samachara
www.samachara.com
ನಿಯಂತ್ರಣಕ್ಕೆ ಸಿಗದ 'ಓಲಾ ಸುಲಿಗೆ': ಕ್ಯಾಬ್ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ
ಸುದ್ದಿ ಸಾಗರ

ನಿಯಂತ್ರಣಕ್ಕೆ ಸಿಗದ 'ಓಲಾ ಸುಲಿಗೆ': ಕ್ಯಾಬ್ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆ್ಯಪ್ ಆಧಾರಿತ ಟಾಕ್ಸಿ ಸೇವೆ ನೀಡುವ ಬೆಂಗಳೂರು ಮೂಲದ ಓಲಾ ಗ್ರಾಹಕರಿಂದ ಯದ್ವಾತದ್ವಾ ಸುಲಿಗೆಗೆ ಇಳಿದಿದೆ.

ಪೀಕ್ ಅವರ್ (ಬೇಡಿಕೆ ಗರಿಷ್ಠವಿರುವ ಅವಧಿ) ಗಳಲ್ಲಿ ಬೆಲೆಯನ್ನು ಒಂದೂವರೆ ಪಟ್ಟು, ದುಪ್ಪಟ್ಟು ಏರಿಸಿ ಗ್ರಾಹಕರಿಗೆ ಓಲಾ ಬರೆ ಹಾಕುತ್ತಿದೆ. ಜಾಹೀರಾತುಗಳಲ್ಲಿ ಒಂದು, ಗ್ರಾಹಕರಿಗೆ ಬಿಲ್ ನೀಡುವಾಗ ಇನ್ನೊಂದು ದರಪಟ್ಟಿ, ಓಲಾ ಸುಲಿಗೆಯ ಮತ್ತೊಂದು ವಿಧಾನ. ಜತೆಗೆ, ಪ್ರಯಾಣದ ಅವಧಿಗೆ ಪ್ರತಿ ನಿಮಿಷಕ್ಕೆ 1 ರೂಪಾಯಿ ಗ್ರಾಹಕರಿಂದ ವಸೂಲಿ ಮಾಡುತ್ತಿದೆ. ವಿಶೇಷ ಅಂದರೆ, ನಗರ ಸಾರಿಗೆ ವ್ಯವಸ್ಥೆಯಲ್ಲಿ ಗ್ರಾಹರಿಗೆ ಸುಲಿಗೆಯಾಗುತ್ತಿದೆ, ಇದನ್ನು ತಡೆಯಲು ನಾವು ಬರುತ್ತಿದ್ದೇವೆ ಎಂದು ಓಲಾ ಕಂಪನಿ ಬೆಂಗಳೂರಿಗೆ ಕಾಲಿಟ್ಟಿತ್ತು. ಇವತ್ತು ಬೃಹತ್ ಉದ್ಯಮವಾಗಿ ಬೆಳೆದಿರುವ ಓಲಾ ತನ್ನ ಮೂಲ ಆಶಯವನ್ನೇ ಮರೆತಿದೆ. ಇದು ಓಲಾ ಮತ್ತದರ ಬದಲಾದ ನಿಲುವುಗಳಿಂದ ಗ್ರಾಹಕರ ಸುಲಿಗೆ ಮಾಡುತ್ತಿರುವ ಕರ್ಮಕಾಂಡದ ಕತೆ.

ಅವಧಿ ತಂತ್ರ:

