ದೇವಸ್ಥಾನಗಳಲ್ಲಿ ಕಾಲ್ತುಳಿತ; ಅಗ್ನಿ ದುರಂತ: ನ್ಯಾಷನಲ್ ರೌಂಡಪ್
ಸುದ್ದಿ ಸಾಗರ

ದೇವಸ್ಥಾನಗಳಲ್ಲಿ ಕಾಲ್ತುಳಿತ; ಅಗ್ನಿ ದುರಂತ: ನ್ಯಾಷನಲ್ ರೌಂಡಪ್

ದೇವರನ್ನು ಕಾಣಲು ಹೋದವರು ಹೆಣವಾಗಿ ಮರಳಿ ಬಂದ ಕೆಲವು ಘಟನೆಗಳ ಪಟ್ಟಿ ಇಲ್ಲಿದೆ. 

ದೇವರ ದರ್ಶನಕ್ಕೆ ಹೋದವರು ಮಸಣ ಸೇರುವ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇವೆ. ಭಾನುವಾರ ಕೇರಳದಲ್ಲಿ ಸಂಭವಿಸಿದ ಘೋರ ದುರಂತದ ಸಮಯದಲ್ಲಿ ಇಂತಹದ್ದೇ ಒಂದಷ್ಟು ಹಳೆಯ ಘಟನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಅ. 13, 2013:

ಮಧ್ಯಪ್ರದೇಶದ ರತ್ನಾಘರ್ ಜಿಲ್ಲೆಯ ದಾಟಿಯಾ ಎಂಬಲ್ಲಿ ದುರ್ಗಾ ಮಾತೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಸಮಯದಲ್ಲಿ ಸುಮಾರು 60 ಜನ ಮೃತಪಟ್ಟಿದ್ದರು.ದೇವಸ್ಥಾನಕ್ಕೆ ಸರತಿಯಲ್ಲಿ ನಿಂತಿದ್ದ ಜನರ ನಡುವೆ ನೂಕು ನುಗ್ಗಲು ಶುರುವಾಗಿತ್ತು. ಈ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಇದರಿಂದ ಗಲಿಬಿಲಿಗೊಂಡ ಭಕ್ತರು ತಪ್ಪಿಸಿಕೊಳ್ಳುವ ಭರದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಕೆಲವರು ಸಿಂದ್ ನದಿಗೆ ಕಟ್ಟಲಾದ ಸೇತುವೆ ಮೇಲಿಂದ ನದಿಗೆ ಹಾರಿದ್ದರು. ನದಿಯಲ್ಲಿ ತೇಲಿಹೋದವರ ದೇಹಗಳು ಕೊನೆಗೂ ಸಿಕ್ಕಿರಲಿಲ್ಲ.

ಫೆ. 10, 2013:

ಕುಂಭ ಮೇಳದ ಸಮಯದಲ್ಲಿ ಅಲಹಬಾದ್ ರೈಲ್ವೆ ನಿಲ್ದಾಣದ ಮೇಲ್ಸೇತುವೆ ಕುಸಿದ ಪರಿಣಾಮ ಸಾವಿರಾರು ಭಕ್ತರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಈ ಸಮಯದಲ್ಲಿ ಸಾವಿರಾರು ಜನ ಗಾಯಗೊಂಡು, 36 ಮಂದಿ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದ್ದರು.

ಜ. 25, 2005:

ಮಹಾರಾಷ್ಟ್ರದ ಮಂದರದೇವಿ ದೇವಸ್ಥಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಭಕ್ತರು ತಪ್ಪಿಸಿಕೊಳ್ಳುವ ಭರದಲ್ಲಿ ಕಾಲ್ತುಳಿತ ನಡೆದಿತ್ತು. ಈ ಸಮಯದಲ್ಲಿ ಸುಮಾರು 300 ಜನ ಸಾವನ್ನಪ್ಪಿದ್ದರು.

ಜು. 4, 2008:

ಒರಿಸ್ಸಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ 6 ಜನ ಮೃತಪಟ್ಟು, ಸುಮಾರು ಜನ ಗಾಯಗೊಂಡ ಘಟನೆ ನಡೆದಿತ್ತು. ಸರತಿಯ ಹಿಂದೆ ನಿಂತಿದ್ದ ಭಕ್ತರು ಮುಂದೆ ತಳ್ಳಿದ್ದರಿಂದ ದೇವಸ್ಥಾನದ ಗೂಳಿ ಕಟ್ಟಿದ್ದ ತಡೆಯನ್ನು ಮುಂದೆ ನಿಂತ ಭಕ್ತರು ದಾಟಿದ್ದರು. ಈ ಸಮಯದಲ್ಲಿ ದೇವಸ್ಥಾನದಲ್ಲಿದ್ದ ಭಾರಿ ದೇಹದ ಗೂಳಿ ಜನರ ಗುಂಪಿನ ಮೇಲೆ ದಾಳಿ ಮಾಡಿತ್ತು.

