samachara
www.samachara.com
ರಾಜ್ಯದಲ್ಲಿ ಸಂಚಲನ ಮೂಡಿಸಲಿದೆ 'ಜಾತಿ ಸಮೀಕ್ಷೆ': ವಾಟ್ಸಾಪ್ ಮೆಸೇಜ್ ಮರ್ಮ ಏನು?
ಸುದ್ದಿ ಸಾಗರ

ರಾಜ್ಯದಲ್ಲಿ ಸಂಚಲನ ಮೂಡಿಸಲಿದೆ 'ಜಾತಿ ಸಮೀಕ್ಷೆ': ವಾಟ್ಸಾಪ್ ಮೆಸೇಜ್ ಮರ್ಮ ಏನು?

samachara

samachara

ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ 'ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ- ಕರ್ನಾಟಕ' ಸದ್ಯದಲ್ಲಿಯೇ ಭಾರಿ ಸುದ್ದಿ ಮಾಡುವ ಸಾಧ್ಯತೆ ಇದೆ.

ವರ್ಷದ ಹಿಂದೆ, 2015ರ ಏಪ್ರಿಲ್ 11 ರಂದು ಕರ್ನಾಟಕ ಸರಕಾರ 'ಜಾತಿವಾರು ಸಮೀಕ್ಷೆ'ಗೆ ಚಾಲನೆ ನೀಡಿತ್ತು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲಾದ ಈ ಸಮೀಕ್ಷೆ 1.25 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಇದಕ್ಕಾಗಿ ಸರಕಾರ ಸುಮಾರು 170 ಕೋಟಿ ರೂಪಾಯಿ ಎತ್ತಿಟ್ಟಿತ್ತು.

ರಾಜ್ಯದ ಪ್ರತಿ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅರಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಜತೆಗೆ, ಅವರ ಜಾತಿವಾರು ಗಣತಿಯೂ ಸಮೀಕ್ಷೆಯ ಪ್ರಮುಖ ಭಾಗವಾಗಿತ್ತು. ಸೋಮವಾರ, 'ಸದರಿ ಸಮೀಕ್ಷೆಯ ಮುಖ್ಯಾಂಶಗಳು ಎಂದು ಕರೆಯಬಹುದಾದ ವಾಟ್ಸಾಪ್ ಸಂದೇಶವೊಂದು ಮಾಧ್ಯಮಗಳಲ್ಲಿ ಹರಿದಾಡಿತು. ವರ್ಷದ ಹಿಂದೆ ಸರಕಾರ ಆರಂಭಿಸಿದ್ದ ಸಮೀಕ್ಷೆಯು ಮುಕ್ತಾಯ ಹಂತಕ್ಕೆ ಬಂದಿದ್ದು, ಜಾತಿವಾರು ಗಣತಿಯ ಅಂಕಿ ಅಂಶಗಳು ಲಭ್ಯವಾಗಿವೆ' ಎಂದು ಹೇಳಲಾಯಿತು. ಇದರ ಪ್ರಕಾರ, '1.08 ಕೋಟಿ ದಲಿತರು ಹಾಗೂ 75 ಲಕ್ಷ ಮುಸ್ಲಿಂರು ರಾಜ್ಯದಲ್ಲಿದ್ದಾರೆ. ರಾಜ್ಯದ ಒಟ್ಟು 6. 11 ಕೋಟಿ ಜನಸಂಖ್ಯೆಯಲ್ಲಿ ಕ್ರಮವಾಗಿ ದಲಿತರು ಮತ್ತು ಮುಸ್ಲಿಂರು ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ, ಮೂರನೇ ಸ್ಥಾನದಲ್ಲಿ ಲಿಂಗಾಯತರು (59 ಲಕ್ಷ), ಒಕ್ಕಲಿಗರು 4 ನೇ ಸ್ಥಾನ (49 ಲಕ್ಷ)ದಲ್ಲಿ ಮತ್ತು ಐದನೇ ಸ್ಥಾನದಲ್ಲಿ ಕುರುಬರು (43. 5 ಲಕ್ಷ) ಇದ್ದಾರೆ. ನಂತರದ ಸ್ಥಾನಗಳಲ್ಲಿ ಈಡಿಗರು (14 ಲಕ್ಷ), ಬ್ರಾಹ್ಮಣರು (13 ಲಕ್ಷ), ಬೇಡರು (3 ಲಕ್ಷ) ಇದ್ದಾರೆ' ಎಂಬುದು ಆ ಸಂದೇಶದ ಸಾರಾಂಶವಾಗಿತ್ತು.

ಸೋರಿಕೆ ಆಯಿತಾ?