ಹಿಂದೆ, ಓಲಾದಲ್ಲಿ ಪ್ರಯಾಣಿಸಿದ ದೂರಕ್ಕೆ ಮಾತ್ರ ಹಣ ತೆರಬೇಕಾಗಿತ್ತು ಆದರೆ  ಈಗ ಪ್ರಯಾಣಿಸಿದ ಅವಧಿಗೂ ಹಣ ಕೇಳುತ್ತದೆ. ಪ್ರಯಾಣದ ಅವಧಿಯ ಪ್ರತಿ ನಿಮಿಷಕ್ಕೂ 1 ರೂಪಾಯಿಯಂತೆ ಓಲಾ ಚಾರ್ಜ್ ಮಾಡುತ್ತದೆ. ಅಂದರೆ, ಬೆಂಗಳೂರಿನ ಟ್ರಾಫಿಕ್ನಿಂದಾಗಿ ರಸ್ತೆ ಜಾಮ್ ಆದರೆ, ಆ ಅವಧಿಗೂ ಪ್ರಯಾಣಕ ಜೇಬಿನಿಂದ ಹಣ ಪೀಕಲಾಗುತ್ತದೆ. ಇಂತಹದೊಂದು ವಿಚಿತ್ರ ದರ ಪಟ್ಟಿಯನ್ನು ಸಾರಿಗೆ ಇಲಾಖೆಯ ಕಾನೂನು ಮಾನ್ಯ ಮಾಡುವುದಿಲ್ಲ. "ಓಲಾ ಪ್ರಯಾಣದ ಅವಧಿಗೂ ದರ ವಿಧಿಸುತ್ತಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಅದು ಕಾನೂನಿಗೆ ವಿರುದ್ಧವಾದುದು,'' ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು.

ಬೇಡಿಕೆ ಆಧರಿಸಿ ದರ:

ಟ್ಯಾಕ್ಸಿಗೆ ಸ್ವಲ್ಪ ಮಟ್ಟಿಗೆ ಬೇಡಿಕೆ ಇದೆ ಎಂದು ಗೊತ್ತಾದರೆ ಸಾಕು ಓಲಾದ ದರ ಪಟ್ಟಿಯೇ ಬದಲಾಗುತ್ತದೆ. ಹೇಗೆ ಆಟೋ ಚಾಲಕರು ಒಂದುವರೆ, ಎರಡು ಪಟ್ಟು ಹಣ ಕೇಳುತ್ತಾರೋ ಅದೇ ರೀತಿಯಲ್ಲಿ ಓಲಾವೂ ಕೇಳುತ್ತದೆ. ಬುಕ್ ಮಾಡಲು ಆ್ಯಪ್ ತೆರೆಯುತ್ತಿದ್ದಂತೆ 1. 6× (ಪಟ್ಟು) ದರವಿದೆ, ಆಗಬಹುದೇ ಎಂದು ಕೇಳುತ್ತದೆ. ನೀವು ಓಕೆ ಅಂದರೆ ಮುಗಿಯಿತು ಎಲ್ಲಾ ಸೇರಿಸಿ 1. 6 ಪಟ್ಟು ದರ ವಸೂಲಿ ಮಾಡುತ್ತದೆ. ನಿಮ್ಮ ಪ್ರಯಾಣದ ದೂರ, ಅವಧಿ ಸೇರಿ 1.6 ಪಟ್ಟು ದರ ನೀಡಬೇಕು." ಕೆಲವೊಮ್ಮೆ ಇದು 1.2, 1.4, 1.5, 1.6 ಹೀಗೆ ಬೆಳೆಯುತ್ತಾ ಹೋಗುವುದಿದೆ. ಆದರೆ ‘ಈ ಹಣ ನಮಗೆ ಬರುವುದೇ ಇಲ್ಲ ಎಲ್ಲವನ್ನೂ ಓಲಾ ತಿಂದು ತೇಗುತ್ತದೆ. ಬೇಡಿಕೆಯೇ ಇರುವುದಿಲ್ಲ. ಹೀಗಿದ್ದೂ ಕಂಪನಿ ಸುಖಾಸುಮ್ಮನೆ ಚಾಲಕರ ಮೇಲೆ ಒತ್ತಡ ಹಾಕುತ್ತದೆ,'' ಎನ್ನುವುದು ಚಾಲಕರ ಆರೋಪ. ಏಪ್ರಿಲ್ ತಿಂಗಳಿನಲ್ಲಿ ಸಾರಿಗೆ ಇಲಾಖೆ ಹೊಸ ಕಾನೂನನ್ನು ಜಾರಿಗೆ ತಂದಿದೆ. 'ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳು- 2016' ಅಡಿಯಲ್ಲಿ ಓಲಾದ ಇಂತಹ ಸುಲಿಗೆ ತಂತ್ರಕ್ಕೆ ಬ್ರೇಕ್ ಹಾಕುವ ಮನಸ್ಸು ಮಾಡಿದೆ ಸರಕಾರ. ಆದರೆ, ಕಾನೂನು ಜಾರಿಯಾಗಿ 10 ದಿನ ಕಳೆದರೂ, ಇನ್ನೂ ಓಲಾ ಸಂಸ್ಥೆ ತನ್ನ ಸುಲಿಗೆಯನ್ನು ಮಾತ್ರ ನಿಲ್ಲಿಸಿಲ್ಲ ಎಂಬ ದೂರುಗಳಿವೆ.

