ಸುದ್ದಿ ಸಾಗರ

ಕನ್ನಯ್ಯ ಪರ ಕರಪತ್ರ ಹಂಚಿದ್ದಕ್ಕೆ ಕರ್ನಾಟಕ ಪೊಲೀಸರಿಂದ 'ರಾಜದ್ರೋಹ'ದ ಪ್ರಕರಣ ದಾಖಲು

'ಆಝಾದಿ' ಘೋಷಣೆ ಕೂಗಿದ್ದಕ್ಕೆ ಅಲ್ಲಿ ದಿಲ್ಲಿಯಲ್ಲಿ ವಿದ್ಯಾರ್ಥಿ ಕನ್ನಯ್ಯ ವಿರುದ್ಧ 'ರಾಜದ್ರೋಹ' ದಾಖಲಿಸಿದ ವಿವಾದಿತ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಕೇಸೊಂದನ್ನು ಗೃಹಸಚಿವ ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ವಿದ್ಯೋದಯ ಕಾನೂನು ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಹಾಗೂ ಸಾಮಾಜಿಕ ಕಾರ್ಯಕರ್ತ ಚಿನ್ನಪ್ಪ 'ರಾಜ ದ್ರೋಹ' ಆರೋಪಕ್ಕೆ ಗುರಿಯಾದವರು. ಇವರ ವಿರುದ್ಧ ಮಾ. 31ರಂದು ಮಧ್ಯಾಹ್ನ 12 ಗಂಟೆಗೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಎಂಬ ಶಿಕ್ಷಕರು ದೂರು ದಾಖಲಿಸಿದ್ದರು. 'ಮಾ. 30ರಂದು ಮಧ್ಯಾಹ್ನ ಜ್ಯೋತಿ ಹಾಗೂ ಚಿನ್ನಪ್ಪ 'ಪಾಕಿಸ್ತಾನ್ ಜಿಂದಾಬಾದ್, 'ನಕ್ಸಲಿಸಂ ಜಿಂದಾಬಾದ್' ಎಂಬ ಘೋಷಣೆ ಕೂಗಿದ್ದಾರೆ. ಜತೆಗೆ, ಸಿದ್ದಗಂಗಾಮಠದ ಶ್ರೀಗಳನ್ನು ನಿಂದಿಸಿದ್ದಾರೆ' ಎಂದು ದೂರಿನ ಸಾರಾಂಶದಲ್ಲಿ ನಮೂದಿಸಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಐಪಿಸಿ ಸೆಕ್ಷನ್ 124-ಎ, 295 ಎ, 506 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ 124-ಎ ದೇಶದ ಪ್ರಭುತ್ವದ ವಿರುದ್ಧ ಯುದ್ಧ ಸಾರುವ ಹಾಗೂ ದಂಗೆಗೆ ಪ್ರಚೋದಿಸುವ ಆರೋಪಕ್ಕೆ ಬಳಕೆಯಾಗುತ್ತಿರುವ ಕಾನೂನು.

ಈವರೆಗೆ ಜ್ಯೋತಿ ಹಾಗೂ ಚಿನ್ನಪ್ಪರನ್ನು ತುಮಕೂರು ಪೊಲೀಸರು ಬಂಧಿಸಿಲ್ಲ. ಪ್ರಕರಣದ ಕುರಿತು ಮಾಹಿತಿಗಾಗಿ ಕರೆ ಮಾಡಿದರೆ, ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಕರೆಯನ್ನು ಸ್ವೀಕರಿಸಲಿಲ್ಲ. ಹೆಚ್ಚುವರಿ ಪೊಲೀಸ್ ವರಿವರಿಷ್ಠಾಧಿಕಾರಿ ಜಿ. ಬಿ. ಮಂಜುನಾಥ್, 'ಸಮಾಚಾರ' "ದೂರು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ.'' ಎಂದರು.

