ಪರ- ವಿರೋಧಗಳ ಆಚೆಗೆ ದಾಖಲೆ ಬರೆದ ಮೋದಿ ವಿದೇಶ ಪ್ರವಾಸ: IFS ವರ್ಗ ಏನನ್ನುತ್ತೆ?
ಸುದ್ದಿ ಸಾಗರ

ಪರ- ವಿರೋಧಗಳ ಆಚೆಗೆ ದಾಖಲೆ ಬರೆದ ಮೋದಿ ವಿದೇಶ ಪ್ರವಾಸ: IFS ವರ್ಗ ಏನನ್ನುತ್ತೆ?

ಪ್ರಧಾನಿ ಮೋದಿ ವಿದೇಶ ಪ್ರವಾಸದ ವಿಚಾರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.ಏಪ್ರಿಲ್ ಮೊದಲ ವಾರದಲ್ಲಿ ಬೆಲ್ಜಿಯಂ, ಅಮೆರಿಕಾ ಹಾಗೂ ಸೌದಿ ಪ್ರವಾಸ ಸಮಯದಲ್ಲಿ 'ಏರ್ ಇಂಡಿಯಾ 1' ವಿಮಾನದಲ್ಲಿಯೇ ಪ್ರಧಾನಿ ನಿದ್ದೆ ಮಾಡುವ ಮೂಲಕ ಸಮಯ ಉಳಿತಾಯ ಮಾಡಿದ್ದಾರೆ ಎಂದು 'ಎಕನಾಮಿಕ್ ಟೈಮ್ಸ್' ವರದಿ ಶುಕ್ರವಾರ ಮಾಡಿದೆ.

"ಒಟ್ಟು ಐದು ರಾತ್ರಿ, ಆರು ಹಗಲು ವಿದೇಶ ಪ್ರಯಾಣದಲ್ಲಿ ಕಳೆದಿರುವ ಮೋದಿ, ಇದರಲ್ಲಿ ಮೂರು ರಾತ್ರಿಗಳನ್ನು ವಿಮಾನದಲ್ಲಿಯೇ ನಿದ್ದೆ ಮಾಡುವ ಮೂಲಕ ವಿದೇಶಿ ಹೋಟೆಲ್ಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ನಿರಾಕರಿಸಿದ್ದಾರೆ. ಈ ಮೂಲಕ ಪ್ರಯಾಣದ ಸಮಯ ಕಡಿಮೆಯಾಯಿತು,'' ಎಂದು ಹೆಸರನ್ನು ಹೇಳಲು ಇಚ್ಚಿಸದ ಅಧಿಕಾರಗಳು ಮಾಹಿತಿ ನೀಡಿದ್ದಾರೆ ಎಂದು 'ಪತ್ರಿಕೆ' ಹೇಳಿದೆ.

ಅಧಿಕಾರಕ್ಕೆ ಬಂದ ಮೊದಲ ಎರಡು ವರ್ಷಗಳಲ್ಲಿ, ವಿದೇಶ ಪ್ರವಾಸಗಳ ವಿಚಾರದಲ್ಲಿ ಪ್ರಧಾನಿ ಮೋದಿ, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಹಿಂದಿಕ್ಕಿದ್ದಾರೆ. ಯುಪಿಎ-1 ಹಾಗೂ 2ರ ಅಧಿಕಾರ ಅವಧಿಗಳ ಮೊದಲ 2 ವರ್ಷಗಳಲ್ಲಿ ಸಿಂಗ್, 72 ದಿನಗಳನ್ನು ವಿದೇಶ ಪ್ರವಾಸದಲ್ಲಿಯೇ ಕಳೆದಿದ್ದರು. ಆದರೆ, ಮೋದಿ ತಮ್ಮ ಅಧಿಕಾರವಧಿಯ ಮೊದಲ 700 ದಿನಗಳಲ್ಲಿ 95 ದಿನಗಳನ್ನು ವಿದೇಶ ಪ್ರವಾಸಕ್ಕಾಗಿ ಕಳೆದಿದ್ದಾರೆ. ಈವರೆಗೆ, ಒಟ್ಟು 20 ಫಾರೆನ್ ಟ್ರಿಪ್ ಮಾಡಿರುವ ಮೋದಿ, ಒಟ್ಟು 40 ದೇಶಗಳಿಗೆ ಭೇಟಿ ನೀಡಿದ್ದಾರೆ.

