‘ನಮಗೆ ಸಿಟ್ಟು ಬಂದಿದೆ; ಗ್ರಾಹಕರನ್ನು ಮುಟ್ಟಬೇಡಿ’: ಬೀದಿಗಳಿದ ಫ್ರಾನ್ಸ್ ಲೈಂಗಿಕ ಕಾರ್ಯಕರ್ತೆಯರು
ಸುದ್ದಿ ಸಾಗರ

‘ನಮಗೆ ಸಿಟ್ಟು ಬಂದಿದೆ; ಗ್ರಾಹಕರನ್ನು ಮುಟ್ಟಬೇಡಿ’: ಬೀದಿಗಳಿದ ಫ್ರಾನ್ಸ್ ಲೈಂಗಿಕ ಕಾರ್ಯಕರ್ತೆಯರು

ಫ್ರಾನ್ಸ್ ಹೊಸ ಕಾನೂನೊಂದನ್ನು ಜಾರಿಗೆ ತರುವ ಮೂಲಕ ಮುಕ್ತ ದೇಶದ 'ಸೆಕ್ಸ್' ಉದ್ಯಮದಲ್ಲಿ ತಳಮಳ ಮೂಡಿಸಿದೆ.ಅಲ್ಲಿ, ಇನ್ನು ಮುಂದೆ ವೇಶ್ಯೆಯರಿಗೆ ಹಣ ನೀಡಿದರೆ ಕಾನೂನು ಬದ್ಧ ಅಪರಾಧ ಎಂದು ಹೊಸ ಕಾನೂನು ಘೋಷಿಸಿದೆ. ಈ ಮೂಲಕ 'ಸೆಕ್ಸ್ ಟ್ರಾಫಿಕ್' (ಲೈಂಗಿಕ ಚಟುವಟಿಕೆಗಳಿಗಾಗಿ ಮಾನವ ಕಳ್ಳ ಸಾಗಣೆ) ತಡೆಯಲು ಕಠಿಣ ಕಾನೂನು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬುಧವಾರದಿಂದ ದೇಶಾದ್ಯಂತ ಜಾರಿಗೆ ಬಂದಿರುವ ಕಾನೂನು, ವೇಶ್ಯೆಯರಿಗೆ ಹಣ ನೀಡಿ ಸಿಕ್ಕಿ ಬಿದ್ದರೆ ಮೊದಲ ಬಾರಿಗೆ (ಭಾರತೀಯ ರೂಪಾಯಿಗಳಲ್ಲಿ) 1, 700 ರೂ. ದಂಡ ಬೀಳಲಿದೆ. ಇದು ಮರುಕಳಿಸಿದರೆ, ಎರಡನೇ ಬಾರಿಗೆ 4, 300 ರೂ., ದಂಡ ವಿಧಿಸಲಾಗುತ್ತದೆ. ಜತೆಗೆ, 'ವೇಶ್ಯಾವಾಟಿಕೆ ಜಾಗೃತಿ ಶಿಬಿರ'ಕ್ಕೆ ದಾಖಲಾಗಬೇಕಾಗುತ್ತದೆ.

ಫ್ರಾನ್ಸ್ ದೇಶಕ್ಕೂ ಮೊದಲ ಉತ್ತರ ಐರ್ಲ್ಯಾಂಡ್, ಕೆನಡಾ, ಸ್ವೀಡನ್, ನಾರ್ವೆ ಹಾಗೂ ಐಸ್ಲ್ಯಾಂಡ್ ದೇಶಗಳು ಇದೇ ಮಾದರಿ ಕಾನೂನನ್ನು ಜಾರಿಗೆ ತಂದಿವೆ. ವೇಶ್ಯಾವಾಟಿಕೆಗೆ ಬಲಿಯಾದವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸುವ ಬದಲು, ಗ್ರಾಹಕರ ಮೇಲೆ ಕಠಿಣ ಕ್ರಮ ಕೈಗೊಳ್ಳವ ಬಗ್ಗೆ ಯುರೋಪಿನ ಕೆಲವು ದೇಶಗಳು ಆಲೋಚಿಸುತ್ತಿವೆ.

"ಇದು ಸದ್ಯ ಫ್ರಾನ್ಸ್ ದೇಶದಲ್ಲಿ ಹುಟ್ಟಿರುವ ಹೊಸ ಕ್ರಾಂತಿ. ಅವರು (ವೇಶ್ಯೆಯರು) ಕಳೆದ 76 ವರ್ಷಗಳಿಂದ ಅಪರಾಧಿಗಳು ಎಂದು ಬಿಂಬಿತರಾಗಿದ್ದರು. ಹೊಸ ಕಾನೂನಿನ ಮೂಲಕ ಅವರಿಗೆ ಸ್ವಾತಂತ್ರ್ಯ ಸಿಗುವಂತಾಗಿದೆ,'' ಎಂದು ಕೆಲವು ಸ್ವಯಂ ಸೇವಾ ಸಂಘಟನೆಗಳು ತಿಳಿಸಿವೆ.

ಆದರೆ ಇದು ಫ್ರಾನ್ಸ್ ದೇಸದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ಬುಧವಾರ ಬೀದಿಗಳಿದ ಲೈಂಗಿಕ ಕಾರ್ಯಕರ್ತೆಯರು, 'ನಮಗೆ ಸಿಟ್ಟು ಬಂದಿದೆ; ನಮ್ಮ ಗ್ರಾಹಕರನ್ನು ಮುಟ್ಟಬೇಡಿ' ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ರಾಜಕೀಯ ಪಕ್ಷಗಳಲ್ಲಿಯೂ ಪರ- ವಿರೋಧದ ನಿಲುವುಗಳು ವ್ಯಕ್ತವಾಗಿದೆ.ವೇಶ್ಯಾವಾಟಿಕೆ ಹಾಗೂ ಅವರ ಸುತ್ತ ಬೆಳೆದಿದ್ದ ಸಂಘಟನಾತ್ಮಕ ಅಪರಾಧ ಚಟುವಟಿಕೆಗಳನ್ನು ತಡೆಯಲು ನಮ್ಮ ಬಳಿ ಇರುವ ಅಸ್ತ್ರ ಎಂದು ಸರಕಾರ ಸಮರ್ಥಿಸಿಕೊಳ್ಳುತ್ತಿದೆ.