samachara
www.samachara.com
ಮತ್ತೆ ಜಗನ್ ಕುಟುಂಬದ ರಕ್ತ ನೋಡಿದ ಆಂಧ್ರ: ಮನೆಯಲ್ಲೇ ವೈಎಸ್‌ ವಿವೇಕಾನಂದ ರೆಡ್ಡಿ ಕೊಲೆ
ದೇಶ

ಮತ್ತೆ ಜಗನ್ ಕುಟುಂಬದ ರಕ್ತ ನೋಡಿದ ಆಂಧ್ರ: ಮನೆಯಲ್ಲೇ ವೈಎಸ್‌ ವಿವೇಕಾನಂದ ರೆಡ್ಡಿ ಕೊಲೆ

1999ರಲ್ಲಿ ಅಜ್ಜ ವೈಎಸ್‌ ರಾಜಾ ರೆಡ್ಡಿ, 2009ರಲ್ಲಿ ತಂದೆ ರಾಜಶೇಖರ್‌ ರೆಡ್ಡಿ, 2019ರಲ್ಲಿ ಚಿಕ್ಕಪ್ಪ ವಿವೇಕಾನಂದ ರೆಡ್ಡಿಯನ್ನು ಜಗನ್‌ಮೋಹನ್‌ ರೆಡ್ಡಿ ಕಳೆದುಕೊಂಡಿದ್ದಾರೆ.

ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಮೀಪಿಸುತ್ತಿದ್ದಂತೆ ಆಂಧ್ರ ಪ್ರದೇಶದಲ್ಲಿ ಮತ್ತೆ ರಕ್ತಪಾತ ಕಾಣಿಸಿಕೊಂಡಿದೆ. ಮುಖ್ಯಮಂತ್ರಿ ಹುದ್ದೆಯನ್ನು ಎದುರು ನೋಡುತ್ತಿರುವ ವೈಎಸ್‌ಆರ್‌ ಕಾಂಗ್ರೆಸ್‌ ಮಖ್ಯಸ್ಥ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಚಿಕ್ಕಪ್ಪ ಗುರುವಾರ ರಾತ್ರಿ ಅವರ ಮನೆಯಲ್ಲೇ ಕೊಲೆಯಾಗಿದ್ದಾರೆ.

ಕಡಪ ಜಿಲ್ಲೆಯ ಪುಲಿವೆಂದುಲ ಗ್ರಾಮದ ಮನೆಯಲ್ಲಿ ಮಾಜಿ ಸಚಿವರೂ ಆದ ವೈಎಸ್‌ ವಿವೇಕಾನಂದ ರೆಡ್ಡಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ವಿವೇಕಾನಂದ ರೆಡ್ಡಿ ಮಾಜಿ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ್‌ ರೆಡ್ಡಿ ಸಹೋದರರಾಗಿದ್ದು, ಸರಕಾರದ ನಾನಾ ಹುದ್ದೆಗಳನ್ನು ನಿಭಾಯಿಸಿದ್ದವರು.

ಗುರುವಾರ ರಾತ್ರಿ ಈ ಕೃತ್ಯ ನಡೆದಿದ್ದು ಈ ಕೊಲೆ ಹಿಂದೆ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್‌ ಇದ್ದಾರೆ ಎಂದು ಜಗನ್‌ಮೋಹನ್‌ ರೆಡ್ಡಿ ಆರೋಪಿಸಿದ್ದಾರೆ.

ಜಗನ್‌ ಕೊಲೆಯನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕಡಪ ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ, ಸಚಿವ ಆದಿನಾರಾಯಣ ರೆಡ್ಡಿ ಹೇಳಿದ್ದಾರೆ.