ಬದಲಾದ ವಿದೇಶಾಂಗ ನೀತಿ:

ಭಾರತದ ವಿದೇಶಾಂಗ ನೀತಿಗೆ ರೂಪುರೇಷೆ ನೀಡಿದವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು. ಇವರಿಗೆ ದೇಶದ ಆಂತರಿಕ ಆಡಳಿತದಷ್ಟೆ, ವಿದೇಶಾಂಗ ನೀತಿಗಳೂ ಮುಖ್ಯ ಎಂಬುದು ಮನದಟ್ಟಾಗಿತ್ತು.

"ಆಗೆಲ್ಲಾ ನೆಹರೂ ಅವರೇ ಯುಪಿಎಸ್ಸಿಯಲ್ಲಿ ಕುಳಿತು ವಿದೇಶಾಂಗ ವ್ಯವಹಾರಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದರು,'' ಎನ್ನುತ್ತಾರೆ ನಿವೃತ್ತ ಐಎಫ್ಎಸ್ ಅಧಿಕಾರಿಯೊಬ್ಬರು. ಇವರು ಹಿಂದೆ ಇಂಡಿಯನ್ ಫಾರೆನ್ ಸರ್ವಿಸ್ ಅಧಿಕಾರಿಯಾಗಿ ಹಲವು ದೇಶಗಳಲ್ಲಿ ಹಾಗೂ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದವರು. ಸದ್ಯ ನಿವೃತ್ತ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದಾರೆ.

"ನೆಹರೂ ನಂತರ ಬಂದ ಪ್ರಧಾನಿಗಳ ಪೈಕಿ ಇಂದಿರಾಗೆ ಹೆಚ್ಚು ವಿದೇಶ ವ್ಯವಹಾರಗಳ ಬಗ್ಗೆ ವ್ಯಾಮೋಹ ಇತ್ತು. ಅವರ ಬಗ್ಗೆಯೂ ವಿದೇಶದ ಹಲವು ನಾಯಕರು ವಿಶ್ವಾಸವನ್ನಿಟ್ಟುಕೊಂಡಿದ್ದರು. ಅದಾದ ಮೇಲೆ, ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದ ಪ್ರಧಾನಿ ಐ. ಕೆ. ಗುಜ್ರಾಲ್. ಅವರನ್ನು ಬಿಟ್ಟರೆ, ಮನಮೋಹನ್ ಸಿಂಗ್ ಕೂಡ ವಿದೇಶಗಳ ವ್ಯವಹಾರಗಳಲ್ಲಿ ನಿಪುಣರಾಗಿದ್ದರು. ಇದೀಗ ಮೋದಿ. ಇವರ ವಿದೇಶಾಂಗ ವ್ಯವಹಾರ ಹಿಂದಿನ ಹಲವು ಪ್ರಧಾನಿಗಳ ಸಂಪ್ರದಾಯವನ್ನು ಮೀರಿದ್ದು,'' ಎನ್ನುತ್ತಾರೆ ಈ ಅಧಿಕಾರಿ.

"ಯಾವಾಗ ವಿದೇಶಾಂಗ ವ್ಯವಹಾರಗಳ ಬಗ್ಗೆ ಆಸಕ್ತಿ ಇರುವ ಪ್ರಧಾನಿಗಳು ಅಧಿಕಾರಕ್ಕೆ ಬರುತ್ತಾರೋ, ಆಗ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತವೆ. ಸದ್ಯ ಬಿಜೆಪಿ ಸರಕಾರದ ಅಡಿಯಲ್ಲೂ ಇಲಾಖೆಯೊಳಗೆ ಬದಲಾವಣೆ ಕಂಡು ಬರುತ್ತಿದೆ. ಇದರ ಪರಿಣಾಮಗಳು ಹೊರಗೆ ಪ್ರತಿಫಲನವಾಗಲು ಇನ್ನಷ್ಟು ದಿನಗಳು ಕಾಯಬೇಕಾಗುತ್ತದೆ,'' ಎಂದು ಅವರು ಅಭಿಪ್ರಾಯಪಡುತ್ತಾರೆ.