ಸುಳ್ಳು ಜಾಹೀರಾತು:

ಇನ್ನು ಓಲಾ ತಾನು ನೀಡುವ ಜಾಹೀರಾತುಗಳಲ್ಲಿ ಬೇಕೆಂದೇ ಗ್ರಾಹಕರ ದಾರಿ ತಪ್ಪಿಸುತ್ತಿದೆ. ಎಲ್ಲೂ ತನ್ನ ಜಾಹೀರಾತುಗಳಲ್ಲಿ ಪ್ರತಿ ನಿಮಿಷಕ್ಕೆ ಒಂದು ರೂ. ಚಾರ್ಜ್ ಮಾಡುತ್ತೇನೆ ಎನ್ನುವುದಿಲ್ಲ. ನೀವು ಜಾಹೀರಾತನ್ನೇ ನಂಬಿ ಆ್ಯಪ್ ನಲ್ಲಿ ಕ್ಯಾಬ್ ಬುಕ್ ಮಾಡಿದರೆ ಬರೆ ಗ್ಯಾರೆಂಟಿ. ಓಲಾ ಕಂಪನಿ 'ಟ್ಯಾಕ್ಸಿ ಫಾರ್ ಶೂರ್' ಕಂಪೆನಿಯನ್ನು 200 ಕೋಟಿಗೆ ಖರೀದಿಸಿತ್ತು. ಟ್ಯಾಕ್ಸಿ ಫಾರ್ ಶೂರ್ ಕ್ಯಾಬ್ ಗಳನ್ನೂ ಓಲಾ ಆ್ಯಪ್ ನಲ್ಲಿ ಬುಕ್ ಮಾಡುವ ಅವಕಾಶವಿದೆ. ಇಲ್ಲಿಇನ್ನೂ ಹೆಚ್ಚಿನ ದರವಿದ್ದು ಪ್ರಯಾಣದ ಪ್ರತಿ ನಿಮಿಷಕ್ಕೂ 1.5 ರೂ. ನೀಡಬೇಕು.

ಇನ್ನು ಓಲಾ ತನ್ನ ಬ್ಲಾಗ್ ನಲ್ಲಿಯೂ ಗ್ರಾಹಕರನ್ನು ವಂಚಿಸುವುದನ್ನು ಬಿಟ್ಟಿಲ್ಲ. ಉದಾಹರಣೆಗೆ ಇಲ್ಲಿ ಓಲಾ ಮೈಕ್ರೋ ಸೇವೆಗೆ ಕಿಲೋಮೀಟರ್ ಗೆ 6 ರೂ. ತೆರಬೇಕು ಎಂದಷ್ಟೇ ಇದೆ. ಮಿನಿಮಮ್ ದರ (ಬಿಲ್ ನಲ್ಲಿ ಇದೇ ಬೇಸ್ ಫೀ ಎಂದು ನಮೂದಾಗಿದೆ) ಮತ್ತು ಪ್ರಯಾಣದ ಅವಧಿಗೆ ತೆರಬೇಕಾದ ಹಣದ ವಿವರಗಳಿಲ್ಲ. ಓಲಾದ ವೆಬ್ ನಲ್ಲೇ ಇರುವ ಮಾಹಿತಿಯ ಪ್ರಕಾರ ಮೈಕ್ರಾ ಏರ್ ಕಂಡೀಷನ್ಡ್ ಸೇವೆ. ಹೀಗಿದ್ದೂ ಹೆಚ್ಚಿನ ಡ್ರೈವರ್ ಗಳು ಎಸಿ ಹಾಕುವುದೇ ಇಲ್ಲ. ಗ್ರಾಹಕರಿಗೆ ಮೈಕ್ರಾ ಕ್ಯಾಬ್ ಗೆ ಎಸಿ ಸೇವೆ ಇದೆಯೋ ಇಲ್ವೋ ಎಂಬ ಮಾಹಿತಿ ಆ್ಯಪ್ ನಲ್ಲಿ ಸಿಗುವುದಿಲ್ಲ. ಹೀಗೆ ಜಾಹೀರಾತಿನಲ್ಲೊಂದು, ವೆಬ್ ನಲ್ಲೊಂದು, ಆ್ಯಪ್ ನಲ್ಲಿ ಬೇರೆಯದೇ ಮಾಹಿತಿ ನೀಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ ಓಲಾ ಕಂಪನಿ.