ಜಗನ್‌ಮೋಹನ್‌ ರೆಡ್ಡಿ ಚಿಕ್ಕಪ್ಪ ವೈಎಸ್‌ ವಿವೇಕಾನಂದ ರೆಡ್ಡಿ.
ಜಗನ್‌ಮೋಹನ್‌ ರೆಡ್ಡಿ ಚಿಕ್ಕಪ್ಪ ವೈಎಸ್‌ ವಿವೇಕಾನಂದ ರೆಡ್ಡಿ.
/ದಿ ಹಿಂದೂ

ಆರಂಭದಲ್ಲಿ ಪೊಲೀಸರು ವಿವೇಕಾನಂದ ರೆಡ್ಡಿಯವರದ್ದು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ಮನೆಯ ಸ್ನಾನದ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕಾನಂದ ರೆಡ್ಡಿ ಶವ ಪತ್ತೆಯಾಗಿತ್ತು. ಹೃದಯಾಘಾತದಿಂದ ಅವರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿತ್ತು.

ನಂತರ ಪೋಸ್ಟ್‌ ಮಾರ್ಟಂ ವೇಳೆ ಅವರ ದೇಹದ ಮೇಲೆ ಚೂಪಾದ ವಸ್ತುಗಳಿಂದ ಮಾಡಿದ 7 ಗಾಯಗಳು ಕಂಡು ಬಂದಿದ್ದವು. ತಲೆ, ತೊಡೆ ಮತ್ತು ಮಣಿಕಟ್ಟುಗಳ ಮೇಲೆ ಹಲ್ಲೆಯ ಗುರುತುಗಳಿದ್ದವು. ಈ ಹಿನ್ನೆಲೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಬೇಡಿಕೆ ಜಗನ್‌ಮೋಹನ್‌ ರೆಡ್ಡಿ ಕಡೆಯಿಂದ ಕೇಳಿ ಬಂದಿದೆ. ಆದರೆ ಸಿಎಂ ನಾಯ್ಡು ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದಾರೆ.

“ಕೊಲೆ ಹಿಂದೆ ಎಷ್ಟೇ ದೊಡ್ಡವರಿರಲಿ ಅವರನ್ನು ನ್ಯಾಯದ ಅಂಗಳಕ್ಕೆ ಎಳೆದು ತರಲಾಗುವುದು,” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ವಿವೇಕಾನಂದ ರೆಡ್ಡಿ ಕುಟುಂಬಸ್ಥರು ಸಾಕ್ಷ್ಯಗಳನ್ನು ನಾಶ ಮಾಡಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಕೊಲೆಗೆ ಮುಖ್ಯಮಂತ್ರಿಯೇ ಕಾರಣ ಎಂದು ಜಗನ್‌ ಆರೋಪಿಸಿದ್ದಾರೆ.

ಘಟನೆ ಬೆನ್ನಿಗೆ ಪುಲಿವೆಂದುಲ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲ್ಲಿಗೆ ಹೆಚ್ಚಿನ ಭದ್ರತಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.

ವೈಎಸ್‌ಆರ್‌ ಕುಟುಂಬದಲ್ಲಿ ದಶಕಕ್ಕೊಂದು ಸಾವು:

ವಿವೇಕಾನಂದ ರೆಡ್ಡಿ ಎರಡು ಬಾರಿ 1989 ಮತ್ತು 1994ರಲ್ಲಿ ಪುಲಿವೆಂದುಲ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅವರು 1999ರಲ್ಲಿ ಕಡಪ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಚುನಾವಣೆಗೂ ಮುನ್ನ ಅವರ ತಂದೆ ವೈಎಸ್‌ ರಾಜರೆಡ್ಡಿ (ಜಗನ್‌ಮೋಹನ್‌ ರೆಡ್ಡಿ ಅಜ್ಜ) ಯವರನ್ನು ಕೊಲೆ ಮಾಡಲಾಗಿತ್ತು.

