samachara
www.samachara.com
ಯುಪಿಎ ಕಾಲದ ಕತ್ತಿಗೆ ಚುನಾವಣಾ ಸಾಣೆ: ಏನಿದು ಮೋದಿ ಘೋಷಿಸಿದ ‘ಮಿಷನ್‌ ಶಕ್ತಿ’?
ದೇಶ

ಯುಪಿಎ ಕಾಲದ ಕತ್ತಿಗೆ ಚುನಾವಣಾ ಸಾಣೆ: ಏನಿದು ಮೋದಿ ಘೋಷಿಸಿದ ‘ಮಿಷನ್‌ ಶಕ್ತಿ’?

2018ರ ಮೇನಲ್ಲಿ ಎನ್‌ಡಿಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದ ಡಿಆರ್‌ಡಿಒ ಮುಖ್ಯಸ್ಥ ಡಾ. ಎಸ್‌. ಕ್ರಿಸ್ಟೋಫರ್‌, ‘ಭಾರತಕ್ಕೆ ಉಪಗ್ರಹ ಉಡಾಯಿಸು ಶಕ್ತಿ ಯಾವತ್ತಿನಿಂದಲೋ ಇದೆ,’ ಎಂದಿದ್ದರು.

Team Samachara

ಸಾಮಾನ್ಯವಾಗಿ ದೇಶವೊಂದರ ವ್ಯಾಪ್ತಿಯೊಳಗೆ ಶತ್ರು ದೇಶಗಳ ಯಾವುದೇ ವಸ್ತುಗಳು ಬಂದರೂ ಅದನ್ನು ಆಯಾ ದೇಶಗಳು ಹೊಡೆದುರುಳಿಸುತ್ತವೆ. ಇತ್ತೀಚೆಗೆ ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಯುದ್ಧ ವಿಮಾನಗಳ ನಡುವಿನ ಡಾಗ್‌ ಫೈಟ್‌ ಇದಕ್ಕೊಂದು ಸಣ್ಣ ಉದಾಹರಣೆ.

ಸರಿ, ವಿಮಾನ, ಕ್ಷಿಪಣಿಗಳು ಹಾರಿ ಬಂದರೆ ಅದನ್ನು ಹೊಡೆದುರುಳಿಸಲು ಸಾಧ್ಯ. ಆದರೆ ಆಧುನಿಕ ತಂತ್ರಜ್ಞಾನದಲ್ಲಿ ಶತ್ರು ದೇಶದ ಮೇಲೆ ಕಣ್ಣಿಡಲು ವಿಮಾನಗಳು, ಡ್ರೋಣ್‌ಗಳು ಯಾವುದೂ ಬೇಕಾಗಿಲ್ಲ. ಅತ್ಯುತ್ತಮ ಉಪಗ್ರಹಗಳಿದ್ದರೆ ಸಾಕು. ಅಂತಹ ಉಪಗ್ರಹಗಳು ದೇಶದ ಬಾಹ್ಯಾಕಾಶವನ್ನು ಪ್ರವೇಶಿಸಿದರೆ?

ಇದಕ್ಕೆ ಇಷ್ಟರವರೆಗೆ ಉತ್ತರವಿದ್ದುದು ಅಮೆರಿಕಾ, ರಷ್ಯಾ ಮತ್ತು ಚೀನಾದ ಬಳಿ ಮಾತ್ರ. ಇದೀಗ ಈ ಸಾಲಿಗೆ ಭಾರತವೂ ಹೊಸದಾಗಿ ಸೇರ್ಪಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ಅನಿರೀಕ್ಷಿತ ಭಾಷಣದಲ್ಲಿ ಘೋಷಿಸಿದ್ದಾರೆ.

