ದೇವೇಗೌಡ ಕುಟುಂಬದ ಬಿಕ್ಕಟ್ಟಿನ ಲಾಭ: ಯಡಿಯೂರಪ್ಪ ಹಾದಿ ಇನ್ನಷ್ಟು ಸುಲಭ
ಸುದ್ದಿ ಸಾಗರ

ದೇವೇಗೌಡ ಕುಟುಂಬದ ಬಿಕ್ಕಟ್ಟಿನ ಲಾಭ: ಯಡಿಯೂರಪ್ಪ ಹಾದಿ ಇನ್ನಷ್ಟು ಸುಲಭ

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಎರಡು ವರ್ಷವಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ.

ಮಾಜಿ ಮುಖ್ಯಮಂತ್ರಿ, ಹಳೇ ಹುಲಿ ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ; ಪ್ರತಿಪಕ್ಷವಾಗಿ ಬಿಜೆಪಿ ಜೀವಂತವಾಗಿದೆ ಎಂಬ ಸಂದೇಶವನ್ನೂ, ಮುಂದಿನ ಚುನಾವಣೆಯಲ್ಲಿ ಸಶಕ್ತ ಪರ್ಯಾಯವೊಂದನ್ನು ನೀಡಬಲ್ಲೆವು ಎಂಬ ಭರವಸೆಯನ್ನು ಏಕಕಾಲಕ್ಕೆ ರವಾನಿಸುವ ಕೆಲಸ ಮಾಡಿದೆ ರಾಷ್ಟ್ರೀಯ ಪಕ್ಷ. ಬಿಜೆಪಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವ ಕಾಲಕ್ಕೆ ಸರಿಯಾಗಿ ರಾಜ್ಯದ ಸಿದ್ದರಾಮಯ್ಯ ಸರಕಾರ ತನ್ನ ಮೇಲಿದ್ದ ಭರವಸೆಗಳನ್ನು ಕಳೆದುಕೊಂಡಿದೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಯೋಜನೆಗಳನ್ನು ಹೊರತು ಪಡಿಸಿದರೆ, ಒಟ್ಟಾರೆ ಒಂದು ಸರಕಾರವಾಗಿ ಜನರನ್ನು ಸೆಳೆಯುವಲ್ಲಿ ಸೋತಿದೆ. ಇದರ ಜತೆಗೆ, ಗಮನಿಸಬೇಕಿರುವ ಪ್ರಮುಖ ಅಂಶ, ಪ್ರಾದೇಶಿಕ ಪಕ್ಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದ ಜೆಡಿಎಸ್ ಪಕ್ಷದೊಳಗಿನ ನಿರಾಶಾದಾಯಕ ಸ್ಥಿತಿ.

ಬಿಬಿಎಂಪಿ ಅಧಿಕಾರದ ಸರ್ಕಸ್ನಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸಿದೆ ಎಂಬ ಒಂದೇ ಒಂದು ಅಂಶವನ್ನು ಪಕ್ಕಕ್ಕಿಟ್ಟು ನೋಡಿದರೆ, ಇವತ್ತು ತನ್ನೊಳಗಿನ ಅಧಿಕಾರ ದಾಹ, ಇಬ್ಬಂದಿತನ ಹಾಗೂ ನಿಷ್ಠಾವಂತರ ಅಭಾವದಿಂದಾಗಿ ದಯನೀಯ ಪರಿಸ್ಥಿತಿಯನ್ನು ತಲುಪಿದೆ ಪ್ರಾದೇಶಿಕ ಪಕ್ಷ. ಪದ್ಮನಾಭ ನಗರದ 'ಹೆಡ್ ಕ್ವಾರ್ಟರ್'ನಲ್ಲಿ ಅಪನಂಬಿಕೆ ತಾಂಡವವಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಮತ್ತೆ ಜನರ ನಡುವೆ ತೆಗೆದುಕೊಂಡು ಹೋಗುವ ಸಾಧ್ಯತೆಗಳಿರುವ ಕುಮಾರಸ್ವಾಮಿ ವೃತ್ತಿಪರತೆಯ ಕೊರತೆಯಿಂದ ನರಳುತ್ತಿದ್ದಾರೆ. ಅತ್ತ ರೇವಣ್ಣ ಕುಟುಂಬ ಹಾಗೂ ಆಡಳಿತ ಪಕ್ಷದೊಂದಿಗಿನ ಸಂಬಂಧವನ್ನು ಸಂಭಾಳಿಸುವುದರಲ್ಲೇ ಸುಸ್ತಾಗಿದ್ದಾರೆ. ಬಹುಶಃ ಇವತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ನಿರೀಕ್ಷಿತ ನೇಮಕಾತಿ ನಂತರ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಜೆಡಿಎಸ್ ಪಕ್ಷದ ಇಂತಹ ಸೋಲುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ.