1999ರ ಚುನಾವಣೆ ಮತ್ತು 2004ರ ಚುನಾವಣೆಯಲ್ಲಿ ವಿವೇಕಾನಂದ ರೆಡ್ಡಿ ಕಡಪ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಹೀಗಿರುವಾಗಲೇ ಸರಿಯಾಗಿ 10 ವರ್ಷಗಳ ನಂತರ ಅವರ ಅಣ್ಣ ದುರಂತ ಅಂತ್ಯ ಕಾಣಬೇಕಾಯಿತು.

ನಲ್ಲಮಾಲ ಅರಣ್ಯ ಪ್ರದೇಶದಲ್ಲಿ 2009ರ ಸೆಪ್ಟೆಂಬರ್‌ 2ರಂದು ಹೆಲಿಕಾಪ್ಟರ್‌ ಪತನಗೊಂಡು ಸಾವನ್ನಪ್ಪಿದ ವೈಎಸ್‌ ರಾಜಶೇಖರ್‌ ರೆಡ್ಡಿ.
ನಲ್ಲಮಾಲ ಅರಣ್ಯ ಪ್ರದೇಶದಲ್ಲಿ 2009ರ ಸೆಪ್ಟೆಂಬರ್‌ 2ರಂದು ಹೆಲಿಕಾಪ್ಟರ್‌ ಪತನಗೊಂಡು ಸಾವನ್ನಪ್ಪಿದ ವೈಎಸ್‌ ರಾಜಶೇಖರ್‌ ರೆಡ್ಡಿ.
/ಆರ್ಟ್‌ ಸ್ಟೇಷನ್.

2009ರ ಚುನಾವಣೆಯಲ್ಲಿ ಎರಡನೇ ಬಾರಿ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ವಿವೇಕಾನಂದ ರೆಡ್ಡಿ ಅಣ್ಣ ಮತ್ತು ಜಗನ್‌ ಮೋಹನ್‌ ರೆಡ್ಡಿ ತಂದೆ ವೈ.ಎಸ್‌. ರಾಜಶೇಖರ್‌ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾಗಿ ಆರೇ ತಿಂಗಳಿಗೆ ಅವರು ಹೆಲಿಕಾಪ್ಟರ್‌ ಅಪಘಾತದಲ್ಲಿ ಸಾವನ್ನಪ್ಪಿದರು.

ನಂತರ ಜಗನ್‌ ಮೋಹನ್‌ ರೆಡ್ಡಿ ಮತ್ತು ಅವರ ತಾಯಿ ವಿಜಯಮ್ಮ ಕಾಂಗ್ರೆಸ್‌ ಪಕ್ಷ ತೊರೆದಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ರೆಡ್ಡಿಯವರನ್ನು ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿತ್ತು. ಜತೆಗೆ 2009ರ ನವೆಂಬರ್‌ನಲ್ಲಿ ಅವರಿಗೆ ರಾಜ್ಯ ಸಂಪುಟದಲ್ಲಿ ಕೃಷಿ ಖಾತೆ ನೀಡಿತ್ತು.

ಇದೆಲ್ಲಾ ನಡೆದು ಇದೀಗ 10 ವರ್ಷದ ನಂತರ ಅವರೂ ಕೊಲೆಯಾಗಿ ಹೋಗಿದ್ದಾರೆ. ಹೀಗೆ ಕಳೆದ 20 ವರ್ಷಗಳಲ್ಲಿ 10 ವರ್ಷಕ್ಕೊಮ್ಮೆ ವೈಎಸ್‌ಆರ್‌ ಕುಟುಂಬದಲ್ಲಿ ಒಬ್ಬೊಬ್ಬರ ಅಕಾಲಿಕ ಸಾವು ನಡೆದು ಹೋಗಿದೆ. 1999ರಂತೆ ಈ ಬಾರಿ ಕೂಡ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೂ ಮುನ್ನ ಕೊಲೆ ನಡೆದಿರುವುದು ಕಾಕತಾಳೀಯದಂತೆ ಕಾಣಿಸುತ್ತಿಲ್ಲ.

ಚಿತ್ರ ಕೃಪೆ: ಸಾಕ್ಷಿ