samachara
www.samachara.com
ಕೊನೆ ಕ್ಷಣದಲ್ಲಿ ತಮ್ಮನ ಕೈ ಹಿಡಿದ ಅಣ್ಣ; ಇದು ಜೈಲು ಶಿಕ್ಷೆಯಿಂದ ಪಾರಾದ ಅನಿಲ್ ಅಂಬಾನಿ ಕತೆ- ವ್ಯಥೆ
ದೇಶ

ಕೊನೆ ಕ್ಷಣದಲ್ಲಿ ತಮ್ಮನ ಕೈ ಹಿಡಿದ ಅಣ್ಣ; ಇದು ಜೈಲು ಶಿಕ್ಷೆಯಿಂದ ಪಾರಾದ ಅನಿಲ್ ಅಂಬಾನಿ ಕತೆ- ವ್ಯಥೆ

ದೇಶದ ಶ್ರೀಮಂತ ಉದ್ಯಮಿ ಜೈಲು ಪಾಲಾಗಲಿದ್ದಾರೆ ಎನ್ನುವಷ್ಟರಲ್ಲಿ ಅವರ ಅಣ್ಣ, ಭಾರತದ ನಂಬರ್‌ ವನ್‌ ಶ್ರೀಮಂತ ಮುಖೇಶ್‌ ಅಂಬಾನಿ ಸಹಾಯಕ್ಕೆ ಬಂದಿದ್ದಾರೆ. ಅಲ್ಲಿಗೆ ಆಟದ ನಿಯಮಗಳೇ ಬದಲಾವಣೆಯಾಗುವ ಸಾಧ್ಯತೆ ಇದೆ. 

Team Samachara

ಒಂದು ಕಾಲದ ಆಗರ್ಭ ಶ್ರೀಮಂತ ಅನಿಲ್‌ ಅಂಬಾನಿ ಜುಜುಬಿ ಹಣಕ್ಕಾಗಿ ಸಾಲ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ; ಆದರೆ ಇದು ಸತ್ಯ.

ಶ್ರೀಮಂತ ಕುಳ ಧೀರೂಭಾಯಿ ಅಂಬಾನಿ ಕಿರಿಯ ಪುತ್ರ ಅನಿಲ್‌ ಅಂಬಾನಿ ಸ್ಟೀಡನ್‌ ಮೂಲದ ಎರಿಕ್ಸನ್‌ ಕಂಪನಿಗೆ 550 ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗಿತ್ತು. ಇದಕ್ಕೆ ಇಂದು ಕೊನೆಯ ದಿನವಾಗಿತ್ತು. ಮಂಗಳವಾರವೂ ಹಣ ನೀಡದಿದ್ದರೆ ಮೂರು ತಿಂಗಳು ಜೈಲಿಗೆ ತಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಫೆಬ್ರವರಿ 20ರಂದು ಅನಿಲ್ ಅಂಬಾನಿಗೆ ಎಚ್ಚರಿಕೆ ನೀಡಿತ್ತು.

ಆದರೆ ಗಡುವು ಸಮೀಪಿಸಿದರೂ ಹಣ ಒಟ್ಟು ಹಾಕಲು ಅನಿಲ್‌ ಅಂಬಾನಿಗೆ ಸಾಧ್ಯವಾಗಿರಲಿಲ್ಲ. ಇನ್ನೇನು ಮಾಜಿ ಶ್ರೀಮಂತ ಉದ್ಯಮಿ ಜೈಲು ಪಾಲಾಗಲಿದ್ದಾರೆ ಎನ್ನುವಷ್ಟರಲ್ಲಿ ಅವರ ಅಣ್ಣ, ಭಾರತದ ನಂಬರ್‌ ವನ್‌ ಶ್ರೀಮಂತ ಮುಖೇಶ್‌ ಅಂಬಾನಿ ಸಹಾಯಕ್ಕೆ ಬಂದಿದ್ದಾರೆ. ತಮ್ಮನ ಸಾಲಕ್ಕೆ ಬೇಕಾದಷ್ಟು ಹಣ ನೀಡಿ ಅವರನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ್ದಾರೆ.

ಅಣ್ಣನ ಸಹಾಯಕ್ಕೆ ಧನ್ಯವಾದ ಹೇಳಿರುವ ಅನಿಲ್‌ ಅಂಬಾನಿ, "ಈ ಸಂಕಷ್ಟದ ಸಮಯದಲ್ಲಿ ನನ್ನ ಜತೆ ನಿಂತಿದ್ದಕ್ಕಾಗಿ ಮತ್ತು ಬಲವಾದ ಕೌಟುಂಬಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ತೋರಿದ್ದಕ್ಕಾಗಿ ಗೌರವಾನ್ವಿತ ಹಿರಿಯ ಸಹೋದರ ಮುಖೇಶ್ ಮತ್ತು ನಿತಾಗೆ ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಧನ್ಯವಾದಗಳು," ಎಂದಿದ್ದಾರೆ.