ಇಂತಹ ಮಾಹಿತಿ ಇರುವ ವಾಟ್ಸಾಪ್ ಸಂದೇಶ ಹರಿದಾಡುತ್ತಿದ್ದಂತೆ ಒಂದು ಹಂತದಲ್ಲಿ 'ಜಾತಿ ಸಮೀಕ್ಷೆ'ಯ ಕುರಿತು ಚರ್ಚೆ ಆರಂಭವಾಯಿತು. ಈವರೆಗೂ ರಾಜ್ಯದಲ್ಲಿ ಬಲಾಢ್ಯ ಜಾತಿಗಳು ಎನ್ನಿಸಿಕೊಂಡ ಲಿಂಗಾಯತ ಹಾಗೂ ಒಕ್ಕಲಿಗರ ಸಂಖ್ಯಾವಾರು ಬಲವನ್ನೇ ಬುಡಮೇಲು ಮಾಡುವಂತಹ ಈ ಮಾಹಿತಿ ಸಹಜವಾಗಿಯೇ ಕುತೂಹಲವನ್ನೂ ಹುಟ್ಟು ಹಾಕಿತು. ಆದರೆ, ಮಾಧ್ಯಮಗಳ ಜತೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು, "ಇನ್ನೂ ಸಮೀಕ್ಷೆಯೇ ಮುಗಿದಿಲ್ಲ. ಎರಡು ತಿಂಗಳಾದರೂ ಅಗತ್ಯವಿದೆ. ನಂತರ ಸಮೀಕ್ಷೆಯ ಸಂಪೂರ್ಣ ಮಾಹಿತಿ ನೀಡುತ್ತೇವೆ,'' ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ವರದಿಗಳು ಅಧಿಕೃತವಾಗಿ ಹೊರಬೀಳುವ ಮುನ್ನವೇ ಸೋರಿಕೆಯಾದ ದೊಡ್ಡ ಇತಿಹಾಸವೇ ಇದೆ. ಹಿಂದೆ,ಬಳ್ಳಾರಿ ಗಣಿ ಹಗರಣಗಳ ಕುರಿತು ಲೋಕಾಯುಕ್ತ ತನ್ನ ಎರಡನೇ ವರದಿ ನೀಡುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಇದೀಗ 'ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ'ಯ ಸರದಿ ಇರಬಹುದಾ ಎಂಬ ಅನುಮಾನ ಸಹಜವಾದದ್ದು.

ಚರ್ಚೆ ಹುಟ್ಟುಹಾಕಲಿದೆ:

ಈ ಕುರಿತು ವಿಧಾನಸೌಧದ ಮೂಲಗಳು ಸ್ಪಷ್ಟವಾಗಿ ಏನನ್ನೂ ಹೇಳದಿದ್ದರೂ, "ವರದಿ ಹೊರ ಬಂದಾಗ ಚರ್ಚೆಯನ್ನಂತೂ ಹುಟ್ಟು ಹಾಕಲಿದೆ. ಇಲ್ಲಿ ಎಲ್ಲವೂ ಜಾತಿ ಆಧಾರದಲ್ಲಿಯೇ ನಡೆಯುತ್ತಿರುತ್ತದೆ. ಅದು ಪಕ್ಷಗಳ ಟಿಕೆಟ್ ಹಂಚಿಕೆಯಿಂದ ಶುರುವಾಯಿತು, ಸಚಿವ ಸ್ಥಾನ ನೀಡುವವರೆಗೆ, ಅನುದಾನಗಳ ಬಿಡುಗಡೆಯಿಂದ ಶುರುವಾಗಿ, ಮೀಸಲಾತಿ ಪಟ್ಟಿಯವರೆಗೆ ಎಲ್ಲಾ ಕಡೆಯೂ ಜಾತಿ ಕೇಂದ್ರಿತ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ನಿಖರವಾಗಿ ಜಾತಿ ಆಧಾರಿಯ ಸಮೀಕ್ಷೆ ನಡೆದಿಲ್ಲ. ಇದೀಗ, ರಾಜ್ಯ ಸರಕಾರದ ಸಮೀಕ್ಷೆ ಹೊರಗೆಡವಲಿರುವ ಅಂಕಿ ಅಂಶಗಳು ಇವೆಲ್ಲಾ ಪ್ರಕ್ರಿಯೆಗಳಿಗೆ ಹೊಸ ಆಯಾಮವನ್ನೇ ನೀಡಬಲ್ಲವು,'' ಎಂದು ಅಭಿಪ್ರಾಯ ವ್ಯಕ್ತಪಡಿಸಿದವು.

ಮತ್ತೊಂದು ಮೂಲದ ಮಾಹಿತಿ ಪ್ರಕಾರ, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸಮೀಕ್ಷೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನೂ ಹಲವು ಜಿಲ್ಲೆಗಳಿಂದ ಅಂತಿಮ ವರದಿಯನ್ನು ನಿರೀಕ್ಷಸಲಾಗುತ್ತಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಹೋಗುವಂತೆ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ, ಇಂತಹ ಬೆಳವಣಿಗೆಗಳು 'ಕೂಸು ಹುಟ್ಟುವ ಮುಂಚಿನ ಕಸರತ್ತು'ಗಳಂತೆ ಕಾಣಿಸುತ್ತಿವೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯೊಂದನ್ನು ಹುಟ್ಟುಹಾಕಲಿರುವ ಸಮೀಕ್ಷೆಯ ವರದಿ ಹೊರಬರುವುದಕ್ಕೆ ಭೂಮಿಕೆ ಸಿದ್ಧಗೊಳ್ಳುತ್ತಿರುವ ಲಕ್ಷಣಗಳಿವು.