ಮಾಹಿತಿ; ಪಿಎಂಎಸ್ಎಸ್ ವೈ ಒಳಗೆ ರೋಗಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ, ಕೆಲವು ವಿಭಾಗ ಮುಖ್ಯಸ್ಥರ ಹೊಣೆಗೇಡಿತನ, ಅದಕ್ಕಿಂತ ಹೆಚ್ಚಾಗಿ 2016ರಲ್ಲಿ ಈವರೆಗೂ ಒಂದೇ ಒಂದು ಪ್ರಮುಖ ಶಸ್ತ್ರ ಚಿಕಿತ್ಸೆ (ಮೇಜರ್ ಸರ್ಜರಿ) ನಡೆದಿರುವುದಕ್ಕೆ ಇರುವ ಕಾರಣಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಇದು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಅಧ್ಯಯನ ಸಂಸ್ಥೆ ಅಡಿಯಲ್ಲಿ ಬರುವ 'ಪಿಎಂಎಸ್ಎಸ್ ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ' ಕರ್ಮಕಾಂಡದ ಕತೆ.

ನಿನಗಿನ್ನೂ ಮೂರೇ ತಿಂಗಳು:

ಸಿಎಂ ಪುತ್ರನಿಗೆ ಟೆಂಡರ್ ನೀಡುವ ಮೂಲಕ ಆಸ್ಪತ್ರೆ ಸುದ್ದಿಯಾಗುತ್ತಿದ್ದಂತೆ 'ಸಮಾಚಾರ'ಕ್ಕೆ ಶಿವಮೊಗ್ಗ ಮೂಲದ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಬಂದ ರೋಗಿಯೊಬ್ಬರ ಕುರಿತು ಮಾಹಿತಿ ಲಭ್ಯವಾಗಿದೆ. ಮಾರ್ಚ್ ತಿಂಗಳಿನಲ್ಲಿ ಅವರ ಅನ್ನನಾಳದಲ್ಲಿ ಕ್ಯಾನ್ಸರ್ ಇದೆ ಎಂಬುದು ದೃಢಪಟ್ಟಿತ್ತು. ಹೀಗಾಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 'ಸರ್ಜಿಕಲ್ ಗ್ಯಾಸ್ಟ್ರೋಎಂಟೆರೋಲಜಿ' ವಿಭಾಗದಲ್ಲಿ ಹೊರರೋಗಿಯಾಗಿ ದಾಖಲಾದರು. ಅವರನ್ನು ಚಿಕಿತ್ಸೆಗೆ ಒಳಪಡಿಸಿದ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಸಂಬಂಧಪಟ್ಟ ಎಲ್ಲಾ ಚಿಕಿತ್ಸೆಗಳನ್ನು ಮಾಡಿಸುವಂತೆ ತಿಳಿಸಿದರು. ಹೊರರೋಗಿಯಾಗಿದ್ದುಕೊಂಡೇ, ಸಿಟಿ, ರಕ್ತದ ಪರೀಕ್ಷೆ ಹೀಗೆ ಎಲ್ಲವನ್ನೂ ಮುಗಿಸಿಕೊಂಡು ಮತ್ತೆ ಡಾ. ನಾಗೇಶ್ ಅವರ ಬಳಿ ಬಂದಿದ್ದಾರೆ.

ಈ ಸಮಯದಲ್ಲಿ, ಸಿಟಿ ಸ್ಕ್ಯಾನ್ ಪರೀಕ್ಷಿಸಿದ ಅವರು, ಶಸ್ತ್ರ ಚಿಕಿತ್ಸೆಗೂ ಮುನ್ನವೇ ಕಿಮೋ ಥೆರಪಿಯ ಅಗತ್ಯವಿದೆ. ಅದರ ನಂತರ ಶಸ್ತ್ರ ಚಿಕಿತ್ಸೆ ನಡೆಸೋಣ ಎಂದಿದ್ದಾರೆ. ಮತ್ತೊಮ್ಮೆ ಎಂಡೋಸ್ಕೋಪಿ ಪರೀಕ್ಷೆಯನ್ನು ಮಾಡಿಸಲು ಸೂಚಿಸಿದ್ದಾರೆ. ಒಳರೋಗಿಯಾಗಿ ದಾಖಲಾದ ನಂತರ, ಎಂಡೋಸ್ಕೋಪಿ ನಡೆಲಾಗಿದೆ. ನಂತರ ರೋಗಿಯ ಮೂಗಿನ ಮೂಲಕ 'ರೈಸ್ ಟ್ಯೂಬ್' ಒಂದನ್ನು ಅಳವಡಿಸಿದ್ದಾರೆ. ಅಲ್ಲಿಯವರೆಗೂ ಬಾಯಿ ಮೂಲಕವೇ ಆಹಾಯವನ್ನು ಸೇವಿಸುವಷ್ಟು ಸದೃಢರಾದ ರೋಗಿಗೆ 'ರೈಸ್ ಟ್ಯೂಬ್' ಹಾಕುವ ಅಗತ್ಯವೇನಿತ್ತು? ಎಂಬುದು ನಿಗೂಢವಾಗಿಯೇ ಉಳಿದಿದೆ.

