ಸಾಲ ಪಡೆದು ಪರಾರಿಯಾದ  ಮಲ್ಯ ವಾಪಾಸ್ ಕರೆತರಲು ಮುಂದುವರಿದ ಸಾಹಸ
ಸುದ್ದಿ ಸಾಗರ

ಸಾಲ ಪಡೆದು ಪರಾರಿಯಾದ ಮಲ್ಯ ವಾಪಾಸ್ ಕರೆತರಲು ಮುಂದುವರಿದ ಸಾಹಸ

ಕಿಂಗ್‌ಫಿಷರ್‌ ವಂಚನೆ

ಪಡೆದ ಸಾಲವನ್ನು ಹಿಂದಿರುಗಿಸಲಾರದೆ ವಿದೇಶಕ್ಕೆ ಪರಾರಿಯಾಗಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲು ಮುಂದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.18ರಂದು ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಮಲ್ಯಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, 'ಭಾರತಕ್ಕೆ ಹಿಂದಿರುಗಲು ಇದು ಸರಿಯಾದ ಸಂದರ್ಭವಲ್ಲ. ಸೂಕ್ತ ಕಾಲದಲ್ಲಿ ಬರುವುದಾಗಿ' ಮಲ್ಯ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದರು. ಹೀಗಾಗಿ, ವಿಚಾರಣೆ ಗಡುವು ಮೀರಿದರೆ ಎರಡನೇ ಸಮನ್ಸ್ ಜಾರಿ ಮಾಡಲು ಜಾರಿ ನಿರ್ದೇಶನಾಲಯ ತೀರ್ಮಾನಿಸಿದೆ.ಇದರಿಂದ ಲಂಡನ್ ಹೊರವಲಯದ ಐಶಾರಾಮಿ ಬಂಗಲೆಯಲ್ಲಿರುವ ಮಲ್ಯಗೆ ವಿಮಾನ ನಿಲ್ದಾಣಗಳನ್ನು ದಾಟಲು ಕಷ್ಟವಾಗಬಹುದು.

ಒಂದು ವೇಳೆ, ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡುವ ಮೂಲಕ ಕ್ರಮಕ್ಕೆ ಮುಂದಾದರೆ, ಇಂಟರ್ ಪೋಲ್ಗೆ ಮಲ್ಯ ಬೇಕಾಗುವ ವ್ಯಕ್ತಿ ಆಗುತ್ತಾರೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಈ ಬಗ್ಗೆ ಇಡಿ ಮತ್ತು ಸಿಬಿಐ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸುಮಾರು 9 ಸಾವಿರ ಕೋಟಿಗೂ ಅಧಿಕ ಸಾಲ ಪಡೆದಿರುವ ಮಲ್ಯ, ಸಾಲ ಹಿಂದಿರುಗಿಸಲಾಗದೆ ಸುಸ್ತಿದಾರರ ಪಟ್ಟಿಯಲ್ಲಿದ್ದಾರೆ. ಇದು ದೇಶದ ಆರ್ಥಿಕ ವ್ಯವಸ್ಥೆಗೆ ಗಂಭೀರ ವಂಚನೆ ಎಸಗಿರುವ ಪ್ರಕರಣವಾಗಿದೆ. 1983ರಲ್ಲಿ 'ಸನೋಪಿ ಇಂಡಿಯಾ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದ ಮಲ್ಯ, ಬ್ಯಾಂಕ್‍ಗಳಿಂದ ಸಾಲ ಎತ್ತಿದ್ದರು. ಇದಲ್ಲದೆ ಯುಕೆ ಮೂಲದ 'ಡಯಾಗೆಯೋ' ಎಂಬ ಕಂಪೆನಿಯ ಅಧ್ಯಕ್ಷರಾಗಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್‍ಗಳು ಅನೇಕ ಬಾರಿ ನೋಟಿಸ್ ನೀಡಿದ್ದರೂ ಅದಕ್ಕೆ ಉತ್ತರಿಸದೆ ತಲೆಮರೆಸಿಕೊಂಡಿದ್ದರು. ಇದೀಗ ಜಾರಿ ನಿರ್ದೇಶನಾಲಯ ಮಲ್ಯ ವಿರುದ್ಧ ಸಮನ್ಸ್ ಜಾರಿ ಮಾಡಿ ವಶಕ್ಕೆ ಪಡೆಯಲು ಅಗತ್ಯ ತಯಾರಿ ನಡೆಸಿದೆ.