ಸಮಸ್ಯೆ ಮೂಲ:

ಜೆಡಿಎಸ್ ಪಕ್ಷದ ಇವತ್ತಿನ ಸಮಸ್ಯೆಗಳ ಮೂಲವನ್ನು ಹುಡುಕಿಕೊಂಡು ಹೊರಟರೆ ಮತ್ತದೇ ಪದ್ಮನಾಭನಗರದ ದೇವೇಗೌಡರ ಮನೆಯ ಅಂತರಂಗಕ್ಕೆ ಬಂದು ನಿಲ್ಲುತ್ತದೆ. ಸದ್ಯ ದೇವೇಗೌಡರ ತಲೆಯಲ್ಲಿ ಓಡುತ್ತಿರುವುದು, ಹೇಗಾದರೂ ಮಾಡಿ ಒಮ್ಮೆ ರೇವಣ್ಣ ಅವರಗೆ ಅಧಿಕಾರ ಸ್ಥಾನ ಕೊಡಿಸಬೇಕು ಎಂಬ ವಿಚಾರ. ಇದು ಕಿರಿಯ ಮಗ ಕುಮಾರಸ್ವಾಮಿಯವರಿಗೆ ಸ್ವಲ್ಪ ಹೆಚ್ಚೇ ಸ್ಪಷ್ಟವಾಗಿ ಅರ್ಥವಾದಂತಿದೆ. ಹೀಗಾಗಿ, ಅವರು ರಾಜಕೀಯಕ್ಕಿಂತ ಹೆಚ್ಚಾಗಿ ಮಗನ ಸಿನಿಮಾ ವಿಚಾರಕ್ಕೆ ಸಮಯ ಮೀಸಲಿಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಇಲ್ಲದಿದ್ದರೆ ಜನರ ಮಟ್ಟಕ್ಕೆ ಜೆಡಿಎಸ್ ಪಕ್ಷವನ್ನು ತೆಗೆದುಕೊಂಡು ಹೋಗುವುದು ಕಷ್ಟ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಇಂತಹದೊಂದು ಇಬ್ಬಂದಿತನದಿಂದಾಗಿ, ಕುಮಾರಸ್ವಾಮಿ ಎರಡು ದಿನ ಕ್ರೀಯಾಶೀರಾಗಿದ್ದಂತೆ ಕಂಡು ಬಂದರೆ, ಉಳಿದ 20 ದಿನ ತೆರೆಮರೆಗೆ ಸರಿದು ಹೋಗುತ್ತಿದ್ದಾರೆ. ಸಹಜವಾಗಿಯೇ ಇದು ಪಕ್ಷದ ಮೇಲೂ ಪರಿಣಾಮ ಬೀರುತ್ತಿದೆ. ಇದರ ಜತೆಗೆ, ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವೈ ಎಸ್ ವಿ ದತ್ತಾ ಭೇಟಿಯೂ ಈಗ ಅಪರೂಪ ಎಂಬ ಮಾಹಿತಿ ಇದೆ. ಅವರೀಗ ಜೆಡಿಎಸ್ ಹೊರತು ಪಡಿಸಿಯೂ ಇರುವ ಪರ್ಯಾಯಗಳ ಆಲೋಚನೆಯ ಗುಂಗಿನಲ್ಲಿದ್ದಾರೆ.

ನಿಷ್ಠರ ಕತೆ:

ಇನ್ನು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜತೆಗಿದ್ದವರು ನಾಗಮಂಗಲದ ಚಲುವರಾಯ ಸ್ವಾಮಿ, ಜಮೀರ್ ಅಹಮದ್, ಮಾಜಿ ಸಭಾಪತಿ ಪುಟ್ಟಣ್ಣ ಹಾಗೂ ಮಾಗಡಿಯ ಬಾಲಕೃಷ್ಣ. ಇವತ್ತು ಕುಮಾರಸ್ವಾಮಿ ಜತೆಗೆ ಇವರಿಗಿದ್ದ ಸಂಬಂಧ ಹಳಸಿದೆ. ಆದರೆ, ಆರ್ಥಿಕವಾಗಿ ಇವರೆಲ್ಲರೂ ಜೆಡಿಎಸ್ ಒಳಗಡೆ ಬಲಿಷ್ಠರಾಗಿರುವವರು. ಹಾಗಂತ ಪಕ್ಷ ತೊರೆದು ಸ್ವಂತಿಕೆ ಮೇಲೆ ಚುನಾವಣೆ ಗೆಲ್ಲುತ್ತೀವಿ ಎಂಬ ವಿಶ್ವಾಸ ಇವರುಗಳಿಗಿಲ್ಲ. ಅತ್ತ ಪಕ್ಷದಲ್ಲಿದ್ದು, ಪಕ್ಷದ ಏಳಿಗೆಗಾಗಿ ದುಡಿಯುವವರೂ ಇವರಲ್ಲ. ಜೆಡಿಎಸ್ ಒಳಗಿನ ಹಲವು ಸಮಸ್ಯೆಗಳ ಪೈಕಿ ಇಂತಹದೊಂದು ನಿಷ್ಟಾವಂತಿಕೆ ಕೊರತೆಯೂ ಪ್ರಮುಖ ಅಂಶ.