ಮುಂದಿನ 48 ಗಂಟೆ, ರೈಸ್ ಟ್ಯೂಬ್ನಿಂದಾಗಿ ರೋಗಿಗೆ ತಲೆ ಸಿಡಿತ ಶುರುವಾದರೂ ಡಾ. ನಾಗೇಶ್ ನಾಪತ್ತೆಯಾಗಿದ್ದರು ಎಂದು ರೋಗಿಯ ಕಡೆಯವರು ದೂರುತ್ತಾರೆ. ಈ ಸಮಯದಲ್ಲಿ ಇತರೆ ವೈದ್ಯರನ್ನು ಕೇಳಿದರೆ, "ನೀನು ದೊಡ್ಡ ಖಾಯಿಲೆ ಹೊತ್ತುಕೊಂಡು ಬಂದಿದ್ದೀಯಪ್ಪ. ಮೂರು ತಿಂಗಳು ಬದುಕಿದರೆ ಹೆಚ್ಚು. ನಮ್ಮ ಎಚ್ಓಡಿ ಕೇಳದೆ ಅದನ್ನು( ರೈಸ್ ಟ್ಯೂಬ್) ತೆಗೆಯಲು ಸಾಧ್ಯವಿಲ್ಲ,'' ಎಂದಿದ್ದಾರೆ. ಇದರಿಂದ ಗಾಬರಿ ಬಿದ್ದ ರೋಗಿಯ ಕಡೆಯವರು, 'ಆಸ್ಪತ್ರೆ' ಸಹವಾಸವೇ ಸಾಕು ಎಂದು ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಸಮಸ್ಯೆ ಏನು?:

ಹಾಗೆ ನೋಡಿದರೆ, 'ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ' ಉಳಿದ ಸರಕಾರಿ ಆಸ್ಪತ್ರೆಗಳಂತಲ್ಲ. ಅಲ್ಲಿರುವ ಮೂಲ ಸೌಕರ್ಯಗಳು, ಶುಚಿತ್ವ ಎಂತಹ ಫೈವ್ ಸ್ಟಾರ್ ಆಸ್ಪತ್ರೆಗಳಿಗೂ ಕಮ್ಮಿ ಇಲ್ಲ ಎನ್ನುವಂತಿದೆ. "ನಮ್ಮ ಆಸ್ಪತ್ರೆಯ ನಿರ್ವಹಣೆಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ,'' ಎನ್ನುತ್ತಾರೆ ಆಡಳಿತಾಧಿಕಾರಿ ಡಾ. ಗಿರೀಶ್. ಆಸ್ಪತ್ರೆಯ ಶುಚಿತ್ವದ ಕಡೆಗೆ ಮಹತ್ವ ಕೊಡುವ ನಿಟ್ಟಿನಲ್ಲಿ, ಅಲ್ಲಿನ ಸಿಬ್ಬಂದಿಗಳು, ರೋಗಿಗಳ ಜತೆ ಕೊಂಚ ಬಿಗಿಯಾಗಿಯೇ ನಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಬಡತನದ ಹಿನ್ನೆಲೆಯಿಂದ ಬರುವ ರೋಗಿಗಳು ಹಾಗೂ ಅವರ ಕಡೆಯವರಿಗೆ ಶಿಸ್ತಿನ ಪಾಠ ಹೇಳಿಕೊಡುವ ಜೈಲಿನ ಮಾದರಿಯಲ್ಲಿ ಆಸ್ಪತ್ರೆ ನಡೆದುಕೊಳ್ಳುತ್ತಿದೆ ಎಂಬ ದೂರುಗಳಿಲ್ಲಿ ಸಾಮಾನ್ಯ.

ಇದನ್ನು ಪಕ್ಕಕ್ಕಿಟ್ಟು ನೋಡಿದರೂ, ಆಸ್ಪತ್ರೆಯಲ್ಲಿ ತಾರತಮ್ಯದ ಕುರುಹುಗಳು ಸಿಗುತ್ತವೆ. ರಾಜಕಾರಣಿಗಳ ಶಿಫಾರಸ್ಸು ಪಡೆದು ಬರುವ ರೋಗಿಗಳಿಗೆ ಹಾಗೂ ಆಸ್ಪತ್ರೆಯನ್ನು ಹುಡುಕಿಕೊಂಡು ಬರುವ ಸಾಮಾನ್ಯ ರೋಗಿಗಳಿಗೆ ನೀಡುವ ಚಿಕಿತ್ಸೆ ಮತ್ತು ಉಪಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ರೋಗಿಗಳ ದುಮ್ಮಾನಕ್ಕೆ ಕಾರಣವಾಗಿದೆ.