ಓಲಾ ತನ್ನ ವೆಬ್ ಸೈಟ್ ನಲ್ಲೇ ನೀಡಿದ ದರ ಪಟ್ಟಿಯಲ್ಲಿ ಓಲಾ ಮೈಕ್ರೋ ಕ್ಯಾಬ್ ಮಿನಿಮಮ್ ದರ 40 ರೂ. ಇನ್ನು ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ತೆರಬೇಕಾದ ಹಣ 6 ರೂ. ಪ್ರಯಾಣದ ಅವಧಿಯ ಪ್ರತಿ ನಿಮಿಷಕ್ಕೆ 1 ರೂ. ಎಂದಿದೆ. ಇದರ ಅರ್ಥ ನೀವು 40 ರೂ. ಬಿಲ್ ಆಗುವಷ್ಟು ಪ್ರಯಾಣಿಸದೆಯೂ 40 ರೂ. ತೆರಬೇಕು. ಒಂದೊಮ್ಮೆ ನಿಮ್ಮ ಪ್ರಯಾಣದ ಬಿಲ್ 40 ರೂ. ದಾಟಿದರೆ ಹೆಚ್ಚಿನ ಬಿಲ್ ತೆರಬೇಕಾಗುತ್ತದೆ.

ತನ್ನದೇ ವೆಬ್ ನಲ್ಲಿ ಮಿನಿಮಮ್ ದರ ಎಂದಿದ್ದನ್ನು ಬಿಲ್ ನೀಡುವಾಗ ಮೂಲ ದರ (ಬೇಸ್ ಫೀ) ಎಂದು ಬದಲಾಯಿಸುತ್ತದೆ ಕಂಪನಿ. ವೆಬ್ ಸೈಟ್ ನಲ್ಲಿ ನೀಡಿರುವ ದರ ಪಟ್ಟಿಯಂತೆ ಚಿತ್ರ '1'ರಲ್ಲಿ ತೋರಿಸಿರುವ ಪ್ರಯಾಣಕ್ಕೆ 279.73 ರೂಪಾಯಿ (ಸೇವಾ ತೆರಿಗೆ 5.6% ಮತ್ತು ಸ್ವಚ್ಛ ಭಾರತ ಸೆಸ್ 0.2% ಸೇರಿಸಿ) ಆಗಬೇಕಾಗಿತ್ತು. ಆದ್ರೆ ಬಿಲ್ ನಲ್ಲಿ ಓಲಾ ಮಿನಿಮಮ್ ದರವನ್ನೇ ಮೂಲ ದರವೆಂದು ಬದಲಾಯಿಸಿ 348 ರೂ. ವಸೂಲಿ ಮಾಡಿದೆ. ಅಂದರೆ 68.27 ರೂ. ಹೆಚ್ಚುವರಿ ಜೇಬಿಗಿಳಿಸಿದೆ. ಇದು ಪ್ರತಿ ಟ್ರಪ್ ಬಿಲ್ನಲ್ಲೂ ಓಲಾ ನಡೆಸುತ್ತಿರುವ ಗ್ರಾಹಕರ ಸುಲಿಗೆಯ ಒಂದು ಸ್ಯಾಂಪಲ್ ಅಷ್ಟೆ.

