ಗೊತ್ತಿದ್ದೂ ಜನ ಸಾಮಾನ್ಯರಿಗೆ ಬರೆ ಎಳೆದವರು ಯಾರು?
ಸುದ್ದಿ ಸಾಗರ

ಗೊತ್ತಿದ್ದೂ ಜನ ಸಾಮಾನ್ಯರಿಗೆ ಬರೆ ಎಳೆದವರು ಯಾರು?

ವಿದ್ಯುತ್ ಬೆಲೆ ಏರಿಕೆ ಹಿಂದೆ ಕಲ್ಲಿದ್ದಲ ಹಗರಣ

Summarytoggle summary

ಕರ್ನಾಟಕ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಮೋದನೆ ನೀಡುತ್ತಿರುವ ‘ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ’ (CERC) ಹಾಗೂ ಸಂಬಂಧಪಟ್ಟ ರಾಜ್ಯಗಳಲ್ಲಿರುವ ವಿದ್ಯುತ್ ನಿಯಂತ್ರಣ ಆಯೋಗಗಳು ‘ಕಲ್ಲಿದ್ದಲ ಬೆಲೆ ಏರಿಕೆ’ಯ ನೆಪವನ್ನು ಮುಂದಿಡುತ್ತಿವೆ.

ರಾಜ್ಯದಲ್ಲಿ ಇತ್ತೀಚೆಗಷ್ಟೆ ವಿದ್ಯುತ್ ಬೆಲೆ ಹೆಚ್ಚಿಸಲಾಯಿತು. "ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿರುವ ಕಲ್ಲಿದ್ದಲ ಮೇಲಿನ ಸೆಸ್ ಹೆಚ್ಚಳದಿಂದಾಗಿ ಈ ನಿರ್ಧಾರಕ್ಕೆ ಬರಲಾಯಿತು,'' ಎಂದು KERC ಅಧ್ಯಕ್ಷ ಶಂಕರ ಲಿಂಗೇಗೌಡ ಮಾ. 30ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ, ಈ ಕಲ್ಲಿದ್ದಲ ಮೇಲಿನ ಸೆಸ್ ಹೆಚ್ಚಾಗಲು ಕಾರಣ ಏನು? ಎಂದು ಮಾಧ್ಯಮಗಳೂ ಪ್ರಶ್ನಿಸಲಿಲ್ಲ; ಶಂಕರ ಲಿಂಗೇಗೌಡರೂ ಬಾಯಿ ಬಿಡಲಿಲ್ಲ.ಕರ್ನಾಟಕ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಮೋದನೆ ನೀಡುತ್ತಿರುವ 'ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ' (CERC) ಹಾಗೂ ಸಂಬಂಧಪಟ್ಟ ರಾಜ್ಯಗಳಲ್ಲಿರುವ ವಿದ್ಯುತ್ ನಿಯಂತ್ರಣ ಆಯೋಗಗಳು 'ಕಲ್ಲಿದ್ದಲ ಬೆಲೆ ಏರಿಕೆ'ಯ ನೆಪವನ್ನು ಮುಂದಿಡುತ್ತಿವೆ. ಸಾಮಾನ್ಯ ಜನ ಮಾತ್ರ ಪ್ರತಿ ಯೂನಿಟ್ಗೆ ಕನಿಷ್ಟ 1.50 ರೂಪಾಯಿ ಹೆಚ್ಚಳವಾದರೆ, ಬೈದುಕೊಂಡಾದರೂ ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಹೀಗೆ, ಪ್ರತಿಯೊಬ್ಬ ಸಾಮಾನ್ಯ ವಿದ್ಯುತ್ ಗ್ರಾಹಕರಿಂದ ನಡೆಯುತ್ತಿರುವ ಹೆಚ್ಚುವರಿ ಹಣದ ವಸೂಲಿ ಹಗರಣದ ಒಟ್ಟು ಮೊತ್ತವೇ ಸುಮಾರು 29 ಸಾವಿರ ಕೋಟಿ!