ಏನಿದರ ಪ್ರಯೋಜನ?:

ಜನ ಸಾಮಾನ್ಯರಿಗೆ ಯಾವಾಗಲೂ ವಿದೇಶಾಂಗ ನೀತಿಗಳು ಹಾಗೂ ವಿದೇಶಾಂಗ ವ್ಯವಹಾರ ಎಂಬುದು ನಿಲುಕದ ವಸ್ತುವಾಗಿಯೇ ಉಳಿದಿರುತ್ತದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ವರ್ಗದಲ್ಲಿ ತೇರ್ಗಡೆ ಹೊಂದಿದ, ಅತೀ ಬುದ್ದಿವಂತರಿಗೆ ಮಾತ್ರವೇ ಈ ಇಲಾಖೆಯೊಳಗೆ ಪ್ರವೇಶ ಸಿಗುತ್ತದೆ.

ಸಾಮಾನ್ಯವಾಗಿ, ಎರಡು ದೇಶಗಳ ನಡುವಿನ ನೇರ ಸಂಬಂಧಗಳನ್ನು ಹಾಗೂ ಒಂದು ವಿಚಾರದ ಮೇಲೆ ಹಲವು ದೇಶಗಳ ಸಂಬಂಧಗಳನ್ನು ಈ ಇಲಾಖೆ ನಿರ್ವಹಿಸುತ್ತಿರುತ್ತದೆ. ಇದರ ಜತೆಗೆ, ವಿದೇಶಗಳಲ್ಲಿ ಇರುವ ಭಾರತದ ರಾಯಭಾರಿ ಕಚೇರಿಗಳು ಹಾಗೂ ಪಾಸ್ ಪೋರ್ಟ್ ವಿತರಣೆ ಹೊಣೆಯನ್ನು ಇಲಾಖೆ ಹೊತ್ತುಕೊಂಡಿದೆ."ವಿದೇಶಾಂಗ ನೀತಿಗಳು ಏನೇ ಹೇಳಿದರೂ, ಉಬಯ ದೇಶಗಳ ನಡುವಿನ ವಾಣಿಜ್ಯ ಸಂಬಂಧವೇ ಅಂತಿಮ ಗುರಿಯಾಗಿರುತ್ತದೆ,'' ಎನ್ನುತ್ತಾರೆ ಐಎಫ್ಎಸ್ ಅಧಿಕಾರಿಯೊಬ್ಬರು.

"ನಮ್ಮ ಇಲಾಖೆ ಹೆಚ್ಚಾಗಿ ಹಿರಿಯ ಅಧಿಕಾರಿಗಳ ಆಲೋಚನೆ ಮೇರೆಗೆ ನಡೆಯುತ್ತದೆ. ಹಲವು ವರ್ಷಗಳಿಂದ ಸ್ಥಾಪನೆಗೊಂಡಿರುವ ವಿದೇಶಾಂಗ ನೀತಿಗಳನ್ನು ನಾವು ಸಮಚಿತ್ತದಿಂದ ನಿರ್ವಹಿಸಿಕೊಂಡು ಬಂದಿರುತ್ತೇವೆ. ಒಬ್ಬ ಡೈನಾಮಿಕ್ ಆಗಿರುವ ಪ್ರಧಾನಿ ಬಂದಾಗ ಮಾತ್ರವೇ ಈ ನೀತಿಗಳಲ್ಲಿ ಚಿಕ್ಕಪುಟ್ಟ ಬದಲಾವಣೆಗಳು ಆಗುತ್ತವೆ. ಆದರೆ ಅದರಿಂದ ಒಳ್ಳೆಯದಾಗಿದೆಯಾ? ಇಲ್ವಾ? ಎಂಬುದನ್ನು ಮುಂಬರುವ ವರ್ಷಗಳಲ್ಲಿ ಆಗುವ ಪರಿಣಾಮಗಳು ಹೇಳುತ್ತವೆ,'' ಎನ್ನುತ್ತಾರೆ ಅವರು.