ಆಟೋ ಚಾಲಕರ ಮೀಟರ್ ಮೇಲೆ 10 ರೂಪಾಯಿ ಕೊಡಿ, 20 ಕೊಡಿ ಎಂಬಿತ್ಯಾದಿ ಬೇಡಿಕೆಗಳಿಗೆ ಜನ ರೋಸಿ ಹೋಗಿದ್ದರು. ಅವರೆಲ್ಲಾ ಓಲಾಗೆ ಬಂದರೆ ಇಲ್ಲೂ ಅದೇ ಕತೆ. ಆದರೆ ಇಲ್ಲಿ ಬಾಯಿ ಬಿಟ್ಟು ಕೇಳುವುದಿಲ್ಲ, ಬದಲಾಗಿ ತುಂಬಾ ಸ್ಮಾರ್ಟ್ ಆಗಿ ನೀವು ಬುಕ್ ಮಾಡುವಾಗಲೇ ಹೆಚ್ಚುವರಿ ಹಣ ಕೇಳಿ ಕೈ ತೊಳೆದುಕೊಳ್ಳುತ್ತಾರೆ.

ಇದರಿಂದ ಬಲಿಪಶುಗಳಾಗುತ್ತಿರುವವರು ಗ್ರಾಹಕರು. ಸಾಮಾನ್ಯವಾಗಿ ಜಾಹೀರಾತುಗಳನ್ನು ನೋಡಿ ಟಾಕ್ಸಿ ಬುಕ್ ಮಾಡಿದವರು ಇಳಿಯುವಾಗ ಬಿಲ್ ನೋಡಿ ಹೌಹಾರುತ್ತಾರೆ. ಈ ಪರಿ ಬೆಲೆ ಹೇಗಾಗಿದ್ದು ಎಂದು ತಿಳಿಯದೆ ಚಾಲಕರಿಗೆ ಉಗಿದು ಅಂತೂ ಇಂತೂ ಕೊಟ್ಟು ಹೋಗುತ್ತಾರೆ. ಪರ್ಸ್ ನಲ್ಲಿ ದುಡ್ಡಿಲ್ಲದಿದ್ದರೆ ಮಾತ್ರ ನಿಮ್ಮ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅದಕ್ಕಾಗಿ ಯಾವುದಕ್ಕೂ ಓಲಾ ಹತ್ತುವ ಮುನ್ನ ನಿಮ್ಮ ಪರ್ಸ್ ತುಂಬಿದೆಯಾ ನೋಡಿಕೊಂಡೇ ಹತ್ತಿ. ನಿಮ್ಮ ಪರ್ಸ್ ಖಾಲಿ ಮಾಡಲೆಂದೇ ಭವಿಷ್ ಅಗರ್ ವಾಲ್ ಕಾದು ಕುಳಿತುಕೊಂಡಿದ್ದಾರೆ.

ಚಾಲಕರದ್ದೂ ಗೋಳೆ:

ಇನ್ನು ಓಲಾ ಚಾಲಕರದ್ದು ಇನ್ನೊಂದು ಕತೆ. ಇಳಿಯುವಾಗ ಬಿಲ್ ನೋಡಿ ಹೌಹಾರುವ ಗ್ರಾಹಕನ ಬೈಗುಳಕ್ಕೆ ಕಿವಿಯಾಗಬೇಕಾದವರೂ ಇವರೇ. ಕೆಲವರಂತೂ ಬಿಲ್ ಕೊಡದೇ ಹಾಗೇ ಬೈದುಕೊಂಡು ನಡೆದು ಬಿಡುತ್ತಾರೆ ಎನ್ನುತ್ತಾರೆ ಕೆಲವು ಚಾಲಕರು. ಇನ್ನು ಸಮಸ್ಯೆಯಾಯ್ತು ಎಂದು ‘ಸರ್ವಿಸ್ ಸೆಂಟರ್ ಗೆ ಕಾಲ್ ಮಾಡಿದ್ರೆ ಗಂಟೆಗಟ್ಟಲೆ ಕಾಯಿಸಿ ನಮ್ಮ ಫೋನ್ ಬಿಲ್ ತಿನ್ನುತ್ತಾರೆ. ಇತ್ತ ಬುಕ್ಕಿಂಗ್ ಮಾಡುವಾಗಲೂ ನಾವೇ ಫೋನ್ ಮಾಡಬೇಕು. ಫೋನ್ ಬಿಲ್ ಗೆ ಸುಮಾರು ಹಣ ಖರ್ಚಾಗುತ್ತದೆ. ಇದನ್ಯಾರು ಕೊಡ್ತಾರೆ’ ಎಂಬುದು ಚಾಲಕರ ಗೊಣಗಾಟ. "ದಿನಕ್ಕೆ ಕನಿಷ್ಟ 14 ಟ್ರಪ್ ಮಾಡಿದರೆ, ಇನ್ಸೆಂಟಿವ್ಸ್ ಕೊಡುತ್ತೀವಿ ಎಂದು ಕಂಪನಿ ಹೇಳುತ್ತದೆ. ಈ ಟ್ರಾಫಿಕ್ ಜಂಗುಳಿಯಲ್ಲಿ ದಿನಕ್ಕೆ 14 ಟ್ರಪ್ ಕಷ್ಟ. ಒಂದು ವೇಳೆ ಗುರಿ ಮುಟ್ಟಿದರೂ, ಅದೂ ಇದೂ ಅಂತ ಕಟ್ ಮಾಡಿ ನಮ್ಮ ಕೈಗೆ ಬರುವುದು ಕಿಲುಬು ಕಾಸು,'' ಎನ್ನುತ್ತಾರೆ ಚಾಲಕರೊಬ್ಬರು.

ಇದು ತಂತ್ರಜ್ಞಾನ ಆಧಾರಿತ ಸುಲಿಗೆಗಳ ಹೊಸ ರೂಪ. ಒಂದು ಕಾಲದಲ್ಲಿ ಆಟೋದವರಿಂದ ಬೇಸತ್ತ ಪ್ರಯಾಣಿಕರಿಗೆ ಓಲಾ ನಿಜಕ್ಕೂ ಆಶಾಕಿರಣದಂತೆ ಕಂಡು ಬಂದಿತ್ತು. ಇದೀಗ ಅದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರ ಸುಲಿಗೆಗೆ ಇಳಿದಿದೆ ಕಂಪನಿ. "ಇವತ್ತು ನಾವು ಯಾರನ್ನು ಕೇಳೋಣ ಹೇಳಿ? ಅದು ನಾಟ್ ರೀಚಬಲ್, ನಾಟ್ ಅವೈಲೇಬಲ್,'' ಎನ್ನುತ್ತಾರೆ ಸಾರಿಗೆ ಅಧಿಕಾರಿಯೊಬ್ಬರು. ನಮ್ಮದೇ ಗ್ರಾಹಕರು, ನಮ್ಮದೇ ಚಾಲಕರು- ಒಬ್ಬರದ್ದು ಹಣ, ಮತ್ತೊಬ್ಬರದ್ದು ಶ್ರಮ. ಇದರ ಲಾಭ ಮಾಡಿಕೊಳ್ಳುತ್ತಿರುವುದು ಮಾತ್ರ ಬಹುರಾಷ್ಟ್ರೀಯ ಕಂಪನಿ.

ಈ ವರದಿ ಸಿದ್ಧಪಡಿಸುವ ಸಮಯದಲ್ಲಿ ಓಲಾ ಕಂಪನಿಯ ಕಡೆಯಿಂದ ಯಾರೂ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.