ಏನಿದು ಹಗರ

ಇವತ್ತು ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಬೆಳವಣಿಗೆಯೂ ಅವಲಂಭಿಸಿರುವುದು ಇಂಧನವನ್ನು. ಇಂಧನ ಮೂಲಗಳ ವಿಚಾರಕ್ಕೆ ಬಂದರೆ ವಿದ್ಯುತ್ ಪ್ರಮುಖವಾದುದ್ದು. ವಿದ್ಯುತ್ ವಿಚಾರಕ್ಕೆ ಬಂದರೆ, ಕಲ್ಲಿದ್ದಲನ್ನು ದಹಿಸುವ ಮೂಲಕ ಉತ್ಪಾದನೆಗೊಳ್ಳುವ ವಿದ್ಯುತ್ ಸರಬರಾಜಿನದ್ದು ಸಿಂಹಪಾಲು. ಹೀಗಾಗಿ, ಕಲ್ಲಿದ್ದಲು ಇಲ್ಲದಿದ್ದರೆ ಭಾರತದ ಆರ್ಥಿಕ ವ್ಯವಸ್ಥೆಯೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತದೆ ಎಂಬ ಪರಿಸ್ಥಿತಿ ಇದೆ.ಹೀಗಿರುವಾಗ, ದೇಶದೊಳಗೆ ಕಲ್ಲಿದ್ದಲ ಮೂಲಗಳನ್ನು ಅನ್ವೇಷಣೆ ಮಾಡಿ, ಗಣಿಗಾರಿಕೆ ನಡೆಸುವ ಮೂಲಕ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ದೇಶದಲ್ಲಿ ಕೈಗಾರಿಕಾ ಘಟಕಗಳು ಹಾಗೂ ನಮ್ಮ ನಿಮ್ಮಂತಹ ಸಾಮಾನ್ಯ ಗ್ರಾಹಕರ ಬೇಡಿಕೆ ಹೆಚ್ಚಿರುವುದರಿಂದ ಸ್ಥಳೀಯ ಕಲ್ಲಿದ್ದಲಿನ ಮೂಲಗಳನ್ನು ಮಾತ್ರವೇ ನಂಬಿಕೊಂಡು ವಿದ್ಯುತ್ ಉತ್ಪಾದನೆ ಕಷ್ಟ.ಹೀಗಾಗಿ, ದೇಶದ 40 ಖಾಸಗಿ ಹಾಗೂ ಸರಕಾರದ ಸ್ವಾಮ್ಯದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳು ಇಂಡೋನೇಷಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿವೆ.ಹಗರಣ ಹುಟ್ಟಿಕೊಳ್ಳುವುದೇ ಇಲ್ಲಿ.

ಸರಳವಾಗಿ ಹೇಳುವುದಾದರೆ, ಇಂಡೋನೇಷಿಯಾ ರಫ್ತು ಮಾಡುವ ಕಲ್ಲಿದ್ದಲಿನ ಬೆಲೆಯನ್ನು ಕೃತವಾಗಿ ಹೆಚ್ಚಳ ಮಾಡುವ ಮೂಲಕ ವಿದ್ಯುತ್ ಉತ್ಪಾದನೆಯ ವೆಚ್ಚವನ್ನು ಹೆಚ್ಚಿಸಲಾಗುತ್ತಿದೆ. ಉತ್ಪಾದನೆ ವೆಚ್ಚ ಹೆಚ್ಚಳವನ್ನು ಗ್ರಾಹಕರ ಜೇಬಿಗೆ ವರ್ಗಾಯಿಸಲಾಗುತ್ತಿದೆ. ಕಳೆದ 5 ವರ್ಷಗಳ ಅಂತರದಲ್ಲಿ ಇದರಿಂದ ಜನರಿಗೆ ಹಾಗೂ ಸರಕಾರಗಳಿಗೆ ಆಗಿರುವ ನಷ್ಟವೇ 29 ಸಾವಿರ ಕೋಟಿ ರೂಪಾಯಿಗಳು.

ವಂಚನೆ ಹೇಗೆ?

ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದನ್ನು ಸರಬರಾಜು ಮಾಡುವ ಕಂಪನಿಯ ಹೆಸರು 'ಗ್ಲಿಂಟ್ಸ್ ಗ್ಲೋಬಲ್'. ಇದು ರಾಜ್ಯ ಸರಕಾರಗಳ ಸ್ವಾಮ್ಯದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಮಾತ್ರವಲ್ಲ, ಹಲವು ಖಾಸಗಿ ಕಂಪನಿಗಳಿಗೂ ಕಲ್ಲಿದ್ದಲನ್ನು ನೀಡುತ್ತಿದೆ. ಸದರಿ ಖಾಸಗಿ ಕಂಪನಿಗಳು ರಾಜ್ಯ ಸರಕಾರಗಳ ವಿದ್ಯುತ್ ಸರಬರಾಜು ಘಟಕಗಳಿಗೆ ವಿದ್ಯುತ್ ಪೂರೈಸುತ್ತವೆ.ದುಬೈನಲ್ಲಿ ನೋಂದಣಿಯಾಗಿರುವ ಕಂಪನಿಗೆ ಸಿಂಗಪೂರ್ ಮೂಲದ ಇಂಡೋನೇಷಿಯಾದಲ್ಲಿ ಕಲ್ಲಿದ್ದಲ ಗಣಿಯನ್ನು ಹೊಂದಿರುವ ಕಂಪನಿಯೊಂದು ಕಲ್ಲಿದ್ದಲನ್ನು ನೀಡುತ್ತದೆ.