ಮಾರ್ಚ್ ತಿಂಗಳಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು. ಅವರ ಪುತ್ರಿ, 'ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ತಂದೆ ಸಾವಿರ ಕಾರಣ' ಎಂಬ ಗಂಭೀರ ಆರೋಪ ಮಾಡಿದರು. ಸುರಕ್ಷತಾ ಸಿಬ್ಬಂದಿಯೊಬ್ಬರ ಮೇಲೆ ವಿಕ್ಟೋರಿಯಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರೊಂದು ದಾಖಲಾಯಿತು. ಆದರೆ, ಆಸ್ಪತ್ರೆ ಜತೆ ಒಡನಾಟ ಹೊಂದಿರುವ ಪೊಲೀಸರು ಅದನ್ನು ತಿಪ್ಪೆಸಾರಿಸಿದರು ಎಂಬ ದಾಖಲೆಗಳು ಲಭ್ಯವಾಗಿವೆ.

ವ್ಯವಸ್ಥೆಯೊಳಗಿನ ಹುಳಗಳು:

"ಎರಡು ವರ್ಷಗಳ ಹಿಂದೆ ಆಸ್ಪತ್ರೆಯೊಳಗೆ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು. ಆದರೆ, ಈಗ ಅವನ್ನೆಲ್ಲಾ ನಿಯಂತ್ರಣ ಮಾಡಲಾಗಿದೆ,'' ಎನ್ನುತ್ತಾರೆ ಆಡಳಿತಾಧಿಕಾರಿ ಡಾ. ಗಿರೀಶ್. ಆಸ್ಪತ್ರೆಯ ಮೂಲಗಳ ಪ್ರಕಾರ, "ವಿಕ್ಟೋರಿಯಾದಿಂದ ವರ್ಗಾವಣೆಯಾಗಿ ಬಂದ ಕೆಲವು ವಿಭಾಗ ಮುಖ್ಯಸ್ಥರು ಇಡೀ ಆಸ್ಪತ್ರೆಯ ಆಡಳಿತಕ್ಕೆ ಸವಾಲೆಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಬಿಎಂಸಿಆರ್ ಐನ ಕೆಲವು ಹಿರಿಯರು ಬೆಂಬಲಕ್ಕೆ ನಿಂತಿದ್ದಾರೆ. ಕೆಲವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ,'' ಎಂಬ ಮಾಹಿತಿ ಸಿಗುತ್ತದೆ.

''ಕೆಲವು ವಿಭಾಗ ಮುಖ್ಯಸ್ಥರು ನಾನ್ ಪ್ರಾಕ್ಟೀಸಿಂಗ್ ಅಲೋಯನ್ಸ್ ನಿರಾಕರಿಸುತ್ತಾರೆ. ಅವರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕೆಲಸ ಮಾಡುತ್ತಾರೆ. ಇದು ಕಾನೂನಿನ ಅಡಿಯಲ್ಲಿ ಸರಿ ಅನ್ನಿಸಿದರೂ, ವೃತ್ತಿಧರ್ಮ ಪಾಲನೆ ವಿಚಾರ ಬಂದಾಗ ನೈತಿಕ ಚೌಕಟ್ಟು ಮೀರುವಂತೆ ಮಾಡುತ್ತೆ,'' ಎಂಬುದು ಬಿಎಂಸಿಆರ್ ಐ ವೈದ್ಯರೊಬ್ಬರ ಅಭಿಪ್ರಾಯ.

ಇಂತಹ ತಾಂತ್ರಿಕ ವಿಚಾರಗಳ ಆಚೆಗೆ ಸಮಸ್ಯೆ ಅನುಭವಿಸುತ್ತಿರುವುದು ಮಾತ್ರ ಬಡರೋಗಿಗಳು. ಶುಚಿತ್ವ ಎಂಬುದು ಆಸ್ಪತ್ರೆಯ ನಿರ್ಹವಣೆಯಲ್ಲಿ ಒಂದು ಅಂಶ. ಅದೇ ಪ್ರಮುಖವಾದರೆ ಹೇಗೆ ರೋಗಿಗಳ ಉಪಚಾರದಲ್ಲಿ ಏರುಪೇರಾಗುತ್ತದೆ ಎಂಬುದಕ್ಕೆ 'ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ' ಒಂದು ಉದಾಹರಣೆ. ಅಪರೂಪದ ಸೌಲಭ್ಯ ಹಾಗೂ ಮೂಲ ಸೌಕರ್ಯ ಹೊಂದಿರುವ ಆಸ್ಪತ್ರೆ ರೋಗಿಗಳ ಪಾಲಿಗೆ ನರಕವಾಗಿ ಬದಲಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ.

ಇದಿಷ್ಟು ಸಚಿವ ಶರಣ್ ಪ್ರಕಾಶ್ ಪಾಟೀಲ್ ಗಮನಕ್ಕೆ...