ಎಲ್ಲಿಂದ ಆರಂಭ?:

ಇತ್ತೀಚಿನ ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾ. 30ರಂದು ಜ್ಯೋತಿ, ಚಿನ್ನಪ್ಪ ಅವರನ್ನು ಒಳಗೊಂಡ ಸಾಮಾಜಿಕ ಕಾರ್ಯಕರ್ತರ ತಂಡವೊಂದು ತುಮಕೂರಿನ ಕಾಲೇಜುಗಳಲ್ಲಿ ಕನ್ನಯ್ಯ ಪರ ಕರಪತ್ರ ಹಂಚುವ ಚಳವಳಿ ಶುರುಮಾಡಿತ್ತು. ಮೊದಲು ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಕರಪತ್ರ ಹಂಚಿದ ತಂಡ, ನಂತರ ಜ್ಯೂನಿಯರ್ ಕಾಲೇಜಿನಲ್ಲಿ ಕರಪತ್ರಗಳನ್ನು ಹಂಚಲು ಶುರು ಮಾಡಿತ್ತು. ಈ ಸಮಯದಲ್ಲಿ ಸ್ಥಳಕ್ಕೆ ಬಂದ ಎಬಿವಿಪಿಯ ವಿನಯ್ ನೇತೃತ್ವದ ತಂಡವೊಂದು ಕರಪತ್ರ ಹಂಚುತ್ತಿದ್ದ ಮತ್ಯಾಲಯ್ಯ ಹಾಗೂ ವಿನಯ್ ಕುಮಾರ್ ಮೇಲೆ ಹಲ್ಲೆ ನಡೆಸಿದೆ. ಜತೆಗೆ, ತುಮಕೂರಿನ ಟೌನ್ ಹಾಲ್ ವೃತ್ತದ ಬಳಿ ಕರಪತ್ರ ಹಂಚುತ್ತಿದ್ದ ಇತರೆ ಸಂಗಾತಿಗಳನ್ನು ಇವರ ಮೂಲಕವೇ ಕರೆ ಮಾಡಿ ಕರೆಸಿಕೊಂಡಿತು. "ನಾವು ಸ್ಥಳಕ್ಕೆ ಬರುತ್ತಿದ್ದಂತೆ ನಮ್ಮ ಮೇಲೆ ಹೆಲ್ಮೆಟ್, ಚಪ್ಪಲಿಗಳಿಂದ ಹಲ್ಲೆ ನಡೆಸಿದರು. ಕಾಲೇಜಿನ ಎದುರಿನ ಬೀದಿಯಲ್ಲಿ ಸುಮಾರು 200 ಮೀಟರ್ ಓಡಾಡಿಸಿ ಹೊಡೆದರು. ಆಟೋ ಹತ್ತಿ ಸ್ಥಳದಿಂದ ಹೊರಡಲು ಮುಂದಾದರೂ, ಬೆಂಕಿ ಹಚ್ಚುವುದಾಗಿ ಆಟೋದವರಿಗೂ ಬೆದರಿಕೆ ಹಾಕಿದರು,'' ಎಂದು ನಡೆದ ಘಟನೆಯನ್ನು ಜ್ಯೋತಿ 'ಸಮಾಚಾರ'ಕ್ಕೆ ವಿವರಿಸಿದರು.

ದೂರು ದಾಖಲು:

"ಗಲಾಟೆ ನಡೆಯುತ್ತಿದ್ದ ಸಮಯದಲ್ಲಿಯೇ ಸ್ಥಳಕ್ಕೆ ಬೀಟ್ ಪೊಲೀಸರು ಬಂದರು. ಆದರೆ ಅವರು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದ ಎಬಿವಿಪಿ ಹುಡುಗರ ಗುಂಪನ್ನು ಬಿಟ್ಟು ಕಳಿಸಿದರು. ನಾವು ಆಸ್ಪತ್ರೆಗೆ ದಾಖಲಾದ ನಂತರ ಹೊಸ ಬಡಾವಣೆಯ ಪೊಲೀಸರು ಬಂದು ದೂರು ದಾಖಲಿಸಿಕೊಂಡರು,'' ಎಂದು ಜ್ಯೋತಿ ಹೇಳಿದರು. ಇದು ಮಾರನೇ ದಿನ ಕೆಲವು ದಿನ ಪತ್ರಿಕೆಗಳ ಸ್ಥಳೀಯ ಆವೃತ್ತಿಯಲ್ಲಿ ಸುದ್ದಿಯೂ ಆಯಿತು.

ಆದರೆ, ಮಾ. 31ರ ಮಧ್ಯಾಹ್ನ ಶೇಖರ್ ಎಂಬ ಶಿಕ್ಷಕರು ಠಾಣೆಗೆ ಬಂದು ಜ್ಯೋತಿ ಹಾಗೂ ಚಿನ್ನಯ್ಯ ವಿರುದ್ಧ 'ರಾಜದ್ರೋಹ'ದ ದೂರು ನೀಡಿದ್ದಾರೆ. ಹೊಸ ಬಡಾವಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಥಮ ಮಾಹಿತಿ ವರದಿಯನ್ನೂ ಬರೆದಿದ್ದಾರೆ.

