ಸಾಲ ವಸೂಲಾತಿಯಲ್ಲಿ ತಾರತಮ್ಯ: ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ತರಾಟೆ
ಸುದ್ದಿ ಸಾಗರ

ಸಾಲ ವಸೂಲಾತಿಯಲ್ಲಿ ತಾರತಮ್ಯ: ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ತರಾಟೆ

ಸಾಲ ಬಾಕಿದಾರರ ಮಾಹಿತಿ ಬಹಿರಂಗಕ್ಕೆ ಒಪ್ಪದ ರಿಸರ್ವ್ ಬ್ಯಾಂಕ್ಗೆ ಸುಪ್ರಿಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ, "ನೀವು ವಾಚ್ಡಾಗ್, ನಿಯಂತ್ರಕ ಸಂಸ್ಥೆ. ಒಂದು ಕಡೆ ಜನರು ಸಾವಿರಾರು ಕೋಟಿ ಸಾಲಗಳನ್ನು ತೆಗೆದುಕೊಂಡು ಸಾಮ್ರಾಜ್ಯಗಳನ್ನು ನಡೆಸಿ ದಿವಾಳಿಯಾಗುತ್ತಾರೆ. ಅಂತಹ ವಿಚಾರಗಳು ಇತ್ಯರ್ಥವಾಗದೇ ಉಳಿದು ಹೋಗುತ್ತವೆ. ಇನ್ನೊಂದು ಕಡೆ, ರೈತರು ಕೆಲವೇ ಸಾವಿರ ರೂ. ಸಾಲ ತೆಗೆದುಕೊಂಡು ಸಾಲ ಮರುಪಾವತಿಗೆ ವಿಫಲರಾದರೆ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುತ್ತೀರಿ,'' ಎಂದು ಸುಪ್ರೀಂಕೋರ್ಟ್ ಛಾಟಿ ಬೀಸಿತು.

1 ಲಕ್ಷ ಕೋಟಿಗೂ ಅಧಿಕ ಸಾಲ ಮರು ಪಾವತಿಸದಿರುವವರನ್ನು ಗುರುತಿಸಿ ಅವರಿಗೆ ಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ವೇಳೆ, ಇತ್ತೀಚೆಗೆ ತಮಿಳುನಾಡಿನಲ್ಲಿ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡು ಕಟ್ಟಲು ಸಾಧ್ಯವಾಗದ ರೈತರ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲು ಬ್ಯಾಂಕ್ಗಳು ಏಜೆಂಟ್ಗಳನ್ನು ಕಳುಹಿಸಿರುವ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಧೀಶರು, "ಶ್ರೀಮಂತರು ಕೋಟ್ಯಂತರ ರೂಪಾಯಿ ತೆಗೆದುಕೊಂಡು ಓಡಿ ಹೋಗುತ್ತಾರೆ. ಅದೇ ಬಡ ರೈತರು ಸಾಲ ಕಟ್ಟದಿದ್ದರೆ ಅವರಿಗೆ ದಂಡ ಹಾಕುತ್ತೀರೇಕೆ?," ಎಂದು ರಿಸರ್ವ್ ಬ್ಯಾಂಕನ್ನು ಪ್ರಶ್ನಿಸಿದರು.

ವಸೂಲಾಗದ ಸಾಲದ ಮೊತ್ತವನ್ನು ಬಹಿರಂಗ ಮಾಡಿದರೆ ಅದು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆಂದು ಆರ್ಬಿಐ ಸಮಜಾಯಿಷಿ ನೀಡಿತು. ಹುಡ್ಕೋ ಕೆಲವು ಕಂಪನಿಗಳಿಗೆ ನೀಡಿದ ಸಾಲಗಳ ವಿಷಯವನ್ನು ಅದು ಮೊದಲಿಗೆ ಪ್ರಸ್ತಾಪಿಸಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ ಸಲ್ಲಿಸಿದ 500 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಸಾಲ ಸುಸ್ತಿದಾರರ ಪಟ್ಟಿಯನ್ನು ಮಂಗಳವಾರ ಪರಿಶೀಲಿಸಿದ ಸುಪ್ರೀಂಕೋರ್ಟ್ 'ಇದು ಸಾಕಷ್ಟು ದೊಡ್ಡ ಮೊತ್ತ' ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ಸುಸ್ತಿ ಸಾಲಗಳ ಪಟ್ಟಿಯನ್ನು ಪ್ರಕಟಿಸಬಹುದೇ ಎಂಬುದಾಗಿ ತಾನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತು.ಆದರೆ ರಹಸ್ಯ ಪಾಲನೆಯ ವಿಧಿ ಇದಕ್ಕೆ ಅಡ್ಡ ಬರುತ್ತವೆ ಎಂದು ರಿಸರ್ವ್ ಬ್ಯಾಂಕ್ ನ್ಯಾಯಾಲಯಕ್ಕೆ ತಿಳಿಸಿತು.

500 ಕೋಟಿ ರೂಪಾಯಿಗೂ ಅಧಿಕ ಸಾಲ ಬ್ಯಾಂಕ್ ಗಳಲ್ಲಿ ಬಾಕಿ ಉಳಿಸಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಪ್ರಶಾಂತ್ ಭೂಷಣ್ ಮನವಿ ಮಾಡಿದ್ದರು. ಹೆಸರುಗಳನ್ನು ಬಹಿರಂಗಪಡಿಸಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆಯೇ ಎಂದು ಹಣಕಾಸು ಇಲಾಖೆ ಮತ್ತು ಬ್ಯಾಂಕ್ ಗೆ ನ್ಯಾಯಾಲಯ ಕೇಳಿದೆ.

2015ರಲ್ಲಿ 40,000 ಕೋಟಿ ರೂ. ಕಾರ್ಪೊರೇಟ್ ಸಾಲವನ್ನು ರದ್ದು ಮಾಡಿದ್ದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.