ಆ. 3, 2008:

ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದ ಬೆಟ್ಟವನ್ನು ಹತ್ತುತ್ತಿದ್ದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಸಮಯದಲ್ಲಿ ಸುಮಾರು 145 ಜನ ಮೃತಪಟ್ಟು 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬೆಟ್ಟದ ಕಲ್ಲು ಬಂಡೆ ಉರುಳಿ ಬರುತ್ತಿದೆ ಎಂಬ ಗಾಳಿ ಸುದ್ದಿ ಈ ಘಟನೆಗೆ ಕಾರಣವಾಗಿತ್ತು. ಮೃತಪಟ್ಟವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳಾಗಿದ್ದರು.

ಸೆ. 30, 2008:

ನವರಾತ್ರಿಯ ಸಮಯದಲ್ಲಿ ಜೋದ್ಪುರದ ಚಾಮುಂಡಿದೇವಿ ದೇವಸ್ಥಾನದಲ್ಲಿ ಘಟಿಸಿದ ಕಾಲ್ತುಳಿತದಲ್ಲಿ ಸುಮಾರು 249 ಜನ ಮೃತಪಟ್ಟಿದ್ದರು. 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಜ. 14, 2011:

ಕೇರಳದ ವಂಡಿಪೆರಿಯಾರ್ ಸಮೀಪದ ಪುಲ್ಮೇಡು ದೇವಸ್ಥಾನದಲ್ಲಿ ನಡೆದ ದುರ್ಘಟನೆಯಲ್ಲಿ 102 ಮೃತಪಟ್ಟಿದ್ದರು. ಇಲ್ಲಿಯೂ ಭಾರಿ ಸಂಖ್ಯೆಯಲ್ಲಿದ್ದ ಭಕ್ತರ ನಡುವೆ ಗದ್ದಲ ಉಂಟಾಗಿ, ಕಾಲ್ತುಳಿತ ಸಂಭವಿಸಿತ್ತು.

ನ. 9, 2011:

ಗಂಗಾನದಿಯ ದಂಡೆಯ ಮೇಲೆ ನಡೆಯುತ್ತಿದ್ದ ಗಾಯತ್ರಿ ಮಹಾಕುಂಭಮೇಳದ ಸಮಯದಲ್ಲಿ ನಡೆದ ದುರಂತದಲ್ಲಿ ಸುಮಾರು 16 ಜನ ಮೃತಪಟ್ಟಿದ್ದರು.

ಫೆ. 9, 2012:

ಫೆ. 19: ಗುಜರಾತ ರಾಜ್ಯದ ಜುನಾಘಡ್ ಜಿಲ್ಲೆಯ ಗಿರ್ನರ್ ಬೆಟ್ಟದಲ್ಲಿ ನಡೆಯುತ್ತಿದ್ದ ಮಹಾಶಿವರಾತ್ರಿಯ ಸಮಯದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಸಮಯದಲ್ಲಿ 6 ಜನ ಮೃತಪಟ್ಟು, 12 ಜನ ಗಾಯಗೊಂಡಿದ್ದರು.

ಸೆ. 24, 2012:

ಜಾರ್ಖಂಡ್ ರಾಜ್ಯದ ಡಿಯೋಘರ್ ಜಿಲ್ಲೆತಲ್ಲಿ ಸತ್ಸಂಗ್ ಆಶ್ರಮದಲ್ಲಿ ನಡೆದ ಕಾಲ್ತುಳಿತಕ್ಕೆ 8 ಮಹಿಳೆಯರು ಸೇರಿದಂತೆ ಒಟ್ಟು 9 ಜನ ಮೃತಪಟ್ಟಿದ್ದರು. 30ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದರು.

ನ. 19, 2012:

ಬಿಹಾರದ ಸಾಂಪ್ರದಾಯಿಕ ಛಾತ್ ಉತ್ಸವದ ಸಮಯದಲ್ಲಿ ರಾಜಧಾನಿ ಪಾಟ್ನದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 18 ಮಹಿಳೆಯರು ಹಾಗೂ ಮಕ್ಕಳು ಮೃತಪಟ್ಟಿದ್ದರು.