"ಪ್ರಧಾನಿ ಮೋದಿ ವಿದೇಶಗಳಿಗೆ ಭೇಟಿ ನೀಡಿ ಬರೀ ವಿದೇಶಾಂಗ ವ್ಯವಹಾರಗಳ ಮಾತುಕತೆ ಮಾತ್ರವೇ ಮುಗಿಸಿ ಬರುವುದಿಲ್ಲ. ಅವರು ಅಲ್ಲಿನ ಸ್ಥಳೀಯರನ್ನೂ ಸೇರಿಸಿ ಭಾಷಣ ಮಾಡುತ್ತಾರೆ. ಅದಕ್ಕೆ ವಿದೇಶಾಂಗ ಇಲಾಖೆ ಹಾಗೂ ಸ್ಥಳೀಯ ರಾಯಭಾರಿಗಳು ಸ್ಟೇಡಿಯಂ ಬಾಡಿಗೆ ಪಡೆದು ಸಭೆಗಳನ್ನು ಆಯೋಜಿಸುತ್ತಾರೆ. ಇದರಿಂದ ಆಯಾ ದೇಶಗಳ ರಾಜಕೀಯದಲ್ಲಿ ಬೀರುವ ಪರಿಣಾಮ ಏನಿರಬಹುದು, ಎಂಬುದನ್ನು ಊಹಿಸಲು ಅಸಾಧ್ಯವೇನಲ್ಲ,'' ಎಂಬುದು ಇನ್ನೊಬ್ಬ ಹಿರಿಯ ಐಎಫ್ಎಸ್ ಅಧಿಕಾರಿಯೊಬ್ಬರ ಮಾತುಗಳು.

ಅವರು ಇದನ್ನು ಉದಾಹರಣೆ ಸಹಿತ ವಿವರಿಸುತ್ತಾರೆ. "ಸೌದಿಯ ದೊರೆ ಬಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಭೆಗೆ ಅನುಮತಿ ಪಡೆದುಕೊಳ್ಳುತ್ತಾರೆ. ಭವ್ಯವಾಗಿ ನಡೆಯುವ ಈ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ಸೌದಿ ಪ್ರಜೆಗಳು ಹಾಗೂ ನಮ್ಮದೇ ಪ್ರಜೆಗಳು ಪಾಲ್ಗೊಂಡು ದೊರೆಯ ಪರ ಘೋಷಣೆ ಕೂಗುತ್ತಾರೆ. ಇದನ್ನು ಇಲ್ಲಿನ ಸ್ಥಳೀಯ ಆಡಳಿತ ಹಾಗೂ ನಮ್ಮ ವಿದೇಶಾಂಗ ಇಲಾಖೆ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಬಹುಶಃ ವಿದೇಶಗಳಲ್ಲಿ ಭಾರತದ ಪ್ರಧಾನಿಗಳು ಈವರೆಗೆ ನಡೆಸಿದ ಬಹಿರಂಗ ಸಭೆಗಳ ಪರಿಣಾಮ ಇದೇ ಆಗಿರಬಹುದು,'' ಎನ್ನುತ್ತಾರೆ ಅವರು.

ಪರ- ವಿರೋಧದ ಆಚೆಗೆ:

ಮೋದಿ ಅವರ ವಿದೇಶ ಪ್ರವಾಸ, ಅದರ ಖರ್ಚು- ವೆಚ್ಚಗಳ ಬಗ್ಗೆ ಮೊದಲಿನಿಂದಲೂ ಪರ ಮತ್ತು ವಿರೋಧದ ಮಾತುಗಳು ಕೇಳಿಬಂದಿವೆ. ಆದರೆ, ಅದಕ್ಕಿಂತಲೂ ಮುಖ್ಯವಾದುದು ವಿದೇಶಾಂಗ ಇಲಾಖೆಯೊಳಗೆ ಕಳೆದ 2 ವರ್ಷಗಳ ಅಂತರದಲ್ಲಿ ಬಂದಿರುವ ಬದಲಾವಣೆಗಳು. ಈ ಕುರಿತು ಮುಂದಿನ ದಿನಗಳಲ್ಲಿ ಹೊಸ ಆಯಾಮದ ವಿಶ್ಲೇಷಣೆಗಳು ಶುರುವಾಗಲಿವೆ. ಈ ಬಾರಿಯ ಮೋದಿ ವಿದೇಶ ಪ್ರವಾಸ ನಂತರ ನಡೆಯುತ್ತಿರುವ ಕೆಲವು ಘಟನೆಗಳು ಇಂತಹ ಸಾಧ್ಯತೆಯನ್ನು ಮುಂದೆ ಮಾಡುತ್ತಿವೆ.