ಅನಿರೀಕ್ಷಿತ ಭಾಷಣದಲ್ಲಿ ಆಂಟಿ ಸ್ಯಾಟಲೈಟ್‌ ಪರೀಕ್ಷೆ ಯಶಸ್ವಿಯಾಗಿದ್ದನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ.
ಅನಿರೀಕ್ಷಿತ ಭಾಷಣದಲ್ಲಿ ಆಂಟಿ ಸ್ಯಾಟಲೈಟ್‌ ಪರೀಕ್ಷೆ ಯಶಸ್ವಿಯಾಗಿದ್ದನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ.

ಆಂಟಿ ಸ್ಯಾಟಲೈಟ್‌:

ಉಪಗ್ರಹಗಳನ್ನು ಹೊಡೆದುರುಳಿಸುವ ತಂತ್ರಜ್ಞಾನಕ್ಕೆ ‘ಆಂಟಿ ಸ್ಯಾಟಲೈಟ್‌’ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ ಇದೊಂದು ಸುಧಾರಿತ ಮಿಸೈಲ್‌ ತಂತ್ರಜ್ಞಾನ ಅಷ್ಟೇ. ತನ್ನದೇ ಆದ ಕಕ್ಷೆಯಲ್ಲಿ ತಿರುಗಾಡುತ್ತಿರುವ ಉಪಗ್ರಹಗಳಿಗೆ ಗುರಿ ಇಟ್ಟು ಕ್ಷಿಪಣಿಗಳನ್ನು ಹಾರಿ ಬಿಡುವುದು. ಆ ಮೂಲಕ ಉಪಗ್ರಹವನ್ನು ನಾಶ ಮಾಡುವುದೇ ಈ ತಂತ್ರಜ್ಞಾನದ ವಿಶೇಷತೆ.

ಸದ್ಯ ಭಾರತ ಈ ಯೋಜನೆಗೆ ‘ಮಿಷನ್‌ ಶಕ್ತಿ’ ಎಂಬ ಹೆಸರಿಟ್ಟಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ. ಹಾಗಿದ್ದರೆ ಈ ತಂತ್ರಜ್ಞಾನ ಹೊಸದೇ?; ಉತ್ತರ ಇಲ್ಲ.

ಸೆಪ್ಟೆಂಬರ್‌ 13, 1985 ರಲ್ಲಿ ಅಮೆರಿಕಾ ಮೊದಲ ಬಾರಿಗೆ ಯಶಸ್ವಿಯಾಗಿ ಉಪಗ್ರಹವೊಂದನ್ನು ತನ್ನ ಮಿಸೈಲ್‌ ತಂತ್ರಜ್ಞಾನದ ಮೂಲಕ ಹೊಡೆದುರುಳಿಸಿತ್ತು. ರಷ್ಯಾ ಈ ಸಂಬಂಧ 1956ರಲ್ಲೇ ಕೆಲಸ ಆರಂಭಿಸಿತ್ತಾದರೂ ಯಶಸ್ವಿ ಪ್ರಯೋಗ ನಡೆದಿದ್ದು 2015ರ ನವೆಂಬರ್‌ 18ರಂದು. ಇನ್ನು ಈ ಸಾಲಿನಲ್ಲಿ ಗುರುತಿಸಿಕೊಂಡ ಇನ್ನೊಂದು ದೇಶ ಚೀನಾ. 2007ರ ಜನವರಿ 11ರಂದು ಯಶಸ್ವಿಯಾಗಿ ಉಪಗ್ರಹವನ್ನು ಹೊಡೆದುರುಳಿಸುವ ತಂತ್ರಜ್ಞಾನವನ್ನು ಅದು ಪರೀಕ್ಷೆಗೆ ಒಳಪಡಿಸಿತ್ತು.

ಭಾರತದ ವಿಚಾರಕ್ಕೆ ಬಂದಾಗ, 2010ರ ಜನವರಿಯಲ್ಲಿ ತಿರುವನಂತಪುರಂನಲ್ಲಿ ನಡೆದ 97ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಈ ಆಂಟಿ ಸ್ಯಾಟಲೈಟ್‌ ಮಿಸೈಲ್‌ ತಂತ್ರಜ್ಞಾನದ ಪ್ರಸ್ತಾಪವಾಗಿತ್ತು. ಆಗಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಹಾ ನಿರ್ದೇಶಕ ರೂಪೇಶ್‌, ‘ಭಾರತವೂ ವೈರಿ ರಾಷ್ಟ್ರಗಳ ಉಪಗ್ರಹಗಳನ್ನು ಹೊಡೆದುರುಳಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ’ ಎಂದಿದ್ದರು.