ಇಂಡೋನೇಷಿಯಾದಲ್ಲಿ ಪ್ರತಿ ಟನ್ ಕಲ್ಲಿದ್ದಲಿಗೆ ಭಾರತೀಯ ರೂಗಳಲ್ಲಿ 45 ಇದ್ದರೆ, ಈ ಕಂಪನಿ ಇದನ್ನು ಇಲ್ಲಿ 85 ರೂಪಾಯಿಗೆ ಮಾರಾಟ ಮಾಡುತ್ತದೆ. ಅಂದರೆ ಪ್ರತಿ ಟನ್ ಕಲ್ಲಿದ್ದಲ ಮೇಲೆ 40 ರೂಪಾಯಿಗಳನ್ನು ಕೃತಕವಾಗಿ ಹೆಚ್ಚಿಸಲಾಗುತ್ತಿದೆ. ಇದನ್ನು ಖರೀದಿಸುವ ರಾಜ್ಯ ಸರಕಾರಗಳ ಸ್ವಾಮ್ಯದಲ್ಲಿರುವ ಹಾಗೂ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು, ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ಪ್ರತಿ ಯೂನಿಟ್ಗೆ ಕನಿಷ್ಟ 1.5 ರೂಗಳಂತೆ ವರ್ಗಾಯಿಸುತ್ತವೆ. ವಿಶೇಷ ಏನೆಂದರೆ, ಇಂಡೋನೇಷಿಯಾದಿಂದ ಹೊರಡುವ ಕಲ್ಲಿದ್ದಲು ನೇರವಾಗಿ ಭಾರತದ ಬಂದರುಗಳಿಗೆ ಬಂದಿಳಿಯುತ್ತದೆ. ಆದರೆ ಕಾಗದ ಪತ್ರಗಳಲ್ಲಿ ಮಾತ್ರವೇ ಇಂಡೋನೇಷಿಯಾದಿಂದ ಇದೇ ಕಲ್ಲಿದ್ದಲು ಸಿಂಗಪೂರ್, ಹಾಂಕಾಂಗ್, ದುಬೈ ಹೀಗೆ ನಾನಾ ದೇಶಗಳನ್ನು ಸುತ್ತಿ ಭಾರತದಕ್ಕೆ ಹೆಚ್ಚಿನ ದರದಲ್ಲಿ ಬಂದಿಳಿಯುತ್ತದೆ.

ಬಯಲಾಗಿದ್ದು ಹೇಗೆ?

ಹೀಗೊಂದು ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂಬ ಮಾಹಿತಿಯನ್ನು ಮೊದಲು ಕಲೆ ಹಾಕಿದ್ದು ಕೇಂದ್ರ ಹಣಕಾಸು ಇಲಾಖೆ ಅಡಿಯಲ್ಲಿ ಬರುವ 'ಆದಾಯ ಗುಪ್ತದಳ ನಿರ್ದೇಶನಾಲಯ' (DRI). ಫೆ. 27 ರಂದು ಹಾಂಕಾಂಗ್ನಲ್ಲಿ ನೆಲೆಸಿರುವ ಮನೋಜ್ ಕುಮಾರ್ ಗರ್ಗ್ ಎಂಬಾತನನ್ನು ಡಿಆರ್ಐ ಬಂಧನಕ್ಕೆ ಒಳಪಡಿಸಿತು. ಈತ ತನ್ನ ದುಬೈ ಮೂಲದ ಕಂಪನಿ ಮೂಲಕ ಸುಮಾರು 280 ಕೋಟಿ ಮೌಲ್ಯದ ಇಂಡೋನೇಷಿಯಾ ಕಲ್ಲಿದ್ದಲಿನ್ನು ಕೃತಕ ಬೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಬರಾಜು ಮಾಡುವ ಸಮಯದಲ್ಲಿ ಈ ಬಂಧನ ನಡೆಯಿತು. ಈತನ ಕಂಪನಿಯ ದಾಖಲೆ ಪತ್ರಗಳನ್ನು ಕಲೆ ಹಾಕಿದ ನಿರ್ದೇಶನಾಲಯ, ಈತನಿಂದ ಕಲ್ಲಿದ್ದಲನ್ನು ಪಡೆದುಕೊಳ್ಳುತ್ತಿದ್ದ ಕಂಪನಿಗಳ ಮೇಲೆಯೂ ತನಿಖೆ ಆರಂಭಿಸಿದೆ. ಈ ಬಗ್ಗೆ ಕರ್ನಾಟಕದ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆಯೂ ದಾಳಿ ನಡೆದಿದೆ; ಕರ್ನಾಟಕದ ಹಲವು ಭಾಗಗಳಲ್ಲಿ ಮಾಹಿತಿ ಕಲೆ ಹಾಕಲಾಗಿದೆ.ವಿದ್ಯುತ್ ಬೆಲೆ ಹೆಚ್ಚಳಕ್ಕೆ ಮುನ್ನವೇ ಈ ಬೆಳವಣಿಗೆ ನಡೆದಿತ್ತಾದರೂ ಎಲ್ಲಿಯೂ ಬಹಿರಂಗವಾಗಲಿಲ್ಲ. ಹೀಗಿದ್ದಾಗಲೇ, ರಾಜ್ಯದಲ್ಲಿ ಮಾ. 30ರಂದು ವಿದ್ಯುತ್ ಬೆಲೆ ಹೆಚ್ಚಿಸಲು 'ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ' ಅನುಮತಿ ನೀಡುವ ಮೂಲಕ ಅನುಮಾನ ಹುಟ್ಟು ಹಾಕಿದೆ.

