ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ
ಸುದ್ದಿ ಸಾಗರ

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ

ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಕೊನೆಗೂ ಸಿಐಡಿ ಪೊಲೀಸರು ಬೇಟೆ ಆರಂಭಿಸಿದ್ದಾರೆ.

'ಶಿಕ್ಷಣ ಕ್ಷೇತ್ರದ ಮಾಫಿಯಾಗಳ ತವರುಮನೆ', ಬೆಂಗಳೂರಿನ ರಾಜಾಜಿನಗರದಿಂದ ಇಬ್ಬರು ಉಪನ್ಯಾಸಕರು ಹಾಗೂ ಓಬಳೇಶ್ ಎಂಬಾತನನ್ನು ಶುಕ್ರವಾರ ರಾತ್ರಿ 10. 30ರ ಸುಮಾರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. ಸಿಐಡಿ ಗುರುತಿಸಿರುವ ಆರೋಪಿ ಕಿರಣ್ ಸಹಚರ ಎನ್ನಲಾಗುತ್ತಿರುವ ಓಬಳೇಶ್ ಎಂಬಾತನ್ನು ಸಿಐಡಿ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

ಮುಂದುವರಿದ ವಿಚಾರಣೆ:

ರಾಜಾಜಿನಗರದ ಕಿರಣ್ ಎಂಬಾತ ಹಿಂದಿನಿಂದಲೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ಸಿಐಡಿ ಕಲೆ ಹಾಕಿತ್ತು. ಈತನನ್ನು ಹುಡುಕಿಕೊಂಡು ಶುಕ್ರವಾರ ರಾಜಾಜಿನಗರಕ್ಕೆ ತೆರಳಿದ ಸಿಐಡಿ ಪೊಲೀಸರ ಒಂದು ತಂಡ ಆಗಮಿಸುವ ಮೊದಲೇ ಕಿರಣ್ ತಲೆ ಮರೆಸಿಕೊಂಡಿದ್ದ. ಆತನ ಸಹಚರ ಓಬಳೇಶ್ ಸಿಐಡಿ ತಂಡಕ್ಕೆ ಸಿಕ್ಕಿಬಿದ್ದ ಎನ್ನಲಾಗುತ್ತಿದೆ. ಈತನ ಮೂಲಕ ಕಿರಣ್ ದೂರವಾಣಿಗೆ ಕರೆ ಮಾಡಿದರೆ, ಒಂದು ಸ್ಥಗಿತಗೊಂಡಿದ್ದು, ಮತ್ತೊಂದು ವ್ಯಾಪ್ತಿ ಪ್ರದೇಶದ ಹೊರಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಸಿಐಡಿ ಕೇಂದ್ರ ಕಚೇರಿಯಲ್ಲಿ ಓಬಳೇಶ್ ಹಾಗೂ ಇಬ್ಬರು ಉಪನ್ಯಾಸಕರನ್ನು ವಿಚಾರಣೆ ನಡೆಸಲಾಗುತ್ತಿದೆ.

ಹೆಚ್ಚಿದ ಒತ್ತಡ:

ಕಳೆದ ತಿಂಗಳು ಮಾ. 21ರಂದು ನಡೆದ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಮರು ಪರೀಕ್ಷೆಯನ್ನು ಮಾ. 31ರಂದ ನಿಗದಿ ಮಾಡಲಾಗಿತ್ತು. ಆದರೆ, ಎರಡನೇ ಬಾರಿಯೂ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರ  ಸರಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಶುಕ್ರವಾರ ಸದನದಲ್ಲಿಯೂ ಈ ವಿಚಾರ ಗದ್ದಲಕ್ಕೆ ಕಾರಣವಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸಿದ್ದವು. ರಾಜ್ಯಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಎರಡೂ ಪ್ರತ್ಯೇಕ ಸೋರಿಕೆ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡು ಸಿಐಡಿ ಪೊಲೀಸರ ಮೇಲೆ ಒತ್ತಡ ಹೆಚ್ಚಿತ್ತು. ಈ ನಡುವೆ, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಭೆಯನ್ನು ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆಯ ಪ್ರಗತಿಯನ್ನು ತೋರಿಸಲೇಬೇಕಾದ ಅನಿವಾರ್ಯತೆ ಸಿಐಡಿ ಪೊಲೀಸರ ಮೇಲಿದೆ.