"ನಾನೊಬ್ಬಳು ಮಹಿಳೆ ಎಂಬುದನ್ನೂ ನೋಡದೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದರು. ಅವಾಚ್ಯ ಶಬ್ಧಗಳಿಂದ ಹೀಯಾಳಿಸಿದರು. ಈ ಬಗ್ಗೆ ನಾನು ಪ್ರತ್ಯೇಕ ದೂರು ದಾಖಲಿಸಬೇಕು ಎಂದುಕೊಂಡಿದ್ದೆ. ಬಹುಶಃ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಭಾವಿಸಿದ ಪೊಲೀಸರು ನಮ್ಮ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ನಾವು ಪಾಕಿಸ್ತಾನ್ ಜಿಂದಬಾದ್ ಅಥವಾ ನಕ್ಸಲಿಸಂ ಜಿಂದಬಾದ್ ಎಂದು ಕೂಗಿಲ್ಲ. ನಿಜಕ್ಕೂ ಹಾಗೆ ಕೂಗಿದವರು ನಮ್ಮ ಮೇಲೆ ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರು,'' ಎನ್ನುತ್ತಾರೆ ಆರೋಪಕ್ಕೆ ಗುರಿಯಾಗಿರುವ ಜ್ಯೋತಿ.

ಇಬ್ಬಗೆಯ ನೀತಿ:

ಒಂದು ಕಡೆ ದೇಶದ ರಾಜಧಾನಿಯಲ್ಲಿ 'ರಾಜದ್ರೋಹ'ಕ್ಕೆ ಗುರಿಯಾದ ಕನ್ನಯ್ಯಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಮಂತ್ರಣ ನೀಡುತ್ತಾರೆ. ಮತ್ತೊಂದೆಡೆ, ಅದೇ ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯದಲ್ಲಿ ಕನ್ನಯ್ಯ ಪರ ಕರಪತ್ರ ಹಂಚಿದವರ ಮೇಲೆ 'ರಾಜದ್ರೋಹ'ದ ಪ್ರಕರಣ ದಾಖಲಾಗುತ್ತದೆ. "ನಿಜಕ್ಕೂ ಸಿದ್ದರಾಮಯ್ಯ ಅವರ ಸರಕಾರ ನಡೆ ದಿನದಿಂದ ದಿನಕ್ಕೆ ಬೇಸರ ಮೂಡಿಸುತ್ತಿದೆ. ಕನಿಷ್ಟ ವಿವೇಚನೆಯಾದರೂ ಬೇಕಲ್ಲವಾ?" ಎಂದು ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾದವರ ಪರವಾಗಿ ನಿಂತಿರುವ  ಭಾರತೀಯ ಮಹಿಳಾ ಒಕ್ಕೂಟ (ಎನ್ ಎಫ್ ಐ ಡಬ್ಲ್ಯೂ)ನ ರಾಜ್ಯಾಧ್ಯಕ್ಷೆ ಎ. ಜ್ಯೋತಿ ಪ್ರಶ್ನೆ ಮುಂದಿಡುತ್ತಾರೆ. ಘಟನೆ ಕುರಿತು ಚರ್ಚೆ ನಡೆಸಲು ಗೃಹ ಸಚಿವ ಜಿ. ಪರಮೇಶ್ವರ್ ಸೋಮವಾರ ಸಮಯ ನೀಡಿದ್ದಾರೆ ಎಂದು ಅವರು ತಿಳಿಸಿದರು.

"ಕರಪತ್ರ ಹಂಚುವುದು, ಘೋಷಣೆಗಳನ್ನು ಕೂಗುವುದು ರಾಜದ್ರೋಹ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ. ರಾಜಕೀಯ ಚಿಂತನೆಗಳನ್ನು ಹರಡುವುದೂ ಕೂಡ ಕಾನೂನಿಗೆ ವಿರುದ್ಧವೇನಲ್ಲ. ಆದರೆ, ಪ್ರಭುತ್ವದ ವಿರುದ್ಧ, ದೇಶದ ವಿರುದ್ಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡರೆ ಮಾತ್ರವೇ 124-ಎ ಸೆಕ್ಷನ್ ಬಳಸಬಹುದು," - ಜೆ. ಡಿ. ಕಾಶಿನಾಥ್, ಹೈ ಕೋರ್ಟ್ ವಕೀಲರು, ಬೆಂಗಳೂರು