ಇನ್ನೂ ಯಾರ್ಯಾರಿದ್ದಾರೆ?

ಹೆಚ್ಚಿವರಿ ಬೆಲೆಯಲ್ಲಿ ಕಲ್ಲಿದ್ದಲು ಖರೀದಿಸುತ್ತಿದ್ದ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳ ಬಗ್ಗೆಯೂ ಈಗ 'ಡಿಆರ್ಐ' ತನಿಖೆ ನಡೆಸುತ್ತಿದೆ. ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗೌತಮ್ ಅದಾನಿಗೆ ಸೇರಿದ 6 ಕಂಪನಿಗಳು, ಅನಿಲ್ ದೀರೂಬಾಯಿ ಅಂಬಾನಿಗೆ ಸೇರಿದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಹಾಗೂ ರೋಸಾ ಪವರ್ ಸಪ್ಲೈ ಕಂಪನಿ ಲಿ., ಸಜ್ಜನ್ ಜಿಂದಾನ್ ಒಡೆತನದ ಜೆಎಸ್ಡಬ್ಲ್ಯೂ ಸ್ಟೀಲ್ ಲಿ., ಎಸ್ಸಾರ್ ಪವರ್ ಗುಜರಾತ್ ಲಿ., ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಇವುಗಳಲ್ಲಿ ಪ್ರಮುಖವಾದವು."ಈ ವಿಚಾರ ಕರ್ನಾಟಕದಲ್ಲಿ ಸುದ್ದಿಯಾಗಲಿಲ್ಲ.

ಹೀಗಾಗಿ ಚರ್ಚೆಗೆ ಬರಲೇ ಇಲ್ಲ. ಆದರೆ, ಕೆಇಆರ್ಸಿ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬೆಳವಣಿಗೆ ಬಗ್ಗೆ ಮಾಹಿತಿ ಇತ್ತು. ಕೇವಲ ಕಲ್ಲಿದ್ದಲ ಮೇಲಿನ ಬೆಲೆ ಹೆಚ್ಚಳ ಮಾತ್ರವಲ್ಲ, ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಖರೀದಿಸುವಲ್ಲಿಯೂ ಬಹುಕೋಟಿ ಹಗರಣವೊಂದು ಹಲವು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ. ಆದರೆ, ಇದು ಹೊರಗಿನವರಿಗೆ ಸುಲಭಕ್ಕೆ ಅರ್ಥವಾಗುವುದಿಲ್ಲವಾದ್ದರಿಂದ ಈವರೆಗೆ ಸುದ್ದಿಯಾಗಲಿಲ್ಲ,'' ಎನ್ನುತ್ತಾರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು.ಆದರೆ, ಕೊನೆಯಲ್ಲಿ ಇದರ ಬರೆ ಬೀಳುತ್ತಿರುವುದು ಮಾತ್ರ ಸಾಮಾನ್ಯ ಗ್ರಾಹಕರ ಮೇಲೆ, ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ಯಮಿಗಳ ಮೇಲೆ ಹಾಗೂ ಹಲವು ಯೋಜನೆಗಳ ಅಡಿಯಲ್ಲಿ ವಿದ್ಯುತ್ ನೀಡುವ ಸರಕಾರಗಳ ಬೊಕ್ಕಸದ ಮೇಲೆ. ನಿತ್ಯ ಬದುಕಿನಲ್ಲಿ ಗೊತ್ತೇ ಆಗದಂತೆ ನಡೆಯುತ್ತಿರುವ ಹಗಲು ದರೋಡೆಗಳ ಪೈಕಿ ಇದೊಂದು ಸ್ಯಾಂಪಲ್ ಅಷ್ಟೆ.

(Localised Story with inputs from EPW and The Wire)