ಇದಾದ ನಂತರ ಕಳೆದ ಮೇನಲ್ಲಿ ಎನ್‌ಡಿಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದ ಡಿಆರ್‌ಡಿಒ ಮುಖ್ಯಸ್ಥ ಡಾ. ಎಸ್‌. ಕ್ರಿಸ್ಟೋಫರ್‌, 'ಭಾರತಕ್ಕೆ ಉಪಗ್ರಹ ಉಡಾಯಿಸು ಶಕ್ತಿ ಯಾವತ್ತಿನಿಂದಲೋ ಇದೆ,' ಎಂದಿದ್ದರು. ‘1,000 ಕಿ.ಮೀ. ಗಿಂತ ಕ್ಕಿಂತ ಹೆಚ್ಚು ಎತ್ತರಕ್ಕೆ ಹಾರಾಡುವ ಯಾವುದೇ ಖಂಡಾಂತರ ಕ್ಷಿಪಣಿಯನ್ನು ಉಪಗ್ರಹ-ವಿರೋಧಿ ಶಸ್ತ್ರಾಸ್ತ್ರವಾಗಿ ವಿನ್ಯಾಸಗೊಳಿಸಬಹುದಾಗಿದೆ’ ಎಂದು ಅವರು ವಿವರಣೆ ನೀಡಿದ್ದರು.

ಅದರಂತೆ ಎಂದೋ ಇದ್ದ ಸಾಮರ್ಥ್ಯವನ್ನು ಇದೀಗ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಬೆಳಿಗ್ಗೆ 11.16ಕ್ಕೆ ಒಡಿಶಾ ಕರಾವಳಿಯಲ್ಲಿರುವ ಡಿಆರ್‌ಡಿಒದ ಬಾಲಸೋರ್‌ ಕೇಂದ್ರದಿಂದ ಹಾರಿದ ಕ್ಷಿಪಣಿ ಮೂರೇ ನಿಮಿಷಗಳಲ್ಲಿ ನಮ್ಮದೇ ದೇಶದ ಉಪಗ್ರಹವನ್ನು ಹೊಡೆದುರುಳಿಸಿದೆ.

ಅಂದ ಹಾಗೆ ಈ ಉಪಗ್ರಹ ಭೂಮಿಯಿಂದ 300 ಕಿಲೋಮೀಟರ್‌ ಎತ್ತರದಲ್ಲಿ ಕೆಳ ಮಟ್ಟದ ಕಕ್ಷೆ (ಲೋ ಆರ್ಬಿಟ್‌) ಯಲ್ಲಿ ಸುತ್ತುತ್ತಿತ್ತು. ಮತ್ತು ಇದು ನಮ್ಮದೇ ದೇಶದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಉಪಗ್ರಹ; ವಿದೇಶದಲ್ಲ.

ಈ ಕ್ರೆಡಿಟ್‌ ಸಲ್ಲಬೇಕಾಗಿದ್ದು ಡಿಆರ್‌ಡಿಒದ ವಿಜ್ಞಾನಿಗಳಿಗೆ. ಆದರೆ ಎಲ್ಲಾ ಶ್ರೇಯಸ್ಸನ್ನು ಮೋದಿಗೆ ಅರ್ಪಣೆ ಮಾಡುತ್ತಿರುವವರು, ‘ಬಾಹ್ಯಾಕಾಶದಲ್ಲಿ ಸರ್ಜಿಕಲ್‌ ಸ್ಟ್ರೈಕ್‌’ ಎನ್ನುತ್ತಿರುವವರು ಇದನ್ನು ಗಮನಿಸಬೇಕಿದೆ.