ವಿಮಾನ ಮಾರಾಟ

ಬಹುಸಾವಿರ ಕೋಟಿ ಸಾಲದ ಹೊರೆಯಲ್ಲಿ ಸಿಲುಕಿ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯರಿಗೆ ಸೇರಿದ ಸೊತ್ತುಗಳನ್ನು ಹರಾಜು ಹಾಕಿ ಬಾಕಿ ವಸೂಲಿಗೆ ಬ್ಯಾಂಕ್ಗಳು ಮುಂದಾಗಿವೆ. ಸೇವಾ ತೆರಿಗೆ ಇಲಾಖೆ ಮಲ್ಯರ ಖಾಸಗಿ ಜೆಟ್ ಮಾರಾಟ ಮಾಡಲು ನಿರ್ಧರಿಸಿದೆ. ಏರ್ ಬಸ್ ಎ319 ಮಾದರಿಯ ಖಾಸಗಿ ಕಾಪೋರೇಟ್ ಜೆಟ್ ಇದಾಗಿದ್ದು, ಇದನ್ನು ಶೀಘ್ರದಲ್ಲೇ ಇಲಾಖೆ ಹರಾಜು ಹಾಕಲಿದೆ ಎನ್ನಲಾಗಿದೆ.ಕಳೆದ ವರ್ಷ ಮಲ್ಯರ ಹಳೆಯ ಹಾಕರ್ ಜೆಟ್ ಒಂದನ್ನು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರವು ಶುಲ್ಕ ವಸೂಲಾತಿ ಕ್ರಮದ ಸಲುವಾಗಿ ಗುಜರಿಗೆ ಮಾರಾಟ ಮಾಡಿತ್ತು. ಹೈದರಾಬಾದ್ನ ವಿಮಾನ ನಿಲ್ದಾಣಕ್ಕೆ ಪಾವತಿಸಬೇಕಿದ್ದ ಮೊತ್ತದಲ್ಲೂ ಮಲ್ಯ ಕೊಟ್ಟಿರುವ ಚೆಕ್ ಬೌನ್ಸ್ ಆಗಿದ್ದು, ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ಮಲ್ಯಗೆ ನೋಟಿಸ್ ಜಾರಿ ಮಾಡಿದೆ.'ಸನೋಫಿ ಇಂಡಿಯಾ'ಗೆ ರಾಜೀನಾಮೆ: ಫಾರ್ಮಸಿ ಕ್ಷೇತ್ರದಲ್ಲಿ ಪ್ರಸಿದ್ಧ ಕಂಪನಿ ಸನೋಫಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ.

ಅರ್ಜಿ ಮುಂದೂಡಿಕೆ

ಮದ್ಯದ ದೊರೆ ಮಲ್ಯ ನಿಯಂತ್ರಣದ ಯುಬಿ ಬಿವರೀಸ್ ಕಂಪೆನಿ (ಯುಬಿ ಹೆಚ್ ಎಲ್ )ಯ ವಿರುದ್ದದ ಎರಡೂವರೆ ವರ್ಷ ಹಳೆಯ ಅರ್ಜಿಯ ವಿಚಾರಣೆಯನ್ನು ಇಂದು ಕರ್ನಾಟಕ ಹೈಕೋರ್ಟ್ ಕೈಗೆತ್ತಿಕೊಂಡಿದೆ. ಮುಂದಿನ ವಿಚಾರಣೆಯನ್ನು ಎಪ್ರಿಲ್ 11ಕ್ಕೆ ಮುಂದೂಡಿದೆ. 'ಕಿಂಗ್ ಪಿಶರ್ ಏರ್ ಲೈನ್ಸ್'ನಿಂದ ಸುಮಾರು 146 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದನ್ನು ವಸೂಲು ಮಾಡಿಕೊಡುವಂತೆ ಕೋರಿ SBI ಅರ್ಜಿ ಸಲ್ಲಿಸಲಾಗಿತ್ತು.