ತಾರ್ಕಿಕ ಅಂತ್ಯವಿಲ್ಲ:

ಹಾಗೆ ನೋಡಿದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಸರಕಾರವನ್ನು ಸದನದೊಳಗೆ, ಹೊರಗೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿದ್ದು ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್. ಬೆಳಗಾವಿ ಅಧಿವೇಶನದಲ್ಲಿ ಕುಮಾರಸ್ವಾಮಿ ಮರಳು ಮಾಫಿಯಾ ದಂಧೆಯನ್ನು ಎಳೆಎಳೆಯಾಗಿ ಸದನದೊಳಗೆ ಬಿಚ್ಚಿಟ್ಟರು. ಇನ್ನೇನು ಮಂತ್ರಿ ಮಹದೇವಪ್ಪರ ಕುರ್ಚಿಗೆ ಸಂಚಕಾರ ತಂದರು ಅಂದುಕೊಳ್ಳುವಷ್ಟರಲ್ಲಿ ಮಧ್ಯಾಹ್ನದ ಊಟದ ವಿರಾಮ ಬಂತು. ಊಟ ಮುಗಿಸಿ ಸದನ ಮತ್ತೆ ಸೇರಿದಾಗ, ಕುಮಾರಸ್ವಾಮಿ ಮೆತ್ತಗಾಗಿದ್ದರು. ಅಲ್ಲಿಂದ ಶುರುವಾಗಿ, ಮೊನ್ನೆ ಮೊನ್ನೆಯ ಸಿದ್ದರಾಮಯ್ಯ ವಾಚ್ ಪ್ರಕರಣಗಳವರೆಗೆ ದನಿ ಎತ್ತಿ ಮಾತನಾಡಿದವರು ಕುಮಾರಸ್ವಾಮಿ. ಆದರೆ, ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ. ಇದಕ್ಕೆ ಕಾರಣಗಳೇನು ಎಂಬುದು ಆರ್ಥಿಕ ಸಂಕಷ್ಟದಲ್ಲಿರುವ ಜೆಡಿಎಸ್ ಬಗ್ಗೆ ಗೊತ್ತಿರುವವರೆಲ್ಲರೂ ಊಹಿಸಬಹುದು.

ಲಾಭ ಯಾರಿಗೆ?:

ಇದರ ಆಚೆಗೂ ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಅನಿರ್ವಚನೀಯವಾಗಿರುವ ಸಾಧ್ಯತೆಯೊಂದು ಎಲ್ಲಾ ಕಾಲಕ್ಕೂ ಇದೆ. ಕಳೆದ ಒಂದು ದಶಕದ ಅವಧಿಯಲ್ಲಿ ಜೆಡಿಎಸ್ ಪಕ್ಷವನ್ನು ಸ್ಥಳೀಯ ಮಟ್ಟದಲ್ಲಿ ಪುನರಚಿಸುವ ಕೆಲಸ ನಡೆದಿಲ್ಲ. ಆದರೂ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳ ಪ್ರತಿ ಹಳ್ಳಿಯಲ್ಲೂ ಜೆಡಿಎಸ್ ಅಭಿಮಾನ ಹೊಂದಿರುವವರು ಕಾಣಸಿಗುತ್ತಾರೆ. ಆದರೆ, ಇವರಲ್ಲಿ ನೈತಿಕ ಸ್ಥೈರ್ಯ ತುಂಬುವ ಮೂಲಕ ಪಕ್ಷವನ್ನು ಮುನ್ನೆಲೆಗೆ ತರಬೇಕಾದ ನಾಯಕತ್ವ ಇಲ್ಲ ಅಥವಾ ದೇವೇಗೌಡರ ಕುಟುಂಬ ತನ್ನದೇ ಸಿಕ್ಕುಗಳಲ್ಲಿ ಸಿಲುಕಿ ನರಳುತ್ತಿದೆ. ಅನಾಯಾಸವಾಗಿ, ಶ್ರಮವೇ ಇಲ್ಲದೆ ಅಧಿಕಾರ ಅನುಭವಿಸಿದ ಕುಮಾರಸ್ವಾಮಿ, ಮತ್ತೊಮ್ಮೆ ಹೀಗೆ ಹಿಂಬಾಗಿಲ ಮೂಲಕ ಶಕ್ತಿಸೌಧದ ಖುರ್ಚಿ ಏರಬಹುದು ಎಂಬ ಕಲ್ಪನೆಯಲ್ಲಿದ್ದಾರೆ.

ಹೀಗಿರುವಾಗ, ಮನೆಯೊಳಗೆ ಭಿನ್ನಮತವನ್ನೂ, ಹೊರಗೆ ಕೇಸುಗಳ ಭಾರವನ್ನೂ ಹೊತ್ತಿರುವ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಅವರನ್ನು ಅಪ್ಪಿ ಮುದ್ದಾಡುತ್ತಿರುವುದು ಅಚ್ಚರಿ ಮೂಡಿಸಬೇಕಾದ ರಾಜಕೀಯ ಬೆಳವಣಿಗೆ ಏನಲ್ಲ.