ಹಣ ಪಾವತಿ ಸಂಬಂಧ ಹೇಳಿಕೆ ನೀಡಿರುವ ರಿಲಯನ್ಸ್ ಕಮ್ಯುನಿಕೇಷನ್ಸ್‌ ವಕ್ತಾರ, “ಸುಪ್ರೀಂ ಕೋರ್ಟ್‌ ಆದೇಶದಂತೆ ಎರಿಕ್ಸನ್‌ ಕಂಪನಿಗೆ ಪಾವತಿ ಮಾಡಬೇಕಾದ 550 ಕೋಟಿ ರೂಪಾಯಿ ಮತ್ತು ಬಡ್ಡಿಯ ಹಣವನ್ನು ಪಾವತಿ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.

ಈ ಹಿಂದೆ ಆರ್‌ಕಾಂ 118 ಕೋಟಿ ರೂಪಾಯಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಠೇವಣಿ ಇಟ್ಟಿತ್ತು. ಒಟ್ಟು ಬಡ್ಡಿ ಮೊತ್ತ ಸೇರಿ ಸುಮಾರು 580 ಕೋಟಿ ರೂಪಾಯಿಗಳನ್ನು ಎರಿಕ್ಸನ್‌ಗೆ ಇಂದು ಅಂದರೆ ಮಾರ್ಚ್‌ 19ರ ಮೊದಲು ಪಾವತಿ ಮಾಡಬೇಕಿತ್ತು. ಇದಕ್ಕೆ ಒಂದು ದಿನ ಬಾಕಿ ಇರುವಾಗ ಸೋಮವಾರ ಎರಿಕ್ಸನ್‌ಗೆ ಕೊಡಬೇಕಾದ ಹಣವನ್ನು ಮುಖೇಶ್‌ ಅಂಬಾನಿ ನೀಡಿದ್ದಾರೆ.

ಇದಕ್ಕಾಗಿ "ನಾನು ಮತ್ತು ನನ್ನ ಕುಟುಂಬ ಕೃತಜ್ಞರಾಗಿರುತ್ತೇವೆ. ನಾವು ಈ ಹಿಂದಿನ ಘಟನೆಗಳನ್ನು ಮೀರಿ ಮುಂದೆ ಬಂದಿದ್ದೇವೆ ಮತ್ತು ಈ ನಡೆ ಮನಸ್ಸಿಗೆ ತಟ್ಟಿದೆ," ಎಂದಿದ್ದಾರೆ.

2005-2019:

ಈ ಹಿಂದೆ 2005ರಲ್ಲಿ ಅನಿಲ್ ಅಂಬಾನಿ ಮತ್ತು ಮುಖೇಶ್‌ ಅಂಬಾನಿ ಬೇರೆ ಬೇರೆಯಾಗಿದ್ದರು. ತಂದೆಯಿಂದ ಬಳುವಳಿಯಾಗಿ ಬಂದಿದ್ದ ಆಸ್ತಿಯನ್ನು ಇಬ್ಬರೂ ಸಮಾನವಾಗಿ ಹಂಚಿಕೊಂಡಿದ್ದರು. ಇದಾದ ನಂತರ ಅಣ್ಣ ತಮ್ಮ ಇಬ್ಬರೂ ಸಂಬಂಧ ಕಡಿದುಕೊಂಡಿದ್ದರು.

ಇತ್ತೀಚೆಗೆ ಕೆಲವು ವ್ಯವಹಾರ ಸಂಬಂಧ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಮೂಲಕ ಇಬ್ಬರೂ ಹತ್ತಿರವಾಗಿದ್ದರು ಆದರೆ ಅಣ್ಣ ತಮ್ಮನ ನಡುವಿನ ಅನ್ಯೋನ್ಯತೆ ಮಾತ್ರ ಮರೆಯಾಗಿತ್ತು.

ಆದರೆ ಇದೀಗ ಸಾಲ ಮರುಪಾವತಿ ಹೆಸರಿನಲ್ಲಿ ಇಬ್ಬರೂ ಆಪ್ತರಾಗಿದ್ದಾರೆ. ಜತೆಗೆ ವ್ಯವಹಾರಿಕ್ಕಿಂತ ಕೌಟುಂಬಿಕ ಸಂಬಂಧ ಹೆಚ್ಚು ಎಂಬುದನ್ನು ಅಂಬಾನಿ ಸಹೋದರರು ತೆರೆದಿಟ್ಟಿದ್ದಾರೆ.

ಸದ್ಯಕ್ಕೆ ತಮ್ಮನನ್ನು ಮುಖೇಶ್‌ ಅಂಬಾನಿ ಜೈಲು ಶಿಕ್ಷೆಯಿಂದ ಪಾರು ಮಾಡಿದ್ದಾರೆ. ಆದರೆ ಇಲ್ಲಿಗೇ ನಿಂತಿಲ್ಲ. ಅನಿಲ್‌ ಅಂಬಾನಿ ಸುಮಾರು 45,000 ಕೋಟಿ ರೂಪಾಯಿ ಸಾಲವನ್ನು ತಲೆ ಮೇಲೆ ಹೊತ್ತುಕೊಂಡಿದ್ದು ಇದಕ್ಕೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರ ಕೃಪೆ: ಇಂಡಿಯಾ ಟೈಮ್ಸ್‌